ಮಂಗಳವಾರ, ನವೆಂಬರ್ 11, 2008

‘ಕನ್ನಡಕ’ ಹಾಕಿ ಹುಡುಕಿದರೂ ಸಿಗರು ಮತ್ತೊಬ್ಬ ಕುಂಬ್ಳೆ!




                                                     












ಕುಂಬ್ಳೆ ಟೆಸ್ಟ್‌ರಂಗದಿಂದಲೂ ನಿವೃತ್ತರಾಗಿದ್ದಾರೆ. ಹಾಗೆಂದಾಕ್ಷಣ ಪತ್ರಿಕೆಗಳಲ್ಲಿ ವ್ಯಕ್ತಿಚಿತ್ರ ಬಿಡಿಸುವವರು ಅವರು ಜಮೈಕಾದಲ್ಲೊಮ್ಮೆ ದವಡೆಗೆ ಪಟ್ಟಿ ಕಟ್ಟಿಸಿಕೊಂಡು ಬೌಲ್ ಮಾಡಿದ್ದನ್ನೋ, ಮೊನ್ನೆ ದೆಹಲಿ ಪಂದ್ಯದಲ್ಲಿ ಡಜನ್ ಹೊಲಿಗೆ ಹಾಕಿಸಿಕೊಂಡ ಎಡಗೈ ನೋವಿನಲ್ಲಿ ವಿಕೆಟ್ ಕಿತ್ತಿದ್ದನ್ನೋ ಪ್ರಸ್ತಾಪಿಸದೇ ಇರರು. ಶುಷ್ಕ ಅಂಕಿಅಂಶಗಳಿಂದ ಅವರನ್ನು ವಿವರಿಸುವುದಾದರೆ ಸಾಕಷ್ಟು ಪುಟ ಖರ್ಚು ಮಾಡಬಹುದು. ಆ ಸಂಪ್ರದಾಯವನ್ನು ಈ ಬಾರಿ ಬಿಟ್ಟುಬಿಡೋಣ.
ಕುಂಬ್ಳೆ ನಮಗೆ ಆಪ್ತರಾಗುವುದು ಕನ್ನಡಿಗ ಎಂಬುದರ ಮೂಲಕ. ಹಲವು ಟಿ.ವಿ. ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಾಗ ಮಾತನಾಡಿದ್ದು ಸ್ಪಷ್ಟ ಕನ್ನಡದಲ್ಲಿ ಎಂಬ ಖುಷಿಗೆ. ಕ್ರಿಕೆಟಿಗ ಕುಂಬ್ಳೆ ನಿಮಗಿಷ್ಟವಾಗದಿರಬಹುದು. ಅದು ನಿಮ್ಮಿಷ್ಟ! ಆದರೆ ಸನ್ನಡತೆಯ ಕುಂಬ್ಳೆಯನ್ನು ಗೌರವಿಸದಿದ್ದರೆ ಅದು ನಮ್ಮಲ್ಲಿರುವ ಐಬು!! ಸಚಿನ್, ದ್ರಾವಿಡ್, ಲಕ್ಷ್ಮಣ್‌ರ ಜೊತೆ ಕುಂಬ್ಳೆ. ಓಹ್, ದೇಶದ ಸಂಸ್ಕೃತಿಯ ರಾಯಭಾರಿಗಳಿವರು.
ನೆನಪು ಸರಿಯಿದ್ದರೆ ಕುಂಬ್ಳೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಶ್ರೀಲಂಕಾದ ವಿರುದ್ಧ ಶಾರ್ಜಾದಲ್ಲಿ, ೧೯೯೦ದಲ್ಲಿ. ಆ ನಂತರ ಭಾರತ ಇಂಗ್ಲೆಂಡಿನಲ್ಲಿ ಒನ್ ಡೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತದೆ. ಕುಂಬ್ಳೆ ಅತಿ ಬಿಗಿಯಾದ ಬೌಲಿಂಗ್ ಮಾಡಿ ಗಮನ ಸೆಳೆಯುತ್ತಾರೆ. ಮತ್ತೆ ನೆನಪಿನ ಆಧಾರದಲ್ಲಿಯೇ ಹೇಳುವುದಾದರೆ, ಇಂಗ್ಲೆಂಡ್ ವಿರುದ್ಧದ ಆ ಪಂದ್ಯ ಕುಂಬ್ಳೆಯವರ ಎರಡನೇ ಏಕದಿನ ಪಂದ್ಯವಾಗಿದ್ದಿರಬೇಕು. ತಮ್ಮ ಬೌಲಿಂಗ್ ಕೋಟಾದ ಹತ್ತು ಓವರ್‌ಗಳಲ್ಲಿ ಒಂದೇ ಒಂದು ಬೌಂಡರಿಯನ್ನು ಕುಂಬ್ಳೆ ಬಿಟ್ಟುಕೊಡಲಿಲ್ಲ ಎನ್ನುವುದೇ ಅಗ್ಗಳಿಕೆ. ಬಹುಷಃ ವಿಕೆಟ್ ಗಳಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಆಕರ್ಷಕ ನಿಯಂತ್ರಿತ ಬೌಲಿಂಗ್‌ಗೆ ‘ಪಂದ್ಯದ ವ್ಯಕ್ತಿ’ ಪ್ರಶಸ್ತಿಯನ್ನು ಪಡೆದ ಅಪರೂಪದ ಪ್ರಸಂಗ ಇದು.
ಕಪಿಲ್, ಶ್ರೀನಾಥ್ ದಿನಗಳಲ್ಲೂ ಭಾರತಕ್ಕೊಂದು ರೋಗವಿತ್ತು. ಆರಂಭಿಕ ಓವರ್‌ಗಳನ್ನು ಬಿಗ್ಗಬಿಗಿಯಾಗಿ ಮಾಡಿದರೂ ಅಂತಿಮ ೧೦ ಓವರ್‌ಗಳಲ್ಲಿ ಸ್ಲಾಗ್‌ಗೆ ಒಳಗಾಗಿಬಿಡುತ್ತಿದ್ದರು. ಆಗೆಲ್ಲ ನಾವು ಕುಂಬ್ಳೆಯವರನ್ನು ನೆನಪಿಸಿಕೊಳ್ಳಬೇಕಿತ್ತು. ಆಗೆಲ್ಲ ನಾವು ಕುಂಬ್ಳೆಯವರನ್ನು ಹುಡುಕಿಕೊಳ್ಳಬೇಕಿತ್ತು. ಒಬ್ಬ ಪಕ್ಕಾ ಮಧ್ಯಮ ವೇಗಿಯಂತೆ ಯಾರ್ಕರ್ ಎಸೆಯುತ್ತ ರನ್ ಪ್ರವಾಹ ನಿಯಂತ್ರಿಸುತ್ತಿದ್ದ ಕುಂಬ್ಳೆ ಹೆಚ್ಚು ಜನಪ್ರಿಯ. ಕ್ರಿಕೆಟ್‌ನ ಅಂತಿಮ ದಿನಗಳಲ್ಲಿ ಕುಂಬ್ಳೆಯ ಆ ಫ್ಲಿಫರ್, ಯಾರ್ಕರ್ ಮಾಯವಾಗಿದ್ದು ಅವರು ದೈಹಿಕವಾಗಿ ೧೮ ವರ್ಷ ಕ್ರಿಕೆಟ್ ಆಡಿದ್ದರ ಸವಕಳಿಯಿದ್ದೀತು.
ಕುಂಬ್ಳೆಗೆ ಅನ್ಯಾಯವಾಗಿದ್ದೇ ಜಾಸ್ತಿ. ನಾಯಕತ್ವದ ವಿಚಾರದಲ್ಲಂತೂ ಅವರು ಅವಕಾಶ ವಂಚಿತರು. ರಾಜ್ಯಕ್ಕೆ ರಣಜಿ ಪ್ರಶಸ್ತಿ ತಂದುಕೊಟ್ಟ ದೃಷ್ಟಾಂತವಿದ್ದರೂ ಆಯ್ಕೆದಾರರು ಬೌಲರ್‌ನೊಬ್ಬನಿಗೆ ನಾಯಕತ್ವ ಕೊಡಲು ಹಿಂಜರಿದು ಸೌರವ್, ದ್ರಾವಿಡ್‌ರತ್ತ ಒಲಿದುಬಿಟ್ಟರು. ಸೌರವ್ ಮಿಂಚಿದರೂ ಇಂಜಿನೀಯರ್ ಮೆದುಳಿನ ಕುಂಬ್ಳೆಗೆ ಕೊಕ್ ನೀಡಿದ್ದರಿಂದ ನಷ್ಟ ಭಾರತ ತಂಡಕ್ಕಾಯಿತು. ಸೌರವ್‌ರ ಅನಗತ್ಯ ಅಗ್ರೆಶನ್‌ತನದಿಂದ ದೇಶದ ಖ್ಯಾತಿಗೆ ಮುಕ್ಕಾಯಿತು. ಕೇವಲ ಬಿಸಿಸಿಐನ ಹಣಬಲ ನಮ್ಮ ಇಮೇಜ್ ಉಳಿಸಿದೆಯೇ ವಿನಃ ಸನ್ನಡತೆಯ ಮಾತು ಬಂದರೆ ನಾವು ಹಿಂದೆ. ಸ್ವತಃ ಸೌರವ, ಹರ್ಭಜನ್, ಶ್ರೀಶಾಂತ್‌ರೆಲ್ಲ ಕ್ರಿಕೆಟ್ ಸಂಸ್ಕೃತಿಯನ್ನೆಲ್ಲ ಹರಿದು ಹಂಚಿದವರೇ. ಆ ಲೆಕ್ಕದಲ್ಲಿ, ಕುಂಬ್ಳೆ ಈ ಮುನ್ನವೇ ನಾಯಕರಾಗಿದ್ದರೆ ತಂಡದ ಮೌಲ್ಯ ಹೆಚ್ಚುತ್ತಿತ್ತು.
ಬ್ಯಾಟಿಂಗ್ ವಿಚಾರದಲ್ಲಿ ಮಾತ್ರ ಅನ್ಯಾಯಕ್ಕೆ ಅನಿಲ್ ತಮ್ಮನ್ನೇ ದೂಷಿಸಿಕೊಳ್ಳಬೇಕು. ಕೊನೆ ಪಕ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಕುಂಬ್ಳೆಯವರ ಬ್ಯಾಟೂ ಮಾತನಾಡಬೇಕಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಅಲ್ಲೊಂದು ೮೭, ಇಲ್ಲೊಂದು ಅರ್ಧ ಶತಕ ಸಮರ್ಥನೆಗೆ ಸಾಕಾಗುವಂತದಲ್ಲ. ರಣಜಿಯಲ್ಲಿ ಹಲವು ಶತಕ ಹೊಡೆದವ ಟೆಸ್ಟ್‌ನಲ್ಲಿ ಹಾಸ್ಯಾಸ್ಪದನಾಗುವುದೇ? ಅಂತದೊಂದು ನೋವು ನಮ್ಮನ್ನು ಕಾಡುತ್ತಿರುವಾಗಲೇ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಚಿಮ್ಮಿ ಬಂದ ಆ ಟೆಸ್ಟ್ ಶತಕ ಕುಂಬ್ಳೆಯವರದಲ್ಲ, ನಮ್ಮದು! ಶತಕದ ಬಾಗಿಲು ದಾಟಲು ಗಿಟ್ಟಿಸಿದ ಆ ಕೊನೆಯ ಬೌಂಡರಿಯನ್ನು ಉಲ್ಲೇಖಿಸಿ ಮತ್ತೆ ನಮ್ಮ ಅನಿಲ್‌ರನ್ನು ಹೀಗಳೆದರೆ ಹುಷಾರ್!
ಕುಂಬ್ಳೆಯವರ ಕೊನೆಯ ಕ್ರಿಕೆಟ್ ದಿನಗಳಲ್ಲಾದರೂ ಕೆಲವು ಪ್ರತಿಫಲ ಸಿಕ್ಕಿತಲ್ಲ, ಅಷ್ಟು ಸಾಕು. ದ್ರಾವಿಡ್‌ರ ಅನಿರೀಕ್ಷಿತ ರಾಜೀನಾಮೆ, ಧೋನಿಯ ಎಳಸುತನದಿಂದ ಕುಂಬ್ಳೆಗೆ ನಾಯಕತ್ವ ಸಿಕ್ಕಿತು ಎಂಬುದು ನಿಜವಾದರೂ ಅದೊಂದು ತರಹ ಬಿಸಿಸಿಐ ಮಾಡಿಕೊಂಡ ಪ್ರಾಯಶ್ಚಿತ್ತವೂ ಹೌದು. ಸಮಸ್ಯೆಗಳ ಆಸ್ಟ್ರೇಲಿಯನ್ ಪ್ರವಾಸವನ್ನು ಕುಂಬ್ಳೆ ನಿರ್ವಹಿಸಿದ ರೀತಿಯ ಮುಂದೆ ನಾಯಕತ್ವದ ಸಾಮರ್ಥ್ಯ ವಿವರಿಸುವ ಬೇರೆ ಪ್ರಸ್ತಾಪಗಳ ಅಗತ್ಯವಿಲ್ಲ.
ನಿವೃತ್ತಿಯನ್ನು ಪತ್ರಕರ್ತರ ಮುಂದೆ ಘೋಷಿಸುವಾಗ ಅನಿಲ್ ಹೇಳಿದ್ದರು, ಈ ನಿರ್ಧಾರಕ್ಕೆ ನಿನ್ನೆ ಸಂಜೆ ಬಂದೆ. ಆನಂತರ ಅದನ್ನು ಕುಟುಂಬದ ಸದಸ್ಯರಿಗೆ, ಭಾರತದ ಕ್ರಿಕೆಟ್ ಮಂಡಳಿಯವರಿಗೆ ಮತ್ತು ಎಲ್ಲ ಸಹ ಆಟಗಾರರಿಗೆ ವೈಯುಕ್ತಿಕವಾಗಿ ತಿಳಿಸಿದ್ದೇನೆ ಇನ್ನೊಮ್ಮೆ ಮೇಲಿನ ಸಾಲುಗಳನ್ನು ಓದುವಾಗ ‘ಎಲ್ಲ ಆಟಗಾರರಿಗೆ ವೈಯುಕ್ತಿಕವಾಗಿ ತಿಳಿಸಿದ್ದೇನೆ’ ಎಂಬುದನ್ನು ಓದಿ, ಅರ್ಥೈಸಿ. ಕುಂಬ್ಳೆ ಅರ್ಥವಾಗುತ್ತಾರೆ! 


-ಮಾವೆಂಸ








 
200812023996