
ಮೊಬೈಲ್ ಟಾಕ್-೧
ಎಲ್ಲರಲ್ಲೂ ಮೊಬೈಲ್ ಇದೆ. ಸೆಟ್ನಲ್ಲಿರುವ ನಾನಾ ತರದ ಆಟ, ಸೌಲಭ್ಯಗಳ ಅರಿವೂ ನಮಗಿದೆ. ದುರಂತವೆಂದರೆ ಅಗತ್ಯವಾಗಿ ಗೊತ್ತಿರಬೇಕಿದ್ದ ಕೆಲವು ಮೊಬೈಲ್ ಕಾನೂನುಗಳೂ ನಮಗೆ ಗೊತ್ತಿಲ್ಲ. ಈ ಲೇಖನದಿಂದ ಆರಂಭಿಸಿ ನನಗೆ ಗೊತ್ತಿರುವ ಹಲವು ಗ್ರಾಹಕ ಸ್ನೇಹಿ ಮೊಬೈಲ್ ಕಾನೂನುಗಳ ಬಗ್ಗೆ ಇಲ್ಲಿ ಬರೆಯಲಿದ್ದೇನೆ. ನಿಜಕ್ಕೂ ನಿಮ್ಮ ಪ್ರತಿಕ್ರಿಯೆ ನನಗೆ ಟಾನಿಕ್!
* ಚಂದಾದಾರರ ಒಪ್ಪಿಗೆ ಅತ್ಯಗತ್ಯ
* ವಡಫೋನ್ ಕಾಲರ್ಟೋನ್ -
ಸಂಗೀತಮಯ ಕತ್ತರಿ!
* ಡಿಯಾಕ್ಟಿವೇಷನ್ ಸಂದೇಶಕ್ಕೆ
ಶುಲ್ಕ - ಆಕ್ಷೇಪ
* ಗ್ರಾಹಕರ ಪರ ಟ್ರಾಯ್ ಕಾಯ್ದೆ
ಮೊಬೈಲ್ ಬಳಕೆದಾರರು ಈ ಕ್ಷೇತ್ರದ ಕಾನೂನುಗಳ ಬಗ್ಗೆ ಮಾಹಿತಿ ಹೊಂದಿರುವುದರ ಅಗತ್ಯವನ್ನು ಈ ಘಟನೆ ಪ್ರತಿಪಾದಿಸುತ್ತದೆ.
ನಾನು ವಡಫೋನ್ ಮೊಬೈಲ್ ಗ್ರಾಹಕ. ಈ ಅಂತರಾಷ್ಟ್ರೀಯ ಕಂಪನಿ ಗ್ರಾಹಕ ಸೇವೆಯಲ್ಲಿ ವಿಶ್ವಕ್ಕೇ ಮಾದರಿಯೆನಿಸುವಂತಿದೆ ಎಂಬುದನ್ನು ನನ್ನ ನಂಬಿಕೆಯಾಗಿತ್ತು. ಇದ್ದಕ್ಕಿದ್ದಂತೆ ಒಂದು ದಿನ ವಡಫೋನ್ನಿಂದ ನನಗೊಂದು ಎಸ್ಎಂಎಸ್ ಬಂದಿತ್ತು. ಅದರ ಪ್ರಕಾರ ಹಚ್ ಒಂದು ತಿಂಗಳ ಅವಧಿಗೆ ಉಚಿತ ಕಾಲರ್ಟೋನ್ ಸೇವೆಯನ್ನು ಕೊಡುವುದಾಗಿ ತಿಳಿಸಿತ್ತು. ಅದೇ ಸಂದೇಶದಲ್ಲಿ ನಂತರ ಪ್ರತಿ ತಿಂಗಳಿಗೆ ೩೦ ರೂ. ಚಂದಾದಾರ ಎಂಬುದನ್ನೂ ಹೇಳಿತ್ತು. ಉಚಿತವನ್ನು ಬಿಡುವುದುಂಟೇ ? ನಾನು ‘ಎಸ್’ ಎಂಬ ಎಸ್ಎಮ್ಎಸ್ ಒಪ್ಪಿಗೆ ಕೊಟ್ಟು ಉಚಿತ ಕಾಲರ್ಟೋನ್ ಪಡೆದೆ. ಎಲ್ಲವೂ ನನ್ನ ನಂಬರ್ಗೆ ಡಯಲ್ ಮಾಡುವವರಿಗಾಗಿ!
ಕಾಲರ್ಟೋನ್ ಅಕ್ಟಿವೇಟ್ ಆದದ್ದು ಜೂನ್ ೨೯ರಂದು. ಜುಲೈ ೨೮ರಂದು ವಡಫೋನ್ನಿಂದ ಇನ್ನೊಂದು ಎಸ್ಎಂಎಸ್ ಬಂತು ‘ನೀವು ಒಂದು ತಿಂಗಳ ಕಾಲರ್ಟೋನ್ ಟ್ರಯಲ್ ಸೇವೆ ಅನುಭವಿಸಿದ್ದೀರಿ. ನಿಮ್ಮ ಕರೆದಾತರು ಟ್ರಿನ್ ಟ್ರಿನ್ನಿಂದ ಬೇಸರಗೊಳ್ಳದಿರಲು ಕಾಲರ್ಟೋನ್ ಮುಂದುವರಿಸಬಹುದು. ಆಕ್ಟಿವೇಟ್ ಮಾಡಲು ‘ಎಸ್’ ಎಂದು ೯೯೭ಗೆ ಸಂದೇಶ ಕಳಿಸಿ, ಬಾಡಿಗೆ ಮಾಸಿಕ ೩೦ ರೂ.
ಅಗತ್ಯವಿದೆ ಎನಿಸಲಿಲ್ಲ. ಹಾಗಾಗಿ ಯಾವುದೇ ‘ಎಸ್’ ಎಸ್ಎಂಎಸ್ ಮಾಡದೆ ನಾನು ಸುಮ್ಮನುಳಿದೆ.. ಜುಲೈ ಮೊದಲವಾರ ನೋಡುತ್ತೇನೆ, ಕಾಲರ್ ಟೋನ್ ಮುಂದುವರೆದಿದೆ! ಖಾತೆಯಿಂದ ೩೦ ರೂ. ಕೂಡ ಕತ್ತರಿಸಿ ನುಂಗಲಾಗಿದೆ. ತಕ್ಷಣಕ್ಕೆ ವಡಫೋನ್ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿದ್ದಾಯ್ತು. ಊಹ್ಞೂ, ಇಲ್ಲಿರುವ ಮಂದಿಗೆ ಸುತರಾಂ ಕಾನೂನು ಗೊತ್ತಿಲ್ಲ. ‘ನೀವು ಡಿಯಾಕ್ಟೀವ್ ಮಾಡಬೇಕಾಗುತ್ತೆ ಸರ್’ ಎಂಬುದಷ್ಟೇ ಅವರ ಉತ್ತರ.
ಕಸ್ಟಮರ್ ಕೇರ್ನಲ್ಲಿ ಮಾತನಾಡುವವರಿಗೆ ಹೆಚ್ಚೆಂದರೆ ಕಂಪನಿಯ ಪ್ಲಾನ್ಗಳು, ಟ್ಯಾರಿಫ್ ಗೊತ್ತಷ್ಟೇ. ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಜ್ಞಾನ, ಅಧಿಕಾರಗಳೆರಡೂ ಅವರಿಗೆ ಇದ್ದಂತಿಲ್ಲ. ಸಮಸ್ಯೆಗಳನ್ನು ತೇಲಿಸಿ ಗ್ರಾಹಕರ ದಿಕ್ಕು ತಪ್ಪಿಸುವಲ್ಲಿ ಅವರು ಚಾಣಾಕ್ಷರು, ಎಚ್ಚರವಿರಲಿ.
ನನ್ನ ವಾದ, ಟ್ರಾಯ್ ನಿರ್ದೇಶನದ ಉಲ್ಲೇಖ ಫಲ ನೀಡಲಿಲ್ಲ. ಅವರಿಂದಲೇ ದೂರಿನ ಡಾಕೆಟ್ ಸಂಖ್ಯೆ (ಮುಂದಿನ ಹಂತದ ದೂರುಗಳಿಗೆ ಈ ಡಾಕೆಟ್ ಸಂಖ್ಯೆ ಬೇಕೇ ಬೇಕು. ಇದು ಇಲ್ಲದಿದ್ದಲ್ಲಿ ನಿಸ್ಸಂಕೋಚವಾಗಿ ನಿರ್ಲಕ್ಷಿಸುತ್ತಾರೆ. ಆ ಮಟ್ಟಿಗೆ ಅವರದ್ದು ಕಾನೂನು ಪಾಲನೆ !) ಮತ್ತು ನೋಡಲ್ ಅಧಿಕಾರಿಯ ವಿವರ ಅಂತರ್ಜಾಲ ವಿಳಾಸ ಪಡೆದೆ. ಕೇಳಿದ ತಕ್ಷಣ ಈ ಮಾಹಿತಿಗಳನ್ನು ಕೊಡಬೇಕೆಂದಿದ್ದರೂ ಗ್ರಾಹಕ ಸೇವಾಕೇಂದ್ರಗಳವರೊಂದಿಗೆ ಗುದ್ದಾಡಿಯೇ ಪಡೆಯಬೇಕೆಂಬುದು ಹೀನಾಯ.
ಯಾವುದೇ ದೂರು ಕಸ್ಟಮರ್ ಕೇರ್ನಲ್ಲಿ ಇತ್ಯರ್ಥವಾಗದಿದ್ದರೆ ನೋಡಲ್ ಅಧಿಕಾರಿಗೆ ನಿಶ್ಚಿತ ಮಾದರಿಯ ಅರ್ಜಿ ಫಾರಂನಲ್ಲಿ ದೂರು ದಾಖಲಿಸಬಹುದು. ಅಂಚೆ ಯಾ ಇ-ಮೇಲ್ ಮೂಲಕ ದೂರು ಸಲ್ಲಿಸಬಹುದು. ದೂರವಾಣಿ ಮುಖಾಂತರವೂ ಸಂಪರ್ಕಿಸಲು ಸಾಧ್ಯ. ಈ ಬಗ್ಗೆ ಬೇಕಾದ ಎಲ್ಲ ಮಾಹಿತಿಗಳೂ ಮೊಬೈಲ್ ಕಂಪನಿಗಳ ವೆಬ್ಸೈಟ್ನಲ್ಲಿ ಲಭಿಸುತ್ತದೆ. ನೋಡಲ್ ಅಧಿಕಾರಿ ೨ ದಿನಗಳೊಳಗೆ ದೂರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಬೇಕು. ಇದು ಕಾನೂನು.
ಈಗ ಕಾಲರ್ಟೋನ್ ರೀತಿಯ ವ್ಯಾಲ್ಯೂ ಆಡೆಡ್ ಸೇವೆಗಳ ಕುರಿತಾದ ಟ್ರಾಯ್ ಕಾನೂನಿಗೆ ಬಗ್ಗೆ ಗಮನಿಸಿ. ಟ್ರಾಯ್ ಕಾಯ್ದೆ ೧೯೯೭ರ ಸೆಕ್ಷನ್ ೧೧(೧) (b) (i) ಹಾಗೂ (v), ಅಲ್ಲದೇ ೧೯೯೯ ರ ಟೆಲಿಕಮ್ಯುನಿಕೇಷನ್ ಟಾರಿಫ್ ಆರ್ಡ್ರ್ನ ೧೧ನೇ ಕಲಂ ಮೊಬೈಲ್ ಸೇವೆಗಳ ಕುರಿತು ಹೇಳುತ್ತದೆ. ಗ್ರಾಹಕರ ಪರವಾಗಿ ವಾದಿಸುತ್ತದೆ.
ಯಾವುದೇ ಸೇವೆ ನಿರ್ದಿಷ್ಟ ಅವಧಿಯ ಉಚಿತ ಟ್ರಯಲ್ನ ನಂತರ ಬಳಕೆದಾರ 'Unsubcribe' ಎಂದು ತಾನೇ ಸೇವೆಯ ಡಿಯಾಕ್ಟೀವ್ ಮಾಡಿಕೊಳ್ಳುವ ಅಗತ್ಯವಿಲ್ಲ. ಕಂಪನಿ ಮತ್ತೊಮ್ಮೆ ಸೇವೆ ನೊಂದಾಯಿಸಿಕೊಳ್ಳಲು ಬಳಕೆದಾರನಲ್ಲಿ ವಿನಂತಿಸಬೇಕು. ಆಗ ಆತ ‘ಎಸ್’ ಎಂದರೆ ಮಾತ್ರ ಸೇವೆ ಮುಂದುವರೆಸಿ, ಶುಲ್ಕ ವಿಧಿಸಬಹುದು. ಚಂದಾದಾರನ ಒಪ್ಪಿಗೆಯ ಅಗತ್ಯವನ್ನು ಟ್ರಾಯ್ ನಿರ್ದೇಶನ (ನಂ.೩೦೫-೮/೨೦೦೪ QOS ದಿನಾಂಕ ಮೇ ೩ ೨೦೦೫) ಒತ್ತಿ ಒತ್ತಿ ಹೇಳಿದೆ.
ಮೇಲಿನ ಪ್ರಕರಣಕ್ಕೆ ಅನ್ವಯಿಸಿ ಹೇಳುವುದಾದರೆ, ಜುಲೈ ೨೮ರಂದು ಹಚ್ ಕಳಿಸಿದ ಎಸ್ಎಂಎಸ್ ಟ್ರಾಯ್ ನಿರ್ದೇಶನಕ್ಕೆ ತಕ್ಕುದಾಗಿತ್ತು. ಆದರೆ ಇಲ್ಲಿಂದ ಮುಂದಿನ ಅದರ ಕ್ರಮಗಳು ಅಂತರಾಷ್ಟ್ರೀಯ ಕಂಪನಿಗಳು ಜಾಣ್ಮೆಯಿಂದ ಮಾಡುವ ಹಗಲುದರೋಡೆಯನ್ನು ಎತ್ತಿ ತೋರಿಸುತ್ತದೆ.
ನಿಗದಿತ ಅರ್ಜಿಫಾರಂನಲ್ಲಿ ಮೇಲಿನ ಕಾನೂನು, ವಡಫೋನ್ ವಂಚನೆಗಳೆಲ್ಲವನ್ನೂ ವಿವರಿಸಿ ವಡಫೋನ್ ನೋಡಲ್ ಅಧಿಕಾರಿಗೆ ಇ-ಮೇಲ್ ಮಾಡಲಾಯಿತು. ಬರೇ ೨೪ ಘಂಟೆಯಲ್ಲಿ ವಡಫೋನ್ನಿಂದ ವಿಷಾಧ ಪತ್ರ ಬಂದಿತು. ತಕ್ಷಣವೇ ತಾವು ಪಡೆದ ೩೦ ರೂ. ಮರಳಿಸುತ್ತಿದ್ದೇವೆನ್ನುವುದನ್ನು ಸೂಚಿಸಿದ್ದರು. ಅಂತೆಯೇ ನನ್ನ ಮೊಬೈಲ್ ನಂ.ಗೆ ೩೦ ರೂ. ಜಮೆಯಾಗಿತ್ತು. ನನಗೆ ತಿಳಿದುಬಂದಂತೆ, ಕಾಲರ್ಟೋನ್ ಉಚಿತ ಟ್ರಯಲ್ ಕೊಡುವುದು ಕೂಡ ಹಣ ಕಮಾಯಿಸುವ ಒಂದು ಟ್ರಿಕ್. ಈ ಆಫರ್ ಪಡೆದ ಜನರಲ್ಲಿ ಶೇ. ೨೫ ಮಂದಿಯಾದರೂ ‘ಕಂಪನಿ ಭಾಷೆಯಲಿ’ ತಿಂಗಳಿಗೆ ‘ಡಿಯಾಕ್ಟೀವ್’ ಮಾಡಲು ಮರೆಯುತ್ತಾರೆ. ೩೦ರೂನಂತೆ ಕಮಾಯಿ ಆಯಿತಲ್ಲ ? ಬಹುಸಂಖ್ಯಾತರು ಈ ವಂಚನೆ ಎದುರು ಕಾನೂನು ಹೋರಾಟ ನಡೆಸುವುದು ಅನುಮಾನ. ಅಷ್ಟಕ್ಕೂ ೩೦ ರೂ.ಗೆ ಹಿಂಜುವುದೇ ಛೀ!?
ಗ್ರಾಹಕರು ಒಂದು ತಿಂಗಳ ಉಚಿತ ಟ್ರಯಲ್ನ್ನು ಅನುಭವಿಸಿ ಸೇವೆ ಬೇಡ ಎಂದರೆ ಕಂಪನಿಗೆ ನಷ್ಟವಾಗುತ್ತದೆ ಎಂದುಕೊಳ್ಳುವುದು ತಪ್ಪು. ನಾವು, ‘ಮಂಕುತಿಮ್ಮರು’ ಫ್ರೀ ಟ್ರಯಲ್ ಮುಗಿವ ಮುನ್ನ ‘ಡಿಯಾಕ್ಟೀವ್ ಸಂದೇಶ ಕಳಿಸಿ ಲಾಭಗಳಿಸಿದ ನಗು ಚೆಲ್ಲುತ್ತೇ. ವಡಫೋನ್ ಈ ‘ಡಿಯಾಕ್ಟೀವ್ ಸಂದೇಶ’ಕ್ಕೆ ೩ರೂ. ಚಾರ್ಜ್ ಮಾಡುತ್ತದೆ! ವಾಸ್ತವವಾಗಿ, ಸೇವೆ ಚಾಲನೆ- ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಗೆ ಶುಲ್ಕ ವಿಧಿಸುವುದು ತಾತ್ವಿಕವಾಗಿ, ಕಾನೂನಿನನ್ವಯ ಸರಿಯಾದ ಕ್ರಮವಲ್ಲ.
-ಮಾವೆಂಸ, e mail-mavemsa@gmail.com