ಶುಕ್ರವಾರ, ನವೆಂಬರ್ 7, 2008

ನಗೆಹೊನಲು



 
ಕಬ್ಬನ್‌ಪಾರ್ಕ್‌ನ ಆಚೆ ಕಾರಿನಲ್ಲಿ ಕುಳಿತು ಇನ್ನೇನು ಹೊರಡಬೇಕು ಎಂದಿದ್ದ ಫ್ರೊಫೆಸರ್ ನೋಡುತ್ತಾರೆ, ಒಬ್ಬ ಮಧ್ಯವಯಸ್ಕನನ್ನು ಮೂರು ನಾಯಿಗಳು ಬೆನ್ನಟ್ಟಿ ಬರುತ್ತಿವೆ. ತಕ್ಷಣವೇ ಕಾರಿನ ಬಾಗಿಲು ತೆಗೆದು ಆ ಮನುಷ್ಯನನ್ನು ಒಳಕರೆಯುತ್ತಾರೆ.
ದಡಕ್ಕನೆ ಕಾರಿನ ಒಳಹೊಕ್ಕ ಆ ಮನುಷ್ಯ ಥ್ಯಾಂಕ್ಸ್ ಹೇಳಿದ, ಬಹಳಷ್ಟು ಜನ ನನಗೆ ಲಿಫ್ಟ್ ಕೊಡಲೇ ಅಂಜುತ್ತಾರೆ. ಅವರೆಲ್ಲ ನನ್ನ ನಾಯಿಗಳನ್ನು ನೋಡಿ ಬೆದರಿಬಿಡುತ್ತಾರೆ. ಅವನ್ನೂ ಒಳಕರೆದುಕೊಳ್ಳಲೇ, ಜಂಟಲ್‌ಮನ್!?
*******

ಲಾಯರ್ ರಂಗರ ಕಛೇರಿಯ ಮುಂದಿದ್ದ ಬೋರ್ಡ್ ಇಂತಿತ್ತು, ‘ಮನಸ್ಸಿದ್ದಲ್ಲಿ ದಾರಿಯಿದೆ. ದಾರಿಯಿದ್ದಲ್ಲಿ ಕಾನೂನುಗಳಿವೆ. ಕಾನೂನುಗಳಿದ್ದಲ್ಲಿ ಲೂಪ್‌ಹೋಲ್‌ಗಳಿರುತ್ತವೆ. ಈ ಲೂಪ್‌ಹೋಲ್ ಇರುವಲ್ಲಿ ನಿಮ್ಮ ರಕ್ಷಣೆಗೆ ನಾನಿದ್ದೇನೆ! ಬನ್ನಿ, ಸುಸ್ವಾಗತ!!’


ಕಳ್ಳನ ವಿಚಾರಣೆ ನಡೆಯುತ್ತಿತ್ತು. ಕಳ್ಳನ ಪರ ಇದ್ದ ವಕೀಲ ಚಾಲಾಕಿ. ಜೀವಾವಧಿ ಶಿಕ್ಷೆ ವಿಧಿಸಬಹುದಾದ ಸಾಧ್ಯತೆಯಿದ್ದ ಕಾರಣ ಮುಖ್ಯ ಜಡ್ಜ್‌ಗೆ ಲಂಚ ಕೊಟ್ಟು ಸರಿಮಾಡಿಕೊಂಡಿದ್ದ. ಆತ ಜಡ್ಜ್‌ಗೆ ಹೇಗಾದರೂ ಮಾಡಿ ಹತ್ತು ವರ್ಷದ ಜೈಲು ಮಾಡಲು ವಿನಂತಿಸಿದ್ದ. 
ಅದೃಷ್ಟ! ಜಡ್ಜ್ ಖಡಕ್ಕಾಗಿ ಹತ್ತು ವರ್ಷಗಳ ಶಿಕ್ಷೆಯನ್ನೇ ಘೋಷಿಸಿದರು. ಕೆಲಕಾಲದ ನಂತರ ಜಡ್ಜ್‌ನ್ನು ಭೇಟಿಯಾದ ವಕೀಲ ಅವರನ್ನು ಅಭಿನಂದಿಸಿದ, ತೀರ್ಪು ಬರುವವರೆಗೂ ನಾನು ಗಾಬರಿಯಾಗಿದ್ದೆ. ಬಹುಷಃ ನೀವೂ ಟೆನ್ಶನ್‌ನಲ್ಲಿದ್ದಂತೆ ಕಾಣುತ್ತಿತ್ತು.
ನಿಜ ನಿಜ..., ಜಡ್ಜ್ ಒಪ್ಪಿಕೊಂಡ. ನೋಡಿ, ಉಳಿದ ಜಡ್ಜ್‌ಗಳನ್ನು ಸಮಾಧಾನಪಡಿಸಿ ಈ ಶಿಕ್ಷೆ ವಿಧಿಸಲು ಕಷ್ಟವಾಯಿತು. ಅವರೆಲ್ಲ ಆರೋಪಿಯನ್ನು ಬಿಟ್ಟುಬಿಡೋಣ ಎನ್ನತೊಡಗಿದ್ದರು ಕಣ್ರೀ......!
******

ಕೆಂಪನ ಮೇಲೆ ಕ್ರೀಡಾ ಸಾಮಗ್ರಿಗಳ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪ ಬಂದಿತ್ತು. ಲಾಯರ್‌ನೇನೋ ಈತನ ಪರ ವಾದ ನಡೆಸಲು ಒಪ್ಪಿಕೊಂಡ. ಆದರೆ ಆತ ಎರಡು ಷರತ್ತು ವಿಧಿಸಿದ. ಕೆಂಪ ಪ್ರಾಮಾಣಿಕ ಎಂಬುದನ್ನು ಸ್ಪಷ್ಟಪಡಿಸಬೇಕು ಮತ್ತು ಎರಡು ಸಾವಿರ ರೂ. ಶುಲ್ಕ ಪಾವತಿಸಬೇಕು.
ಕೆಂಪ ಸ್ವಲ್ಪ ಹೊತ್ತು ಯೋಚಿಸಿದ. ನಂತರ ಚೌಕಾಶಿ ಶುರು ಹಚ್ಚಿದ. ಸಾರ್, ದಯವಿಟ್ಟು ನಾಲ್ಕು ನೂರು ರೂ.ಗೆ ಒಪ್ಪಿಕೊಳ್ಳಿ. ಬೇಕಿದ್ದರೆ ನಿಮಗೊಂದು ಜೊತೆ ಒಳ್ಳೆಯ ಕ್ವಾಲಿಟಿಯ ಟೆನಿಸ್ ರ್‍ಯಾಕೆಟ್‌ಗಳನ್ನು ತಂದುಕೊಡುತ್ತೇನೆ!
******

ಗುಂಡ ತನ್ನ ಕುದುರೆಯನ್ನು ವರ್ಣಿಸುತ್ತಿದ್ದ. ‘ಪ್ರತಿದಿನ ಬೆಳಿಗ್ಗೆ ಡೈರಿಯಿಂದ ಹಾಲಿನ ಪ್ಯಾಕ್ ತಂದುಕೊಡುತ್ತದೆ. ಆನಂತರ ಪೇಪರ್ ತಂದು ಕೈಗಿಡುವುದೂ ಇದೇ. ಆಫೀಸ್‌ಗೂ ಇದರ ಮೇಲೆ ಹೋಗುತ್ತೇನೆ. ನಾನು ವಾಪಾಸ್ ಮನೆಗೆ ಹೊರಡುವವರೆಗೂ ಅದು ಕಾಯುತ್ತಿರುತ್ತದೆ.....’ ಗುಂಡನ ಕತೆ ಮುಂದುವರೆದಿತ್ತು.  ಇದನ್ನೆಲ್ಲ ಕೇಳಿ ಕೆಂಪ ಆ ಕುದುರೆಯತ್ತ ಆಕರ್ಷಿತನಾದ. ಗುಂಡ ಹೇಳಿದ ಐದು ಸಾವಿರ ರೂ. ಬೆಲೆಯನ್ನು ತೆತ್ತು ಕುದುರೆಯನ್ನು ಖರೀದಿಸಿಯೇ ಬಿಟ್ಟ.
ವಾರದ ನಂತರ ಕೆಂಪನಿಗೆ ಗುಂಡ ಸಿಕ್ಕ. ಕೆಂಪ ಕೆಂಡಾಮಂಡಲ. ನಿನ್ನ ಕುದುರೆ ಮಲಗುವುದು, ತಿನ್ನುವುದು ಬಿಟ್ಟರೆ ಇನ್ನೇನೂ ಮಾಡುವುದಿಲ್ಲ. ದರಿದ್ರ ಕುದುರೆ.... ಬೈಯ್ದಾಟ ಮುಂದುವರಿದಿತ್ತು. ಗುಂಡ ಸಮಾಧಾನವಾಗಿ ಹೇಳಿದ, ಈ ಕುದುರೆಯನ್ನು ನೀನು ಹೀಗೆ ಬೈಯುತ್ತಲೇ ಇದ್ದರೆ ಅದನ್ನು ಮಾರಾಟ ಮಾಡುವುದು ನಿನಗೇ ಕಷ್ಟವಾದೀತು. ಹುಷಾರ್!!


ಸಂತೆಯಲ್ಲೊಂದು ಶೋ. ಪೈಲ್ವಾನ್ ಮನುಷ್ಯ ನಿಂಬೆಹಣ್ಣನ್ನು ಹಿಂಡಿ ಹುಳಿಯನ್ನಷ್ಟೂ ತೆಗೆಯುತ್ತಾನೆ. ಇನ್ನೊಂದು ಹನಿ ಅದರಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ನೆರೆದವರಲ್ಲಿ ಸವಾಲು ಹಾಕುತ್ತಿದ್ದ. ‘ಇದರಿಂದ ಇನ್ನೊಂದು ಹನಿ ರಸವನ್ನು ತೆಗೆದವರಿಗೆ ಎರಡು ಸಾವಿರ ರೂಪಾಯಿ ಕೊಡುತ್ತೇನೆ. ಸೋತವರು ನೂರು ರೂಪಾಯಿ ಕೊಡಬೇಕು’ ಹಲವರು ಪ್ರಯತ್ನಿಸಿ ಸೋತರು. ಆಗ ತೆಳ್ಳಗಿನ ಸೂಟ್‌ಧಾರಿ ಯುವಕನೊಬ್ಬ ಮುನ್ನುಗ್ಗಿ ಸವಾಲು ಸ್ವೀಕರಿಸಿದ. ಆತ ಸುಲಭದಲ್ಲಿ ಹಲವು ಹನಿ ನಿಂಬೆ ರಸ ಬರುವಂತೆ ಮಾಡಿದ್ದಲ್ಲದೆ ಇನ್ನಷ್ಟು ಬೇಕಾ ಎಂದ. ಈಗ ಮಾತ್ರ ಪೈಲ್ವಾನ್‌ನಿಗೆ ಆಶ್ಚರ್ಯವಾಯಿತು. ಏನು ಕೆಲಸ ಮಾಡುವೆ? ಪ್ರಶ್ನಿಸಿದ.
ನಸುನಗುತ್ತ ಯುವಕ ಹೇಳಿದ,  ನಾನೊಬ್ಬ ಇನ್‌ಕಂ ಟ್ಯಾಕ್ಸ್ ಅಧಿಕಾರಿ!



ರೀ, ನಮ್ಮ ಮಗ ನಮಗೆ ಪತ್ರ ಬರೆಯದೆ ಎಷ್ಟು ದಿನಗಳಾದವು........ ಗೊತ್ತೇ?
ತಡೆ, ತಡೆ. ನನ್ನ ಚೆಕ್ ಪುಸ್ತಕ ನೋಡಿ ಹೇಳುವೆ. ಕೊನೆಯ ಬಾರಿ ಅವನಿಗೆ ಚೆಕ್ ಕೊಟ್ಟದ್ದು ಯಾವತ್ತು ಎಂದು!!



ಗಂಡ ಹೆಂಡತಿ ಇಬ್ಬರೂ ಗಾಲ್ಫ್ ಆಟಗಾರರು. ಒಂದು ರೊಮ್ಯಾಂಟಿಕ್ ಕ್ಷಣದಲ್ಲಿ ಹೆಂಡತಿ ಕೇಳಿದಳು, ಒಂದೊಮ್ಮೆ ನಾನು ಸತ್ತುಹೋದರೆ ನೀವು ಮರುಮದುವೆಯಾಗಿ ಇದೇ ಮನೆಯಲ್ಲಿರುವಿರೇ?
ಹೌದು ಪ್ರಿಯೆ, ಇದು ಸ್ವಂತ ಮನೆಯಲ್ಲವೇ?
ನಮ್ಮ ಕಾರನ್ನು ನೀವಿಬ್ಬರೂ ಉಪಯೋಗಿಸುವಿರೇ?
ಎಸ್ ಡಿಯರ್, ಅದನ್ನು ನಾವೇ ಖರೀದಿಸಿದ್ದು ತಾನೇ?
ನನ್ನ ಗಾಲ್ಫ್ ಕ್ಲಬ್‌ಗಳನ್ನು ಮದುವೆಯಾಗುವವಳಿಗೆ ಕೊಡುವಿರೇ?
ನೋ ನೋ ಡಾರ್ಲಿಂಗ್, ಈ ಗಾಲ್ಫ್ ಸ್ಟಿಕ್‌ಗಳಿಂದ ಅವಳಿಗೆ ಉಪಯೋಗವಿಲ್ಲ. ಆಕೆ ಲೆಫ್ಟ್‌ಹ್ಯಾಂಡರ್!

******
ಸಂಗೀತ ಸಭೆಗೆ ಗುಂಡನನ್ನು ಆತನ ಪತ್ನಿ ಒತ್ತಾಯಪೂರ್ವಕವಾಗಿ ಕರೆದೊಯ್ದಳು. ಕೆಲಸಮಯದ ನಂತರ ಪಕ್ಕದಲ್ಲಿ ಕುಳಿತವನ ಪಕ್ಕೆಲಬು ಗುಂಡನನ್ನು ತಿವಿಯತೊಡಗಿತು. ಸ್ವಲ್ಪ ಕಾಲ ಸಹಿಸಿಕೊಂಡರೂ ಇನ್ನು ಗುಂಡನಿಗೆ ತಡೆಯಲಾಗಲಿಲ್ಲ. ಹೆಂಡತಿಯನ್ನು ಕರೆದು ಹೇಳಿದ, ನಾವೆಲ್ಲಾದರೂ ಬೇರೆಡೆ ಕುಳಿತುಕೊಳ್ಳೋಣವೇ? ಈ ಮನುಷ್ಯ ಸಂಗೀತವನ್ನು ಸವಿಯಲು ಬಿಡುತ್ತಿಲ್ಲ....
ಪತ್ನಿಗೆ ಕೆಂಡಾಮಂಡಲ ಸಿಟ್ಟು ಬಂತು, ಇಷ್ಟೇ ತಾನೇ? ಅತ್ತ ಎಲ್ಲಾದರೂ ಹೋಗಿ ಕುಳಿತುಕೊಂಡಿದ್ದರಾಗುತ್ತಿರಲಿಲ್ಲವೇ? ಅಷ್ಟಕ್ಕೆ ನನ್ನನ್ನು ನಿದ್ರೆಯಿಂದ ಎಬ್ಬಿಸುವುದೇ?


ಪಾರ್ಕ್‌ನಲ್ಲಿ ಯುವಕ- ಯುವತಿ ಪರಸ್ಪರ ಚುಂಬಿಸುತ್ತಿದ್ದರು. ಅದನ್ನು ನೋಡಿದ ಪತ್ನಿ ಪತಿಗೆ ತಿವಿದಳು, ನೋಡಿ, ಆತ ಹೇಗೆ ಮುತ್ತಿಕ್ಕುತ್ತಿದ್ದಾನೆ. ನೀವೇಕೆ ಹಾಗೆ ಮಾಡಬಾರದು?
ಪತಿ ಸಮಜಾಯಿಸಿ ಇತ್ತ, ನಿಜ ಪ್ರಿಯೆ, ನನಗೂ ಹಾಗೆ ಮುತ್ತಿಕ್ಕುವ ಆಸೆ. ಆದರೆ ಯುವತಿಗೆ ಚುಂಬಿಸಿದರೆ ಆ ಹುಡುಗ ನನ್ನನ್ನು ಬಿಟ್ಟಾನೇ?


ನೀವು ಸಾವಿನ ನಂತರವೂ ಆತ್ಮ ಬದುಕಿರುತ್ತದೆ ಎಂಬುದನ್ನು ನಂಬುವಿರೇ? ಬಾಸ್ ತನ್ನ ಕೈಕೆಳಗಿನ ಕ್ಲರ್ಕ್‌ನ್ನು ಕೇಳಿದ, ಯೆಸ್ ಸರ್ ಕ್ಲರ್ಕ್‌ಗೆ ತಲೆಬುಡ ಅರ್ಥವಾಗಲಿಲ್ಲ. 
ಈಗ ಬಾಸ್ ನಿಟ್ಟುಸಿರು ಬಿಟ್ಟು ಹಾಗಿದ್ದರೆ ಸರಿ. ನಿನ್ನೆ ನೀವು ನಿಮ್ಮ ತಾತನ ಶವಸಂಸ್ಕಾರಕ್ಕೆ ಹೋದ ವೇಳೆ ಇಲ್ಲಿ ನಿಮ್ಮನ್ನು ಕಾಣಲು ತಾತ ಬಂದಿದ್ದರು!!


 ಯಾಕೆ ನೀವು ಈ ದಿನವೂ ತಡ? ಆಫೀಸರ್ ಗುರುಗುಟ್ಟಿದ. ತೇಜ ಅವರನ್ನು ಸಮಾಧಾನಪಡಿಸಿದ. ಇಲ್ಲ ಸಾರ್. ನನ್ನ ತಪ್ಪಿಲ್ಲ. ನಮ್ಮ ಎದುರು ಮನೆಯ ಯುವತಿಗೆ ತುಂಬಾ ತುಂಬಾ ಡ್ರೆಸ್ ಪ್ರಜ್ಞೆಯಿದೆ. ಜಾಗಿಂಗ್‌ಗೆ ಹೋಗುವಾಗ ಜಾಗಿಂಗ್ ಡ್ರೆಸ್, ಸಾಹಿತ್ಯದ ಸಮಾರಂಭಕ್ಕೆ ಖಾದಿ ಬಟ್ಟೆ, ಕೆಲಸಕ್ಕೆ ಹೋಗುವಾಗ ಬ್ಯುಸಿನೆಸ್ ಸೂಟ್... ಹೀಗೆ ಸಂದರ್ಭಕ್ಕೆ ತಕ್ಕ ಉಡುಗೆ ಧರಿಸುತ್ತಾಳೆ. ಇಂದು ಅವಳು ಮನೆಯಿಂದ ಹೊರಬರುವುದನ್ನೇ ನಿರೀಕ್ಷಿಸುತ್ತ ತಡವಾಗಿ ಹೋಯಿತು...
ಏನಿವತ್ತು ವಿಶೇಷ?
’ಇವತ್ತು ಅವಳ ಬರ್ತ್‌ಡೇ ಸಾರ್!

******
ಸಲೂನ್‌ಗೆ ಧಾವಿಸಿ ಬಂದ ಆ ವ್ಯಕ್ತಿ ಕೇಳಿದ, ಇನ್ನು ಎಷ್ಟು ಮಂದಿ ಕಟಿಂಗ್ ಇನ್ನೂ ಇದೆ? ಆರು ಕ್ಷೌರಿಕ ಉತ್ತರಿಸಿದ.  ಈ ಮನುಷ್ಯ ಅಲ್ಲಿಂದ ಮರಳಿದ.
ಹದಿನೈದು ದಿನದ ನಂತರ ಅದೇ ಮನುಷ್ಯ ಬಂದು ಅದೇ ಪ್ರಶ್ನೆ ಕೇಳಿದ. ಕ್ಷೌರಿಕ ಪ್ರಾಮಾಣಿಕವಾಗಿ ಒಂಭತ್ತು ಎಂದ. ಒಳ್ಳೆಯದಾಗಲಿ ಒಳ್ಳೆಯದಾಗಲಿ ಎನ್ನುತ್ತಲೇ ಆ ಮನುಷ್ಯ ಅಂಗಡಿಯಿಂದ ನಿರ್ಗಮಿಸಿದ. 
ಮರುದಿನ ಮತ್ತೆ ಬಂದು ಅದೇ ಪ್ರಶ್ನೆ ಕೇಳಿ ನಿರ್ಗಮಿಸಿದವನ ಮೇಲೆ ಕ್ಷೌರಿಕನಿಗೆ ಕುತೂಹಲವಾಯಿತು. ತನ್ನ ಅಸಿಸ್ಟೆಂಟ್‌ನ್ನು ಹಿಂಬಾಲಿಸಿ ಹೋಗಲು ಹೇಳಿದ. ಕೆಲ ನಿಮಿಷಗಳ ನಂತರ ಮರಳಿದ ಅಸಿಸ್ಟೆಂಟ್ ಉಸುರಿದ, ಆ ಮನುಷ್ಯ ನಮ್ಮ ಮನೆಯೊಳಗೆ ಹೊಕ್ಕಿದ್ದನ್ನು ಕಂಡೆ!!


ತೆಳ್ಳಗಾಗಬೇಕು ತಾನೇ? ನಿಮ್ಮ ಚಿಕಿತ್ಸೆಯನ್ನು ನಾಳೆ ಬೆಳಿಗ್ಗೆ ಎಂಟರಿಂದ ಪ್ರಾರಂಭಿಸುತ್ತೇನೆ ಡಾಕ್ಟರ್ ೧೩೫ ಕೆ.ಜಿ. ತೂಕದ ದಢೂತಿಗೆ ಭರವಸೆಯಿತ್ತ.
ಮರುದಿನ ಬೆಳಿಗ್ಗೆ ಎಂಟಕ್ಕೆ ದಢೂತಿ ಮನೆಯ ಬಾಗಿಲು ತೆರೆದರೆ ಕಾಣಿಸಿದ್ದು ಅದ್ಭುತ ಸೌಂದರ್ಯದ ಯುವತಿ. ಬಿಗಿಬಿಗಿಯ ಉಡುಪು ಧರಿಸಿ ಕಂಗೊಳಿಸುತ್ತಿದ್ದಳು. ಹೇಳಿದ್ದು ಒಂದೇ ಮಾತು. ‘ನೀವು ನನ್ನನ್ನು ಹಿಡಿದುಕೊಂಡರೆ ನಾನು ನಿನ್ನವಳಾಗುತ್ತೇನೆ!’ ಈ ಆಟ ಸತತ ಐದು ತಿಂಗಳು ಮುಂದುವರಿಯಿತು. ಆತ ಪ್ರತಿದಿನ ಆಕೆಯನ್ನು ಹಿಡಿಯಲು ಬೆನ್ನತ್ತಿ ಬೆನ್ನತ್ತಿ ೫೦ ಕೆ.ಜಿ. ತೂಕವನ್ನು ಕಳೆದುಕೊಂಡ.
ಮರುದಿನ ಬೆಳಿಗ್ಗೆ ಎಂದಿನಂತೆ ಬಾಗಿಲ ಕರೆಘಂಟೆ ಬಾರಿಸಿತು. ತೂಕ ಇಳಿಸಿಕೊಂಡ ಈ ಸುಂದರಾಂಗ ಮನುಷ್ಯ ಬಾಗಿಲು ತೆರೆದರೆ ಕಂಡಿದ್ದು ೧೩೦ ಕೆ.ಜಿ. ತೂಕದ ದೈತ್ಯೆಯೊಬ್ಬಳು. ಆಕೆ ಉಲಿದಳು, ಡಾಕ್ಟರರು ನಿಮ್ಮಲ್ಲಿಗೆ ನನ್ನನ್ನು ಕಳುಹಿಸಿದರು. ನಾನು ನಿಮ್ಮನ್ನು ಹಿಡಿದರೆ ನೀವು ನನ್ನವರಾಗುವಿರಂತೆ!
ಸುಂದರಾಂಗ ಬೆದರಿ ಓಡಲಾರಂಭಿಸಿದ!
   
    
-ಮಾವೆಂಸ, mavemsa@gmail.com




4 comments:

ಮನಸ್ವಿ ಹೇಳಿದರು...

ಹೆಹ್ಹೆ.. ಚನಾಗಿದ್ದು....

prasca ಹೇಳಿದರು...

ಮನಸಾರೆ ನಗುವುದಕ್ಕೆ ಅನುವು ಮಾಡಿದ್ರಿ ಮಾವೆಂಸ. ಅಂದ ಹಾಗೆ ಮಾವೆಂಸ ಎಂಬ ಕಾವ್ಯ ನಾಮ ಕು.ವೆಂ.ಪು ಸ್ಪೂರ್ತಿಯೆ?

ಮಾವೆಂಸ ಹೇಳಿದರು...

ಆ ಮಹಾನುಭಾವನನ್ನು ಅನುಕರಣೆ ಮಾಡುವ ಸಾಹಸದಲ್ಲಿ ಯಶಸ್ವಿಯಾಗಿದ್ದು ಇದರಲ್ಲಿ ಮಾತ್ರ!!

Harisha - ಹರೀಶ ಹೇಳಿದರು...

ಎಲ್ಲ ಜೋಕ್ ಗಳೂ ಚೆನ್ನಾಗಿವೆ :-)

 
200812023996