ಸೋಮವಾರ, ಆಗಸ್ಟ್ 2, 2010

ನಾವೂ `ಸೈಕಲ್ ' ಹೊಡೆಯುತ್ತಿದ್ದೇವೆ!


ಸೈಕಲ್ ಹೊಡೆಯುವುದು ನಮಗೆ ಗೊತ್ತು. ಸೈಕಲ್ ಹೊಡೆಯುತ್ತಿದ್ದಾನೆ ಎಂಬ ವ್ಯಂಗ್ಯದ ಅರ್ಥವೂ ನಮಗೆ ಅರಿವಿದೆ. ಆದರೆ ಇದೇ ಸೈಕಲ್ ಕಾರಣದಿಂದಾಗಿ ಫ್ರಾನ್ಸ್ ದೇಶದಲ್ಲಿ ಒಂದು ಪ್ರತಿಷ್ಟಿತ ಸ್ಪರ್ಧೆಯೇ ರೂಪಗೊಂಡು ಸಂಚಲನವನ್ನೇ ಉಂಟುಮಾಡುತ್ತದೆ ಎನ್ನುವುದು ಎಷ್ಟು ಜನ ಕ್ರೀಡಾಭಿಮಾನಿಗಳಿಗೆ ಗೊತ್ತು?
ಸೈಕ್ಲಿಂಗ್‌ನ ಗ್ರಾಸ್ಲಾಂ ಎನ್ನಿಸಿಕೊಂಡಿರುವ ಟೂರ್ ಡಿ ಪ್ರಾನ್ಸ್ ಸ್ಪರ್ಧೆಯ ಎರಡನೇ ಹಂತದಲ್ಲಿ ಮೊನ್ನೆ ಮೊನ್ನೆ ಒಂದು ವಿಚಿತ್ರ ಮಾರಾಮಾರಿ ನಡೆಯಿತು. ಆಸ್ಟ್ರೇಲಿಯಾದ ಮಾರ್ಕ್ ರೆನ್‌ಶಾ ಎಂಬಾತ ನ್ಯೂಜಿಲ್ಯಾಂಡ್‌ನ ಜೂಲಿಯನ್ ಡೀವ್‌ರನ್ನು ಸ್ಪರ್ಧೆಯಲ್ಲಿದ್ದಾಗ `ಢೀ' ಕೊಟ್ಟು ಕೆಡವಿದ. ರೆನ್‌ನನ್ನು ಸ್ಪರ್ಧೆಯಿಂದ ಹೊರಹಾಕಿದ್ದು ಪಕ್ಕದಲ್ಲಿಡೋಣ. ಇಷ್ಟಕ್ಕೂ ಆತ ಇಂತಹ ಅಪಾಯಕಾರಿ ಹೆಜ್ಜೆಗೆ ಕೈಹಾಕಲು ಕಾರಣ ತನ್ನ ಹೆಚ್‌ಸಿ ಕೊಲಂಬಿಯಾ ತಂಡದ ತಾರೆ ಮಾರ್ಕ್ ಕಾವೆಂಡಿಶ್‌ರಿಗೆ ಈ ಟೂರ್ ಡಿ ಫ್ರಾನ್ಸ್‌ನಲ್ಲಿ ಸುಗಮ ವಿಜಯ ದಕ್ಕಲು ಸಹಾಯ ಮಾಡುವುದು!
ಇವತ್ತಿಗೂ ಖಾಸಗಿ ಕ್ರೀಡಾ ಚಾನೆಲ್‌ಗಳಲ್ಲಿ ದಿನದ ಯಾವುದೋ ಒಂದು ವೇಳೆಯಲ್ಲಿ ಸೈಕ್ಲಿಂಗ್ ಸ್ಪರ್ಧೆಯ ಪ್ರಸಾರವಿರುತ್ತದೆ. ಉಹ್ಞೂ, ಯುರೋಪಿಯನ್‌ರು ಇದನ್ನು ಸೈಕಲ್ ಎಂದು ಕರೆಯುವುದೇ ಇಲ್ಲ. ಇದು ಆವರ ಪಾಲಿಗೆ ರೋಡ್ ಬೈಕ್! ದುರ್ಗಮ ಘಾಟಿ ಪ್ರದೇಶಗಳಲ್ಲಿ ನುಣ್ಣನೆಯ ರಸ್ತೆಯಲ್ಲಿ ರೋಡ್ ಬೈಕ್ ಪಯಣದ ಅಪಾಯ ಅಷ್ಟಿಷ್ಟಲ್ಲ. ಇಲ್ಲಿ ಸಾಮಾನ್ಯ ಚೈನ್ ಚಕ್ರ ಸಾಕಾಗಲ್ಲ, ಚಾಲ್ತಿಯಲ್ಲಿರುವ ಬ್ರೇಕ್ ಇದ್ದರೂ ಉಪಯೋಗವಿಲ್ಲ. ಇನ್ನೊಮ್ಮೆ ಟಿವಿ ಪ್ರಸಾರದಲ್ಲಿ ಗಂಭೀರ ದೃಷ್ಟಿಯಿಡಿ, ಚೈನ್ ತುಂಡಾದರೆ, ಬ್ರೇಕ್ ವಿಫಲವಾದರೆ.... ಎಂದು ಯೋಚಿಸಿ. ಈ ಆಟದಲ್ಲಿ ಅಡಗಿರುವ `ಸಾಹಸ' ಗೊತ್ತಾಗುತ್ತದೆ.
ಹಾಗಾಗಿಯೇ ಅತ್ಯುತ್ತಮ ರೋಡ್ ಬೈಕ್‌ಗೆ ಬೆಲೆ ೨೦ ಸಾವಿರ ಯುಎಸ್ ಡಾಲರ್ ದಾಟುತ್ತದೆ. ಕ್ರೀಡಾಂಗಣದ ಒಳಗಡೆಯೇ ಸೈಕಲ್ ರೇಸ್ ನಡೆಸುವುದು ಒಂದು ರೀತಿ. ಇದಕ್ಕೆ ವೆಲೆಡ್ರೋಮ್ ಎಂಬ ಸ್ಪರ್ಧಾ ಟ್ರಾಕ್ ಆಳವಡಿಸಬೇಕಾಗುತ್ತದೆ. ಗಿರಿಗಿಟ್ಲಿಯಂತೆ ಇಲ್ಲಿನ ೨೦೦-೪೦೦ ಮೀ. ವೃತ್ತದಲ್ಲೇ ಮತ್ತೆ ಮತ್ತೆ ಸುತ್ತುವ ಈ ಸ್ಪರ್ಧೆ ಈಗ ಒಲಂಪಿಕ್ಸ್‌ನ ಪದಕದ ಕ್ರೀಡೆಯೂ ಹೌದು. ಇಲ್ಲಿ ಅತ್ಯಾಧುನಿಕ ಮಾದರಿಯ ಲೋಹಗಳಿಂದ ತಯಾರಿಸಿದ ಸೈಕಲ್ ಬಳಸಲಾಗುತ್ತದೆ ಎಂಬುದರ ಹೊರತಾಗಿ ಶಕ್ತಿ ಪ್ರದರ್ಶನವೇ ಪ್ರಾಮುಖ್ಯ.
ಟೂರ್ ಡಿ ಫ್ರಾನ್ಸ್‌ನಂತ ಸ್ಫರ್ಧೆಗಳಲ್ಲಿ ಹಾಗಿಲ್ಲ. ೧೯೦೩ರಿಂದ ಆರಂಭವಾದ ಈ ಸ್ಪರ್ಧೆಯಲ್ಲಿ ಸಪಾಟಾದ ರಸ್ತೆಯಲ್ಲಿ ಪಯಣಿಸಬೇಕಾದರೂ ಇಲ್ಲಿ ೧೦೦ ಪ್ಲಸ್ ಕಿ.ಮೀ. ದೂರವನ್ನು ಕ್ರಮಿಸಲು ಸೈಕಲ್ ಹೊಡೆಯಬೇಕು. ವಿಶ್ವದ ಪ್ರತಿಷ್ಟಿತ ತಂಡಗಳು ಭಾಗವಹಿಸುತ್ತವೆ. ಆಯಾ ತಂಡದಲ್ಲಿ ಒಬ್ಬ ಆಟಗಾರನಿಗೆ ಸ್ಟಾರ್ ಪಟ್ಟ. ಆತ ಗೆಲ್ಲಲು ಉಳಿದವರು ಎರಡು ರೀತಿಯಲ್ಲಿ ಸಹಾಯ ಮಾಡುತ್ತಾರೆ. ಒಂದು - ಪಕ್ಕದಲ್ಲಿಯೇ ಪೆಡಲ್ ಮಾಡಿ ಗಾಳಿಯ ಪುಶ್ ಸಿಗುವಂತೆ ಮಾಡುತ್ತಾರೆ. ಮತ್ತೊಂದು - ರೆನ್‌ಶಾ ತಂತ್ರ! ರೇಸ್ ಮಾರ್ಗದಲ್ಲಿ ಅಪಘಾತಗಳಾಗಿ ಸೈಕಲ್ ಸಮೇತ ಪ್ರಪಾತಕ್ಕೆ ಉರುಳಿದರೆ ದೇವರೇ ಗತಿ. ಅದಕ್ಕೇ ಆಮೆರಿಕದ ಟೈಲರ್ ಫರಾರ್ ಹೇಳುತ್ತಾರೆ, ನಾನೂ ಗೆಲ್ಲಲು ಬಯಸುವೆ. ಆದರೆ ಅಪಘಾತಗಳಾಗದಿರುವುದನ್ನು ಹೆಚ್ಚು ಬಯಸುವೆ!
ಸೈಕ್ಲಿಂಗ್ ಇತಿಹಾಸವನ್ನು ನಿರುಕಿಸಿದರೆ, ೧೯ನೇ ಶತಮಾನದ ಆರಂಭದಿಂದಲೇ ಸ್ಪರ್ಧಾ ಜಗತ್ತು ಸೈಕಲ್‌ಗೆ ತೆರೆದುಕೊಂಡಿತ್ತು. ಆ ದಿನಗಳಲ್ಲಿ ಯುಎಸ್‌ನಲ್ಲಿ (೧೮೯೦) ಸೈಕ್ಲಿಂಗ್ ತುಂಬಾ ಜನಪ್ರಿಯವಾಗಿತ್ತು. ೧೮೯೯ರಲ್ಲಿಯೇ ಮರ್ಪಿ ಎಂಬಾತ ನ್ಯೂಯಾರ್ಕ್‌ನಲ್ಲಿ ಒಂದು ಮೈಲು ದೂರವನ್ನು ಒಂದು ನಿಮಿಷದಲ್ಲಿ ಪೂರೈಸಿದ್ದ! ಅದೇಕೋ ಏನೋ, ನಂತರದ ದಿನಗಳಲ್ಲಿ ಅಮೆರಿಕದಲ್ಲಿ ಆಟದ ಜನಪ್ರಿಯತೆ ಕುಸಿಯಿತು. ಇತ್ತ ಫ್ರಾನ್ಸ್, ಬೆಲ್ಜಿಯಂ, ಇಟಲಿ, ಸ್ಪೇನ್‌ನಲ್ಲಿ ಸೈಕಲ್ ಪಟು ಮಿಲಿಯನೇರ್‌ಗಳಾಗಿದ್ದಾರೆ ಎಂದರೆ ಉಳಿದುದನ್ನು ನೀವೇ ಅರ್ಥ ಮಾಡಿಕೊಳ್ಳಿ.
ಮೊನ್ನೆ ಖಾಸಗಿ ಚಾನೆಲ್‌ನಲ್ಲಿ ಪ್ಯಾಟೆ ಹುಡ್ಗೀರು ಹಳ್ಳಿಯಲ್ಲಿ ಕೆಸರು ಟ್ರಾಕ್‌ನಲ್ಲಿ ಸೈಕಲ್ ಹೊಡೆದರಲ್ಲ, ಅಂತದೊಂದು ಸ್ಪರ್ಧೆಯೂ ವಿಶ್ವದಲ್ಲಿ ಚಾಲ್ತಿಯಲ್ಲಿದೆ. ಕಲ್ಲು ಬಂಡೆಗಳ ಮಧ್ಯೆ ಸೈಕಲ್‌ನಲ್ಲಿ ನೆಲಕ್ಕೆ ಕಾಲು ತಾಕಿಸದೆ ದಾಟುವ ವಿಶಿಷ್ಟ ಸಾಹಸದ ಆಟವೂ ಇದೆ. ದುರಂತ, ಭಾರತದ ಕ್ರೀಡಾ ಕ್ಷೇತ್ರದಲ್ಲಿ ಮೆಲೋಡ್ರಾಮಗಳು ಇದೆಯೇ ವಿನಃ ಸೈಕ್ಲಿಂಗ್‌ಗೆ ಬೇಕಾದ ವೆಲೆಡ್ರೋಂ ಇಲ್ಲ. ರೋಡ್ ಬೈಕ್‌ಗೆ ಹಣ ಹೊಂಚಲು ಸಾಮಾನ್ಯರ ಕೈಯಲ್ಲಿ ಅಸಾಧ್ಯ. ಹಾಗಾಗಿ ನಾವು ಎಲ್ಲ ಸಾಧನೆಗೂ `ಸೈಕಲ್' ಹೊಡೆಯುತ್ತೇವೆ. ಅಸಲಿ ಸೈಕಲ್ ಗಿಟ್ಟುತ್ತಿಲ್ಲ!
ಉಫ್, ಸೈಕ್ಲಿಂಗ್ ಸ್ಪರ್ಧೆಯು ದುರ್ಬಲ ಹೃದಯದವರಿಗೆ ಅಲ್ಲವೇ ಅಲ್ಲ. ಟೂರ್ ಡಿ ಫ್ರಾನ್ಸ್‌ನ ೧೧೪.೬ ಕಿ.ಮೀ. ಎರಡನೇ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಂಡವರು ಚಲಿಸುವ ಸರಾಸರಿ ವೇಗ ಘಂಟೆಗೆ ೭೦ ಕಿ.ಮೀ! ನೆನಪಿರಲಿ, ನಮ್ಮ ಪೆಟ್ರೋಲ್ ಬೈಕ್‌ನಲ್ಲಿ ೬೦ ಕಿ.ಮೀ./ಘಂಟೆ ವೇಗ ತಲುಪಿದಾಗಲೇ ಕೈ ನಡುಗಲಾರಂಭಿಸುತ್ತದೆ. ಇಲ್ಲಿ ಪೆಡಲ್ ಬೇರೆ ಮಾಡಬೇಕು. ಅಕ್ಕಪಕ್ಕದ ಕಂದಕದ ಬಗ್ಗೆ ಜಾಗೃತೆ ವಹಿಸಬೇಕಿರುವುದರಿಂದ ಮೈಯೆಲ್ಲ ಕಣ್ಣಾಗಿರಬೇಕು. ಜೊತೆಗೆ ಪಕ್ಕದವನ `ಢೀ' ತಂತ್ರಗಳಿಂದ ಬಚಾವಾಗಬೇಕು!
ಹೋಗಲಿ ಬಿಡಿ, ಭಾರತೀಯರು ಟೂರ್ ಡಿ ಫ್ರಾನ್ಸ್‌ನಲ್ಲಿ ಆಡಿಲ್ಲವೆಂದು ಹಳಹಳಿಸುವುದು ಅನಗತ್ಯ. ನಮ್ಮೂರ ಸಾಮಾನ್ಯ ಸೈಕಲ್‌ನಲ್ಲಿ ನಾವು ಶಾಲೆಯಲ್ಲಿದ್ದಾಗ `ಸ್ಲೋ ಸೈಕ್ಲಿಂಗ್' ಸ್ಪರ್ಧೆ ಇರುತ್ತಿತ್ತು. ೫೦ ಮೀ. ಅಂತರವನ್ನು ಸೈಕ್ಲಿಸ್ಟ್ ತನ್ನ ಕಾಲನ್ನು ಒಮ್ಮೆಯೂ ನೆಲಕ್ಕೆ ತಾಕಿಸದೆ ಪೆಡಲ್ ಮಾಡಿ ಗೆಲ್ಲಬೇಕಿತ್ತು. ಇಲ್ಲಿ ಮೊದಲು ೫೦ ಮೀ. ದಾಟಿದರೆ ಬಹುಮಾನವಿಲ್ಲ, ಕಟ್ಟಕಡೆಗೆ ಬಂದವರಿಗೆ ಚಿನ್ನದ ಪದಕ!
ಈಗ ಈ ಸ್ಪರ್ಧೆಯೂ ನಮ್ಮಲ್ಲಿ ಕಾಣುತ್ತಿಲ್ಲ. ಅಷ್ಟಕ್ಕೂ ಮಕ್ಕಳೆಲ್ಲಿ ಈಗ ಸೈಕಲ್ ಹೊಡೆಯುತ್ತವೆ? ಅವರದೇನಿದ್ದರೂ ತರಾವರಿ ಬೈಕ್‌ನಲ್ಲಿ ಜಾಲಿ ರೈಡ್..........

-ಮಾವೆಂಸ

3 comments:

jithendra hindumane ಹೇಳಿದರು...

ಪ್ರಸಾದ್, ಈ ಧಾವಂತದ ಬದುಕಿನ ಪಯಣದಲ್ಲಿ ನಾವು ನಿಜವಾಗಿ ಸೈಕಲ್ ಸವಾರಿಯ ಮಜ ಕಳೆದುಕೊಂಡಿದ್ದೇವೆ...!

shivu.k ಹೇಳಿದರು...

ಹೌದು ಸರ್, ನಾವು ಸೈಕಲ್ ತುಳಿಯುವ ಆನಂದವನ್ನು ಕಳೆದುಕೊಂಡಿದ್ದೇವೆ.

Govinda Nelyaru ಹೇಳಿದರು...

ಎಲ್ಲರ ಕೈ ಏಟಕಿನಲ್ಲಿ ಇರಬಹುದಾದ ಸೈಕಲು ನಮ್ಮ ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾಗದ್ದು ನಿಜಕ್ಕೂ ದುರಂತ.

 
200812023996