ಸೋಮವಾರ, ನವೆಂಬರ್ 17, 2008

ಚಿಟಿ ಪಿಟಿ ಹನಿಗಳು!!!!!


೧.ಅಂತರ

ಭವಿಷ್ಯ-
ಮುಂದೆ 
ಆಗುವಂತದ್ದು

ಜ್ಯೋತಿಷ್ಯ-
ಮುಂದೆ 
ಆಗಬಹುದೆಂದು 
ನಂಬಿಕೊಂಡದ್ದು!


೨.ಹೆಸರಲ್ಲೇನಿದೆ?

ನಮ್ಮ
ಕಾವೇರತ್ತೆ
ಗೆ
ಅವರ
ಸೊಸೆ ಸುದ್ದಿ
ಬಂದಾಗೆಲ್ಲ
ಕಾವೇರತ್ತೆ!

೩.ಪ್ರಣಯಗೀತೆ!

ಕಣ್ಣೂ....
ಕಣ್ಣೂ....
ಕಲೆತಾಗ
ಬರುವುದು
ಕಣ್ಣು ಬೇನೆ!!

೪. ಶುದ್ಧಾಂಗ ತಪ್ಪು!

ಶುದ್ಧಾಂಗ
ತಪ್ಪನ್ನು ಮಾಡಿದಳು ನಮ್ಮಮ್ಮ
ಗೊತ್ತೇನು
ನಿಮಗೆ?

ಒಂಬತ್ತು
ತಿಂಗಳು
ಹೊತ್ತು ಜನ್ಮ
ಕೊಟ್ಟದ್ದು
ನನಗೆ!!

೫. ಒಡೆದ ಒಗಟು

ಬಂಡೆ
ಒಡೆದು
ಒಡೆದು ಹಾಕಿದರೆ
ಕಲ್ಲು ಚೂರು!

ಶಬ್ಧ
ಒಡೆದು
ಒಡೆದು ಬರೆದ
ಹನಿಗವನ ಜೋರು!!

೬. ತಿರುಗುಬಾಣ!

ಮಿತ್ರ ಕೆಣಕಿದ್ದ,
ನನಗಾಸೆಯಾಗಿದೆ,
ನಿಮ್ಮೂರ
ಅನಾಗರಿಕರ
ನೋಡಲು ಬರುವಾ ಅಂತ!

ನಾನು ತಿವಿದಿದ್ದೆ,
ನಿಮ್ಮೂರಲ್ಲೇನು
ಅನಾಗರಿಕರಿಗೆ
ಬರವಾ ಅಂತ!!

೭. ತಪ್ಪಿದ ಲೆಕ್ಕ!

ಹುಟ್ಟಿನಿಂದಲೇ
ಗಣಿತದಲ್ಲಿ
ಪ್ರತಿಭಾವಂತೆಯಾದ
ನನ್ನಾಕೆ
ಲೆಕ್ಕ ತಪ್ಪಿದ್ದು
ನನ್ನನ್ನು 
ಮದುವೆಯಾದಾಗಲೇ!!

೮. ಸರಕಾರಿ ದಾಖಲೆ!

ಅಕ್ಷರಸ್ಥರೆಂದು
ಕರೆಸಿಕೊಳ್ಳಬೇಕಿದ್ದಲ್ಲಿ
ಅಕ್ಷರ ಕಲಿಯಬೇಕಾಗಿಲ್ಲ.
ಓದುವ ಅಗತ್ಯವಿಲ್ಲ.
ಬರೀ
ಸಹಿ ಮಾಡಲು
ಕಲಿತರೆ ಸಾಕು!!


೯. ಪದ ವೈಭವ!

ಅಂತರ್ಜಾತೀಯ ವಿವಾಹ
ಏನಿದರ ಅರ್ಥ?
ಇಲ್ಲಿ ನಡೆಯುವುದು
ಬೇರೆ ಬೇರೆ
ಜಾತಿಗಳ ಮದುವೆಯೇ?
ಅಥವಾ ಇಲ್ಲೂ
ನಡೆಯುವುದು
ಗಂಡು ಹೆಣ್ಣಿನ ಮದುವೆಯೇ??

೧೦. ಅರಿವಿನ ಮಟ್ಟ

ಪ್ರತಿಯೊಬ್ಬನೂ
ಜನರು ಬದಲಾಗ
ಬೇಕೆಂದು ಹೇಳುತ್ತಾನೆ.
ಆದರೆ
ಜನರಲ್ಲಿ ತಾನೊಬ್ಬ
ಎನ್ನುವುದನ್ನು
ಮರೆಯುತ್ತಾನೆ!!

೧೧. ಚಕೋರಿ!!

ನನಗೆ
ನನ್ನ ಕಾಫಿಗೆ
ಬೇಕೇ ಬೇಕು
ಈ- ಸುಂದರ
ಚಕೋರಿ!

೧೨. ವಾಸ್ತವ

ಹುಶ್........!!!
ಗಟ್ಟಿಯಾಗಿ ಉಸಿರು
ಬಿಟ್ಟೀರಿ....!

ಕಾರಣ -
ಈ ದೇಶದಲ್ಲಿದೆ
ಪ್ರಜಾಪ್ರಭುತ್ವ!!

-ಮಾವೆಂಸ, mavemsa@gmail.com 



3 comments:

Unknown ಹೇಳಿದರು...

hmm hani laykiddoo.

ಮನಸ್ವಿ ಹೇಳಿದರು...

Chanagiddu.. kaaveratte ge kaavu- eratte!!

ಮಾವೆಂಸ ಹೇಳಿದರು...

ನಮ್ಮ ಕಾವೇರತ್ತೆಗೆ ಕಾವು ಇರುತ್ತೆ ಅನ್ನೋದು ನಿನ್ನ ಅನುಭವವಿರಬಹುದು. ಈ ಕಾವೇರತ್ತೆಗೆ ‘ಕಾವು’ ಏರತ್ತೆ! ಹಾಗಾಗೇ ಅವಳು ಕಾವೇರತ್ತೆ, ಕಾವೀರತ್ತೆ ಅಲ್ಲ!!

 
200812023996