ಸ್ವಲ್ಪ ತಡವಾಗಿ ರೋಜರ್ ಫೆಡರರ್ ಬಗ್ಗೆ ಬರೆಯುತ್ತಿದ್ದೇನೆಯೇ? ಗೊತ್ತಿಲ್ಲ, ರೈಲ್ವೆ ಕುರಿತ ಜೋಕ್ ಮಾದರಿಯಲ್ಲಿ ಹೇಳುವುದಾದರೆ, ಯು.ಎಸ್.ಓಪನ್‌ಗೆ ಶಾನೆ ಮೊದಲು ಬರೆದಂತಾಗಿದೆ!
ವಿಚಿತ್ರ ನೋಡಿ, ಸಾಂಪ್ರಾಸ್‌ರ ೧೪ ಸ್ಲಾಂ ಮುರಿದು ೧೫ ಗಳಿಸಿಯಾದ ಮೇಲೆ ಇನ್ನು ಮುಂದೆ ಬರುವ ೧೬, ೧೭, ೧೮......ಗಳೆಲ್ಲ ಬರೀ ಸಂಖ್ಯೆಗಳು!
ಇರಲಿ, ರೋಜರ್ ಕುರಿತ ನನ್ನ ಅಭಿಪ್ರಾಯಗಳು ಈ ಮೂಲಕ ನಿಮ್ಮ ಗಮನಕ್ಕೆ.......
ಕೆಲವೊಮ್ಮೆ ಆಟವೆಂಬ ಆಟ ಕೂಡ ಕ್ರೂರಿ, ಪಕ್ಷಪಾತಿ ಎನ್ನಿಸಿಬಿಡುತ್ತದೆ. ಈ ವರ್ಷದ ಪುರುಷರ ವಿಂಬಲ್ಡನ್ ಫೈನಲ್ ನೋಡಿದವರಿಗೆ ಟೆನಿಸ್ ಆಟದ ನಡವಳಿಕೆ ಅನ್ಯಾಯ ಎನ್ನಿಸಬಹುದು! ಅಮೆರಿಕದ ಆಂಡಿ ರ್‍ಯಾಡಿಕ್‌ರ ಎದುರು ಐದು ಸೆಟ್‌ಗಳ ಸೆಣಸಾಟದಲ್ಲಿ ಸ್ವಿರ್ಜಲೆಂಡ್‌ನ ರೋಜರ್ ಫೆಡರರ್ ಗೆದ್ದುದೇನೋ ನಿಜ. ಆದರೆ ಇಡೀ ಪಂದ್ಯದಲ್ಲಿ ಮೇಲುಗೈ ಹೊಂದಿದ್ದುದು ರ್‍ಯಾಡಿಕ್. ರೋಜರ್‌ರ ಸರ್ವ್‌ನ್ನು ಎರಡೆರಡು ಬಾರಿ ಮುರಿದು ಎರಡು ಸೆಟ್ ಗೆದ್ದಿದ್ದರೆ ಫೆಡರರ್ ಪಂದ್ಯದ ಕೊಟ್ಟ ಕೊನೆಯ ಗೇಮ್‌ನಲ್ಲಿಯಷ್ಟೇ ರ್‍ಯಾಡಿಕ್‌ರ ಸರ್ವ್ ಮುರಿಯಲು ಸಾಧ್ಯವಾಗಿತ್ತು. ಅಷ್ಟಕ್ಕೇ ಫೆಡರರ್‌ಗೆ ೧೫ನೇ ಗ್ರಾನ್‌ಸ್ಲಾಂ ಪ್ರಶಸ್ತಿ, ಅಗ್ರಕ್ರಮಾಂಕದ ಬುತ್ತಿ, ಇತಿಹಾಸದಲ್ಲಿ ಅಜರಾಮರ ದಾಖಲೆ. ರ್‍ಯಾಡಿಕ್‌ರಿಗೆ ಬರೀ ಒಂದು ಪ್ಲೇಟ್!
ಅದೃಷ್ಟವೂ ಚಾಂಪಿಯನ್ ಪರ ಎನ್ನುತ್ತದೆ ಒಂದು ನಾಣ್ಣುಡಿ. ವಿಶ್ವದಲ್ಲೇ ಅತಿ ಹೆಚ್ಚು ಗ್ರಾನ್‌ಸ್ಲಾಂ ಗೆದ್ದವನನ್ನು ಸರ್ವ ಶ್ರೇಷ್ಠ ಎನ್ನುವುದು ತಪ್ಪೇ? ಅದೂ ಈ ಹಿಂದೆ ೧೪ ಸ್ಲಾಂ ಗೆದ್ದಿದ್ದ ಅಮೆರಿಕದ ಪೀಟ್ ಸಾಂಪ್ರಾಸ್ ೧೪ ವರ್ಷದಲ್ಲಿ ಈ ಸಾಧನೆ ಮಾಡಿದ್ದರೆ ಈ ಸ್ವಿಸ್ ಪ್ರತಿಭೆಗೆ ಅದಕ್ಕಿಂತ ಎಂಟು ವರ್ಷ ಕಡಿಮೆ ಸಾಕಾಯಿತು. ಕೈಯಲ್ಲಿ ಒಂದು ಸ್ಲಾಂ ಜಾಸ್ತಿ ಬೇರೆ. ಇದನ್ನು ಬದಿಗಿಟ್ಟರೂ , ಎಲ್ಲಾ ನಾಲ್ಕು ಗ್ರಾನ್‌ಸ್ಲಾಂ ಗೆದ್ದ ಗೌರವ ಪೀಟ್‌ರಿಗಿಲ್ಲ, ಫೆಡರರ್‌ಗಿದೆ.
ಕೇವಲ ಒಂದೂವರೆ ವರ್ಷದ ಕೆಳಗೆ ಎಟಿಪಿ ಟೂರ್‌ನಲ್ಲಿ ಫೆಡರರ್ ಕುರಿತಂತೆ ಚಾಲ್ತಿಯಲ್ಲಿದ್ದ ನೂರಾರು ಜೋಕ್‌ಗಳಲ್ಲಿ ಹೆಚ್ಚಿನವು ಅವರ ಅಪ್ರತಿಮ ಪ್ರತಿಭೆಗೆ ಬೋಪರಾಕ್ ಹೇಳುವಂತಿದ್ದವು. ಅವರಿನ್ನು ಬ್ಯಾಕ್ ಹ್ಯಾಂಡ್‌ನಲ್ಲಿ ಮಾತ್ರ ಆಡಬೇಕು, ಒಂದೇ ಸರ್ವ್ ಬಳಸಬೇಕು ಎಂಬ ಮಾತುಗಳ ಹಿಂದೆ ಇದ್ದುದು ಅಕ್ಷರಶಃ ಫೆಡ್ ಮೆಚ್ಚುಗೆ. ಶ್ರೇಷ್ಟತೆಯನ್ನು ತೂಕಕ್ಕೆ ಹಾಕಿ ಅಳೆಯುವುದೇ ಅಸಹ್ಯ. ಆದರೆ ಫೆಡರರ್ ಯಾವ ನಿಟ್ಟಿನಿಂದ ನೋಡಿದರೂ ಶ್ರೇಷ್ಠರಲ್ಲೂ ಅಗ್ರಕ್ರಮಾಂಕ ಪಡೆಯುತ್ತಾರೆ. ಕೊನೆಗೆ ಬೇರೆಲ್ಲ ಹಿರಿಮೆ ಬಿಟ್ಟು ಅವರ ಸದ್ವರ್ತನೆಯೊಂದನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಸ್ಟೀಫನ್ ಎಡ್ಬರ್ಗ್, ಪೀಟ್ ಸಾಂಪ್ರಾಸ್‌ರ ಹೆಜ್ಜೆ ಗುರುತುಗಳಿಗೆ ಸವಾಲಾಗಿ ನಿಲ್ಲುತ್ತಾರೆ.
ಕುಹಕಿಗಳದ್ದೂ ವಾದ ಇದ್ದೇ ಇದೆ. ಫ್ರೆಂಚ್ ಓಪನ್‌ನಲ್ಲಿ ಈ ವರ್ಷ ಫೆಡ್ ಗೆಲ್ಲಲು ರಫೆಲ್ ನಡಾಲ್ ನಾಲ್ಕನೇ ಸುತ್ತಲ್ಲಿ ಸೋತದ್ದೇ ಕಾರಣ ಎನ್ನುತ್ತಾರೆ. ಬಹುಷಃ ವಿಂಬಲ್ಡನ್‌ನಲ್ಲಿ ರಫಾ ಆಡಿದ್ದರೆ ಕತೆಯೇ ಬೇರೆಯಿತ್ತು ಎಂಬ ಅಡ್ಡ ಕೊಂಕು ತೆಗೆಯುತ್ತಾರೆ. ಬಿಡಿ, ನಡಾಲ್‌ರ ಪ್ರತಿಭೆಗೆ ಪೂರ್ಣ ಗೌರವವನ್ನು ಕೊಟ್ಟು ಹೇಳಬೇಕಾದುದೆಂದರೆ ರೋಜರ್ ಫೆಡರರ್ ಎಲ್ಲ ಮಾದರಿಯ ಅಂಕಣದಲ್ಲಿ ತೋರಿದ ಕನ್ಸಿಸ್ಟೆನ್ಸಿ ರಫಾಗಿಲ್ಲ, ಸಾಂಪ್ರಾಸ್ - ಅಗ್ಗಾಸ್ಸಿಗೂ ಇಲ್ಲ ಎಂಬುದು ಖಚಿತ.
ದಾಖಲೆ ಬೇಕೆ? ಫೆಡ್ ಸತತ ೨೩೭ ವಾರ ಕಾಲ ಅಗ್ರ ಪಟ್ಟದಲ್ಲಿ ಬಾಳಿದ್ದಾರೆ. ಇದು ಅದ್ವಿತೀಯ ವಿಶ್ವದಾಖಲೆ. ಈಗ ಮತ್ತೆ ನಂ.೧ ಪದವಿ ಗಿಟ್ಟಿದೆ. ಅದಿರಲಿ, ಈ ಆರು ವರ್ಷದ ಕ್ಯಾರಿಯರ್‌ನಲ್ಲಿ ಕಳೆದ ೨೧ ಗ್ರಾನ್‌ಸ್ಲಾಂನಲ್ಲಿ ಕನಿಷ್ಟ ಪಕ್ಷ ಉಪಾಂತ್ಯ ಹಂತವನ್ನು ವ್ರತ ತಪ್ಪದು ಎನ್ನಿಸುವಂತೆ ಆಡಿದ್ದಾರೆ. ಈ ಮಧ್ಯೆ ಒಮ್ಮೆ ಸತತ ಹತ್ತು ಸ್ಲಾಂ ಫೈನಲ್ ಆಡಿದ್ದೂ ಉಂಟು. ೨೦ ಗ್ರಾನ್‌ಸ್ಲಾಂ ಫೈನಲ್‌ನಲ್ಲಿ ಆಡಿದ್ದು ಇವಾನ್‌ಲೆಂಡ್ಲ್‌ರ ೧೯ರ ಸಾಧನೆನೆಯನ್ನು ಹಿಂದೆ ಹಾಕಿದೆ. ಸಾಂಪ್ರಾಸ್‌ರ ೧೪ ಸ್ಲಾಂ ಮುಗಿದ ಮಾತು.
ವಿಂಬಲ್ಡನ್‌ನಲ್ಲಿನ ಫೆಡರರ್ ಸಾಧನೆಯೂ ಅದ್ಭುತ. ಕಳೆದ ಆರು ವರ್ಷಗಳಿಂದ ಸತತವಾಗಿ ಫೈನಲ್‌ನಲ್ಲಿ ಆಡುತ್ತಿದ್ದಾರೆ. ಎಡವಟ್ಟಾಗಿದ್ದು ಕಳೆದ ವರ್ಷ ರಫೆಲ್ ನಡಾಲ್‌ರ ವಿರುದ್ಧ ಮಾತ್ರ. ಅದೂ ಐದು ಘಂಟೆ ದಾಟಿದ ಮ್ಯಾರಥಾನ್ ಹೋರಾಟದಲ್ಲಿ ಸೋಲು. ೨೦೦೩ರಿಂದ ಆರು ಗೆಲುವು, ಒಂದು ಫೈನಲ್ ಸಾಧನೆ ಪೀಟ್ ಸಾಂಪ್ರಾಸ್‌ರ ಏಳು ವಿಂಬಲ್ಡನ್ ಪ್ರಶಸ್ತಿಗಿಂತ ಒಂದು ಹೆಜ್ಜೆಯಷ್ಟೇ ಹಿಂದೆ. ಗಮನಿಸಬೇಕಾದುದೆಂದರೆ ಇದಕ್ಕೂ ಮುನ್ನ ಆಡಿದ ನಾಲ್ಕು ವಿಂಬಲ್ಡನ್‌ನಲ್ಲಿ ರೋಜರ್ ಮೂರು ಬಾರಿ ಪ್ರಥಮ ಸುತ್ತಿನಿಂದಲೇ ಹೊರಬಿದ್ದಿದ್ದರು!
ಊಹ್ಞೂ, ಆದರೂ ಫೆಡರರ್‌ರನ್ನು ವಿಂಬಲ್ಡನ್ ಜೊತೆ ಸಮೀಕರಿಸುವುದು ಕಷ್ಟ. ಅದೇನಿದ್ದರೂ ಪೀಟ್ ಆಟವೇ ಸೂಕ್ತ. ಲೀಲಾಜಾಲವಾಗಿ ಸರ್ವ್ ಮಾಡಿ ನೆಟ್ ಬಲಿ ಬಂದು ನಿಲ್ಲುತ್ತಿದ್ದ ಪೀಟ್‌ಗೂ ಎಲ್ಲೋ ಅಪರೂಪಕ್ಕೊಮ್ಮೆ ನೆಟ್‌ನತ್ತ ಧಾವಿಸುವ ಫೆಡ್‌ಗೂ ಬಹಳ ಅಂತರ. ವಿಂಬಲ್ಡನ್ ಮಟ್ಟಿಗೆ ಸರ್ವ್ ಮತ್ತು ವಾಲಿಯ ಪೀಟ್‌ಗೆ ಹೆಚ್ಚು ಅಂಕ.
ಬಹುಷಃ ಫೆಡರರ್‌ರ ಅಷ್ಟೂ ದಾಖಲೆಗಳು ರಪೆಲ್‌ರೆದುರು ಮಾತ್ರ ಸುಸ್ತು ಹೊಡೆಯುತ್ತವೆ. ಅವರು ನಡಾಲ್ ಎದುರು ಮಾತ್ರ ಕಳಪೆ ಎನ್ನಬಹುದಾದ ಏಳು ಗೆಲುವು, ೧೩ ಸೋಲಿನ ಅನುಪಾತ ಹೊಂದಿದ್ದಾರೆ. ಈವರೆಗೆ ಅವರು ಗ್ರಾನ್‌ಸ್ಲಾಂ ಫೈನಲ್‌ನಲ್ಲಿ ಸೋತದ್ದು ಐದು ಬಾರಿ, ಅಷ್ಟೂ ಬಾರಿ ಅದು ನಡಾಲ್ ಎದುರು! ಕ್ಲೇನಲ್ಲಿ ೯-೨ರ ಅನುಪಾತ ನಡಾಲ್ ಪರ. ಹುಲ್ಲು ಮತ್ತು ಹಾರ್ಡ್ ಕೋರ್ಟ್‌ನಲ್ಲಿ ಮಾತ್ರ ಫೆಡ್ ೫-೪ರಿಂದ ಮುಂದೆ. ನಿಜಕ್ಕಾದರೆ, ನಡಾಲ್‌ರನ್ನು ಕ್ಲೇ ಅಧಿಪತಿಯೆಂದು ಒಪ್ಪಿಕೊಂಡು ಆ ಮುಖಾಮುಖಿಯನ್ನು ಬದಿಗಿಟ್ಟು ನೋಡಿದರೆ ಫೆಡ್ ಇಂದಿಗೂ ಮೇಲುಗೈ ಸಾಧಿಸಿದವರೇ. ಆದರೆ ಗ್ರಾನ್‌ಸ್ಲಾಂಗಳ ಫೈನಲ್‌ಗಳಲ್ಲಿ ಫೆಡ್ ನಡಾಲ್ ಎದುರು ಅತಿ ಹೆಚ್ಚು ಪರಾಭವ ಕಂಡಿರುವುದು ನಡಾಲ್‌ರನ್ನು ಫೆಡ್ ಕ್ಯಾರಿಯರ್‌ನ ಕಪ್ಪು ಚುಕ್ಕೆ ಎನ್ನುವಂತಾಗಿದೆ ಅಷ್ಟೇ.
ಬರುವ ಆಗಸ್ಟ್ ೮ಕ್ಕೆ ೨೮ ಪೂರೈಸಲಿರುವ ರೋಜರ್ ಫೆಡರರ್ ಜರ್ಮನ್, ಫ್ರೆಂಚ್, ಇಂಗ್ಲೀಷ್ ಭಾಷೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಬಲ್ಲ ತಾಕತ್ತುಗಾರ. ಟೆನಿಸ್, ಇಲ್ಲದಿದ್ದರೆ ಫುಟಬಾಲ್‌ನಲ್ಲಿ ತನ್ನ ಕ್ರೀಡೆಯಾಗಿ ಫೆಡ್ ಆರಿಸಿಕೊಳ್ಳುತ್ತಿದ್ದರಂತೆ. ಅವರಿಗೆ ಇನ್ನೊಂದು ಆಟದ ಮೇಲೆಯೂ ವಿಶೇಷ ಪ್ರೀತಿ. ಅದು ಕ್ರಿಕೆಟ್! ಅಷ್ಟೇಕೆ, ಅವರು ಭಾರತಕ್ಕೆ ೨೦೦೬ರಲ್ಲಿ ಬಂದಿದ್ದರು. ಆಗ ತಮಿಳುನಾಡಿನಲ್ಲಿ ಜರುಗಿದ ‘ಸುನಾಮಿ ಸಂತ್ರಸ್ತರ ನೆರವಿನ ಪಂದ್ಯ’ದಲ್ಲಿ ಬ್ಯಾಟ್ ಬೀಸಿದ್ದರು!!
ಸದ್ಯಕ್ಕೆ ಈ ಅಪ್ರತಿಮ ಟೆನಿಸ್ ಪ್ರತಿಭೆಗೆ ಆತನ ಈವರೆಗೆನ ಸಾಧನೆಗೆ ಸಲಾಂ ಹೇಳೋಣ. ಈ ಪುಟದಲ್ಲಿ ಇನ್ನಷ್ಟು ಮತ್ತಷ್ಟು ಅವರ ಬಗ್ಗೆಬರೆಯುವ ಸಂದರ್ಭ ಮರುಕಳಿಸುತ್ತಿರುತ್ತದೆ. ಸೆಪ್ಟೆಂಬರ್‌ನಲ್ಲಿ ಯು.ಎಸ್. ಓಪನ್ ಬರಬೇಕಷ್ಟೇ. ಹೇಳಲು ಮರೆತಿದ್ದು - ನ್ಯೂಯಾರ್ಕ್‌ನ ಡೆಕೋ ಟರ್ಫ್ ಫೆಡರರ್‌ರ ಅಚ್ಚುಮೆಚ್ಚಿನ ಅಂಕಣ!
-ಮಾವೆಂಸ
0 comments:
200812023996 ಕಾಮೆಂಟ್ ಪೋಸ್ಟ್ ಮಾಡಿ