ಮಂಗಳವಾರ, ಏಪ್ರಿಲ್ 7, 2009

ಅಪ್ಪ - ಅಪಾಯ!



ತಂಪು ಭೂಮಿ ಸ್ವಿಡ್ಜರ್‌ಲೆಂಡ್‌ನ ರೋಜರ್ ಫೆಡರರ್‌ರ ಜಾತಕವೇ ಸರಿಯಿದ್ದಂತಿಲ್ಲ. ಶಕುನ ಕೂಡಿಬರುತ್ತಿಲ್ಲ. ೨೦೦೮ರ ವಿಂಬಲ್ಡನ್‌ನಿಂದಲೇ ಇದು ಆರಂಭವಾಗಿರುವುದು ನಿಕ್ಕಿ. ಅದಕ್ಕೂ ಮುನ್ನ ಸತತ ಎರಡನೇ ಬಾರಿ ಫ್ರೆಂಚ್ ಓಪನ್‌ನಲ್ಲಿ ಸೋತಾಗಲೂ ಫೆಡ್‌ಗೆ ಶಾಕ್ ಏನೂ ಆಗಿರಲಿಲ್ಲ. ಅದು ಹೇಳಿ ಕೇಳಿ ನಡಾಲ್‌ರ ಸಾಮ್ರಾಜ್ಯ. ಆಲ್ ಇಂಗ್ಲೆಂಡ್ ಕ್ಲಬ್ ಹಾಗಲ್ಲ. ಕೊನೆಪಕ್ಷ ಹಾಗಿರಲಿಲ್ಲ. ಪೀಟ್ ಸಾಂಪ್ರಾಸ್‌ರ ನಂತರ ಅಕ್ಷರಶಃ ಅಲ್ಲಿನ ಅಧಿಪತಿಯಾಗಿದ್ದ ಫೆಡ್ ಒಂದೊಮ್ಮೆ ಎಡಗೈನಲ್ಲಿ ಆಡಿದರೂ ಗೆಲ್ಲಬಲ್ಲರು ಎಂಬ ಪ್ರತೀತಿಯಿತ್ತು. ಕಳೆದ ವರ್ಷ ಅದೇ ಎಡಗೈನ ನಡಾಲ್ ರೋಜರ್‌ರನ್ನು ಅಲ್ಲಿಯೇ ಸೋಲಿಸಿಬಿಟ್ಟರಲ್ಲ!
ಫೆಡರರ್ ಬಸವಳಿದಿದ್ದಾರೆ. ಹಾಗಾಗಿಯೇ ಮತ್ತೆ ತಮ್ಮ ಭೂಮಿ ಎಂದುಕೊಂಡಿದ್ದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ  ಸೋತಾಗ ಅತ್ತುಬಿಟ್ಟಿದ್ದು. ಪೀಟ್‌ರ ೧೪ ಗ್ರಾನ್‌ಸ್ಲಾಂ ದಾಖಲೆ ಎಟುಕಲು ಇನ್ನೊಂದೇ ಸ್ಲಾಂ ಬೇಕು. ಆದರೆ.... ಬಹುಷಃ ಸುದ್ದಿಯಲ್ಲಿರಬೇಕಾದ ಒತ್ತಡದಲ್ಲಿ ಫೆಡ್ ಬಾಯ್ಬಿಟ್ಟಿದ್ದಾರೆ,  ನಾನು ಅಪ್ಪ ಆಗುತ್ತಿದ್ದೇನೆ!
ಟೆನಿಸ್ ಪ್ರಪಂಚಕ್ಕೆ ಅದು ಅಪಾಯದ ಅಲಾರಾಂನಂತೆಯೇ ಕೇಳಿಸಿದೆ. ಅತ್ಯಂತ ಹೆಚ್ಚಿನ ಏಕಾಗ್ರತೆ ಬಯಸುವ ಕ್ಯಾರಿಯರ್‌ನ ಈ ಹೊತ್ತಿನಲ್ಲಿ ಸಂಸಾರದ ಅತೀವ ಮಹತ್ವದ ಘಟ್ಟಕ್ಕೆ ಅಡಿಯಿಡುವುದು ಕತ್ತಿಯ ಮೇಲಿನ ನಡುಗೆಯಂತೆ. ಹಾಗಂತ ಫೆಡ್‌ರ ಸಹ ಆಟಗಾರರೇ ಹೇಳುತ್ತಿದ್ದಾರೆ. ಇವಾನ್ ಲ್ಜುಬಿಸಿಕ್ ಸ್ಪಷ್ಟವಾಗಿ ಹೇಳುತ್ತಾರೆ, ಮಗು ಬಂತು ಎಂದಾದರೆ ನಿಮ್ಮ ಬದುಕು ಬದಲಾಗಿಯೇ ಹೋಗುತ್ತದೆ. ಆದ್ಯತೆಗಳು ಬೇರೆ ಬೇರೆ. ಸಂಸಾರದಲ್ಲಿ ತೊಡಗಿಸಿಕೊಳ್ಳಲೇಬೇಕಾಗುತ್ತದೆ. ಇದು ಟೆನಿಸ್ ಕ್ಯಾರಿಯರ್‌ನ ಪ್ರಗತಿಗೆ ಧಕ್ಕೆ ತರುವುದು ಖಚಿತ ಇವಾನ್‌ರ ಮಾತನ್ನು ನಾವೂ ನೀವೂ ನಂಬಲೇಬೇಕು. ಸದ್ಯ ಅವರೇ ತಮ್ಮ ಐದು ತಿಂಗಳ ಮಗನ ಆಗಮನದಿಂದ ಅನುಭವ ಪಡೆದಿದ್ದಾರೆ!
ಫೆಡ್ ಇವತ್ತಿಗೂ ಗೆಳತಿ ಮಿರ್ಕಾ ವಾವ್ರಿನೆಕ್‌ರನ್ನು ವಿವಾಹವಾಗಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ದಾಂಪತ್ಯಕ್ಕೆ ಅದು ತೊಡಕಲ್ಲ. ನಿಜಕ್ಕಾದರೆ ಸಂಸಾರದ ಎಲ್ಲ ಜವಾಬ್ದಾರಿಗಳೂ ಇರುತ್ತದೆ. ಭಾರತದಲ್ಲಿ ಹಾಗಲ್ಲ! ಮಗುವನ್ನು ಮುದ್ದು ಮಾಡಿ ಪ್ರಾಕ್ಟೀಸ್‌ಗೆಂದು ರ್‍ಯಾಕೆಟ್ ಹಿಡಿಯುವ ವೇಳೆಗೆ ನ್ಯಾಪ್‌ಕಿನ್ ಬದಲಿಸಲೇಬೇಕಾದ ಅವಸರ, ರಾಮ ರಾಮಾ....!!
ಇತಿಹಾಸವೂ ಇದನ್ನೇ ಹೇಳುತ್ತದೆ. ಕೊನೆಯ ೧೧೫ ಗ್ರಾನ್‌ಸ್ಲಾಂ ಪ್ರಶಸ್ತಿಗಳಲ್ಲಿ ಅಪ್ಪಯ್ಯರು ಗೆದ್ದದ್ದು ಬರೀ ೧೦! ಗೆಳತಿಯರನ್ನು ನಿರಂತರವಾಗಿ ಬದಲಿಸಿದರೂ ಕ್ಯಾರಿಯರ್‌ಗೆ ಧಕ್ಕೆ ತಂದುಕೊಳ್ಳದ ಜರ್ಮನಿಯ ಬೋರಿಸ್ ಬೆಕರ್ ಮೊದಲ ಮಗ ನೋಹ್ ಜನ್ಮಿಸಿದ ಮೇಲೆ ಗೆದ್ದದ್ದು ೧೯೯೬ರ ಆಸ್ಟ್ರೇಲಿಯನ್ ಓಪನ್ ಸೇರಿದಂತೆ ಎರಡು ಗ್ರಾನ್‌ಸ್ಲಾಂ ಮಾತ್ರ. ಫಾದರ್ ಪ್ರಮೋಷನ್ ನಂತರ ಟೆನಿಸ್‌ಗೆ ಎರಡನೇ ಆದ್ಯತೆಯಾಗಿಬಿಡುತ್ತದೆ ಎಂಬ ಸತ್ಯದ ಅರಿವು ಬೆಕರ್‌ಗಿದೆ.
ಹೋಗಲಿ ಎಂದರೆ, ಪ್ಯಾಟ್‌ಕ್ಯಾಷ್, ಆಂಡ್ರ್ಯೂ ಗೋಮೇಜ್, ಪೀಟರ್ ಕೋರ್ಡಾ, ಅಲ್ಬೆರ್ಟೋ ಕೋಸ್ಟಾಗಳು ಅಪ್ಪನ ಪಟ್ಟದಲ್ಲಿ ಒಂದು ಗ್ರಾನ್‌ಸ್ಲಾಂಗೆ ಸುಸ್ತಾದರು. ಮಗುವಿನ ಚಾಕರಿ ಎಂದರೆ ಸುಲಭಾನ?! ಆಮಟ್ಟಿಗೆ ಬೆಕರ್ ಜೊತೆಗೆ ಆಂಡ್ರೆ ಅಗ್ಗಾಸ್ಸಿ, ಯೆವ್ಗೆನ್ನಿ ಕಫೆಲ್ನಿಕೋಫ್‌ರಿಗೆ ಒಂದರ ಹಿಂದೆ ಇನ್ನೊಂದು ಸ್ಲಾಂ ಸೇರಿಸಿಕೊಳ್ಳಲು ಮಾತ್ರ ಸಾಧ್ಯವಾಗಿದೆ.
ಹೀಗಾದರೂ ಒಂದು ತಿರುವು ಸಿಕ್ಕಲಿ ಎಂಬ ಆಶಯ ಫೆಡರರ್‌ರಿಗಿರಬಹುದು. ಜೊತೆಗೆ ಪುಟ್ಟ ಭಯವೂ ಇರುವಂತಿದೆ. ಸದ್ಯ ಅವರು ಈ ಬೇಸಿಗೆಯಲ್ಲಿ ಮಗುವಿನ ಆಗಮನ ಎನ್ನುವುದಕ್ಕಿಂತ ಹೆಚ್ಚಿನ ವಿವರ ಕೊಟ್ಟಿಲ್ಲ. ಬೇಸಿಗೆ ಎಂದರೆ ಮುಂಬರುವ ವಿಂಬಲ್ಡನ್ ಅಥವಾ ಯುಎಸ್ ಓಪನ್ ವೇಳೆಗೇ ಬೇಬಿ ಫೆಡರರ್ ಭೂಮಿಗೆ ಬಂದರೆ ೨೭ರ ಹರೆಯದ ಫೆಡರರ್‌ರ ಪ್ರಾಶಸ್ತ್ಯ ಮಗುವಿಗೋ, ಗ್ರಾನ್‌ಸ್ಲಾಂಗೋ ಎನ್ನುವ ಇಕ್ಕಟ್ಟಿನ ಪ್ರಶ್ನೆ ಸೃಷ್ಟಿಯಾಗಬಹುದು!
ಒಂದು ಸಮಾಧಾನ. ಫೆಡರರ್ ಜಿಮ್ಮಿ ಕಾನರ್‍ಸ್‌ರನ್ನು ಆದರ್ಶವಾಗಿ ಪರಿಗಣಿಸಲಿಕ್ಕೆ ಅವಕಾಶವಿದೆ. ಈ ಕಾನರ್‍ಸ್ ೧೯೭೯ರಲ್ಲಿ ಮಗನನ್ನು ಪಡೆದ ನಂತರವೇ ಮೂರು ಗ್ರಾನ್‌ಸ್ಲಾಂ ಗೆದ್ದಿದ್ದ. ಆ ಮುನ್ನ ಗಳಿಸಿದ್ದ ಐದನ್ನು ಲೆಕ್ಕಕ್ಕೆ ಸೇರಿಸಿದರೆ ಗಳಿಕೆ ಎಂಟು. ಫೆಡರರ್‌ರದೂ ಅದೇ ಸಾಧನೆಯಾಗಿಬಿಟ್ಟರೆ ಪೀಟ್ ದಾಖಲೆ ಮುರಿದ ಮೇಲೂ ಇನ್ನೊಂದು ಮಿಗುತ್ತದೆ!
ಪಾಪು, ಅಳು, ನ್ಯಾಪ್‌ಕಿನ್, ಬಾಣಂತನಗಳಲ್ಲಿ ಫೆಡ್ ನಿವೃತ್ತಿಯ ಸಬೂಬು ಹುಡುಕುತ್ತಿದ್ದಾರೆಯೇ? ಸೋಲಂತೂ ಬೆನ್ನ ಹಿಂದೆಯೇ ಇದೆ. ಇದೇ ವಾರ ಎಟಿಪಿ ಟೂರ್ನಿಯಲ್ಲಿ ಜಾಂಕೋವಿಕ್‌ರೆದುರು ರೋಜರ್ ಪರಾಭವಗೊಂಡಿದ್ದಾರೆ. ಹಾಗಾಗಲಿಕ್ಕಿಲ್ಲ. ೨೦೧೨ರ ಲಂಡನ್ ಒಲಂಪಿಕ್ಸ್‌ನವರೆಗೆ ಆಡಲು ಫೆಡರರ್‌ರ ಒಪ್ಪಂದಗಳಿವೆ. ಫೆಡ್‌ರಿಗೆ ಬೇರೆಯವರ ತರಹದ ನಕಾರಾತ್ಮಕ ಚಿಂತನೆಗಳಿಲ್ಲ. ‘ಆಡಲು ಇನ್ನಷ್ಟು ಸ್ಫೂರ್ತಿ ತಮ್ಮ ಮಗು ತರುತ್ತದೆ’ ಎಂದೇ ಹೇಳುತ್ತಾರೆ. ತಮ್ಮ ಮಗುವಿನ ಮುಂದೆ ತಾವು ಗ್ರಾನ್‌ಸ್ಲಾಂ ಆಡಬೇಕು ಎಂಬ ಕನಸಿದ್ದುದರಿಂದಲೇ ಇಷ್ಟು ಚುರುಕಾಗಿ ಮಗು ಪಡೆಯಲು ಯೋಚಿಸಬೇಕಾಯಿತು ಎಂಬ ಸಮಜಾಯಿಷಿ.
ಲ್ಜುಬಿಸಿಕ್ ಒಂದು ಮಾತು ಹೇಳುತ್ತಾರೆ, ರೋಜರ್ ಫೆಡರರ್‌ರಂತ ದೈತ್ಯ ಪ್ರತಿಭೆಗೆ ೨೪ ಘಂಟೆಗಳ ಅಭ್ಯಾಸ ಬೇಕಾಗುವುದೇ ಇಲ್ಲ. ಸ್ವಲ್ಪ ತರಬೇತಾದರೂ ಆತನ ಮೂಲ ಸಾಮರ್ಥ್ಯ ಪ್ರತಿಫಲಿಸುತ್ತದೆ.....  ಹಾಗೇ ಹೀಗೆ’ ಎಂದು. ಟೆನಿಸಿಗರು ನಾವೆಣಿಸಿದ್ದಿಕ್ಕಿಂತ ಭಿನ್ನರು. ಅವರು ತುಂಬಾ ಸನ್ನಡತೆಯವರಾಗಿರುತ್ತಾರೆ. ಎದುರಾಳಿಯ ಬಗ್ಗೆ ಒಳ್ಳೆಯ ಮಾತನ್ನೇ ಉಚ್ಚರಿಸುತ್ತಾರೆ. ಲ್ಜುಬಿಸಿಕ್ ಮಾಡಿದ್ದೂ ಬಹುಷಃ ಅದನ್ನೇ. ಅದೇ ನಮಗಂತೂ ನಡಾಲ್ ಯುಗ ಆರಂಭವಾದ ನಂತರ ರೋಜರ್‌ರ ಗ್ರಾನ್‌ಸ್ಲಾಂ ಪ್ರದರ್ಶನಗಳತ್ತ ಅನುಮಾನ ಕಾಡುತ್ತಿದೆ. 
ನೀವೇನಂತೀರೋ....?
-ಮಾವೆಂಸ

 
200812023996