ಸೋಮವಾರ, ಏಪ್ರಿಲ್ 13, 2009

ಈ ಬಾರಿ ಸೆಹ್ವಾಗ್ ಡೆವಿಲ್ಸ್??ಟ್ವೆಂಟಿ ೨೦ಯ ಮೂಲಭೂತ ಅಂಶವೇ ಅದರ ಅನಿಶ್ಚಿತತೆ. ೧೯ನೇ ಓವರ್‌ನಲ್ಲಿ ೨೬-೩೦ ರನ್ ಬಂದು ಪಂದ್ಯದ ಗತಿ ಬದಲಾದದ್ದಿದೆ. ೧೭ನೇ ಓವರ್ ವೇಳೆಗೆ ೨-೩ ವಿಕೆಟ್ ತಪತಪನೆ ಬಿದ್ದು ಚೇಸಿಂಗ್ ಹಳಿ ತಪ್ಪಿದ್ದಿದೆ. ಒಬ್ಬ ಬ್ಯಾಟ್ಸ್‌ಮನ್ ಆಟ, ಒಂದು ಅದ್ಭುತ ಓವರ್ ಪವಾಡವನ್ನು ಸೃಷ್ಟಿಸಬಲ್ಲದು. ಇಂತಹ ಸನ್ನಿವೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ೨೦೦೯ರ ಸಂಚಿಕೆಯ ಫಲಿತಾಂಶಗಳನ್ನು ಊಹಿಸುವುದು ಮೂರ್ಖತನವಾದೀತು. ಅಷ್ಟಕ್ಕೂ ಇದು ಮೂರ್ಖರ ತಿಂಗಳು ತಾನೇ?!
ಭವಿಷ್ಯ ಹೇಳಲು ಧೈರ್ಯ ತುಂಬುವುದು ಕಳೆದ ಬಾರಿಯ ಜೈಪುರದ ರಾಜಾಸ್ತಾನ ರಾಯಲ್ಸ್‌ನ ಯಶಸ್ಸು. ಸ್ಟಾರ್ ಆಟಗಾರರಿಲ್ಲದಿದ್ದರೂ ಕನ್ಸಿಸ್ಟೆನ್ಸಿಯ ಪ್ರದರ್ಶನದಿಂದ ಕಪ್ ಗೆಲ್ಲಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದು ಒಂದರ್ಥದಲ್ಲಿ ಟ್ವೆಂಟಿ ೨೦ಗೆ ಹೊಸ ಆಯಾಮ. ಒಬ್ಬ ಸಮರ್ಥ ಬೌಲರ್‌ನ ನಾಲ್ಕು ಓವರ್‌ಗಳ ಕೋಟಾ ಕೂಡ ನಿರ್ದಿಷ್ಟ ಪರಿಣಾಮ ಬೀರುತ್ತದೆ ಎಂಬುದಕ್ಕೆ ಶೇನ್ ವಾರ್ನ್ ಬೌಲಿಂಗ್ ಸಾಕ್ಷಿಯಾಗಿತ್ತು. ಹಾಗಿದ್ದೂ ನಾಯಕತ್ವ, ಕೋಚಿಂಗ್‌ಗಳ ದ್ವಿಪಾತ್ರದ ಶೇನ್ ಎಷ್ಟೋ ಬಾರಿ ತಮ್ಮ ಕೋಟಾವನ್ನು ಪೂರೈಸದೇ ಗೆಲುವು ಗಿಟ್ಟಿಸಿದ್ದರು! ಅಂದರೆ ತಂಡಕ್ಕೆ ಅವರು ಸ್ಫೂರ್ತಿಯೂ ಆಗಿದ್ದರು. ಕಳೆದ ಐಪಿಎಲ್ ಪ್ರತಿಭೆಗಳಲ್ಲಿ ರವೀಂದ್ರ ಜಡೇಜಾ ಮಾತ್ರ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿ ಸಫಲರಾದರು. ಈ ಬಾರಿ ಸಹ ಅಭಿಮಾನಿಗಳು ರಾಜಾಸ್ತಾನ ರಾಯಲ್ಸ್ ಮೇಲೆ ಬೆಟ್ ಕಟ್ಟಲು ಅಡ್ಡಿಯಿಲ್ಲ!
ಊಹೆಗಳಿಗೆ ಮುಂಚಿತವಾಗಿ ನಾವು ದಕ್ಷಿಣ ಆಫ್ರಿಕಾದ ಪಿಚ್‌ಗಳನ್ನು ತೂಗಿ ನೋಡಬೇಕಾಗುತ್ತದೆ. ಐಪಿಎಲ್ ಅಲ್ಲಿನ ಕ್ರೀಡಾಂಗಣಗಳನ್ನು ಬಾಡಿಗೆಗೆ ಪಡೆದಿದೆ. ಅಂದಮೇಲೆ ಪಿಚ್‌ಗಳೆಲ್ಲವೂ ಒಂದೇ ತರ, ಅರ್ಥಾತ್ ಬ್ಯಾಟಿಂಗ್ ಪಿಚ್‌ಗಳೇ ಆಗಿರುವ ಸಾಧ್ಯತೆಗಳಿವೆ. ಅಪ್ಪಿ ತಪ್ಪಿ ಕೂಡ ವೇಗಕ್ಕೆ, ಬೌಲಿಂಗ್‌ಗೆ ಸಹಕರಿಸುವ ಪಿಚ್‌ನ್ನು ಸೃಷ್ಟಿಸುವ ಸಾಹಸವನ್ನು ಅಲ್ಲಿನವರು ಮಾಡಲಾರರು. ಇದರ ಆಧಾರದಲ್ಲಿ ಭವಿಷ್ಯ ಹೇಳಲು ಪ್ರಯತ್ನಿಸಬಹುದು.
ಸುಮ್ಮನೆ ತಂಡಗಳ ಆಟಗಾರರತ್ತ ಅವಲೋಕಿಸಿದಾಗ ದೆಹಲಿಯ ವೀರೇಂದ್ರ ಸೆಹ್ವಾಗ್ ನೇತೃತ್ವದ ಡೇರ್ ಡೆವಿಲ್ಸ್ ತಂಡ ಫೇವರಿಟ್ ಸ್ಥಾನದಲ್ಲಿ ಮಿಂಚುತ್ತದೆ. ಚೊಚ್ಚಲ ಸಂಚಿಕೆಯಲ್ಲೂ ಮಳೆಯ ಅವಕೃಪೆಗೆ ತುತ್ತಾಗದಿದ್ದರೆ ಸೆಹ್ವಾಗ್ ಬಳಗ ಫೈನಲ್ ಪ್ರವೇಶಿಸಿರುತ್ತಿತ್ತೇನೋ. ಗೌತಮ್ ಗಂಭೀರ್ ತಮ್ಮ ಜೀವನದ ಅತ್ಯುತ್ತಮ ಫಾರಂನಲ್ಲಿದ್ದಾರೆ. ಈ ಮನುಷ್ಯ ಇದೇ ದ.ಆಫ್ರಿಕಾದಲ್ಲಿ ನಡೆದ ಟ್ವೆಂಟಿ ೨೦ ವಿಶ್ವಕಪ್‌ನಲ್ಲಿ ಭಾರತದ ಪರ ಪ್ರಭಾವೀ ಬ್ಯಾಟಿಂಗ್ ನಡೆಸಿದ್ದು ನೆನಪಿರಬಹುದು. ಡೇನಿಯಲ್ ವಿಟ್ಟೋರಿ ವಿಕೆಟ್ ಪಡೆಯಲು ಮರೆತಿರಬಹುದಾದರೂ ರನ್ ನಿಯಂತ್ರಣದಲ್ಲಿ ಹೊಸ ತಾಕತ್ತು ಪಡೆದಿದ್ದಾರೆ. ಜೊತೆಗೆ ಎವರ್‌ಗ್ರೀನ್ ಗ್ಲೆನ್ ಮೆಗ್ರಾತ್, ಟ್ವೆಂಟಿ ೨೦ ಹ್ಯಾಟ್ರಿಕ್ ವೀರ ಅಮಿತ್ ಮಿಶ್ರಾ ಇದ್ದಾರೆ. ಬ್ಯಾಟಿಂಗ್‌ನ ತುಸು ದೌರ್ಬಲ್ಯವನ್ನು ಸೆಹ್ವಾಗ್ - ಗಂಭೀರ್ ವಿಫಲವಾದರೆ ಮಾತ್ರ ಎದುರಾಳಿಗಳು ಉಪಯೋಗಿಸಿಕೊಳ್ಳಲು ಸಾಧ್ಯ. ಬಹುಷಃ ಇತ್ತ ಯೋಚಿಸಿಯೇ ಡೆಲ್ಲಿ ಓವಿಶ್ ಶಾ, ಪೌಲ್ ಕಾಲಿಂಗ್‌ವುಡ್‌ರನ್ನು ಬುಟ್ಟಿಗಿಳಿಸಿಕೊಂಡಿದೆ.
ಧೋನಿ ನೇತೃತ್ವದ ಚೆನ್ನೈ ಪಡೆಗೆ ಆಂಡ್ರ್ಯೂ ಫ್ಲಿಂಟಾಫ್ ಸಿಕ್ಕಿರುವವರಾದರೂ ಬೌಲಿಂಗ್ ದುರ್ಬಲ. ನಿಟ್ನಿ ನಂಬುವಂತಿಲ್ಲ. ಬಾಲಾಜಿ ಏನೋ? ಜೇಕಬ್ ಓರಂ ಆಡಲು ಒದಗದಿರುವ ಸೂಚನೆಗಳಿವೆ. ಬ್ಯಾಟಿಂಗ್‌ನಲ್ಲಿ ಮಾತ್ರ ಮಿಂಚಿನ ಹೊಳೆ! ಧೋನಿ, ಮಾರ್ಕೆಲ್, ಹೇಡನ್, ರೈನಾ, ಮೈಕೆಲ್ ಹಸ್ಸಿ.... ಉಫ್! ಇಷ್ಟೆಲ್ಲ ವಿವರ ಕೊಟ್ಟವರು ಸೂಪರ್ ಕಿಂಗ್ಸ್ ಪರ ಮುತ್ತಯ್ಯ ಮುರುಳೀಧರನ್ ಆಡುವುದನ್ನು ಮರೆತರೇ? ಇಲ್ಲ, ಮುರುಳಿ ಬೌಲಿಂಗ್‌ನಲ್ಲೂ ‘ಇಕ್ಕುವ’ ಬ್ಯಾಟ್ಸ್‌ಮನ್ ಹೆದರಿಕೆ! ಧೋನಿ ಪಡೆ ಗೆಲುವಿನ ಅಂಚಿಂದ ಜಾರಿ ಕಪ್ ಕಳೆದುಕೊಂಡದ್ದು ಕಳೆದ ಇತಿಹಾಸ. ಈ ಬಾರಿ ಹಾಗಾಗದಿರಲಿ.
ಸ್ವಾರಸ್ಯವೆಂದರೆ, ಹೈದರಾಬಾದ್‌ನ ಡೆಕನ್ ಚಾರ್ಜರ್‍ಸ್ ಪ್ರಸ್ತುತ ಸ್ಪರ್ಧೆಯಲ್ಲೂ ವೀಕ್ ಲಿಂಕ್! ಡ್ವೇನೆ ಸ್ಮಿತ್, ಫಿಡೆಲ್ ಎಡ್ವರ್ಡ್‌ರ ಖರೀದಿಯ ಹಿಂದಿನ ತರ್ಕ ಅರ್ಥವಾಗುತ್ತಿಲ್ಲ. ಈ ವಿಂಡೀಸ್ ಆಟಗಾರರು ಸ್ಟಾರ್ ಸಾಧಕರಂತೂ ಅಲ್ಲ. ಗಿಲ್‌ಕ್ರಿಸ್ಟ್, ರೋಹಿತ್ ಶರ್ಮರೇ ಆಡಬೇಕು. ಅದೃಷ್ಟದ ಕಾರಣ ಆಸ್ಟ್ರೇಲಿಯಾ ತಂಡದಲ್ಲಿ ಮತ್ತೆ ಸ್ಥಾನ ಗಿಟ್ಟಿಸಿರುವ ಆಂಡ್ರ್ಯೂ ಸೈಮಂಡ್ಸ್ ಐಪಿಎಲ್‌ನಲ್ಲಿ ಆಡಲಾಗದಿದ್ದರೆ ಕತ್ತೆಬಾಲ ಎಂದಾರು. ಇದೂ ಡೆಕನ್‌ಗೆ ಸಂಭವನೀಯ ನಷ್ಟ.
ಯುವರಾಜ್ ನೇತೃತ್ವದ ಕಿಂಗ್ಸ್ ಇಲೆವೆನ್ಸ್ ಗಮನ ಸೆಳೆಯದೆ ಇರದು. ರಾಮ್‌ನರೇಶ್ ಸರ್ವಾನ್‌ರ ಅದ್ಭುತ ಫಾರಂ ತಂಡದ ಬೋನಸ್. ಇರ್ಫಾನ್, ವಿಆರ್‌ವಿ ಸಿಂಗ್.... ಬೌಲಿಂಗ್‌ನಲ್ಲಿ ಧಾರಾಳಿಗಳು! ವೆಸ್ಟ್‌ಇಂಡೀಸ್‌ನ ಜೆರೋಮಿ ಟೈಲರ್ ಇಂಗ್ಲೆಂಡ್ ವಿರುದ್ಧ ಯಶಸ್ಸು ಪಡೆದಿದ್ದು ಲೆಕ್ಕಕ್ಕೆ ಬರುತ್ತದೆ.
ಉಳಿದಂತೆ ಕೊಲ್ಕತ್ತಾದ ನೈಟ್ ರೈಡರ್‍ಸ್, ಮುಂಬೈ ಇಂಡಿಯನ್‌ಗಳದು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿ. ಮುಶ್ರಫೆ ಮುರ್ತಜಾರಿಗೆ ಗರಿಷ್ಠ ಆರು ಲಕ್ಷ ಡಾಲರ್ ಕೊಟ್ಟು ಖರೀದಿಸಿದ ಕೊಲ್ಕತ್ತಾದವರ ತಥ್ಯ ಅರ್ಥವಾಗಬೇಕಿದೆ. ಇಡೀ ಟೂರ್ನಿಯನ್ನು ಇನ್ನೊಂದು ರಿತಿಯಲ್ಲಿಯೂ ನೋಡಬಹುದು. ಟ್ವೆಂಟಿ ೨೦ಯ ಮಾದರಿ, ತಂತ್ರಗಾರಿಕೆಗಳ ಬಗ್ಗೆ ಕಳೆದ ಸಂಚಿಕೆಯ ಅನುಭವಗಳು ಆಧಾರಕ್ಕಿದೆ. ಈ ಹಿನ್ನೆಲೆಯಲ್ಲಿಯೆ ಪ್ರತಿ ತಂಡಗಳು ಹೊಸ ಆಟಗಾರರನ್ನು ಅಗತ್ಯಕ್ಕನುಗುಣವಾಗಿಯೇ ಖರೀದಿಸಿದ್ದಾರೆ. ಏಕಾಏಕಿ ಗುತ್ತಿಗೆ ಹಿಡಿದಿಲ್ಲ ಎಂಬುದಕ್ಕೆ ಆಸ್ಟ್ರೇಲಿಯಾದ ೧೨ ಮಂದಿ ಲಭ್ಯ ಆಟಗಾರರನ್ನು ಯಾರೂ ಖರೀದಿಸದಿರುವುದೇ ಸಾಕ್ಷಿ. ನ್ಯೂಜಿಲ್ಯಾಂಡ್‌ನ ಜೇಮ್ಸ್ ಫ್ರಾಂಕ್ಲಿನ್‌ರಂತ ಆಲ್‌ರೌಂಡರ್ ಮಾರಾಟವಾಗಿಲ್ಲ. ಡ್ರಾಯಿಂಗ್ ರೂಂನಲ್ಲಿ ಬಿಡಿಸಿದ ಚಿತ್ರಣದಂತೆಯೇ ಪ್ರತಿ ಆಟಗಾರರು ಪ್ರದರ್ಶನವಿತ್ತರೆ ಈ ಬಾರಿಯ ಟೂರ್ನಿಯಲ್ಲಿ ಬಲು ಸಂಖ್ಯೆಯ ಪಂದ್ಯಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಬಹುದು.
ಫಲಿತಾಂಶಗಳ ಮೇಲೆ ವಿದೇಶಿ ಆಟಗಾರರ ಉಪಸ್ಥಿತಿಯ ಪ್ರಭಾವ ಇರುತ್ತದೆ. ಕೆವಿನ್ ಪೀಟರ್‌ಸನ್, ಫ್ಲಿಂಟಾಫ್‌ರು ಕೇವಲ ಎರಡು ವಾರ ಮಾತ್ರ ಲಭ್ಯರಿರುತ್ತಾರೆ. ತಂಡದ ಒಟ್ಟು ಸಂಯೋಜನೆಯಲ್ಲಿ, ತಂತ್ರಗಾರಿಕೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾಗುತ್ತದೆ. ಇದು ಭಾರತೀಯ ಪ್ರೀಮಿಯರ್ ಲೀಗ್ ಆದರೂ ವಿದೇಶದಲ್ಲಿ ನಡೆಯುತ್ತಿರುವುದು ಮತ್ತು ವಿದೇಶಿ ಆಟಗಾರರ ರನ್, ವಿಕೆಟ್‌ಗಳೇ ನಿರ್ಣಾಯಕವಾಗುವುದು ಶುದ್ಧ ವಿಪರ್ಯಾಸ.
ಭಾರತೀಯ ಆಟಗಾರಿಗೊಂದು ವಿದೇಶಿ ಪ್ರವಾಸ. ಅಷ್ಟರಮಟ್ಟಿಗೆ ಇಲ್ಲಿನ ಪ್ರಥಮ ದರ್ಜೆ ಆಟಗಾರರು ಉಲ್ಲಸಿತರಾಗಬಹುದು. ಆದರೆ ಭಾರತದ ಪ್ರಸ್ತುತದ ರಾಷ್ಟ್ರೀಯ ತಂಡದಲ್ಲಿ ವಿಶೇಷ ಸ್ಥಳಾವಕಾಶ ಇಲ್ಲದೇ ಇರುವುದು ಸ್ಥಾನ ಆಕಾಂಕ್ಷಿಗಳನ್ನು ನಿರಾಶೆಗೆ ತಳ್ಳುತ್ತದೆಯೇನೋ. ಕೊನೆಗೆ ನಮ್ಮ ರಾಬಿನ್ ಉತ್ತಪ್ಪನೇ ಮರಳಿ ಬರಲು ಉಸ್ಸಪ್ಪ ಎನ್ನುತ್ತಿಲ್ಲವೇ?
ಭಾರತದಲ್ಲಿ ಈ ವರ್ಷ ಐಪಿಎಲ್ ಬಗ್ಗೆ ಹೆಚ್ಚಿನ ಆಸಕ್ತಿಯಿದೆ. ಬಹುಷಃ ಇಲ್ಲಿಯೇ ನಡೆದಿದ್ದರೆ ಕ್ರೀಡಾಂಗಣ ತುಂಬಿ ತುಳುಕುತ್ತಿತ್ತೇನೋ. ಇದರ ಮಧ್ಯೆ ಟ್ವೆಂಟಿ ೨೦ಯ ಫೇವರಿಟ್ ಗುರ್ತಿಸುವ ಮೂರ್ಖ ಕೆಲಸದಲ್ಲಿ ನೀವೂ ಪಾಲ್ಗೊಳ್ಳಿ!!
-ಮಾವೆಂಸ

 
200812023996