ಬುಧವಾರ, ನವೆಂಬರ್ 11, 2009

ಜೈಪುರ ತೈಲ ಬೆಂಕಿ - ಕೋಟಿ ನಷ್ಟ, ಭವಿಷ್ಯ ಕಷ್ಟ



ಇಂಡಿಯನ್ ಆಯಿಲ್ ಕಾರ್ಪೊರೇಷನ್ ದೇಶದ ಅತಿ ದೊಡ್ಡ ತೈಲ ಪೂರೈಕೆ ಉದ್ಯಮ. ಕೇಂದ್ರ ಸರ್ಕಾರದ ಆಧಿಪತ್ಯಕ್ಕೆ ಒಳಪಟ್ಟ ಸಂಸ್ಥೆಯಿದು. ಅದಕ್ಕೊಂದು ಅಧಿಕೃತ ವೆಬ್‌ಸೈಟ್ ಕೂಡ ಇದೆ. ಈ ದಿನಗಳಲ್ಲಿ ನೀವು ಆ ಸೈಟ್‌ನಲ್ಲಿ ಇಣುಕಿದರೆ ನಾನಾ ಮಾದರಿಯ ಪೋರ್ಟಲ್‌ಗಳು ಕಾಣಸಿಗುತ್ತವೆ. ತೀರಾ ಇತ್ತೀಚಿನ ಸುದ್ದಿಯತ್ತ ಕ್ಲಿಕ್ಕಿಸಿದರೆ ಕಾಣುತ್ತದೆ, ಐಓಸಿ ೨೮೪ ಕೋಟಿ ರೂ. ಲಾಭ ಗಳಿಸಿದ ಮಾಹಿತಿ. ಬುಡದಿಂದ ತಲೆತನಕ ಕಣ್ಣು ಹಾಯಿಸಿದರೂ ಮೊನ್ನೆ ಮೊನ್ನೆ ಜೈಪುರದಲ್ಲಿ ನಡೆದ ಪರಿಷ್ಕರಣ ಕೇಂದ್ರದ ಟ್ಯಾಂಕ್‌ಗಳು ಬೆಂಕಿಗೆ ಆಹುತಿಯಾದ, ಕನಿಷ್ಟ ೧೩ ಮಂದಿ ಜೀವ ತೆತ್ತ ಸುದ್ದಿಯ ತುಣುಕೂ ಕಾಣುವುದಿಲ್ಲ!
ಐಓಸಿ ಬೇಜವಾಬ್ದಾರಿತನಕ್ಕೆ ಇದು ಪುಟ್ಟ ಉದಾಹರಣೆ ಮಾತ್ರ. ಅಕ್ಟೋಬರ್ ೩೦ರಂದು ಜೈಪುರ ಸಮೀಪದ ಸೀತಾಪುರ ಇಂಡಸ್ಟ್ರಿಯಲ್ ಏರಿಯಾದ ಐಓಸಿ ಸಂಸ್ಕರಣ ಕೇಂದ್ರದ ೧೧ ಸಂಗ್ರಾಹಕ ಟ್ಯಾಂಕ್‌ಗಳ ಪೈಕಿ ಐದರಲ್ಲಿ ಬೆಂಕಿ ಕಾಣಿಸಿದೆ. ಪೆಟ್ರೋಲ್ ಹಾಗೂ ಸೀಮೆಎಣ್ಣೆಗಳನ್ನು ಆ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿತ್ತು. ಸತತ ಏಳು ದಿನ ಈ ಬೆಂಕಿ ಉರಿದು ತೈಲ ಖಾಲಿಯಾದ ನಂತರವೇ ಬೆಂಕಿ ಆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಮನಿಸಬೇಕಾದುದೆಂದರೆ, ಈ ಬೆಂಕಿ ದುರಂತ ನಡೆದ ದಿನವೇ ಅತ್ತ ಐಓಸಿ ವೆಬ್‌ಸೈಟ್‌ನಲ್ಲಿ ಈ ತ್ರೈಮಾಸಿಕ ಋತುವಿನಲ್ಲಿ ಸಂಪಾದಿಸಿದ ಲಾಭದ ಸುದ್ದಿಯನ್ನು ದೊಡ್ಡದಾಗಿ ಪ್ರಕಟಿಸಲಾಗಿತ್ತು!
ಜೈಪುರ ತೈಲ ದುರಂತದಿಂದ ಆದ ನಷ್ಟದ ಬಗ್ಗೆ ಮಾಡುತ್ತಿರುವ ಲೆಕ್ಕಾಚಾರ ಗೊಂದಲಮಯವಾಗಿದೆ. ಮಾಧ್ಯಮಗಳು ೫೦೦ ಕೋಟಿ ನಷ್ಟದ ಚಿತ್ರಣವನ್ನು ನೀಡುತ್ತಿವೆ. ಆದರೆ ಐಓಸಿಯ ಯೋಜನೆ ಮತ್ತು ವ್ಯಾಪಾರ ವಿಭಾಗದ ನಿರ್ದೇಶಕ ಬಿ.ಎಮ್.ಬಸ್ಸಾಲ್ ಹೇಳುವುದೇ ಬೇರೆ, ‘ಆ ಕೇಂದ್ರದ ತೈಲ ಸಂಗ್ರಹ ಸಾಮರ್ಥ್ಯ ಒಂದು ಲಕ್ಷ ಕಿಲೋ ಲೀಟರ್‌ಗಳು. ನಮ್ಮ ಅಂದಾಜಿನ ಪ್ರಕಾರ, ಅಗ್ನಿ ಅನಾಹುತದ ವೇಳೆ ೫೦ ಸಾವಿರ ಕಿಲೋ ಲೀಟರ್ ಕಚ್ಚಾ ತೈಲ ಸಂಗ್ರಹದಲ್ಲಿತ್ತು. ಸುಮಾರು ೧೪೦ರಿಂದ ೧೫೦ ಕೋಟಿ ರೂ. ಮೌಲ್ಯದ ಸಂಗ್ರಹ ಬೆಂಕಿಗೆ ಆಹುತಿಯಾದಂತಾಗಿದೆ. ಅಷ್ಟಕ್ಕೂ ಈ ಸಂಸ್ಕರಣ ಕೇಂದ್ರಕ್ಕೆ ಐಸಿಐಸಿಐನ ವಿಮಾ ಯೋಜನೆ ಅನ್ವಯವಾಗುತ್ತವೆ. ಹಾಗಾಗಿ ಐಓಸಿಯ ಅರ್ಥವ್ಯವಸ್ಥೆ ಧಕ್ಕೆಯಾಗುವುದಿಲ್ಲ.’
ಐಓಸಿಯ ಇತಿಹಾಸವನ್ನು ಗಮನಿಸಿದರೆ, ಈ ತೆರನ ನಿರ್ಲಕ್ಷ್ಯ ಎದ್ದುಕಾಣುತ್ತದೆ. ಅವರ ಅಗ್ನಿ ದುರಂತಗಳ ಸಾಲಿಗೆ ಇದು ಇನ್ನೊಂದು ಸೇರ್ಪಡೆಯಷ್ಟೇ. ೨೦೦೪ರ ಜೂನ್ ೦೩ರಂದು ಕೊಲ್ಕತ್ತಾದ ರಾಜಬಂಧು ತೈಲ ಕೇಂದ್ರದಲ್ಲಿ ೪,೧೮೯ ಕಿಲೋ ಲೀಟರ್ ತೈಲ ಬೆಂಕಿಗೆ ಭಸ್ಮವಾಗಿತ್ತು. ೨೦೦೧ರಲ್ಲಿ ಕಾನ್ಪುರದಲ್ಲಿ ಪೈಪ್‌ಲೈನ್‌ಗೆ ಹೊತ್ತಿಕೊಂಡ ಬೆಂಕಿಗೆ ಅಪಾರ ಪ್ರಮಾಣದ ಪೆಟ್ರೋಲಿಯಂ ನಷ್ಟವಾಗಿತ್ತು. ಹೀಗೆ.... ನೀಡಬಹುದಾದ ದೃಷ್ಟಾಂತಗಳಲ್ಲೆಲ್ಲ ಕಾಣುವುದು ಐಓಸಿಯ ಅಸಡ್ಡಾಳತನ. ಜೈಪುರದ ಪ್ರಕರಣದಲ್ಲೂ ನಿರ್ಲಕ್ಷ್ಯದ ಆರೋಪವೇ ಎದ್ದು ಕಾಣುತ್ತದೆ. ತನಿಖೆಯ ಶಾಸ್ತ್ರಕ್ಕೆ ಈಗಾಗಲೇ ಆದೇಶವಾಗಿದೆ. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುವವರಾರು?
ಸೆಪ್ಟೆಂಬರ್ ೩೦ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಲೆಕ್ಕಾಚಾರದಲ್ಲಿ ಐಓಸಿ ತೆರಿಗೆಯನ್ನು ಕಳೆದು ನಿವ್ವಳ ೨೮೪ ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೭೦೪೭ ಕೋಟಿ ರೂ. ನಷ್ಟ ಉಂಟಾಗಿತ್ತು. ಜಾಗತಿಕ ತೈಲ ಉದ್ಯಮಗಳ ಏರಿಳಿತ ಈ ಲಾಭನಷ್ಟದಲ್ಲಿ ಪ್ರತಿಫಲಿಸಿದೆ. ಐಓಸಿ ಒಟ್ಟು ಎಂಟು ರಿಫೈನರಿಗಳನ್ನು ಹೊಂದಿದ್ದು ವರದಿ ಸಾಲಿನಲ್ಲಿ ೧೨,೪೧೨ ಮೆಟ್ರಿಕ್ ಟನ್ ತೈಲವನ್ನು ಮಾರಾಟಮಾಡಿದೆ. ವಾಸ್ತವವಾಗಿ ಇದು ಅವರ ಸಾಮರ್ಥ್ಯದ ಶೇ.೯೯.೯ರ ಬಳಕೆಯಾದಂತೆ ಎನ್ನಲಾಗಿದೆ. ಪೈಪ್‌ಲೈನ್‌ಗಳ ತಾಕತ್ತನ್ನು ಶೇ.೮೩ರಷ್ಟು ಉಪಯೋಗಿಸಿಕೊಳ್ಳಲಾಗಿದೆ ಎಂದು ಅದು ಹೇಳಿಕೊಳ್ಳುತ್ತದೆ. ಜಾಗತಿಕ ತೈಲ ಬೆಲೆ ಕಡಿಮೆಯಾದುದರಿಂದ ಈ ಸರ್ತಿ ಲಾಭ ಸಿಕ್ಕಿದೆ. ಕಳೆದ ವರ್ಷ ೧೫,೫೩೬ ಮೆಟ್ರಿಕ್ ಟನ್ ತೈಲ ಮಾರಾಟ ಮಾಡಿದ್ದರೂ ನಷ್ಟವೇ ಆಗಿತ್ತು.
ಲಾಭ, ನಷ್ಟದ ಬಾಬತ್ತನ್ನು ತೈಲ ಬೆಲೆಯೊಂದಿಗೆ ಸಮೀಕರಿಸುವುದೇ ಅರ್ಥಹೀನ. ಇಂದು ಜೈಪುರ ತೈಲಕ್ಕೆ ಬಿದ್ದ ಬೆಂಕಿಯ ಹೊಗೆಯ ಕಪ್ಪು ಕಣಗಳು ಎಂಟರಿಂದ ೧೦ ಕಿ.ಮೀ. ಸುತ್ತಳತೆಯ ಪ್ರದೇಶವನ್ನು ಆವರಿಸಿದೆ. ಪಿಂಕ್ ಸಿಟಿ ಎಂಬ ಖ್ಯಾತಿಯ ಜೈಪುರವನ್ನು ಇನ್ನು ಬ್ಲಾಕ್ ಸಿಟಿ ಎನ್ನಬೇಕಾದೀತು ಎಂಬ ವಿಶ್ಲೇಷಣೆಯೂ ವ್ಯಕ್ತವಾಗಿದೆ. ಡಹ್ಲಾಸ್, ಕೋಸೂರ್, ಚಿತ್ರವಾಲಾ, ವಿಡಾನಿ, ರಾಮಚಂದ್ರಪುರ, ಟಿಬಾ.... ದಂತ ಹಳ್ಳಿಗಳ ಭೂಮಿಯ ಮೇಲೆ ಕಪ್ಪು ಬೂದಿ ಕಣಗಳು ಸಂಗ್ರಹವಾಗಿವೆ. ಇಲ್ಲಿನ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದನ್ನು ತಜ್ಞರೇ ಖಚಿತಪಡಿಸಿದ್ದಾರೆ. ಜೈಪುರದ ಕೃಷಿ ಭೂಮಿ ತರಕಾರಿ ಹಾಗೂ ಆಹಾರಧಾನ್ಯ ಉತ್ಪಾದನೆಗೆ ಖ್ಯಾತ. ಆದರೆ ಈ ಋತುವಿನ ಬೆಳೆಯೇ ಹಾನಿಗೊಳಗಾಗಿದೆ. ಈ ನಷ್ಟಗಳ ಅಂದಾಜನ್ನು ಈವರೆಗೆ ಸರ್ಕಾರ ಪ್ರಕಟಿಸಿಲ್ಲ.
ಒಂದು ಕೋಟಿ ಲೀಟರ್ ಪೆಟ್ರೋಲ್ ಸುಟ್ಟಿರುವುದರಿಂದ ವಾತಾವರಣ ಕಲುಷಿತಗೊಳ್ಳುವುದು ನಿಸ್ಸಂಶಯ. ಅಲ್ಲಿ ಆಮ್ಲಜನಕದ ಕೊರತೆಯೂ ಕಾಣಿಸಿರುವುದರಿಂದ ವಿಷಕಾರಿ ಅನಿಲಗಳು ಹೈಡ್ರೋಕಾರ್ಬನ್ ಆಗಲಾರದೆ ನೇರವಾಗಿ ಕಾರ್ಬನ್ ಹೈಡ್ರಾಕ್ಸೈಡ್ ಆಗಿ ಮಾರ್ಪಡುತ್ತದೆ. ಹೀಗಾಗಿ ನಿಷೇಧಿತ ಪದಾರ್ಥಗಳ ಮಟ್ಟ (ಆರ್‌ಎಸ್‌ಪಿಎಂ) ಸಾಮಾನ್ಯಕ್ಕಿಂತ ಒಂದೂವರೆ ಪಟ್ಟು ವೃದ್ಧಿಸುತ್ತದೆ. ಮಾನವನ ಆರೋಗ್ಯಕ್ಕೆ ಇದು ತೀರ್ವ ಹಾನಿಕಾರಕ. ಶುಷ್ಕ ಚರ್ಮ, ಅಸ್ತಮಾ ಮುಂತಾದ ಸಮಸ್ಯೆಗೆ ನಾಂದಿಯಾಗುತ್ತದೆ. ಸಲ್ಫರ್ ಹಾಗೂ ನೈಟ್ರಿಕ್ ಆಸಿಡ್ ವಾತಾವರಣವನ್ನು ಸೇರಿರುವುದರಿಂದ ಆಸಿಡ್ ಮಳೆ ಧಾಳಿಯಿಡುತ್ತದೆ. ಈಗಲೇ ರೈತರು ಬೆಳಗಿನ ಮಂಜಿನಲ್ಲಿ ಆಮ್ಲೀಯ ಅಂಶವನ್ನು ಗುರ್ತಿಸುತ್ತಿದ್ದಾರೆ. ಇಳುವರಿ ಕುಸಿತದ ಸಂಭಾವ್ಯತೆ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿಯೇ ನಷ್ಟದ ಅಂದಾಜು ಸಂಕೀರ್ಣ ಎನ್ನಬೇಕು. ಜನರ ಆರೋಗ್ಯದ ಖರ್ಚನ್ನು ಐಓಸಿ ಭರಿಸುವುದಿಲ್ಲ. ರೈತನ ಬೆಳೆ ನಷ್ಟಕ್ಕೆ ಅದು ಜವಾಬ್ದಾರನಾಗುವುದಿಲ್ಲ. ತನ್ನ ಪೆಟ್ರೋಲ್ ಸುಟ್ಟಿದ್ದಕ್ಕೆ ವಿಮಾ ರಕ್ಷಣೆ ಪಡೆದು ಆರ್ಥಿಕವಾಗಿ ತನಗೇನಾಗಿಲ್ಲ ಎಂದು ಘೋಷಿಸುತ್ತದೆ. ಇಲ್ಲಿಯೇ ಅಡಗಿದೆ ತೈಲ ದುರಂತದ ವ್ಯಂಗ್ಯ!
-ಮಾವೆಂಸ



3 comments:

ಸುಪ್ತವರ್ಣ ಹೇಳಿದರು...

ಒಂದು ಕೋಟಿ ಲೀಟರ್ ತೈಲ! ಅದರ ಜೊತೆಗೆ ಭಯಂಕರ ಪರಿಸರ ಮಾಲಿನ್ಯ, ಓದಿದರೆ ಹೊಟ್ಟೆ ಉರಿಯುತ್ತದೆ.

sunaath ಹೇಳಿದರು...

ತೈಲದ ನಷ್ಟಕ್ಕಿಂತ, IOCಯ ಹೊಣೆಗೇಡಿತನಕ್ಕೆ ಹೆಚ್ಚು ವಿಷಾದವಾಗುತ್ತದೆ. ಮಾಹಿತಿಗಾಗಿ ಧನ್ಯವಾದಗಳು.

ಮಾವೆಂಸ ಹೇಳಿದರು...

*To ಸುಪ್ತವರ್ಣ,
Yes.......

* To sunaath,
Thanks for the comment and compliment...

 
200812023996