ಗುರುವಾರ, ನವೆಂಬರ್ 27, 2008

ದಶಕದ ದಾರಿ ದಾಟಿದ ಟ್ರಾಯ್



ನಂಬಿ,ಭಾರತದ ಕೆಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಕೇಂದ್ರ ವಿದ್ಯುತ್ ಕಾಯ್ದೆಯಡಿ ಜಾರಿಗೆ ಬಂದಿರುವ ವಿದ್ಯುತ್ ನಿಯಂತ್ರಣ ಆಯೋಗವೆಂಬ ಸ್ವಾಯತ್ತ ವ್ಯವಸ್ಥೆಯನ್ನು ಹೆಸರಿಸಬಹುದು. ಕರ್ನಾಟಕದಲ್ಲಿಯೇ ಕೆಇಆರ್‌ಸಿ ತನ್ನ     ನಿಷ್ಪಕ್ಷಪಾತ ವರ್ತನೆಯಿಂದ ದೇಶದಲ್ಲಿ ಹೆಸರುವಾಸಿ. ಎಸ್ಕಾಂ, ಕೆಪಿಟಿಸಿಎಲ್‌ನ ಅಂಧಾದುಂಧಿಗೆ ಕಡಿವಾಣ ಹಾಕಿ, ಬಳಕೆದಾರರ ಪರ ನಿಂತಿರುವುದರಿಂದ ಕೆಇಆರ್‌ಸಿ ಎಲ್ಲರಿಗೂ ತಿಳಿದಿದೆ. ಇದೇ ರಿತಿ ದೂರವಾಣಿ ಕ್ಷೇತ್ರದಲ್ಲಿ ನಿಯಮಗಳನ್ನು ರೂಪಿಸುವ ಜವಾಬ್ದಾರಿ ಭಾರತೀಯ ಟೆಲಿಕಾಂ ನಿಯಂತ್ರಣ ಆಯೋಗದ್ದು. ಪುಟ್ಟದಾಗಿ ಕರೆಯುವುದಾದರೆ, ಟ್ರಾಯ್.

ಇದೀಗ ಟ್ರಾಯ್ ಅಸ್ಥಿತ್ವಕ್ಕೆ ಬಂದು ಒಂದು ದಶಕ ಸಂದಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್‌ನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ೧೯೯೭ರಲ್ಲಿ. ಅದೇ ವರ್ಷ ನೀತಿ ನಿರೂಪಕ ಸಂಸ್ಥೆಯಾಗಿ ಟ್ರಾಯ್‌ನ್ನು ಸ್ಥಾಪಿಸಲಾಯಿತು. ದೂರವಾಣಿ ಕ್ಷೇತ್ರದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತ ಟ್ರಾಯ್ ೨೦೦೪ರ ಜನವರಿ ಒಂಭತ್ತರಲ್ಲಿ ಸರ್ಕಾರ ತಂದ ಇನ್ನೊಂದು  ಪ್ರಕಟನೆಯ ಮೂಲಕ ಕೇಬಲ್ ಟೆಲಿವಿಷನ್ ಕ್ಷೇತ್ರವನ್ನು ನಿರ್ವಹಿಸುವ ಹೆಚ್ಚುವರಿ ಕೆಲಸ ಪಡೆಯಿತು.

೧೯೯೭ರ ಅವಧಿ ಒಂದು ಪರ್ವ ಕಾಲ. ಸರ್ಕಾರ ದೂರವಾಣಿ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿತ್ತು. ಸರ್ಕಾರದ ಮೇಲೆ ಖಾಸಗಿ ಲಾಬಿ ಚಾಲೂವಿದ್ದುದರಿಂದ ಬಳಕೆದಾರರಿಗೆ ಅನ್ಯಾಯವಾಗುತ್ತಿತ್ತು. ಸಕಾರ ಜಾಣ್ಮೆಯಿಂದ ಜವಾಬ್ದಾರಿಗಳನ್ನು ಟ್ರಾಯ್‌ಗೆ        ವಹಿಸಿದ್ದುದರಿಂದ ಬೇಕಾಬಿಟ್ಟಿ ವರ್ತನೆಗಳಿಗೆ ಕಡಿವಾಣ ಹಾಕಿದಂತಾಯಿತು. ಟ್ರಾಯ್ ಕ್ರಮಗಳಿಂದ ಬಳಕೆದಾರರಿಗೆ ವೆಚ್ಚ ತಗ್ಗಿತು ಮತ್ತು ಟೆಲಿಕಾಂ ಕ್ಷೇತ್ರ ಅಬ್ಬಾ ಎನ್ನುವಂತೆ ಬೆಳೆಯಿತು.

ಬೇಕಿದ್ದರೆ ಅಂಕಿಅಂಶಗಳನ್ನು ಗಮನಿಸಿ. ೧೯೯೭ರಲ್ಲಿ ೧೪.೫೪ ಮಿಲಿಯನ್ ಸ್ಥಿರ ದೂರವಾಣಿ ಗ್ರಾಹಕರಿದ್ದರೆ, ಈಗ ೪೦.೭೫    ಮಿಲಿಯನ್. ಮೊಬೈಲ್ ಕ್ಷೇತ್ರ ೦.೩೪ ಮಿಲಿಯನ್‌ನಿಂದ ೨೦೫.೮೬ ಮಿಲಿಯನ್‌ಗೆ ಚಂದಾದಾರರನ್ನು ಹೆಚ್ಚಿಸಿಕೊಂಡಿದೆ. ಇಂಟರ್ನೆಟ್ ಬಳಕೆದಾರರೂ ಅಷ್ಟೇ, ೦.೦೯ ಮಿಲಿಯನ್‌ನಿಂದ ೪೦.೫೭ ಮಿಲಿಯನ್‌ಗೆ ಹೆಚ್ಚಿದ್ದಾರೆ.

ಸ್ವಾರಸ್ಯವೆಂದರೆ, ದೂರವಾಣಿ ಕರೆ ದರಗಳು ತೀವ್ರವಾಗಿ ಇಳಿದಿವೆ. ದಶಕದ ಹಿಂದೆ ಒಳಬರುವ ಕರೆಗೂ ವೆಚ್ಚವಿತ್ತು. ಆ ಲೆಕ್ಕದಲ್ಲಿ ಒಂದು ನಿಮಿಷದ ಸ್ಥಳೀಯ ಕರೆಗೆ ೧೬.೮೦ ರೂ. ಖರ್ಚು. ಈಗ ಸರಾಸರಿ ಒಂದು ರೂಪಾಯಿ! ಹಾಗೆಯೇ ಎಸ್‌ಟಿಡಿ ೩೦ ರೂ.ನಿಂದ ೨.೪ ರೂ.ಗೆ, ಐಎಸ್‌ಡಿ ೭೫ ರೂ.ನಿಂದ ೬.೪೦ ರೂ.ಗೆ ಇಳಿದಿದೆ. ಟೆಲಿಕಾಂ ಕ್ಷೇತ್ರದ ಬೆಳವಣಿಗೆಯನ್ನು ಇಂತಹ ಹಲವು ಅಂಕಿಅಂಶಗಳಿಂದ ಸಾಕ್ಷೀಕರಿಸಬಹುದು. ಮುಖ್ಯವಾಗಿ, ದೇಶದ ಟೆಲಿ ಡೆನ್ಸಿಟಿ ೧೯೯೭ರಲ್ಲಿ ಕೇವಲ ೧.೫೬ ಶೇ.ಇದ್ದರೆ ಈಗ ೪೦.೫೭ ಶೇ.ಕ್ಕೆ ಏರಿದೆ. ಅಂದರೆ ಇನ್ನೂ ೫೯ ಶೇ.ದಷ್ಟು ವ್ಯಾಪಿಸಬೇಕಾಗಿರುವ ಅಂಶವೂ ಟ್ರಾಯ್‌ನ ಅಗತ್ಯವನ್ನು ಇನ್ನಷ್ಟು ದಟ್ಟಗೊಳಿಸುತ್ತದೆ.

ಟ್ರಾಯ್ ಯಾವುದೇ ನಿಯಮವನ್ನು ಏಕಾಏಕಿ ಜಾರಿಗೆ ತರುತ್ತಿಲ್ಲ. ತನ್ನ ಬೌದ್ಧಿಕ ಹಾಗೂ ಕಾನೂನು ಸಂಪನ್ಮೂಲಗಳಿಂದ ಕರಡು ನಿಯಮಾವಳಿಗಳನ್ನು ರೂಪಿಸುತ್ತದೆ. ಅದನ್ನು ಸಂಬಂಧಿಸಿದ ಎಲ್ಲರಿಗೂ ಕಳಿಸಿ ಅವರ ಅಭಿಪ್ರಾಯ ಕೇಳುತ್ತದೆ. ಅವರಲ್ಲಿ ಸೇವಾದಾತರಿಂದ ಹಿಡಿದು ಪ್ರಾತಿನಿಧಿಕ ಗ್ರಾಹಕ ಸಂಘಟನೆಗಳವರೆಗೆ ಎಲ್ಲರೂ ಇರುತ್ತಾರೆ. ಇವರ ಪ್ರತಿಕ್ರಿಯೆಗಳನ್ನು ಆಧರಿಸಿ ಅಂತಿಮ ನಿಯಮ ರೂಪಿಸುವುದರಿಂದ ಪರಿಣಾಮಕಾರಿ ಫಲಿತಾಂಶ ಸಾಧ್ಯವಾಗಿದೆ. ಕೇವಲ ೧೬೦ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಟ್ರಾಯ್‌ನ ಗುಣಮಟ್ಟಕ್ಕೆ ನಮ್ಮ ದೇಶದ ಬಿಐಎಸ್ ೨೦೦೪ರ ಡಿಸೆಂಬರ್‌ನಲ್ಲಿಯೇ ಐಎಸ್‌ಓ ೯೦೦೧ : ೨೦೦೦ ಎಂಬ ಗುಣಮಟ್ಟದ ಪ್ರಶಸ್ತಿ ನೀಡಿದೆ!

ಸೇವಾದಾತರ ಕಾರ್ಯಕ್ಷಮತೆ ಹೆಚ್ಚಿಸುವುದು, ಚಂದಾ ದರ ನಿಗದಿಪಡಿಸುವುದು, ಸೇವಾ ಗುಣಮಟ್ಟವನ್ನು ನಿಗದಿಪಡಿಸುವುದು, ಟೆಲಿ ಸಂಪರ್ಕವನ್ನು ಉತ್ತೇಜಿಸುವುದು, ಗ್ರಾಮೀಣ ಭಾರತವನ್ನು ಟೆಲಿಕಾಂ ವ್ಯಾಪ್ತಿಗೆ ತರುವ ನೀತಿ, ಕೇಬಲ್ - ಇಂಟರ್ನೆಟ್- ಡಿಟಿಹೆಚ್ ಸೇವೆಗಳನ್ನು ನೇರ್ಪುಗೊಳಿಸುವುದು ಮುಂತಾದ ಟೆಲಿಕಾಂ ವಲಯದ ಎಲ್ಲ ಕ್ಷೇತ್ರಗಳು ಟ್ರಾಯ್ ಕೆಲಸದ ವ್ಯಾಪ್ತಿಗೆ ಸೇರುತ್ತವೆ.

ಈ ಹತ್ತು ವರ್ಷಗಳಲ್ಲಿ ಟ್ರಾಯ್ ಇಟ್ಟ ಹೆಜ್ಜೆ ನೂರಾರು. ಟ್ರಾಯ್ ರೂಪಿಸಿದ ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ಸದ್ಯದಲ್ಲಿಯೇ ಜಾರಿಗೊಳ್ಳಲಿದೆ. ಅದರ ಪ್ರಕಾರ, ನಾವು ಹಳೆಯ ಮೊಬೈಲ್ ನಂಬರ್‌ನ್ನು ಉಳಿಸಿಕೊಂಡೇ ಬೇರೆ ಸೇವಾದಾತರ ಹೊಸ ಸಿಮ್ ಬಳಸಬಹುದು. ಇದು ಟೆಲಿಕಾಂ ಕ್ಷೇತ್ರದ ಕ್ರಾಂತಿಕಾರಕ ಬದಲಾವಣೆಗೆ ಹರಿಕಾರವಾದೀತು. ಗ್ರಾಹಕರಿಗೆ ಕಿರಿಕಿರಿಯೆನ್ನಿಸುವ ಟೆಲಿ ಮಾರ್ಕೆಟಿಂಗ್ ಕರೆಗಳಿಂದ ರಕ್ಷಿಸಲು ಟ್ರಾಯ್ ‘ನ್ಯಾಷನಲ್ ಡು ನಾಟ್ ಕಾಲ್’ ನೊಂದಣಿಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ ಕ್ರಮ. ನೊಂದಾಯಿತ ಚಂದಾದಾರನಿಗೆ ಅಪ್ಪಿತಪ್ಪಿಯೂ ಟೆಲಿ ಮಾರ್ಕೆಟಿಂಗ್ ಕರೆ, ಸಂದೇಶ ಬರುವುದಿಲ್ಲ. ಬಂದಲ್ಲಿ ಪ್ರತಿ ಕರೆಗೆ ೫೦೦ ರೂ. ದಂಡದ ದುಬಾರಿ ಶಿಕ್ಷೆ ಇಟ್ಟಿರುವುದು ಟ್ರಾಯ್ ಜಾಣ್ಮೆಗೆ ಸಾಕ್ಷಿ. ಹಾಗೆಯೇ ವ್ಯಾಲಿಡಿಟಿ ಮೀರಿ ವ್ಯರ್ಥವಾಗುವ ಬಳಕೆದಾರನ ಟಾಕ್‌ಟೈಮ್, ಚಂದಾದಾರ ಹಿಂಪಡೆಯದ ಹಣ ಈ  ಮುನ್ನ ಮೊಬೈಲ್ ಕಂಪನಿಗಳಿಗೇ ಲಾಭವಾಗುತ್ತಿತ್ತು. ಈ    ನಿಟ್ಟಿನಲ್ಲಿಯೂ ಯೋಚಿಸಿರುವ ಟ್ರಾಯ್ ‘ಟೆಲಿಕಮ್ಯುನಿಕೇಷನ್ ಕನ್ಸೂಮರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್’ನ್ನು ಇದೇ ಜೂನ್‌ನಲ್ಲಿ ಜಾರಿಗೆ ತಂದಿದೆ. ಮೇಲಿನ ಮಾದರಿಯ ಹಣವೆಲ್ಲ ಈ ನಿಧಿಗೆ ಸೇರ್ಪಡೆಯಾಗುತ್ತದೆ ಮತ್ತು ಈ ಆದಾಯದಿಂದ ಟ್ರಾಯ್ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಅತ್ಯಂತ ಕಡಿಮೆ ದರದಲ್ಲಿ ಕೇಬಲ್ ಸಂಪರ್ಕ ಕಲ್ಪಿಸುವ ಯೋಜನೆ ‘ಕ್ಯಾಸ್’ ಟ್ರಾಯ್‌ನ ಇನ್ನೊಂದು ಗುರುತರ ಹೆಜ್ಜೆ. ಪುಟ್ಟ ಡಿಜಿಟಲ್ ಸೆಟ್‌ಟಾಪ್ ಬಾಕ್ಸ್ ಮೂಲಕ ವೀಕ್ಷಕ ತನಗೆ ಬೇಕಾದ ಚಾನೆಲ್ ನೋಡುವ ಈ ವ್ಯವಸ್ಥೆ ಭವಿಷ್ಯದಲ್ಲಿ ಆಕರ್ಷಣೀಯ. ಮುಖ್ಯವಾಗಿ, ದೇಶದಲ್ಲಿ ವ್ಯಾಪಕವಾಗುತ್ತಿರುವ ಕೇಬಲ್ ಮಾಫಿಯಾಗೆ ಇದು ಸಮರ್ಥ ಉತ್ತರವೂ ಹೌದು.

ಗ್ರಾಹಕರ ದೂರು ನಿರ್ವಹಣೆಗೆ ಸ್ಪಷ್ಟ ನಿಯಮಗಳನ್ನು ಟ್ರಾಯ್ ರೂಪಿಸಿದೆ. ಉಚಿತ ಕಾಲ್‌ಸೆಂಟರ್, ನೋಡಲ್ ಆಫೀಸರ್,     ಅಪಲೇಟ್ ಅಥಾರಿಟಿಗಳ ಈ ನಿರೂಪಣೆ ಜನಪರವಾಗಿದೆ. ದೇಶದ ಹೆಚ್ಚು ಮಂದಿ ಮೊಬೈಲ್ ಗ್ರಾಹಕರು ಅನಕ್ಷರಸ್ಥರೂ, ಕೂಲಿ      ಕಾರ್ಮಿಕರೂ ಆಗಿರುವುದರಿಂದ ಟ್ರಾಯ್ ಅವರ ಪರ ನಿಲ್ಲದಿದ್ದರೆ ಅನಾಹುತವೇ ಆದೀತು. ಖಾಸಗಿ ಮೊಬೈಲ್ ಸೇವಾದಾತರ ಲಾಭಕೋರತನಕ್ಕೆ ಕಡಿವಾಣ ಹಾಕಲೆಂದೇ ಟ್ರಾಯ್ ಕಾಲಕಾಲಕ್ಕೆ ನಿರ್ದೇಶನಗಳನ್ನು ಜಾರಿಗೆ ತಂದಿದೆ. ಕೆಲವನ್ನು                ನೆನಪಿಸುವುದಾದರೆ, ಬಾಕಿ ಉಳಿದಿರುವ ಟಾಕ್‌ಟೈಮ್ ಗ್ರೇಸ್ ಅವಧಿಯವರೆಗೆ ಮರುಭರ್ತಿಗೆ ಇರುವುದು, ಮೌಲ್ಯವರ್ಧಿತ ಸೇವೆಗೆ ಮುಂಚಿತ ಗ್ರಾಹಕ ಒಪ್ಪಿಗೆ ಅತ್ಯಗತ್ಯ, ಪ್ಲಾನ್ ಬದಲಾವಣೆಗೆ ಶುಲ್ಕ ವಿಧಿಸುವಂತಿಲ್ಲ, ಆರು ತಿಂಗಳವರೆಗೆ ಟ್ಯಾರಿಫ್ ದರ ಏರಿಸಲಾಗದು, ಗುಪ್ತ ಶುಲ್ಕ ಹೇರುವಂತಿಲ್ಲ ಎಂಬಿತ್ಯಾದಿ ನಿರ್ದೇಶನಗಳು ಪ್ರಭಾವಯುತ.

ಟ್ರಾಯ್‌ಗೆ ಆಕ್ಷೇಪಗಳೂ ಇಲ್ಲದಿಲ್ಲ. ಟ್ರಾಯ್ ಕಾಯ್ದೆ ೧೯೯೭ ಮತ್ತು ಅದರ ೨೦೦೦ದ ತಿದ್ದುಪಡಿ ಕಾಯ್ದೆಗಳ ಸೆಕ್ಷನ್ ೧೩ ಟ್ರಾಯ್‌ಗೆ ಅತಿ ವಿಸ್ತಾರದ ಅಧಿಕಾರವನ್ನು ನೀಡಿದೆ. ಟ್ರಾಯ್ ಅದನ್ನು ಸಮರ್ಥವಾಗಿ ಬಳಸಿಲ್ಲ ಎಂಬುದು ಒಂದು ವಲಯದ ದೂರು. ಟ್ರಾಯ್ ನೀತಿ- ನಿರ್ದೇಶನಗಳನ್ನು ಹೊರಡಿಸಿದೆಯಾದರೂ ಅದರ ಜಾರಿಗೆ ಅಷ್ಟೇ ಪ್ರಮಾಣದ ಗಮನ ಕೊಟ್ಟಿಲ್ಲ. ಹಾಗಾಗಿ ಅದರ ಲಾಭ ಬಳಕೆದಾರರನ್ನು ತಲುಪಿಲ್ಲ ಎನ್ನಲಾಗುತ್ತಿದೆ. ಬಿಎಸ್‌ಎನ್‌ಎಲ್ ಈಗಲೂ ಎರಡು ತಿಂಗಳಿಗೆ ಬಿಲ್ ನೀಡುವುದು, ಸಿಮ್ ಆಕ್ಟಿವೇಟ್ ಆದ ನಂತರದ ವಾರದಲ್ಲಿ ಟ್ಯಾರಿಫ್ ವಿವರದ ಪ್ರತಿ ಬಳಕೆದಾರನಿಗೆ ಲಬಿಸದಿರುವುದು, ಇವತ್ತಿಗೂ ಸೇವಾ ಗುಣಮಟ್ಟದ ಮಾನದಂಡ ಜಾರಿ ಆಗದ್ದು, ಡಿಟಿಎಚ್ ಸೇವೆಗೆ ಟ್ಯಾರಿಫ್ ನಿಗದಿ ಪಡಿಸದಿರುವುದು, ಈ ಕ್ಷೇತ್ರಗಳಲ್ಲಿ ದೂರು ನಿರ್ವಹಣಾ    ವ್ಯವಸ್ಥೆಯನ್ನು ಸೂಚಿಸದಿರುವುದು....  ಇವನ್ನು ಟೆಲಿಕಾಂ ತಜ್ಞರು ಉದಾಹರಿಸುತ್ತಾರೆ.

ನಿಜಕ್ಕೂ ಟ್ರಾಯ್ ತನ್ನ ನಿರ್ದೇಶನಗಳ ಜಾರಿಯತ್ತ ಒಂದು ನೋಟ ಹರಿಸಬೇಕಾಗಿದೆ. ಇಂದು ಟ್ರಾಯ್‌ನಲ್ಲಿ ಬಳಕೆದಾರನ ವೈಯುಕ್ತಿಕ ದೂರಿಗೆ ಪರಿಹಾರದ ವ್ಯವಸ್ಥೆ ಇಲ್ಲ. ಟೆಲಿಕಾಂ ಕಂಪನಿಗಳು ನಾಮಕೇವಾಸ್ತೆ ಕಾಲ್‌ಸೆಂಟರ್ ಹೊಂದಿರುವವೇ ವಿನಃ ದೂರು ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಇಂಗ್ಲೀಷ್‌ನಲ್ಲಿ ಮುಂದಿನ ಹಂತಗಳಲ್ಲಿ ವ್ಯವಹರಿಸಬೇಕಾದ ಪದ್ಧತಿ        ಸಾಮಾನ್ಯರನ್ನು ದೂರು ಪರಿಹಾರದಿಂದ ವಂಚಿತಗೊಳಿಸಿದೆ.

ಈ ನಿಟ್ಟಿನಲ್ಲಿ ಟ್ರಾಯ್ ‘ಟೆಲಿಕಾಂ ಒಂಬುಡ್ಸ್‌ಮನ್’ನ ನೀತಿ- ನಿಯಮ ನಿರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಅದರ ಜಾರಿಯಿಂದ ಟ್ರಾಯ್‌ನ ಕೆಲಸಗಳ ಲಾಭ ಸುಲಭದಲ್ಲಿ ಗ್ರಾಹಕರಿಗೆ ಲಭಿಸಬಹುದಿತ್ತು. ಆದರೆ ಕೇಂದ್ರದ ಮೇಲೆ ಖಾಸಗಿ ಮೊಬೈಲ್ ಲಾಬಿಯಿಂದಾಗಿ ಅದು ಜಾರಿಗೆ ಬಂದೇ ಇಲ್ಲ. ಟ್ರಾಯ್‌ಗೆ ಜಾರಿಗೆ ಒತ್ತಾಯಿಸುವ ಅಧಿಕಾರ ಇಲ್ಲದಿರುವುದು ದೊಡ್ಡ ಕೊರತೆ.

ಗ್ರಾಮೀಣ ಭಾಗದಲ್ಲಿ ಟೆಲಿಕಾಂ ಸೇವೆ ವಿಸ್ತರಿಸಲು ಟ್ರಾಯ್ ಉತ್ತೇಜಿಸದಿರುವುದು ಎದ್ದು ಕಾಣುತ್ತದೆ. ಹಾಗಾಗೇ ನಗರಗಳಲ್ಲಿ ಶೇ. ೫೦ರ ಟೆಲಿ ಡೆನ್ಸಿಟಿ ಇದ್ದರೆ, ಹಳ್ಳಿಗಳ ಶೇ. ೫ರಷ್ಟು ಜನರನ್ನು ಮಾತ್ರ ಫೋನ್ ತಲುಪಿದೆ. ಈ ಮಧ್ಯೆ ಟ್ರಾಯ್ ಎಡಿಸಿ ಶುಲ್ಕವನ್ನು ಕಡಿತಗೊಳಿಸಿರುವುದು ಅಷ್ಟರಮಟ್ಟಿಗೆ ಗ್ರಾಮ್ಯ ಪ್ರದೇಶಕ್ಕೆ ದೂರವಾಣಿ ನೀಡಿಕೆಗೆ ಭಂಗ ತಂದಿದೆ. ಯುಎಸ್‌ಓ ನಿಧಿಯ ಸಬ್ಸಿಡಿಯಿಂದ ಗ್ರಾಮ ಭಾಗದಲ್ಲಿ ಮೊಬೈಲ್ ಟವರ್‌ಗಳನ್ನು ನಿರ್ಮಿಸಬಹುದಾಗಿದ್ದು, ಇದರಿಂದ ಬದಲಾವಣೆ ಸಾಧ್ಯ ಎಂಬುದು ಟ್ರಾಯ್ ಉತ್ಸಾಹ.

ಕಳೆದ ದಶಕವನ್ನು ಟ್ರಾಯ್ ತನ್ನ ಪ್ರಾಥಮಿಕ ಹೆಜ್ಜೆ ಎಂದುಕೊಂಡರೆ ಸರಿಹೋದೀತು. ಬರುವ ದಿನಗಳಲ್ಲಿ ಪ್ರಾಯೋಗಿಕ       ಫಲಿತಾಂಶಕ್ಕೆ ಆದ್ಯತೆ ನೀಡಬೇಕು. ಅದರ ಗುರಿಗಳಲ್ಲಿ, ೨೦೧೦ರ ವೇಳೆಗೆ ೫೦೦ ಮಿಲಿಯನ್ ಗ್ರಾಹಕರನ್ನು ಸೃಷ್ಟಿಸುವುದು ಸೇರಿದೆ. ಸೇವಾದಾತರು ತಮ್ಮ ಚಂದಾದಾರರನ್ನು ಹೆಚ್ಚಿಸಲು ಹಿಂದೆ ಮುಂದೆ ನೋಡರು. ಆ ಮಟ್ಟಕ್ಕೆ ತಕ್ಕದಾದ ತಾಂತ್ರಿಕತೆ, ಸೇವಾ ಗುಣಮಟ್ಟದ ಪಾಲನೆಗೆ ಟ್ರಾಯ್ ಕಟಿಬದ್ಧವಾದರೆ ಮಾತ್ರ ಸಾರ್ಥಕತೆ.

 ಒಂದಂತೂ ನಿಜ, ಟ್ರಾಯ್‌ನ ಕ್ರಮಗಳಿಂದ ಮೊಬೈಲ್ ದರಗಳಲ್ಲಿ ದಿನೇದಿನೆ ಇಳಿಕೆ ಕಾಣುತ್ತಿದೆ. ಟ್ರಾಯ್‌ನ ಅಧ್ಯಕ್ಷ ಸೃಪೇಂದ್ರ ಮಿಶ್ರಾ ಒಂದೇ ಮಾತು ಹೇಳುತ್ತಾರೆ, "ಖಾಸಗೀಕರಣದ ದಿನಗಳಲ್ಲಿ ಸರ್ಕಾರದ ಆರೋಗ್ಯಕರ ನೀತಿ ಇರುವುದರಿಂದ ಟ್ರಾಯ್      ಜನಪರವಾಗಿ ಕೆಲಸ ಮಾಡಲು, ಖಾಸಗೀಕರನದ ಲಾಭವನ್ನು ಜನರಿಗೆ ತಲುಪಿಸಲು ಸಾಧ್ಯವಾಗಿದೆ." ಟ್ರಾಯ್‌ನ ಕಳೆದ ದಶಕದ   ಅನುಭವ ಬರುವ ದಿನಗಳನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. ಹೆಚ್ಚಿನ ವಿವರಗಳಿಗೆ www.trai.gov.in  ವೆಬ್‌ಸೈಟ್‌ನಲ್ಲಿ ಇಣುಕಬಹುದು. 

-ಮಾವೆಂಸ

4 comments:

ಮನಸ್ವಿ ಹೇಳಿದರು...

ವ್ಯಾಲಿಡಿಟಿ ಮೀರಿ ವ್ಯರ್ಥವಾಗುವ ಬಳಕೆದಾರನ ಟಾಕ್‌ಟೈಮ್, ಚಂದಾದಾರ ಹಿಂಪಡೆಯದ ಹಣ ‘ಟೆಲಿಕಮ್ಯುನಿಕೇಷನ್ ಕನ್ಸೂಮರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್' ಗೆ ಸೇರ್ಪಡೆಯಾಗುತ್ತದೆ ಮತ್ತು ಈ ಆದಾಯದಿಂದ ಟ್ರಾಯ್ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.ಎನ್ನುವ ಮಾಹಿತಿಯನ್ನು ತಿಳಿದು ತುಂಬಾ ಸಂತೋಷವಾಯಿತು..ಇನ್ನು ಓಳ್ಳೋಳ್ಳೆ ಮಾಹಿತಿಗಳು ನಿಮ್ಮಿಂದ ಮೂಡಿಬರಲಿ

Unknown ಹೇಳಿದರು...

HI prasadanna, nanu vivek.
your blog is tooooooooo cool...

ರವಿರಾಜ್ ಆರ್.ಗಲಗಲಿ ಹೇಳಿದರು...

nimma blog nodide chennagide, olleya praytna, nimmante nanu samana manaska, addarinda nanna blognallu kannu hayisi...http://www.ravirajgalagali.blogspot.com

ಮಾವೆಂಸ ಹೇಳಿದರು...

@ರವಿರಾಜ್,
ನೋಡಿದ್ದಕ್ಕೆ ಧನ್ಯವಾದ. ಮುದ್ದಾಂ ನಿಮ್ಮ ಬ್ಲಾಗ್ ನೋಡುತ್ತೇನೆ. ಹೀಗೆ ನೋಡುತ್ತಿರಿ ಮತ್ತು ಟೀಕೆ ಟಿಪ್ಪಣಿಗಳೂ ಇರಲಿ
-ಮಾವೆಂಸ

 
200812023996