ಶುಕ್ರವಾರ, ಜುಲೈ 16, 2010

ನನ್ನದೊಂದು ಪುಟ್ಟ ಕಥೆ

ಈ ವಾರದ `ತರಂಗ'ದಲ್ಲಿ ನನ್ನದೊಂದು ಪುಟ್ಟ ಮಿನಿ ಕಥೆ ಪ್ರಕಟವಾಗಿದೆ. ಅದನ್ನು ನಿಮಗೂ ರುಚಿ ನೋಡಿ ತಿಳಿಸಲು ಕೊಡುತಿರುವೆ. ಪ್ರತಿಕ್ರಿಯಿಸಿ.
ಉಲ್ಲಾಸ......ಸಂತೋಷ.....
ಸಣ್ಣಕತೆ

ರದ್ದಿ ಪೇಪರ್ ಅಂಗಡಿಯಲ್ಲಿ ಯುವ ಕಥೆಗಾರ ಯೋಗೀಶ್‌ನಿಗೆ ಒಬ್ಬ ಮಹಾನ್ ಲೇಖಕನ ಅಪ್ರಕಟಿತ ಆತ್ಮಕತೆ, ಅದೂ ಹಸ್ತಾಕ್ಷರ ರೂಪದಲ್ಲಿರುವುದು ಸಿಕ್ಕಿಬಿಟ್ಟಿತು. ಒಂದಕ್ಕಿಂತ ಒಂದು ಸ್ವಾರಸ್ಯಕರ ಅಧ್ಯಾಯಗಳು. ಅದರಲ್ಲಿ ಒಂದು ಭಾಗವನ್ನು ಯೋಗೀಶ್ ಸಂಪಾದಕರಿಗೆ ಒದಗಿಸಿದ್ದು, ಅದನ್ನು ಇನ್ನು ಮುಂದೆ ನೀವೂ ಓದಿ.
"..............ನನ್ನ ಅಪ್ಪ - ಅಮ್ಮರ ಬಗ್ಗೆ ಹೇಳಲೇಬೇಕು. ಸರಿಸುಮಾರು ೩೪ ವರ್ಷಗಳ ದಾಂಪತ್ಯ ಅವರದು. ನಾನಂತೂ ಹುಟ್ಟಿದ ಮೇಲೆ ಎಂದೂ ಅವರು ಹೊಡೆದಾಡಿದ್ದನ್ನು, ಬೈದಾಡಿದ್ದನ್ನು, ಹೀಗಳೆದುಕೊಂಡಿದ್ದನ್ನು ನೋಡಿಲ್ಲ. ಯಾರಿಗಾದರೂ ಅಚ್ಚರಿ ಹುಟ್ಟಿಸುವಷ್ಟು ಅವರ ದಾಂಪತ್ಯ ಮಾದರಿಯಾಗಿತ್ತು. ಅಪ್ಪನ ಚಲನವಲನಗಳನ್ನು ಗಮನಿಸಿಯೇ ಅಮ್ಮ ಆತನ ಬೇಕುಬೇಡಗಳನ್ನು ಪೂರೈಸಬಲ್ಲವಳಿದ್ದಳು. ಊಟಕ್ಕೆ ಕುಳಿತಾಗಲೂ ಅಷ್ಟೇ, ಅಮ್ಮನ ಒಂದು ಕಣ್ಣು ಅಪ್ಪನ ತಟ್ಟೆಯ ಮೇಲೆ. ಏನು ಬೇಕು ಅಂತ ಅಪ್ಪ ಹೇಳುವ ಮುನ್ನವೇ ಬಡಿಸಿಯಾಗಿರುತ್ತಿತ್ತು.
ಅಪ್ಪ ಕಮ್ಮಿಯಲ್ಲ. ಮನೆಗೆ ತರುವ ಸಾಮಾನುಗಳ ಪಟ್ಟಿಯನ್ನೇನೂ ಅಮ್ಮ ಕೊಡುತ್ತಿರಲಿಲ್ಲ. ಆದರೆ ಅಮ್ಮ ಅಡುಗೆ ಮನೆಯಲ್ಲಿ `ಓ, ಬೇಳೆ ಖಾಲಿಯಾಯ್ತು', `ಸೇಬು ಹಣ್ಣು ಬೇಕೇನೋ ಪುಟ್ಟಾ...' ಅಂತೆಲ್ಲ ಮಾತನಾಡುವುದನ್ನೇ ಕೇಳಿ ಅಪ್ಪ ಅವನ್ನೆಲ್ಲ ತಂದಿಟ್ಟುಬಿಡುತ್ತಿದ್ದರು.
ಊಟ ತಿಂಡಿಗೆ ಅಮ್ಮ ಅಪ್ಪನ್ನ ಕರೆಯುತ್ತಿದ್ದುದೇ ವಿಚಿತ್ರ. ನನ್ನ ಹತ್ತಿರ ದೊಡ್ಡದಾಗಿ "ಹೋಗು ಅಪ್ಪನನ್ನು ತಿಂಡಿಗೆ ಬಾ ಎಂದು ಕರೆ" ಎನ್ನುತ್ತಿದ್ದಳು. ನಿಜಕ್ಕಾದರೆ, ಆ ಮಾತು ಅಪ್ಪನಿಗೇ ಕೇಳಿಬಿಡುತ್ತಿದಾದ್ದರಿಂದ ಮತ್ತೆ ನಾನು ಕರೆಯಬೇಕಾದುದೇ ಇರುತ್ತಿರಲಿಲ್ಲ!
ಪ್ರೀತಿ, ಪ್ರೇಮದಲ್ಲಿ ಸಾಮಾನ್ಯವಾಗಿ ಮಾತನಾಡುವುದು ಕಣ್ಣು. ನನ್ನ ಅಪ್ಪ ಅಮ್ಮರ ವಿಚಾರದಲ್ಲಿ ಅದು ಇನ್ನಷ್ಟು ಸತ್ಯ. ಜಾತ್ರೆಗೆ ಹೋದರು ಎಂದಿಟ್ಟುಕೊಳ್ಳಿ. ಅಮ್ಮ ಅಂಗಡಿಯಾತನಲ್ಲಿ ಒಂದು ವಸ್ತುವಿನ ಬಗ್ಗೆ ವಿಚಾರಿಸಿ ಅಪ್ಪನ ಕಡೆ ನೋಡಿದರೂ ಎಂದಾದರೆ ಅಪ್ಪ ಅದನ್ನು ಖರೀದಿಸುತ್ತಿದ್ದರು. ಅದು ಅಪ್ಪನಿಗೆ ಇಷ್ಟವಿಲ್ಲವೆಂದರೆ ಅಮ್ಮ ವಿಚಾರಿಸುತ್ತಿದ್ದ ವೇಳೆಗಾಗಲೇ ಅಪ್ಪ ಪಕ್ಕದ ಅಂಗಡಿ ದಿಕ್ಕಿಗೆ ಸರಿದಿರುತ್ತಿದ್ದರು!
ಬಿಡಿ, ಇಂತಹ ನೂರು ಉದಾಹರಣೆ ಕೊಡಬಹುದು. ತಂದೆತಾಯಿಗೆ ಒಬ್ಬನೇ ಮಗನಾಗಿ ನಾನು ಮನೆಯಲ್ಲಿ ಶಾಂತ ವಾತಾವರಣವನ್ನೇ ಕಂಡೆ. ಬಹುಷಃ ಒಂದು ರೀತಿ ಏಕಾಂಗಿತನ ಕಾಡಿದ್ದರಿಂದಲೇ ನನ್ನ ಭಾವನೆಗಳನ್ನು ಅರುಹಿಕೊಳ್ಳಲು ಲೇಖನಿಯ ಮೊರೆ ಹೋದೆನೇ? ಹೇಳುವುದು ಕಷ್ಟ.
ಛೇ.... ಹೇಳಲು ಮರೆತಿದ್ದೆ. ನಾನು ಹುಟ್ಟಿದ ಸಮಯದಲ್ಲಿ ಅಪ್ಪ ಅಮ್ಮರಲ್ಲಿ ನನಗೆ ಹೆಸರು ಇಡುವ ವಿಚಾರದಲ್ಲಿ ಭಾರೀ ಜಿಜ್ಞಾಸೆ ಮೂಡಿತ್ತಂತೆ. ಅಮ್ಮ `ಉಲ್ಲಾಸ' ಎಂಬ ಹೆಸರನ್ನೂ, ಅಪ್ಪ `ಸಂತೋಷ' ಎನ್ನಬೇಕೆಂದೂ ವಾದಿಸಿದರಂತೆ. ಇಬ್ಬರಿಗೂ ತಾವು ಸೂಚಿಸಿದ ಹೆಸರು ಅಂತಿಮವಾಗಬೇಕೆಂಬ ಅಭಿಲಾಷೆ. ಅವರ ಜೀವಮಾನದ ಕೊನೆತನಕವೂ ಅಮ್ಮ ಉಲ್ಲಾಸ ಎಂದೂ, ಅಪ್ಪ ಸಂತೋಷ ಎಂತಲೂ ನನ್ನನ್ನು ಕೂಗಿ ಕರೆದರು. ಅವತ್ತಿನ ವಿವಾದದ ನಂತರ ಅವರಿಬ್ಬರ ನಡುವೆ ಮಾತುಕತೆ ನಡೆಯಲೇ ಇಲ್ಲ. ಇನ್ನೆಲ್ಲಿ ವಿವಾದ, ಗಲಾಟೆ!?

ಆ ಮನೆಯಲ್ಲಿ ನಾನು ಮಾತ್ರ `ಸಂತೋಷ - ಉಲ್ಲಾಸ' ಆಗಿದ್ದೆ!!

- ಮಾವೆಂಸ

3 comments:

shivu.k ಹೇಳಿದರು...

ಸರ್,

ಕತೆ ಪುಟ್ಟದಾದರೂ ತುಂಬಾ ಅಲೋಚಿಸುವಂತಿದೆ.

jithendra hindumane ಹೇಳಿದರು...

ಆ ಥರ ಸಂಸಾರ ಆದರೆ ಜಗಳವೇ ಇಲ್ಯಲ....!

Harisha - ಹರೀಶ ಹೇಳಿದರು...

ಕೊನೆಯಲ್ಲಿ ಟ್ವಿಸ್ಟು... ಸಖತ್ತಾಗಿದ್ದು..

 
200812023996