ಸೋಮವಾರ, ಜುಲೈ 6, 2009

ವಿಲಿಯಮ್ಸ್.. ವಿಲಿಯಮ್ಸ್... ವಿಲಿಯಮ್ಸ್....




ಬರುವ ವರ್ಷವಾದರೂ ಇಂಗ್ಲೆಂಡಿಗರು ಸಂಪ್ರದಾಯಗಳನ್ನು ಧಿಕ್ಕರಿಸಿ ವಿಂಬಲ್ದನ್‌ನ್ನು ರೂಪಿಸಬೇಕು. ಇಲ್ಲದಿದ್ದರೆ ಅವರಿಗೆ ಟೆಡ್ ಪೆರ್ರಿ ನಂತರ ಮತ್ತೆಂದೂ ಸ್ವದೇಶಿ ವಿಂಬಲ್ಡನ್ ಚಾಂಪಿಯನ್ ಸಿಗಲಾರರು. ಅದೇಕೋ ಏನೋ, ಉಪಾಂತ್ಯದ ಗಡಿಯನ್ನು ಅಲ್ಲಿನ ಗ್ರೆಗ್ ರುಸೆಡೆಸ್ಕಿ ದಾಟಿದ್ದಿಲ್ಲ. ಆಸೆಯ ಅಬ್ಬರವನ್ನೇ ಮೂಡಿಸಿದ್ದ ಟಿಂ ಹೆನ್ಮನ್ ಸ್ಪರ್ಧೆಯ ಕೊನೆಯ ಘಟ್ಟಕ್ಕೆ ಕಾಲಿಡಲೇ ಇಲ್ಲ. ಆ ಸಾಲಿನಲ್ಲಿ ಆಂಡಿ ಮರ್ರೆ ಸಂಪ್ರದಾಯವನ್ನು ಈ ಬಾರಿ ಮುಂದುವರಿಸಬೇಕೆ?
ಮರ್ರೆ ಬಗ್ಗೆ ಭರವಸೆಗಳಿರಲು ಕಾರಣಗಳಿತ್ತು. ೭೧ ವರ್ಷಗಳ ನಂತರ ವಿಂಬಲ್ಡನ್ ಮುನ್ನಿನ ಕ್ವೀನ್ಸ್ ಕ್ಲಬ್ ಗೆದ್ದಿದ್ದು ಈ ಇಂಗ್ಲೆಂಡಿಗ. ಹುಲ್ಲಿನಂಕಣ ಆತನಿಗೆ ಇಷ್ಟ. ಬಹುಷಃ ಆಲ್ ಇಂಗ್ಲೆಂಡ್ ಕ್ಲಬ್ ಅಧಿಕಾರಿಗಳು ಡ್ರಾ ನಿಗದಿಪಡಿಸುವಾಗ ಫೈನಲ್‌ವರೆಗೆ ಮರ್ರೆಗೆ ರೋಜರ್ ಫೆಡರರ್ ಎದುರಾಗದಂತೆ ನೋಡಿಕೊಂಡಿದ್ದರು. ಇವೆಲ್ಲ ತಂತ್ರಗಳೂ ಸಂಪ್ರದಾಯದ ಮುಂದೆ ಮಣಿದುಬಿಟ್ಟಿತು. ಉಪಾಂತ್ಯದವರೆಗೆ ಸಲೀಸಾಗಿ ಮುನ್ನುಗ್ಗಿದ ಮರ್ರೆ ಅಲ್ಲಿ ಆಂಡಿ ರ್‍ಯಾಡಿಕ್‌ರ ಎದುರು ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಪರಾಭವಗೊಂಡರು. ವಿಂಬಲ್ಡನ್‌ಗೆ ಅಂಟಿಕೊಂಡಂತೆ ಹೆನ್ಮನ್ ಗುಡ್ಡವಿದೆ. ಅಲ್ಲಿ ಬಡಾ ಸ್ಕೃನ್ ಅಳವಡಿಸಿ ಹೆನ್ಮನ್ ಆಡುವ ಪಂದ್ಯಗಳ ನೇರಪ್ರಸಾರ ಮಾಡಲಾಗುತ್ತಿತ್ತು. ಇನ್ನು ಮುಂದೆ ಹೆಚ್ಚೆಂದರೆ ಇಂಗ್ಲೆಂಡಿಗರು ಆ ಗುಡ್ಡದ ಹೆಸರನ್ನು ಮರ್ರೆಗೆ ವರ್ಗಾಯಿಸಬೇಕು ಮತ್ತು ಮರ್ರೆ ಉಪಾಂತ್ಯದವರೆಗೆ ಸಾಗುವುದನ್ನು ನೇರಪ್ರಸಾರ ಮಾಡಿ ಖುಷಿಪಡಬಹುದು!
ಪಂದ್ಯ ಎಂದರೆ ಏನು? ಜಿದ್ದಾಜಿದ್ದಿಯ ಹೋರಾಟ, ಹೊಸ ಹೊಸ ಕೋನಗಳಲ್ಲಿ ಆಟಗಾರರು ಬಾರಿಸುವ ಮನಮೋಹಕ ಹೊಡೆತ ಮತ್ತು ಜೊತೆಜೊತೆಗೆ ಆಟಗಾರರ ಕೋಪ, ನಿಟ್ಟುಸಿರು, ಅಂಕ ಗೆದ್ದ ಠೇಂಕಾರ... ಅವಿಲ್ಲದಿದ್ದರೆ ಪಂದ್ಯ ನೀರಸ. ಬಹುಷಃ ಎರಡು ರೋಬಾಟ್‌ಗಳು ಮನುಷ್ಯನ ತೊಗಲು ಹಚ್ಚಿಕೊಂಡು ಆಡಿದಂತಿರುತ್ತದೆ. ಅಂತಹ ಅನುಭವ ಬೇಕೆನ್ನುವವರು ವಿಲಿಯಮ್ಸ್ ಸಹೋದರಿಯರ ಈ ವರ್ಷದ ವಿಂಬಲ್ಡನ್ ಫೈನಲ್ ನೋಡಬೇಕಿತ್ತು!
ಹಿಂದೆ ತಂದೆ ರಿಚರ್ಡ್ಸ್‌ಗೆ ಇವರಿಬ್ಬರು ಮುಖಾಮುಖಿ ಆಗುವುದನ್ನು ತಪ್ಪಿಸುತ್ತಿದ್ದರು, ಒಂದೊಮ್ಮೆ ಫೈನಲ್‌ನಲ್ಲಿ ಎದುರಾದರೆ ಫಲಿತಾಂಶವನ್ನು ನಿರ್ದೇಶಿಸುತ್ತಿದ್ದರು ಎಂಬ ಆರೋಪವಿತ್ತು. ಇಂದು ಈ ವೀನಸ್ - ಸೆರೆನಾ ಬಾಳಲ್ಲಿ ರಿಚರ್ಡ್ಸ್‌ರ ಪಾತ್ರ ಕಡಿಮೆ. ಆತ ಪತ್ನಿಗೆ ಡೈವೋರ್ಸ್ ನೀಡಿ ಬೇರೆ ಮದುವೆಯಾಗಿದ್ದಾನೆ. ಅಕ್ಕ ತಂಗಿಯರು ಅಮ್ಮ ಓರಾಸಿನೇ ಪ್ರೈಸ್‌ರಿಗೆ ಅಂಟಿಕೊಂಡಿದ್ದಾರೆ. ಆದಾಗ್ಯೂ ಮೊನ್ನಿನ ಫೈನಲ್ ನೋಡಿದಾಗ ಅನಿಸಿದ್ದು, ಸೆರೆನಾರ ಗೆಲುವನ್ನು ಮೊದಲೇ ವಿಲಿಯಮ್ಸ್ ಕುಟುಂಬ ನಿರ್ಧರಿಸಿದಂತಿತ್ತು!
ಸಕಾರಣಗಳಿವೆ. ಸೆರೆನಾ ಸೆಮಿಫೈನಲ್‌ನಲ್ಲಿ ಎಲೆನಾ ಡೆಮೆಂಟಿವಾ ಎದುರು ಸರಿಸುಮಾರು ಮೂರು ತಾಸು ಕಾದಾಡಿ ಗೆದ್ದಿದ್ದರು. ಅದರ ಸುಸ್ತು ಫೈನಲ್‌ನಲ್ಲಿ ಪ್ರತಿಫಲಿಸಬೇಕಿತ್ತು. ಅತ್ತ ಅಕ್ಕ ವೀನಸ್ ನಿರಾಯಾಸವಾಗಿ ಅಗ್ರಕ್ರಮಾಂಕಿತೆ ದಿನಾರಾ ಸಫಿನಾರನ್ನು ಬಗ್ಗುಬಡಿದಿದ್ದರು. ಮುಖ್ಯವಾಗಿ, ಅಲ್ಲಿ ಅವರು ತೋರಿದ ಆಟ ಅತ್ಯದ್ಭುತ. ಅದರ ಅರ್ಧ ಭಾಗವನ್ನು ಫೈನಲ್‌ಗೆ ಎತ್ತಿಟ್ಟಿದ್ದರೂ ಅವರೇ ಗೆಲ್ಲುತ್ತಿದ್ದರು. ಸದರಿ ಪಂದ್ಯದುದ್ದಕ್ಕೂ ಸಹೋದರಿಯರು ತೋರಿದ ಶುಷ್ಕ ಭಾವ, ‘ಎಕ್ಸ್ಟ್ರಾ’ ಶ್ರಮ ಹಾಕದ ವರ್ತನೆ ಅನುಮಾನಗಳನ್ನು ಹೆಚ್ಚಿಸುತ್ತದೆ.
ವಿಂಬಲ್ಡನ್‌ನಲ್ಲಿ ವೀನಸ್‌ರಿಗೆ ಐದು ಪ್ರಶಸ್ತಿಗಳಿವೆ. ಸೆರೆನಾ ಬಳಿಯಿದ್ದುದು ಬರೀ ಎರಡು. ಅಲ್ಲೊಂದು ಖಾಜಿ ನ್ಯಾಯ ಮಾಡಲು ವಿಲಿಯಮ್ಸ್ ಕುಟುಂಬ ಪ್ರಯತ್ನಿಸಿವೆಯೇ? ಅಂತಹ ಅನುಮಾನಗಳಿಗೆ ಅವಕಾಶವಿದೆ. ಈ ಹಿಂದೆ ಕ್ರಿಕೆಟ್‌ನಲ್ಲಿ ಮ್ಯಾಚ್‌ಫಿಕ್ಸಿಂಗ್ ಆರೋಪಗಳು ಬಂದಾಗಲೂ ಅದನ್ನು ಸಿನಿಕತನ ಎಂದು ತಳ್ಳಿಹಾಕಿದವರಿದ್ದರು. ಕೊನೆಗೆ ಅವಘಡ ಬಯಲಾಗಿತ್ತು. ಇಲ್ಲೂ ಹಾಗಾಗುತ್ತಿದೆಯೇ?
ಹಾಗೆಂದ ಮಾತ್ರಕ್ಕೆ ಸೆರೆನಾ ವಿಲಿಯಮ್ಸ್‌ರ ಪ್ರತಿಭೆಯ, ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಅಕ್ಕ ವೀನಸ್‌ರಿಗಿಂತ ಹೆಚ್ಚು ಪ್ರಖರ ತಾಕತ್ತು ಸೆರೆನಾಗಿದೆ ಎಂಬುದನ್ನು ಖುದ್ದು ರಿಚರ್ಡ್ಸ್ ಹೇಳಿದ್ದಿದೆ. ಆಕೆ ಇದೂ ಸೇರಿ ಹನ್ನೊಂದು ಗ್ರಾನ್‌ಸ್ಲಾಂ ಸಿಂಗಲ್ಸ್ ಗೆದ್ದಿರುವುದೂ ಸಾಕ್ಷಿಯಾದೀತು. ಅಕ್ಕನೆದುರು ಆಡಿದ ೨೧ ಪಂದ್ಯಗಳಲ್ಲಿ ೧೧ ಪಂದ್ಯ ಗೆದ್ದದ್ದು ಒಂದೆಡೆಯಾದರೆ, ಗ್ರಾನ್‌ಸ್ಲಾಂ ಫೈನಲ್‌ನ ಆರು ಮುಖಾಮುಖಿಯಲ್ಲಿ ನಾಲ್ಕು ಬಾರಿ ವಿಜೇತೆಯಾಗಿದ್ದಾರೆ. ಸ್ವಾರಸ್ಯವೆಂದರೆ, ೧೨೩ನೇ ವಿಂಬಲ್ಡನ್ ಸಂಚಿಕೆಯಲ್ಲಿ ಹಾಲಿ ಚಾಂಪಿಯನ್ ವೀನಸ್ ತಮ್ಮದೇ ಹೆಸರಿನ ‘ವೀನಸ್ ರೋಸ್ ವಾಟರ್ ಡಿಶ್’ ಟ್ರೋಫಿ ಗೆಲ್ಲಲು ವಿಫಲರಾದರು!
ಸಿಂಗಲ್ಸ್ ಅನುಮಾನಗಳೇನೇ ಇರಲಿ, ಇವರಿಬ್ಬರು ಒಟ್ಟಾಗಿ ಡಬಲ್ಸ್ ಆಡಿದರೆ ಎದುರಾಳಿಗಳು ಅಕ್ಷರಶಃ ತತ್ತರ. ಶೇ. ೮೭ರ ಗೆಲುವಿನ ಸಾಧನೆ ಸಾಮಾನ್ಯವೇ? ಒಟ್ಟು ಒಂಬತ್ತು ಡಬಲ್ಸ್ ಹಾಗು ಎರಡು ಮಿಕ್ಸೆಡ್ ಡಬಲ್ಸ್ ಸ್ಲಾಂ ಗೆದ್ದಿದ್ದಾರೆ. ಅದು ಈ ಬಾರಿಯ ವಿಂಬಲ್ಡನ್‌ನ ಚಿತ್ರಕಥೆ ಕೂಡ. ಇವರಿಗೆ ಮೂರನೇ ಶ್ರೇಯಾಂಕ ಕೊಟ್ಟಿದ್ದು ಅದಾವುದೋ ವಾರ್ಷಿಕ ಅಂಕಿಅಂಶದ ಮೇಲೆ. ಅಲ್ಲೂ ಇವರದ್ದು ಅದ್ವಿತೀಯ ಗೆಲುವು. ಅದಕ್ಕೇ ಶೀರ್ಷಿಕೆಯಲ್ಲಿ ಹೇಳಿದ್ದು, ವಿಲಿಯಮ್ಸ್.. ವಿಲಿಯಮ್ಸ್... ವಿಲಿಯಮ್ಸ್....!
ಜಸ್ಟಿನ್ ಹೆನಿನ್‌ರ ನಿವೃತ್ತಿಯಿಂದ ಮಹಿಳಾ ಟೆನಿಸ್‌ಗೆ ತೀವ್ರ ಧಕ್ಕೆಯಾಗಿದೆ. ಹೆನಿನ್ ವಿಲಿಯಮ್ಸ್ ಸಹೋದರಿಯರ ಸವಾಲಿಗೆ ತಕ್ಕ ಉತ್ತರ ನೀಡುತ್ತಿದ್ದರು. ಅವರ ಫಲಿತಾಂಶಗಳಿಂದ ಪ್ರೇರಿತರಾದ ಉಳಿದ ಆಟಗಾರ್ತಿಯರು ಸೆರೆನಾ ವೀನಸ್‌ರನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದರು. ಬಹುಷಃ ಅಗ್ರಕ್ರಮಾಂಕಿತೆಯಾಗಿ ದಿನಾರಾ ಉಪಾಂತ್ಯದಲ್ಲಿ ವೀನಸ್ ಎದುರು ಪರಾಭವಗೊಂಡ ರೀತಿ, ಮಾರಿಯಾ ಶರಪೋವಾ, ಜೆಲೆನಾ ಜಾಂಕೋವಿಕ್‌ರ ಮುಗ್ಗರಿಸುವಿಕೆ ಒಳ್ಳೆಯ ಸಂದೇಶ ನೀಡುತ್ತಿಲ್ಲ. ಅಚಾನಕ್ ಆಗಿ ನಿವೃತ್ತಿ ಘೋಷಿಸಿದ್ದ ಕಿಂ ಕ್ಲಿಸ್ಟರ್‍ಸ್ ಮತ್ತೆ ರ್‍ಯಾಕೆಟ್ ಝಳಪಿಸಲಾರಂಭಿಸಿದ್ದಾರೆ. ಅವರ ಸಮಕಾಲೀನೆಯಾಗಿ ಜಸ್ಟಿನ್ ಹೆನಿನ್ ಕೂಡ ಉತ್ತೇಜಿತರಾಗಿ ವೃತ್ತಿಪರ ಟೆನಿಸ್‌ಗೆ ಮರಳಿ ಬಂದರೆ ಚೆನ್ನ. ಆದೀತೆ? ಅಷ್ಟಕ್ಕೂ ಹೆನಿನ್‌ಗಿನ್ನೂ ೨೭ ವರ್ಷ. ವೀನಸ್‌ಗಾಗಲೆ ೨೯!
ಗೊತ್ತಿಲ್ಲ. ಅಲ್ಲಿಯತನಕ ವಿಲಿಯಮ್ಸ್ ಸಹೋದರಿಯರ ಪ್ರಾಬಲ್ಯಕ್ಕೆ ಸಾಕ್ಷಿಯಾಗಬೇಕು.

-ಮಾವೆಂಸ

2 comments:

ಹರೀಶ ಮಾಂಬಾಡಿ ಹೇಳಿದರು...

ಎರಡು ರೋಬಾಟ್‌ಗಳು ಮನುಷ್ಯನ ತೊಗಲು ಹಚ್ಚಿಕೊಂಡು ಆಡಿದಂತಿರುತ್ತದೆ..! ಈ ‘ತಾರೆ’ಯರನ್ನು ನೋಡಿದಾಗ
ನನ್ನನ್ನೂ ಕಾಡುತ್ತಿದ್ದ ಅನುಮಾನಗಳು. ನೀವದನ್ನು ಬಿಡಿಸಿ ಹೇಳಿದ್ದೀರಿ..
(ಮಾರ್ಟಿನಾರಂತೆ ಇಡೀ ಮಹಿಳಾ ಟೆನ್ನಿಸ್ ಸಾಮ್ರಾಜ್ಯವನ್ನು ಇವರಿ ಇನ್ನು ಎಸ್ಟು ವರ್ಷ ಅಳುತ್ತಾರೋ)

ಮಾವೆಂಸ ಹೇಳಿದರು...

*ಮಾಂಬಾಡಿ,
ಕೊನೆ ಪಕ್ಷ ಚಂದದ ಹುಡುಗಿಯರು ಗ್ರಾನ್ ಸ್ಲಾಂನ ಎರಡನೆ ವಾರ ಬಾಳಿದ್ದರೆ ಸಾಕಿತ್ತು! ನನ್ನ ಅಭಿಪ್ರಾಯಕ್ಕೆ ಕೈ ಎತ್ತಿದ್ದಕ್ಕೆ ಥ್ಯಾಂಕ್ಸ್....

 
200812023996