ಭಾನುವಾರ, ನವೆಂಬರ್ 2, 2008

ನಿವೃತ್ತಿ - ಕಣಿ ಹೇಳುವವರಾರು?

ಭಾರತೀಯ ಕ್ರಿಕೆಟ್‌ನಲ್ಲಿ ಸೌರವ್ ಗಂಗೂಲಿಗೆ ಸಂಬಂಧಿಸಿದಂತೆ ಪ್ರತಿ ವಿಷಯವೂ ಸುದ್ದಿಯಾಗುತ್ತದೆ, ಚರ್ಚೆಯಾಗುತ್ತದೆ. ಬಹುಷಃ ಇದೇ ದಾದಾಗೆ ನಮ್ಮ ಮಾಧ್ಯಮಗಳು ಸಲ್ಲಿಸುವ ಗೌರವ. ಕೆ.ಶ್ರೀಕಾಂತರ ನೇತೃತ್ವದ ಆಯ್ಕೆ ಸಮಿತಿ ಈ ಬಂಗಾಳಿ ಹುಲಿಗೆ ಗೌರವಯುತ ನಿವೃತ್ತಿಗೆಂದೇ ಆಸ್ಟ್ರೇಲಿಯಾ ವಿರುದ್ಧ ಅವಕಾಶವಿತ್ತರಷ್ಟೇ, ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ನಿವೃತ್ತಿ ಎಂಬುದು ಆಟಗಾರನ ಸ್ವಾತಂತ್ರ್ಯವಾಗಬೇಕೆ?
ತಟಕ್ಕನೆ ನೆನಪಾಗುವುದು ಕಪಿಲ್‌ದೇವ್ ನಿಖಾಂಜಿ. ಮೊನ್ನೆ ‘ಆಟಗಾರರಿಗೆ ನಿವೃತ್ತಿಯ ಸಮಯ ನಿರ್ಧರಿಸುವ ಸ್ವಾತಂತ್ರ್ಯ ಇರಬೇಕು’ ಎಂದು ಬೊಬ್ಬಿಟ್ಟರು ಕಪಿಲ್. ಸೌರವ್‌ಗೆ ಒತ್ತಡ ಹೇರಿ ನಿವೃತ್ತಿ ಮಾತು ಹೇಳಿಸಿದರು ಎಂಬುದು ಮಾತಿನ ಹಿಂದಿನ ತಾತ್ಪರ್ಯ. ಭಾರತೀಯ ಕ್ರಿಕೆಟ್‌ನಲ್ಲಿ ನಿವೃತ್ತಿಯ ಸ್ವಾತಂತ್ರ್ಯವನ್ನು ಅನುಭವಿಸಿದ ‘ಏಕೈಕ’ ಆಟಗಾರ ಕಪಿಲ್‌ದೇವ್!
ಆಗಿದ್ದೇನು? ಕಪಿಲ್ ನ್ಯೂಜಿಲ್ಯಾಂಡಿಗ ರಿಚರ್ಡ್ ಹ್ಯಾಡ್ಲಿಯವರ ಅಂದಿನ ವಿಶ್ವದಾಖಲೆ ೪೩೨ ಟೆಸ್ಟ್ ವಿಕೆಟ್ ದಾಖಲೆಯನ್ನು ಮೀರಲಿ ಎಂದೇ ಅವರಿಗೆ ಕನಿಷ್ಠ ೧೦ ಟೆಸ್ಟ್‌ಗಳವರೆಗೆ ಆಯ್ಕೆಯ ಜೀವದಾನ ನೀಡಲಾಯಿತು. ಕೇವಲ ಸ್ವಿಂಗ್ ಮೇಲೆ ಆಧಾರಗೊಂಡಿದ್ದ ಕಪಿಲ್‌ಗೆ ಕೊನೆಕೊನೆಗೆ ವಿಕೆಟ್ ಸಿಕ್ಕುವುದೇ ದುರ್ಲಭವಾಗಿತ್ತು. ಒಂದು ಬೆಂಗಳೂರು ಟೆಸ್ಟ್‌ನಲ್ಲಂತೂ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಇನ್ನೊಂದು ತುದಿಯಲ್ಲಿ ಬೌಲ್ ಮಾಡುತಿದ್ದ ಕಪಿಲ್‌ರಿಗೆ ಎದುರಾಳಿಯ ಕೊನೆಯ ವಿಕೆಟ್ ಆದರೂ ಸಿಕ್ಕಲಿ ಎಂದು ಸುಖಾಸುಮ್ಮನೆ ಆಫ್‌ಸ್ಟಂಪ್‌ನಿಂದ ಆಚೆ ಬೌಲ್ ಮಾಡಿದ್ದನ್ನು ಸ್ಮರಿಸಬೇಕಾಗುತ್ತದೆ.
ಕಪಿಲ್‌ರ ವಿಶ್ವದಾಖಲೆಗಾಗಿ ಅತಿ ಹೆಚ್ಚಿನ ತ್ಯಾಗ ಮಾಡಿದ್ದು ನಮ್ಮ ಜಾವಗಲ್ ಶ್ರೀನಾಥ್. ಅಂದು ಭಾರತದಲ್ಲಿ ಟೆಸ್ಟ್ ತಂಡದಲ್ಲಿ ಇಬ್ಬರು ವೇಗಿಗಳಿಗೆ ಮಾತ್ರ ಅವಕಾಶ, ಉಳಿದಂತೆ ಸ್ಪಿನ್ ತ್ರಿವಳಿಗಳು. ಹೀಗಾಗಿ ಶ್ರೀ ತಮ್ಮ ಅದ್ಭುತ ವೇಗದ ದಿನಗಳಲ್ಲಿ ಪೆವಿಲಿಯನ್‌ನಲ್ಲಿ ಕೂರುವಂತಾಗಿದ್ದುದರಿಂದ ಆದ ನಷ್ಟ ಯಾರಿಗೆ?
ನಿವೃತ್ತಿಯ ಸ್ವಾತಂತ್ರ್ಯ ಬಳಸಿಕೊಂಡ ಆಸ್ಟ್ರೇಲಿಯಾದ ಶೇನ್‌ವಾರ್ನ್, ಆಡಂ ಗಿಲ್‌ಕ್ರಿಸ್ಟ್, ಗ್ಲೆನ್ ಮೆಗ್‌ಗ್ರಾತ್, ಮಾರ್ಟಿನ್ ಒಮ್ಮೆಗೇ ಕ್ರಿಕೆಟ್‌ನಿಂದ ಹಿಂಸರಿದುದರಿಂದಲೇ ಆಸ್ಟ್ರೇಲಿಯಾ ಮೊನ್ನೆ ಮೊಹಾಲಿ ಟೆಸ್ಟ್‌ನಲ್ಲಿ ಭಾರತದ ಎದುರು ಸೋತಿದ್ದು ಎಂಬರ್ಥದ ವಾದ ಆಸ್ಟ್ರೇಲಿಯನ್ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೇವೆ. ಒಂದಂತೂ ಸ್ಪಷ್ಟ, ನಿವೃತ್ತಿಯ ಸ್ವಾತಂತ್ರ್ಯದಿಂದ ಆಟಗಾರರಿಗೆ ಅನುಕೂಲವಾದೀತೇ ವಿನಃ ಅವರ ದೇಶಕ್ಕಲ್ಲ.
ಈ ಚರ್ಚೆಗಳಿಂದ ಘನೀಭವಿಸುವ ಅಂಶವೆಂದರೆ, ಆಟಗಾರರ ನಿವೃತ್ತಿಯನ್ನು ಅಲ್ಲಿನ ಕ್ರಿಕೆಟ್ ಮಂಡಳಿ ನಿರ್ವಹಿಸುವುದೇ ಹೆಚ್ಚು ಸೂಕ್ತವಾದುದು. ಒಟ್ಟಾರೆ ತಂಡಕ್ಕೆ ಘಾತವಾಗದಂತೆ ಹಾಗೂ ಗೊತ್ತಾಗದಂತೆ ಹಿರಿಯ ಆಟಗಾರರಿಂದ ಕಿರಿಯರಿಗೆ ಜವಾಬ್ದಾರಿ ವರ್ಗಾಯಿಸುವ ಪ್ರಕ್ರಿಯೆಗೆ ಆಯ್ಕೆ ಸಮಿತಿಯ ನಿರ್ದೇಶನ ಇದ್ದರೆ ಚೆನ್ನ. ಉದಾಹರಣೆಗೆ ಈ ಕಾಂಗರೂ ಸರಣಿಯ ನಂತರ ಗಂಗೂಲಿ ಶಸ್ತ್ರ ತ್ಯಾಗ ಮಾಡುತ್ತಾರೆ, ಫೈನ್. ಬದಲಿಯಾಗಿ ರೋಹಿತ್ ಶರ್ಮ, ಬದರೀನಾಥ್‌ರನ್ನು ನಾವು ಮುಖ್ಯವಾಹಿನಿಗೆ ಸೇರಿಸಬಹುದು. ಬಹುಷಃ ಕುಂಬ್ಳೆ ನಿವೃತ್ತ್ತರಾದರೂ ಚಿಂತೆಯಿಲ್ಲ. ಅಮಿತ್ ಮಿಶ್ರಾ ಅವರ ಶೂಗಳಲ್ಲಿ ಕಾಲು ತೂರಿಸಬಲ್ಲರು. ಅಂದರೆ ಸಚಿನ್, ದ್ರಾವಿಡ್, ಲಕ್ಷ್ಮಣ್‌ರ ನಿವೃತ್ತಿಯನ್ನು ಮುಂದಿನ ಸರಣಿಗಳಲ್ಲಿ ಹಂತಹಂತವಾಗಿ ನಿರ್ವಹಿಸಬೇಕು. ಆಟಗಾರರ ಪ್ರತಿಷ್ಠೆಗೆ ಧಕ್ಕೆ ಬಾರದಂತೆ ನಿವೃತ್ತಿಯನ್ನು ಆಯೋಜಿಸುವುದು ಕ್ರಿಕೆಟ್ ಮಂಡಳಿಯ ಮುಖ್ಯ ಗುರಿಯಾಗಬೇಕು. ಈ ಹಿಂದೆ ಆಸ್ಟ್ರೇಲಿಯಾ ಇಯಾನ್ ಹೀಲಿ, ಡೇವಿಡ್ ಬೂನ್‌ರಂತವರಿಗೆ ಇಂತಹ ಗೌರವದ ನಿವೃತ್ತಿ ನೀಡಿತ್ತು. ಇದಕ್ಕಿದ್ದಂತೆ ಕೊಕ್ ನೀಡಿ ಮರ್ಯಾದೆ ಕಳೆದಿರಲಿಲ್ಲ.
ವಿಚಿತ್ರವೊಂದಿದೆ. ಟೆನಿಸ್ ಪೂರಾಪೂರ ವೈಯುಕ್ತಿಕ ಆಟ. ಇಲ್ಲಿ ನಿವೃತ್ತಿ ಆಟಗಾರನ ಸ್ವಾತಂತ್ರ್ಯ. ಖ್ಯಾತ ಆಟಗಾರರು ಸೋಲು ಗೆಲುವಿನ ಹೊರತಾಗಿ ಪಾಲ್ಗೊಳ್ಳುವಿಕೆಗೂ ದುಬಾರಿ ಶುಲ್ಕ ಪಡೆಯುವ ಅವಕಾಶವಿರುತ್ತದೆ. ರ್‍ಯಾಕೆಟ್ ಎತ್ತಿಕೊಳ್ಳುವ ಶಕ್ತಿ ಇರುವವರೆಗೂ ಆಡುತ್ತಿರಬಹುದು. ಆದರೆ ಹಿಂತಿರುಗಿ ನೋಡಿ, ಗೆಬ್ರಿಯಾಲಾ ಸಬಾಟಿನಿ, ಜಸ್ಟಿನ್ ಹೆನಿನ್, ಪ್ಯಾಟ್ರಿಕ್ ರ್‍ಯಾಫ್ಟರ್, ಕಿಂ ಕ್ಲಿಸ್ಟರ್‍ಸ್.... ಸ್ವಾತಂತ್ರ್ಯವಿದ್ದೂ ಇವರೆಲ್ಲ ತಮ್ಮ ದಿನಗಳಲ್ಲಿ, ಇನ್ನೂ ಆಡಬಹುದು ಎನ್ನಿಸಿರುವಾಗಲೇ ನಿವೃತ್ತರಾದರು. ನಿವೃತ್ತಿ ಬಗ್ಗೆ ಬೇರೆಯವರ ಮರ್ಜಿಗೆ ಕಾಯಬೇಕಿರುವ, ವಾಸ್ತವವಾಗಿ ತಂಡದ ಗೆಲುವೇ ಮುಖ್ಯವಾಗಿರುವಾಗ ಕ್ರಿಕೆಟ್ ಆಟಗಾರರು ತಂಡದಿಂದ ಹೊರಹಾಕುವವರೆಗೆ ಜಪ್ಪಯ್ಯ ಎಂದರೂ ನಿವೃತ್ತಿ ಹೊಂದುವುದಿಲ್ಲ!
ಐಪಿಎಲ್ - ಇಂಡಿಯನ್ ಲೀಗ್ ಟ್ವೆಂಟಿ ೨೦ ಕ್ರಿಕೆಟ್‌ನ ಉಗಮ ಭಾರತೀಯ ಕ್ರಿಕೆಟ್‌ನ ಧನಾತ್ಮಕ ಬೆಳವಣಿಗೆ. ಭಾರತದ ಪ್ರಥಮ ದರ್ಜೆ ಆಟಗಾರರು ವಿಶ್ವಮಾನ್ಯ ಆಟಗಾರರೊಂದಿಗೆ ಸೆಣಸುವ ಅವಕಾಶ ಐಪಿಎಲ್‌ನಲ್ಲಿ, ಅದರಲ್ಲಿ ಸಾಕಷ್ಟು ಉತ್ತಮ ಪ್ರದರ್ಶನ ನೀಡಿಬಿಟ್ಟರೆ ಸದರಿ ಆಟಗಾರನ ಆತ್ಮವಿಶ್ವಾಸ ಹೆಚ್ಚುತ್ತದೆ. ಅಂತರ್ರಾಷ್ಟ್ರೀಯ ಕ್ರಿಕೆಟ್‌ನ ಆಳ ಗೊತ್ತಾಗುತ್ತದೆ. ಅಂತಹ ಆಟಗಾರ ಟೆಸ್ಟ್, ಏಕದಿನ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದಾಗ ಅಂತಹ ಅವ್ಯಕ್ತ ಒತ್ತಡ ಅನುಭವಿಸುವುದಿಲ್ಲ. ಬಹುಷಃ ಅಮಿತ್ ಮಿಶ್ರಾರ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನ ಐದು ವಿಕೆಟ್ ಅದನ್ನೇ ಹೇಳುತ್ತದೆ. ಈ ಹಿಂದೆ ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್‌ನ ಗುಣಮಟ್ಟ ಅತ್ಯುತ್ತಮವಾಗಿದ್ದರಿಂದಲೇ ಅಲಾನ್ ಬಾರ್ಡರ್, ವಾ ಸಹೋದರರು, ಇಯಾನ್ ಹೀಲಿಯವರ ನಿವೃತ್ತಿ ಕಂದಕವನ್ನು ಸೃಷ್ಟಿಸಿರಲಿಲ್ಲ.
ನಿವೃತ್ತರಾಗಲು ಇಚ್ಛಿಸದ ಆಟಗಾರರನ್ನು ಟೀಕಿಸುವುದೂ ತಪ್ಪು. ಆಟದ ಮೇಲೆ ಪ್ರೀತಿ ಇರುವವರರೆಲ್ಲ ಅದರಲ್ಲಿ ಸದಾ ಕಾಲ ತೊಡಗಿಸಿಕೊಳ್ಳಲು ಆಶಿಸುತ್ತಾರೆ. ಹಾಗಾಗಿ ನಿವೃತ್ತಿ ಅವರಿಗೊಂದು ಶಿಕ್ಷೆ. ಸಚಿನ್ ತೆಂಡೂಲ್ಕರ್ ಇನ್ನಷ್ಟು ಆಲ ಆಡುತ್ತೇವೆನ್ನುವುದು ಇದೇ ಕಾರಣಕ್ಕೆ. ಅವರಿಗೆ ಇನ್ನೂ ರನ್ ದಾಹ ಇರಬಹುದೇ ವಿನಃ ಹಣದ ವ್ಯಾಮೋಹ ಇರಲಿಕ್ಕಿಲ್ಲ. ಇಂತಹವರಿಗೆಲ್ಲ ತಂಡದ ಅಗತ್ಯತೆಯನ್ನು ವಿವರಿಸಿ ನಿವೃತ್ತಿಗೆ ಭೂಮಿಕೆ ಸಿದ್ಧಪಡಿಸುವುದು ಕ್ರಿಕೆಟ್ ಮಂಡಳಿ ಜವಾಬ್ದಾರಿಯಾಗಬೇಕು. ಅಲ್ಲವೇ?
ಕೊನೆಮಾತು -ಇನ್ನೂ ಬೇಕು ಎನ್ನುವಾಗಲೇ ನಿವೃತ್ತರಾಗಬೇಕು ಎಂಬ ಸಿದ್ಧಾಂತದ ಸುನಿಲ್ ಗವಾಸ್ಕರ್ ಅದನ್ನು ಅಕ್ಷರಶಃ ಜಾರಿಗೊಳಿಸಿದವರು. ಪಾಕ್ ವಿರುದ್ಧದ ಬೆಂಗಳೂರು ಟೆಸ್ಟ್ ಅವರ ಅಂತಿಮ ಟೆಸ್ಟ್ ಎಂದೇ ಘೋಷಣೆಯಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ವೀರೋಚಿತ ೯೬ ರನ್ ಗಳಿಸಿದರೂ ಭಾರತ ಪಾಕ್ ಎದುರು ೧೬ ರನ್‌ನಿಂದ ಸೋತಿತು. ಜೊತೆಗೆ ಸರಣಿಯೂ ಕೈಬಿಟ್ಟಿತು. ಆ ದುಃಖದಲ್ಲಿ ಸನ್ನಿಯ ನಿವೃತ್ತಿ ವಿಚಾರ ಮಸುಕಾಯಿತು. ಹೋಗಲಿ, ಏಕದಿನ ಕ್ರಿಕೆಟ್‌ನಲ್ಲಿಯಾದರೂ ಆಗಿದ್ದು ಅದೇ. ವಿಶ್ವಕಪ್ ಕೂಟವೇ ಕಡೆ ಎಂದ ಗವಾಸ್ಕರ್ ಉಪಾಂತ್ಯದಲ್ಲಿ ಏಕಾಏಕಿ ಸೋತಿದ್ದರಿಂದ ಅವರಬಗ್ಗೆ ಯೋಚಿಸುವವರಿರಲಿಲ್ಲ. ಎಲ್ಲರಿಗೂ ಭಾರತ ಸೋತದ್ದರ ದುಃಖ, ಸಿಟ್ಟು!
-ಮಾವೆಂಸ

5 comments:

Unknown ಹೇಳಿದರು...

ninna e blog ivattu nodji

super

ಮಾವೆಂಸ ಹೇಳಿದರು...

thanks......

kunnimari ಹೇಳಿದರು...

nange cricket astu esta ilyaa! adaruu nimmadu olleye prayatna shubhamastu!

ಮನಸ್ವಿ ಹೇಳಿದರು...

channagide lekhana..
modalane test century inda anathara rastreeya cricket ge paadarpane maadida daada eega shoonya sampadaneyondige cricket nivrutti hondiddu matra nenpinalli uliyuva ghatane, thanna cricket jeevanadalli elu beelugalannu kanda daada omme unnata mattakke indian cricket teamannu kondu hogiddu,greg chapal nondige nedesida yudda, matte international cricket ge vapassagiddu ella eega bari nenapugalu...
thumbaa chanagiddu heege barita iru

kunnimari ಹೇಳಿದರು...

chennagi compose maadi present madidakke dhanyadaada ennu bareyona

 
200812023996