ನಿಮಗೇನು ಅನಿಸೀತೋ ಗೊತ್ತಿಲ್ಲ, ನಾನಂತೂ ಗಾಬರಿಗೆ ಬಿದ್ದೆ. ಆ ಪರಿಯಲ್ಲಿ ಖಾಸಗಿ ಟಿವಿ ವಾಹಿನಿಯಲ್ಲಿ ಸುದ್ದಿವಾಚಕಿ ಉಲಿಯುತ್ತಿದ್ದಳು, ‘ಐಸಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಇನ್ನು ಮುಂದೆ ಅದಕ್ಕೆ ಟ್ವೆಂಟಿ ೨೦ಯ ಎರಡು ಇನ್ನಿಂಗ್ಸ್ ಮಾದರಿಯನ್ನು ಅಳವಡಿಸುತ್ತದೆ!’ ಕ್ರಿಕೆಟ್‌ನ ಭವಿಷ್ಯಕ್ಕೆ ಖುದ್ದು ಐಸಿಸಿಯೇ ಖಳನಾಯಕನಂತೆ ವರ್ತಿಸುತ್ತಿರುವುದು ನಿಜ, ಆದರೆ ಮೇಲಿನ ಕ್ರಮ ನೋಡಿದರಂತೂ ಐಸಿಸಿ ಕೊಲೆಗಾರ ಎನ್ನಿಸಿಬಿಡುತ್ತದೆ!
ಟಿ೨೦ ಟೆಸ್ಟ್ ಕಲ್ಪನೆಯ ಹಂದರ ಹೊರಬಿದ್ದಿರುವುದು ಭಾರತದಿಂದ. ಚಂದು ಬೋರ್ಡೆ, ಸಯ್ಯದ್ ಕಿರ್ಮಾನಿ ಈ ಸಲಹೆಯನ್ನು ತೂರಿದಂತಿದೆ. ಇವರ ಪ್ರಕಾರ, ಬರೀ ೮೦ ಓವರ್‌ಗಳಲ್ಲಿ ಒಂದು ಟೆಸ್ಟ್ ಅಂತ್ಯ ಕಾಣುತ್ತದೆ. ತಲಾ ಇಪ್ಪತ್ತು ಓವರ್‌ಗಳ ಎರಡು ಇನ್ನಿಂಗ್ಸ್‌ಗಳು ಇರುತ್ತವೆ. ಮತ್ತೆ ಗೆಲುವಿಗೆ ೨೦ ವಿಕೆಟ್ ಗಳಿಸುವ ಪ್ರಶ್ನೆಯಿಲ್ಲ. ಹೆಚ್ಚು ರನ್ ಸಂಪಾದಿಸಿದರೆ ಸಾಕು. ಕಿರ್ಮಾನಿಯವರಂತೂ ಇದಕ್ಕೆ ಒಗ್ಗರಣೆ ಹಾಕುತ್ತಾರೆ, ‘ಒಟ್ಟು ೧೩ ಜನರ ತಂಡಕ್ಕೆ ಅವಕಾಶ ನೀಡಬೇಕು. ಎರಡನೇ ಇನ್ನಿಂಗ್ಸ್‌ನಲ್ಲಿ ಈ ಇಬ್ಬರು ಆಟಗಾರರನ್ನು ಬೇಕಿದ್ದರೆ ಬದಲಿಯಾಗಿ ಬಳಸಿಕೊಳ್ಳುವಂತಿರಬೇಕು!"
ಹೊಡಿ ಬಡಿ ಕ್ರಿಕೆಟ್‌ನ ಬೌಂಡರಿ, ಸಿಕ್ಸ್‌ಗಳನ್ನು ಆನಂದಿಸುವವರಿಗೆ ಟೆಸ್ಟ್ ಕ್ರಿಕೆಟ್‌ನ ಅಸಲಿಯತ್ತು ಅರ್ಥವಾಗುವುದು ಕಷ್ಟ. ಏಕದಿನ ಕ್ರಿಕೆಟ್‌ನಲ್ಲಿ ಚೇತನ್ ಶರ್ಮ ಶತಕ ಬಾರಿಸುತ್ತಾರೆ. ಕೆ.ಶ್ರೀಕಾಂತ್ ಐದು ವಿಕೆಟ್‌ಗಳ ಸರದಾರರಾಗಿಬಿಡುತ್ತಾರೆ. ಟಿ೨೦ಯಲ್ಲಿ ಬೀಸುದಾಂಡಿನ ಬಾಲಂಗೋಚಿ ಅರ್ಧ ಶತಕ ಇಟ್ಟುಬಿಡಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್, ಬೌಲರ್‌ಗಳಿಬ್ಬರ ನಿಜವಾದ ಸಾಮರ್ಥ್ಯ ಪಣಕ್ಕಿಡಲ್ಪಡುತ್ತದೆ. ಕಿವಿ ಪಕ್ಕ ಹಾದು ಹೋಗುವ ಚೆಂಡುಗಳ ಸರಮಾಲೆ, ವಿಕೆಟ್‌ನ ಆಚೀಚೆ ಕೈಕುಲುಕುವ ದೂರದಲ್ಲಿ ಫೀಲ್ಡರ್‌ಗಳ ಸಂತೆ, ಹಾವಿನಂತೆ ನುಸುಳಿ ಬರುವ ಕೆಂಪು ಚೆಂಡು, ಮಳೆ ಬಾರದೆ ಬಿರುಕು ಬಿಟ್ಟ ಹೊಲದಂತಿರುವ ಪಿಚ್‌ಗಳೆಲ್ಲ ಬ್ಯಾಟ್ಸ್‌ಮನ್‌ನ ತಾಳ್ಮೆ, ತಾಂತ್ರಿಕತೆಯನ್ನು ಪರಿಶೀಲಿಸುತ್ತದೆ. ಬೌಲರ್‌ಗಳಿಗೂ ಅಗ್ನಿಪರೀಕ್ಷೆಯೇ, ಬ್ಯಾಟ್ಸ್‌ಮನ್ ಸುಮ್ಮಸುಮ್ಮನೆ ಹೊರಹೋಗುವ ಚೆಂಡು ಮುಟ್ಟುವ ಗೋಜಿಗೆ ಹೋಗುವುದಿಲ್ಲ. ಉತ್ತಮ ಚೆಂಡು ಹಾಕದಿದ್ದರೆ ವಿಕೆಟ್ ಕಬಳಿಕೆ ಸುಲಭವಲ್ಲ! ಮುಖ್ಯವಾಗಿ, ೨೦-೩೦ ಓವರ್‌ಗಳನ್ನು ಒಂದೇ ಇನ್ನಿಂಗ್ಸ್‌ನಲ್ಲಿ ಎಸೆಯುವ ದೈಹಿಕ ತಾಕತ್ತನ್ನು ಕಾಪಾಡಿಕೊಳ್ಳಬೇಕಾಗುವುದು. ಇನ್ನೊಂದು ಇನ್ನಿಂಗ್ಸ್ ಬೇರೆ ಆಡಲಿಕ್ಕಿದೆ!
ಟೆಸ್ಟ್ ಕ್ರಿಕೆಟ್‌ನಲ್ಲಿ ೮೦ ಓವರ್‌ಗಳ ಗಡಿಯಲ್ಲೊಂದು ಭಯ. ನಂತರ ನೋಡಿ, ‘ನ್ಯೂ ಬಾಲ್ ಡ್ಯೂ’ ಅಂದರೆ ಇನ್ನಿಂಗ್ಸ್‌ನಲ್ಲಿ ೮೦ ಓವರ್ ನಂತರ ಹೊಸ ಚೆಂಡನ್ನು ಫೀಲ್ಡಿಂಗ್ ನಾಯಕ ತೆಗೆದುಕೊಳ್ಳಬಹುದು. ಬಹುಪಾಲು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ ಹೊಸ ಚೆಂಡು ಎದುರಿಸುವ ಅನುಭವ ಇರುವುದಿಲ್ಲ. ಇಂತಹ ವೇಳೆ ಕೆಂಡ ಹಾಯಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಬಹುಷಃ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಚೆಂದದ ನಿಯಮವೇ ಈ ನ್ಯೂ ಬಾಲ್ ಡ್ಯೂ!
ಇತ್ತೀಚಿನ ಕ್ರಿಕೆಟ್ ನಿಯಮಗಳಲ್ಲಿ ರಿವರ್ಸ್ ಸ್ವಿಂಗ್ ಎಂಬ ಬೌಲಿಂಗ್ ಮಾಂತ್ರಿಕ ತಂತ್ರ ಕಣ್ಮರೆಯಾಗಿಬಿಟ್ಟಿದೆ. ಟ್ವೆಂಟಿಯಲ್ಲಿ ಚೆಂಡು ಹಳೆಯದಾಗದ್ದು ಕಾರಣವಾದರೆ ಏಕದಿನ ಇನ್ನಿಂಗ್ಸ್‌ನ ೩೪ನೇ ಓವರ್‌ಗೆ ಮತ್ತೆ ಹೊಸ ಚೆಂಡು ಬಳಸುವ ಕಾನೂನಿನಿಂದ ರಿವಸ್ ಸ್ವಿಂಗ್‌ಗೆ ಚೆಂಡು ಪಕ್ವವಾಗುವುದೇ ಇಲ್ಲ. ಅಂದರೆ ಇಂತದೊಂದು ಜಾಣ್ಮೆಯನ್ನು ನೋಡಲು ಮತ್ತೆ ನಾವು ಟೆಸ್ಟ್ ಕ್ರಿಕೆಟ್‌ಗೇ ಬರಬೇಕು.
ಹಳೆಯದಾದ ಚೆಂಡಿನ ಒಂದು ಮೈಯ ಹೊಳಪನ್ನು ಹಾಗೆಯೇ ಉಳಿಸಿಕೊಂಡು ಇನ್ನೊಂದು ಮಗ್ಗುಲನ್ನು ತಿಕ್ಕಿ ಸವೆಸಿಬಿಟ್ಟರೆ ಚೆಂಡು ಬೌಲ್ ಮಾಡಿದಾಗ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳಬಲ್ಲದು. ಗಾಳಿಯಲ್ಲಿ ತಿರುವ ಪಡೆಯುವುದೇ ಅದ್ಭುತ. ಫುಲ್ ಲೆಂಗ್ತ್‌ಗೆ ಪಿಚ್ ಆಗುವ ಚೆಂಡನ್ನು ಬ್ಯಾಟ್ಸ್‌ಮನ್ ನಿರಾಯಾಸವಾಗಿ ಎಕ್ಟ್ರಾ ಕವರ್‌ಗೆ ಬಾರಿಸುವ ಪ್ರಶ್ನೆ ಇಲ್ಲ! ಸಾವಿರ ಕಣ್ಣು ಇಟ್ಟುಕೊಂಡು ರಿವರ್ಸ್ ಸ್ವಿಂಗ್‌ನ್ನು ಕಟ್ಟಿ ಹಾಕಬೇಕು. ಅಂತಹ ಪ್ರತಿಭಾಶಾಲಿಯನ್ನು ಮಾತ್ರ ನಾವು ‘ಟೆಸ್ಟ್ ದರ್ಜೆಯ ಬ್ಯಾಟ್ಸ್‌ಮನ್’ ಎನ್ನಬಹುದು. ಟೆಸ್ಟ್ ಕ್ರಿಕೆಟ್‌ನ ಹಳೆಯ ಮಾದರಿಯೇ ಇಲ್ಲ ಎಂತಾದರೆ ನಾವು ಫಾಸ್ಟ್ ಫುಡ್ ಉಣ್ಣುವವರಾಗುತ್ತೇವೆ. ನಿಜಕ್ಕೂ ರಾಗಿ ಮುದ್ದೆ, ಅನ್ನ ಸಾಂಬಾರಿನ ರುಚಿಯಿಂದ ನಾಲಿಗೆ ವಂಚಿತವಾಗುತ್ತದೆ!
ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನ ಆಸಕ್ತಿಯನ್ನು ಆರಿಸುವುದರಲ್ಲಿ ಐಸಿಸಿಯದೇ ಪ್ರಮುಖ ಪಾತ್ರವಿದೆ. ೨೦, ಒನ್‌ಡೇಗಳಿಗೆ ಶುಷ್ಕ ಬ್ಯಾಟಿಂಗ್ ಪಿಚ್ ಮಾಡುವ ಪ್ರಕ್ರಿಯೆ ಈಗ ಟೆಸ್ಟ್‌ಗೂ ಲಂಬಿಸಿದೆ. ಇದು ಬೃಹತ್ ಮೊತ್ತಗಳ ನೀರಸ ಡ್ರಾಗೆ ಕಾರಣವಾಗುತ್ತದೆ. ಮೇಲೆ ಹೇಳಿದ ಯಾವುದೇ ತಾಕತ್ತು ಪರೀಕ್ಷೆ ಕಷ್ಟ ಕಷ್ಟ. ರನ್ ಸುರಿಮಳೆಯೊಂದೇ ಕ್ರಿಕೆಟ್ ಆಟದ ಸರಕಲ್ಲವಲ್ಲ, ಜನ ಮುಖ ತಿರುವಿ ಹೋಗದೆ ಇನ್ನೇನು ಮಾಡಿಯಾರು?
ಅದೃಷ್ಟಕ್ಕೆ, ಟ್ವೆಂಟಿ ೨೦ ಟೆಸ್ಟ್‌ಗೆ ಧಾರಾಳ ವಿರೋಧವಿದೆ. ಭಾರತದಲ್ಲಿಯೇ ಸಂದೀಪ್ ಪಾಟೀಲ್, ಪ್ರಸನ್ನ, ಅಜಿತ್ ವಾಡೇಕರ್ ಸ್ಪಷ್ಟವಾಗಿ ಹೊಸ ಯೋಚನೆಯನ್ನು ಅಪಕ್ವ ಎಂದಿದ್ದಾರೆ. ಈ ಕಲ್ಪನೆಯ ಕೂಸು ಭಾರತದಲ್ಲಿ ಹುಟ್ಟಿದ್ದರಿಂದ ಯಾಕೋ ಚರ್ಚೆ ವಿಶ್ವ ಮಟ್ಟಕ್ಕೆ, ಇತರ ದೇಶಗಳ ಆಟಗಾರರ ಅಭಿಪ್ರಾಯಕ್ಕೆ ಹೋಗಿಲ್ಲ.
ಐಸಿಸಿ ನಿಯಮಗಳ ಪ್ರಕಾರವೂ ಒಮ್ಮೆಗೇ ಚಾಲ್ತಿಗೆ ಬರಲಿಕ್ಕಿಲ್ಲ. ಮೊತ್ತಮೊದಲು ಸಲಹೆ ಐಸಿಸಿಯ ಕ್ರಿಕೆಟ್ ಕಮಿಟಿಯಲ್ಲಿ ಚರ್ಚೆಯಾಗಬೇಕು. ಅವರು ಶಿಫಾರಸು ಮಾಡಿದರೆ ಮಾತ್ರ ಚೀಫ್ ಎಕ್ಸಿಕ್ಯುಟಿವ್ ಕಮಿಟಿ ಮುಂದೆ ವಿಚಾರ ಮಂಡನೆಯಾಗುತ್ತದೆ. ಇಲ್ಲಿ ಒಪ್ಪಿಗೆ ಸಿಕ್ಕರೆ ಅಂತಿಮ ಪರಿಶೀಲನೆಗೆ ಎಕ್ಸಿಕ್ಯುಟಿವ್ ಬೋರ್ಡ್ ಕಾರ್ಯೊನ್ಮುಖವಾಗುತ್ತದೆ. ವಿಚಾರ ಪ್ರಕ್ರಿಯೆಯದಲ್ಲ, ಒಂದೊಮ್ಮೆ ಐಸಿಸಿಯ ಮುಖ್ಯ ಕಛೇರಿಗೆ ಒಂದು ನಿಯಮವನ್ನು ಜಾರಿಗೆ ತಕ್ಷಣ ತರಬೇಕು ಎಂತಾದರೆ ಮೊದಲಿನೆರಡು ಹಂತಗಳು ದಡಕ್ಕನೆ ಪೂರೈಸಿಬಿಡಲಾಗುತ್ತದೆ!
ಕ್ರಿಕೆಟ್‌ನ ದುರಂತವಿರುವುದೇ ಅದರ ಚಿಂತನೆಯಲ್ಲಿ. ಅದರ ನಿರ್ವಾಹಕರು ಅದನ್ನು ಒಂದು ಆಟವಾಗಿ ಪರಿಗಣಿಸದೆ ಮಾರಾಟದ ಸರಕಾಗಿ ಯೋಚಿಸುತ್ತಿರುವುದೇ ಅಧ್ವಾನಗಳಿಗೆ ಕಾರಣ. ಟಿ೨೦ಯ ಭ್ರಾಮಕ ಜಗತ್ತಿನಲ್ಲೇ ಬಾಳಲು ಐಸಿಸಿಯು ನಿರ್ಧರಿಸಿದ್ದರೆ ಅಪಾಯ ದೊಡ್ಡದು. ಅದೊಂದು ರೀತಿ, ಬೇಲಿಯೇ ಎದ್ದು ಹೊಲ ಮೆಂದು, ಉತ್ಕೃಷ್ಟ ಭೂಮಿಯನ್ನು ಹಾಳುಗೆಡವಿದಂತೆ.
ಇದೇ ಸತ್ಯವಾಗಿಬಿಡುತ್ತದೆಯೇ? ಓಹ್, ದೇವರೇ, ಆಗ ಟೆಸ್ಟ್ ಕ್ರಿಕೆಟ್‌ನ್ನು ಕಾಪಾಡಲು ನಿನ್ನಿಂದ ಮಾತ್ರ ಸಾಧ್ಯ!!
-ಮಾವೆಂಸ