ಭಾನುವಾರ, ಡಿಸೆಂಬರ್ 28, 2008

ವಡಫೋನ್ - ತಾಳ ತಪ್ಪಿದ ಸಂಗೀತ !


ಮೊಬೈಲ್ ಟಾಕ್-
ಎಲ್ಲರಲ್ಲೂ ಮೊಬೈಲ್ ಇದೆ. ಸೆಟ್‌ನಲ್ಲಿರುವ ನಾನಾ ತರದ ಆಟ, ಸೌಲಭ್ಯಗಳ ಅರಿವೂ ನಮಗಿದೆ. ದುರಂತವೆಂದರೆ ಅಗತ್ಯವಾಗಿ ಗೊತ್ತಿರಬೇಕಿದ್ದ ಕೆಲವು ಮೊಬೈಲ್ ಕಾನೂನುಗಳೂ ನಮಗೆ ಗೊತ್ತಿಲ್ಲ. ಈ ಲೇಖನದಿಂದ ಆರಂಭಿಸಿ ನನಗೆ ಗೊತ್ತಿರುವ ಹಲವು ಗ್ರಾಹಕ ಸ್ನೇಹಿ ಮೊಬೈಲ್ ಕಾನೂನುಗಳ ಬಗ್ಗೆ ಇಲ್ಲಿ ಬರೆಯಲಿದ್ದೇನೆ. ನಿಜಕ್ಕೂ ನಿಮ್ಮ ಪ್ರತಿಕ್ರಿಯೆ ನನಗೆ ಟಾನಿಕ್!


* ಚಂದಾದಾರರ ಒಪ್ಪಿಗೆ ಅತ್ಯಗತ್ಯ
* ವಡಫೋನ್ ಕಾಲರ್‌ಟೋನ್ - 
ಸಂಗೀತಮಯ ಕತ್ತರಿ!
* ಡಿಯಾಕ್ಟಿವೇಷನ್ ಸಂದೇಶಕ್ಕೆ 
ಶುಲ್ಕ - ಆಕ್ಷೇಪ
* ಗ್ರಾಹಕರ ಪರ ಟ್ರಾಯ್ ಕಾಯ್ದೆಮೊಬೈಲ್ ಬಳಕೆದಾರರು ಈ ಕ್ಷೇತ್ರದ ಕಾನೂನುಗಳ ಬಗ್ಗೆ ಮಾಹಿತಿ ಹೊಂದಿರುವುದರ ಅಗತ್ಯವನ್ನು ಈ ಘಟನೆ ಪ್ರತಿಪಾದಿಸುತ್ತದೆ. 
ನಾನು ವಡಫೋನ್ ಮೊಬೈಲ್ ಗ್ರಾಹಕ. ಈ ಅಂತರಾಷ್ಟ್ರೀಯ ಕಂಪನಿ ಗ್ರಾಹಕ ಸೇವೆಯಲ್ಲಿ ವಿಶ್ವಕ್ಕೇ ಮಾದರಿಯೆನಿಸುವಂತಿದೆ ಎಂಬುದನ್ನು ನನ್ನ ನಂಬಿಕೆಯಾಗಿತ್ತು. ಇದ್ದಕ್ಕಿದ್ದಂತೆ ಒಂದು ದಿನ ವಡಫೋನ್‌ನಿಂದ ನನಗೊಂದು ಎಸ್‌ಎಂಎಸ್ ಬಂದಿತ್ತು. ಅದರ ಪ್ರಕಾರ ಹಚ್ ಒಂದು ತಿಂಗಳ ಅವಧಿಗೆ ಉಚಿತ ಕಾಲರ್‌ಟೋನ್ ಸೇವೆಯನ್ನು ಕೊಡುವುದಾಗಿ ತಿಳಿಸಿತ್ತು. ಅದೇ ಸಂದೇಶದಲ್ಲಿ ನಂತರ ಪ್ರತಿ ತಿಂಗಳಿಗೆ ೩೦ ರೂ. ಚಂದಾದಾರ ಎಂಬುದನ್ನೂ ಹೇಳಿತ್ತು. ಉಚಿತವನ್ನು ಬಿಡುವುದುಂಟೇ ? ನಾನು ‘ಎಸ್’ ಎಂಬ ಎಸ್‌ಎಮ್‌ಎಸ್ ಒಪ್ಪಿಗೆ ಕೊಟ್ಟು ಉಚಿತ ಕಾಲರ್‌ಟೋನ್ ಪಡೆದೆ. ಎಲ್ಲವೂ ನನ್ನ ನಂಬರ್‌ಗೆ ಡಯಲ್ ಮಾಡುವವರಿಗಾಗಿ!
ಕಾಲರ್‌ಟೋನ್ ಅಕ್ಟಿವೇಟ್ ಆದದ್ದು ಜೂನ್ ೨೯ರಂದು. ಜುಲೈ ೨೮ರಂದು ವಡಫೋನ್‌ನಿಂದ ಇನ್ನೊಂದು ಎಸ್‌ಎಂಎಸ್ ಬಂತು ‘ನೀವು ಒಂದು ತಿಂಗಳ ಕಾಲರ್‌ಟೋನ್ ಟ್ರಯಲ್ ಸೇವೆ ಅನುಭವಿಸಿದ್ದೀರಿ. ನಿಮ್ಮ ಕರೆದಾತರು ಟ್ರಿನ್ ಟ್ರಿನ್‌ನಿಂದ ಬೇಸರಗೊಳ್ಳದಿರಲು ಕಾಲರ್‌ಟೋನ್ ಮುಂದುವರಿಸಬಹುದು. ಆಕ್ಟಿವೇಟ್ ಮಾಡಲು ‘ಎಸ್’ ಎಂದು ೯೯೭ಗೆ ಸಂದೇಶ ಕಳಿಸಿ, ಬಾಡಿಗೆ ಮಾಸಿಕ ೩೦ ರೂ.
ಅಗತ್ಯವಿದೆ ಎನಿಸಲಿಲ್ಲ. ಹಾಗಾಗಿ ಯಾವುದೇ ‘ಎಸ್’ ಎಸ್‌ಎಂಎಸ್ ಮಾಡದೆ ನಾನು ಸುಮ್ಮನುಳಿದೆ.. ಜುಲೈ ಮೊದಲವಾರ ನೋಡುತ್ತೇನೆ, ಕಾಲರ್ ಟೋನ್ ಮುಂದುವರೆದಿದೆ! ಖಾತೆಯಿಂದ ೩೦ ರೂ. ಕೂಡ ಕತ್ತರಿಸಿ ನುಂಗಲಾಗಿದೆ. ತಕ್ಷಣಕ್ಕೆ ವಡಫೋನ್‌ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿದ್ದಾಯ್ತು. ಊಹ್ಞೂ, ಇಲ್ಲಿರುವ ಮಂದಿಗೆ ಸುತರಾಂ ಕಾನೂನು ಗೊತ್ತಿಲ್ಲ. ‘ನೀವು ಡಿಯಾಕ್ಟೀವ್ ಮಾಡಬೇಕಾಗುತ್ತೆ ಸರ್’ ಎಂಬುದಷ್ಟೇ ಅವರ ಉತ್ತರ.
ಕಸ್ಟಮರ್ ಕೇರ್‌ನಲ್ಲಿ ಮಾತನಾಡುವವರಿಗೆ ಹೆಚ್ಚೆಂದರೆ ಕಂಪನಿಯ ಪ್ಲಾನ್‌ಗಳು, ಟ್ಯಾರಿಫ್ ಗೊತ್ತಷ್ಟೇ. ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಜ್ಞಾನ, ಅಧಿಕಾರಗಳೆರಡೂ ಅವರಿಗೆ ಇದ್ದಂತಿಲ್ಲ. ಸಮಸ್ಯೆಗಳನ್ನು ತೇಲಿಸಿ ಗ್ರಾಹಕರ ದಿಕ್ಕು ತಪ್ಪಿಸುವಲ್ಲಿ ಅವರು ಚಾಣಾಕ್ಷರು, ಎಚ್ಚರವಿರಲಿ.
ನನ್ನ ವಾದ, ಟ್ರಾಯ್ ನಿರ್ದೇಶನದ ಉಲ್ಲೇಖ ಫಲ ನೀಡಲಿಲ್ಲ. ಅವರಿಂದಲೇ ದೂರಿನ ಡಾಕೆಟ್ ಸಂಖ್ಯೆ (ಮುಂದಿನ ಹಂತದ ದೂರುಗಳಿಗೆ ಈ ಡಾಕೆಟ್ ಸಂಖ್ಯೆ ಬೇಕೇ ಬೇಕು. ಇದು ಇಲ್ಲದಿದ್ದಲ್ಲಿ ನಿಸ್ಸಂಕೋಚವಾಗಿ ನಿರ್ಲಕ್ಷಿಸುತ್ತಾರೆ. ಆ ಮಟ್ಟಿಗೆ ಅವರದ್ದು ಕಾನೂನು ಪಾಲನೆ !) ಮತ್ತು ನೋಡಲ್ ಅಧಿಕಾರಿಯ ವಿವರ ಅಂತರ್ಜಾಲ ವಿಳಾಸ ಪಡೆದೆ. ಕೇಳಿದ ತಕ್ಷಣ ಈ ಮಾಹಿತಿಗಳನ್ನು ಕೊಡಬೇಕೆಂದಿದ್ದರೂ ಗ್ರಾಹಕ ಸೇವಾಕೇಂದ್ರಗಳವರೊಂದಿಗೆ ಗುದ್ದಾಡಿಯೇ ಪಡೆಯಬೇಕೆಂಬುದು ಹೀನಾಯ.
ಯಾವುದೇ ದೂರು ಕಸ್ಟಮರ್ ಕೇರ್‌ನಲ್ಲಿ ಇತ್ಯರ್ಥವಾಗದಿದ್ದರೆ ನೋಡಲ್ ಅಧಿಕಾರಿಗೆ ನಿಶ್ಚಿತ ಮಾದರಿಯ ಅರ್ಜಿ ಫಾರಂನಲ್ಲಿ ದೂರು ದಾಖಲಿಸಬಹುದು. ಅಂಚೆ ಯಾ ಇ-ಮೇಲ್ ಮೂಲಕ ದೂರು ಸಲ್ಲಿಸಬಹುದು. ದೂರವಾಣಿ ಮುಖಾಂತರವೂ ಸಂಪರ್ಕಿಸಲು ಸಾಧ್ಯ. ಈ ಬಗ್ಗೆ ಬೇಕಾದ ಎಲ್ಲ ಮಾಹಿತಿಗಳೂ ಮೊಬೈಲ್ ಕಂಪನಿಗಳ ವೆಬ್‌ಸೈಟ್‌ನಲ್ಲಿ ಲಭಿಸುತ್ತದೆ. ನೋಡಲ್ ಅಧಿಕಾರಿ ೨ ದಿನಗಳೊಳಗೆ ದೂರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಬೇಕು. ಇದು ಕಾನೂನು.
ಈಗ ಕಾಲರ್‌ಟೋನ್ ರೀತಿಯ ವ್ಯಾಲ್ಯೂ ಆಡೆಡ್ ಸೇವೆಗಳ ಕುರಿತಾದ ಟ್ರಾಯ್ ಕಾನೂನಿಗೆ ಬಗ್ಗೆ ಗಮನಿಸಿ. ಟ್ರಾಯ್ ಕಾಯ್ದೆ ೧೯೯೭ರ ಸೆಕ್ಷನ್ ೧೧(೧) (b) (i) ಹಾಗೂ (v), ಅಲ್ಲದೇ ೧೯೯೯ ರ ಟೆಲಿಕಮ್ಯುನಿಕೇಷನ್ ಟಾರಿಫ್ ಆರ್ಡ್‌ರ್‌ನ ೧೧ನೇ ಕಲಂ ಮೊಬೈಲ್ ಸೇವೆಗಳ ಕುರಿತು ಹೇಳುತ್ತದೆ. ಗ್ರಾಹಕರ ಪರವಾಗಿ ವಾದಿಸುತ್ತದೆ.
ಯಾವುದೇ ಸೇವೆ ನಿರ್ದಿಷ್ಟ ಅವಧಿಯ ಉಚಿತ ಟ್ರಯಲ್‌ನ ನಂತರ ಬಳಕೆದಾರ  'Unsubcribe' ಎಂದು ತಾನೇ ಸೇವೆಯ ಡಿಯಾಕ್ಟೀವ್ ಮಾಡಿಕೊಳ್ಳುವ ಅಗತ್ಯವಿಲ್ಲ. ಕಂಪನಿ ಮತ್ತೊಮ್ಮೆ ಸೇವೆ ನೊಂದಾಯಿಸಿಕೊಳ್ಳಲು ಬಳಕೆದಾರನಲ್ಲಿ ವಿನಂತಿಸಬೇಕು. ಆಗ ಆತ ‘ಎಸ್’ ಎಂದರೆ ಮಾತ್ರ ಸೇವೆ ಮುಂದುವರೆಸಿ, ಶುಲ್ಕ ವಿಧಿಸಬಹುದು. ಚಂದಾದಾರನ ಒಪ್ಪಿಗೆಯ ಅಗತ್ಯವನ್ನು ಟ್ರಾಯ್ ನಿರ್ದೇಶನ (ನಂ.೩೦೫-೮/೨೦೦೪ QOS ದಿನಾಂಕ ಮೇ ೩ ೨೦೦೫) ಒತ್ತಿ ಒತ್ತಿ ಹೇಳಿದೆ.
ಮೇಲಿನ ಪ್ರಕರಣಕ್ಕೆ ಅನ್ವಯಿಸಿ ಹೇಳುವುದಾದರೆ, ಜುಲೈ ೨೮ರಂದು ಹಚ್ ಕಳಿಸಿದ ಎಸ್‌ಎಂಎಸ್ ಟ್ರಾಯ್ ನಿರ್ದೇಶನಕ್ಕೆ ತಕ್ಕುದಾಗಿತ್ತು. ಆದರೆ ಇಲ್ಲಿಂದ ಮುಂದಿನ ಅದರ ಕ್ರಮಗಳು ಅಂತರಾಷ್ಟ್ರೀಯ ಕಂಪನಿಗಳು ಜಾಣ್ಮೆಯಿಂದ ಮಾಡುವ ಹಗಲುದರೋಡೆಯನ್ನು ಎತ್ತಿ ತೋರಿಸುತ್ತದೆ.
ನಿಗದಿತ ಅರ್ಜಿಫಾರಂನಲ್ಲಿ ಮೇಲಿನ ಕಾನೂನು, ವಡಫೋನ್ ವಂಚನೆಗಳೆಲ್ಲವನ್ನೂ ವಿವರಿಸಿ ವಡಫೋನ್ ನೋಡಲ್ ಅಧಿಕಾರಿಗೆ ಇ-ಮೇಲ್ ಮಾಡಲಾಯಿತು. ಬರೇ ೨೪ ಘಂಟೆಯಲ್ಲಿ ವಡಫೋನ್‌ನಿಂದ ವಿಷಾಧ ಪತ್ರ ಬಂದಿತು. ತಕ್ಷಣವೇ ತಾವು ಪಡೆದ ೩೦ ರೂ. ಮರಳಿಸುತ್ತಿದ್ದೇವೆನ್ನುವುದನ್ನು ಸೂಚಿಸಿದ್ದರು. ಅಂತೆಯೇ ನನ್ನ ಮೊಬೈಲ್ ನಂ.ಗೆ ೩೦ ರೂ. ಜಮೆಯಾಗಿತ್ತು. ನನಗೆ ತಿಳಿದುಬಂದಂತೆ, ಕಾಲರ್‌ಟೋನ್ ಉಚಿತ ಟ್ರಯಲ್ ಕೊಡುವುದು ಕೂಡ ಹಣ ಕಮಾಯಿಸುವ ಒಂದು ಟ್ರಿಕ್. ಈ ಆಫರ್ ಪಡೆದ ಜನರಲ್ಲಿ ಶೇ. ೨೫ ಮಂದಿಯಾದರೂ ‘ಕಂಪನಿ ಭಾಷೆಯಲಿ’ ತಿಂಗಳಿಗೆ ‘ಡಿಯಾಕ್ಟೀವ್’ ಮಾಡಲು ಮರೆಯುತ್ತಾರೆ. ೩೦ರೂನಂತೆ ಕಮಾಯಿ ಆಯಿತಲ್ಲ ? ಬಹುಸಂಖ್ಯಾತರು ಈ ವಂಚನೆ ಎದುರು ಕಾನೂನು ಹೋರಾಟ ನಡೆಸುವುದು ಅನುಮಾನ. ಅಷ್ಟಕ್ಕೂ ೩೦ ರೂ.ಗೆ ಹಿಂಜುವುದೇ ಛೀ!?
ಗ್ರಾಹಕರು ಒಂದು ತಿಂಗಳ ಉಚಿತ ಟ್ರಯಲ್‌ನ್ನು ಅನುಭವಿಸಿ ಸೇವೆ ಬೇಡ ಎಂದರೆ ಕಂಪನಿಗೆ ನಷ್ಟವಾಗುತ್ತದೆ ಎಂದುಕೊಳ್ಳುವುದು ತಪ್ಪು. ನಾವು, ‘ಮಂಕುತಿಮ್ಮರು’ ಫ್ರೀ ಟ್ರಯಲ್ ಮುಗಿವ ಮುನ್ನ ‘ಡಿಯಾಕ್ಟೀವ್ ಸಂದೇಶ ಕಳಿಸಿ ಲಾಭಗಳಿಸಿದ ನಗು ಚೆಲ್ಲುತ್ತೇ. ವಡಫೋನ್ ಈ ‘ಡಿಯಾಕ್ಟೀವ್ ಸಂದೇಶ’ಕ್ಕೆ ೩ರೂ. ಚಾರ್ಜ್ ಮಾಡುತ್ತದೆ! ವಾಸ್ತವವಾಗಿ, ಸೇವೆ ಚಾಲನೆ- ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಗೆ ಶುಲ್ಕ ವಿಧಿಸುವುದು ತಾತ್ವಿಕವಾಗಿ, ಕಾನೂನಿನನ್ವಯ ಸರಿಯಾದ ಕ್ರಮವಲ್ಲ.
-ಮಾವೆಂಸ, e mail-mavemsa@gmail.com 

9 comments:

vasista ಹೇಳಿದರು...

namaskaara,

maththondu vishaya illi prasthaapisalu ichchisuve..

If you buy any post paid connection especially 250/- plan (co-operate connection, this plan may not be there now)connection providers say, you will get 10 hours talk time free, means 600 minutes talk time free. But this is not the correct way to say as it only indicates 600 calls are free. Means if you talkk for say 2 minutes and 10 seconds then 3 minutes is counted from the 600 minute free account.. that means it is as good as 3 calls.They are not clear while they give adds.

Harisha - ಹರೀಶ ಹೇಳಿದರು...

ಮತ್ತೊಂದು ಕಣ್ತೆರೆಸುವ ಬರಹ! ಮುಂದುವರೆಯಲಿ..

ಮಾವೆಂಸ ಹೇಳಿದರು...

@Vasistha.K.G.,
I think you have a good case to fight on. There is no specific direction or regulation of TRAI in this regard. But subscriber should get his full 600 minutes. Around 100 minutes deducts actually without using. I will go through the TRAI regulation book to find the helpful directions in this regard, If you wants to fight....
@Harish,
Thanks a lot.

ಮಾವೆಂಸ ಹೇಳಿದರು...

this reply is from Chamaraja savadi,News Editor,
Suvarna News Channel-ತುಂಬಾ ಉಪಯುಕ್ತ ಮಾಹಿತಿ ಒದಗಿಸಿದ್ದೀರಿ ಮಾವೆಂಸ. ಇಂಥದೇ ಅನುಭವ ಬ್ರಾಡ್‌ಬ್ಯಾಂಡ್‌ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಆಗಿದೆ. ಆ ಕುರಿತು ಸದ್ಯದಲ್ಲೇ ಬರೆಯುತ್ತೇನೆ. ರಿಲಯನ್ಸ್‌ ಹಾಗೂ ಟಾಟಾ ಇಂಡಿಕಾಮ್‌ ಬ್ರಾಡ್‌ಬ್ಯಾಂಡ್‌ ಸೇವೆಗಳು ಎಷ್ಟು ಕೆಟ್ಟದಾಗಿವೆ ಎಂದರೆ, ಅದನ್ನು ಅಂಕಿಅಂಶಗಳ ಸಮೇತವೇ ಬರೆಯಬೇಕೆಂದುಕೊಂಡಿದ್ದೇನೆ. ಸದ್ಯಕ್ಕೆ ಎರಡೂ ಸೇವೆಗಳನ್ನು ಸ್ಥಗಿತಗೊಳಿಸಿದ್ದೇನೆ. ಅಷ್ಟೇ ಅಲ್ಲ, ಸೇವೆ ಸ್ಥಗಿತಗೊಳಿಸಿದ ದಿನಾಂಕದ ನಂತರ ಯಾವ ಶುಲ್ಕವನ್ನೂ ಕಟ್ಟಲು ಹೋಗಿಲ್ಲ. ಭಂಡತನ ತೋರಿದ್ದಕ್ಕಾಗಿ ರಿಲಯನ್ಸ್‌ನವರ ಲ್ಯಾಂಡ್‌ಲೈನ್‌ ಫೋನ್‌ ಯಂತ್ರ ಹಾಗೂ ವೈರಿಂಗ್‌ಗಳನ್ನು ನನ್ನ ಹತ್ತಿರವೇ ಉಳಿಸಿಕೊಂಡಿದ್ದೇನೆ. ಬೇಕೆಂದರೆ ಕೋರ್ಟ್‌‌ಗೆ ಹೋಗಿ, ಆ ಮೇಲೆ ಅವನ್ನು ಸಲ್ಲಿಸುವ ವಿಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದೇನೆ.

ನಿಮ್ಮ ಲೇಖನ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕೆಲಸ ಮಾಡಿದೆ. ಮುಂದುವರೆಸಿ. ಇನ್ನೊಂದಿಷ್ಟು ಜನರಲ್ಲಿ ಅರಿವು ಮೂಡಿದರೆ ಸಾಕು, ವಂಚನೆಗೆ ಸಾಕಷ್ಟು ಕಡಿವಾಣ ಬೀಳುತ್ತದೆ.

ಮರೆತಿದ್ದು: ನಿಮ್ಮ ಬ್ಲಾಗ್‌ನಲ್ಲಿ ಕಾಮೆಂಟ್‌ ವಿಭಾಗದಲ್ಲಿ ವರ್ಡ್‌ ವೆರಿಫಿಕೇಶನ್‌ ಬರುತ್ತದೆ. ಆದರೆ, ಯಾವುದೇ ಅಕ್ಷರಗಳು ಕಾಣಿಸುವುದಿಲ್ಲ. ಹೀಗಾಗಿ ಕಾಮೆಂಟ್‌ ಹಾಕಲು ಆಗಲಿಲ್ಲ. ಅದಕ್ಕೆಂದೇ ನಿಮಗೆ ಮೇಲ್‌ ಹಾಕಿದ್ದೇನೆ. ಲಾಗಿನ್‌ ಆದರೂ ಕಾಮೆಂಟ್‌ ಹಾಕಲು ಆಗುತ್ತಿಲ್ಲ. ಒಮ್ಮೆ ನೋಡುತ್ತೀರಾ?

- ಚಾಮರಾಜ ಸವಡಿ

ಮನಸ್ವಿ ಹೇಳಿದರು...

ಹೌದು ಉಚಿತ ಸೇವೆ ನೀವಾಗೆ ರದ್ದುಗೊಳಿಸಿಕೊಳ್ಳಬೇಕೆ ಹೊರತು ಕಂಪನಿಯವರು ತಾವಗಿಯೇ ಏಕೆ ರದ್ದುಗೊಳಿಸುತ್ತಾರೆ ?!! ಅವರು ಇರೋದೆ ಸುಲಿಗೆ ಮಾಡೋಕೆ ಅನ್ನೋದು ನೆನಪಿನಲ್ಲಿ ಇಟ್ಟುಕೊಳ್ಳಿ,
ನಿನಗೆ ಏರ್ ಟೆಲ್ ಕಂಪನಿಯವರ ಜೊತೆಯಲ್ಲಿ ಕಾದಾಡಿದ ಅನುಭವವಿಲ್ಲವೆನಿಸುತ್ತದೆ! "ಯಾವುದೇ ‘ಎಸ್’ ಎಸ್‌ಎಂಎಸ್ ಮಾಡದೆ ನಾನು ಸುಮ್ಮನುಳಿದೆ.. " ಎಂದು ನೀನು ಹೇಳಿರುವುದರಿಂದ, ಸಾಮಾನ್ಯವಾಗಿ ಎಲ್ಲರ ಪ್ರಕಾರ ಮೌನಮ್ ಸಮ್ಮತಿ ಲಕ್ಷಣಂ ಅಲ್ಪಾ? ತಪ್ಪು ನಿಮ್ಮದೇ! ನೋ ಅಂತ ೯೯೭ ಗೆ ಕಳುಹಿಸಿದ್ದರೆ ೩೦ರುಪಾಯಿ ಉಳಿಯುತಿತ್ತು.. ಹೇಯ್ ಒಂದು ಲೆಖ್ಖದ ಪ್ರಕಾರ ನಿನಗೆ ೩೦ರುಪಾಯಿ ಕಟ್ ಆಗಿದ್ದೇ ಒಳ್ಳೆಯದಾಯಿತು,
ಇಲ್ಲದೆ ಹೋದರೆ ಇಷ್ಟು ಒಳ್ಳೆಯ ಮಾಹಿತಿ ದೊರೆಯುತ್ತಲೇ ಇರಲಿಲ್ಲ. ;)

ಮಾವೆಂಸ ಹೇಳಿದರು...

@ಮನಸ್ವಿ,
ಅಗತ್ಯವೇ ಇಲ್ಲದಕ್ಕೆ ಎಸ್, ನೋ ಎಸ್‌ಎಂಎಸ್‌ಗಳನ್ನು ಮಾಡಬೇಕೆ? ಈ ಖಾಸಗಿ ಕಂಪನಿಗಳು ಟ್ರಾಯ್ ಕಾನೂನುಗಳನ್ನು ಪಾಲಿಸುವವೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ನನ್ನ ಕುತೂಹಲವಾಗಿತ್ತು. ೩೦ ರೂ. ವಾಪಾಸು ಪಡೆದುದರಿಂದಲೇ ನನ್ನದು ಮಾದರಿ ಕತೆ ಮತ್ತು ಬ್ಲಾಗ್‌ನಲ್ಲಿ ಅವಕಾಶ ಪಡೆದಿದೆ!
ಅಷ್ಟೆಲ್ಲ ಕಾನೂನುಗಳನ್ನು ವಿವರಿಸಿದ ಮೇಲೂ ನಾವೇ ಮೆಸೇಜ್ ಮಾಡಬೇಕು, ಮೌನಂ ಸಮ್ಮತಿ ಲಕ್ಷಣಂ ಎನ್ನುವ ನಿನ್ನಂತವರನ್ನು ನೋಡಿ ನಾನು ಯಾವ ಗೋಡೆಗೆ ತಲೆ ಕುಟ್ಟಿಕೊಳ್ಳಬೇಕೋ?!?!

ಮನಸ್ವಿ ಹೇಳಿದರು...

ಬೆಂಗಳೂರಿನ ವೋಡಾ ಫೋನ್ ಕಛೇರಿಯ ವಿಳಾಸ ಬೇಕಾ.. ತಲೆ ಚಚ್ಚಿಕೊಳ್ಳಲು!... ಕಾನೂನು ಇರುವುದೇ ಮುರಿಯಲು ಎಂದು ಎಲ್ಲಾ ಮೊಬೈಲ್ ಕಂಪನಿಗಳು ಅಂದುಕೊಂಡಿವೆ ಅನಿಸುತ್ತದೆ, ನಿನ್ನ ಪ್ರಕಾರ ಅಗತ್ಯವಿಲ್ಲದ್ದು, ಆದರೆ ಪ್ರಕಾರ ೩೦ರುಪಾಯಿ ನನಗೆ ಅಮೂಲ್ಯ.. ಉಚಿತವಾದ ನಂಬರಿಗೂ no ಎಂದು ಕಳಿಸುವ ಬದಲು ಅಗತ್ಯವಿಲ್ಲದ್ದು ಎಂದರೆ ಖಂಡಿತಾ ನಿನ್ನ ೩೦ರುಪಾಯಿ ತೆಗೆಯಲು ಮೊಬೈಲ್ ಕಂಪನಿ ಹಿಂದೆ ಮುಂದೆ ನೋಡಲಾರದು, ಅವರು ಉಚಿತ ಕಾಲರ್ ಟ್ಯೂನ್ ಕೊಟ್ಟಿರುವ ಉದ್ದೇಶವೇ ಆಧಾಯಗಳಿಸಲು... ಅನೇಕ ಜನರು ಎಸ್ ಎಮ್ಮೆಸ್ ಗಳನ್ನು ನೋಡುವುದಿಲ್ಲ, ಇನ್ನು ಕೆಲವರಿಗೆ ತಮ್ಮ ನಂಬರಿಗೆ ಕಾಲರ್ ಟ್ಯೂನ್ ಆಕ್ಟಿವೇಟ್ ಆಗಿದ್ದು ಪ್ರತಿತಿಂಗಳು ೩೦ರುಪಾಯಿ ಕಡಿತಗೊಳ್ಳುತ್ತಿರುವ ವಿಚಾರವೇ ತಿಳಿದಿರಲಿಕ್ಕಿಲ್ಲ.. ಮೊಬೈಲ್ ಕಂಪನಿಗಳಿಗೆ ಮೂಗುದಾರ ಹಾಕುವಲ್ಲಿ ಟ್ರಾಯ್ ಸಂಪೂರ್ಣ ಯಶಸ್ಸು ಕಂಡಿಲ್ಲ, ಆದರು ಮೊಬೈಲ್ ಕಂಪನಿಗಳಿಗೆ ಟ್ರಾಯ್ ನ ಹದ್ದಿನ ಕಣ್ಣಿನ ಮೇಲೆ ಸ್ವಲ್ಪ ಭಯವೂ ಇದೆ, ಅಂದಹಾಗೆ

ಬಿಎಸ್ಎನ್ಎಲ್ ಗೆ ನಾನು ಕೇಳಿದ್ದ ಮಾಹಿತಿಯನ್ನು RTI ೨೦೦೫ ಮಾಹಿತಿ ಹಕ್ಕಿನಲ್ಲಿ ಒದಗಿಸಿದ್ದಾರೆ, ನನಗೆ WLL ಪೋನಿಗೆ Broadband service ಒದಗಿಸಿಕೊಡುತ್ತಾರಂತೆ!( ವಿಷಯವೇನೆಂದರೆ ಈಗ ನಾನು ಮತ್ತೆ ನೀನು ಬಳಸುತ್ತಿರುವ huawei ವಿಲ್ ಫೋನ್ ಡಯಲಪ್ ಸೇವೆಯನ್ನು ಮಾತ್ರ ಒದಗಿಸಲು ಶಕ್ತವಾಗಿದೆ) ನಾನು ಅರ್ಜಿ ಹಾಕುತ್ತಿದ್ದೇನೆ ನನ್ನ ವಿಲ್ ಫೋನ್ ಗೆ ಬ್ರಾಡ್ ಬ್ಯಾಂಡ್ ಸೇವೆ ಓದಗಿಸಿಕೊಡಿ ಎಂದು, ನೀನೂ ಸಹ ಗುಜರಾಯಿಸು ಅರ್ಜಿಯನ್ನು, ಮತ್ತೊಂದು ನನಗೆ ಬೇಸರವಾದ ಸಂಗತಿ, ಬಿಎಸ್ ಎನ್ ಎಲ್ ಹೊಸ ಚೆಸ್ ಪಾನ್ ನೆಡೆಸಿದೆ .
ಇವತ್ತಷ್ಟೇ ನನಗೆ ಬಿ.ಎಸ್.ಎನ್.ಎಲ್ ನಿಂದ ಕಾಗದ ಬಂದಿದೆ, ನಿಮ್ಮ ಸ್ಥಿರ ದೂರವಾಣಿ ಸ್ಥಗಿತಗೊಳಿಸಿದ್ದೇವೆ, ಡೆಪಾಸಿಟ್ ವಾಪಸ್ ಪಡೆದುಕೊಳ್ಳಿ ಎಸ್.ಡಿ.ಓಟಿ ಆಪೀಸಿನಲ್ಲಿ ಎನ್ನುವುದು ಅದರ ಸಾರಾಂಶ...! ನಾನು ಡೆಪಾಸಿಟ್ ವಾಪಸ್ ಪಡೆಯುತ್ತಿಲ್ಲ :( ನಾನು ನನ್ನ ಸ್ಥಿರದೂರವಾಣಿಯ ಪುನರ್ ಸಂಪರ್ಕ ಪಡೆಯಲೇ ಬೇಕು, ಸಾಗರದ ಬಳಕೆದಾರರ ವೇಧಿಕೆ ನನ್ನೊಂದಿಗಿದೆಯಾ.. ಇಂತಾ ಅಕ್ರಮಕ್ಕೆ ಏನು ಹೇಳುತ್ತೀರಿ.. ಹೋರಾಟಕ್ಕೆ ನಿಮ್ಮ ವೇದಿಕೆಯು ಸಹಾಯ ಹಸ್ತ ನೀಡುತ್ತದೆಯಾ?

ಅನಾಮಧೇಯ ಹೇಳಿದರು...

ಮಾವೆಂಸರಿಗೆ ಜೈ ಹಾಕಲೇ? ಏನೂ ಅಡ್ಡಿ ಇಲ್ಯೋ. ಹಾಕು.

NiTiN Muttige ಹೇಳಿದರು...

ಮಾವೆಂಸಾ ಅವರೆ, ನಾನು ಬಳಸುತ್ತಿರುವುದು ಐಡಿಯಾ ಸೇವೆಯನ್ನು [ಈ ಮೊದಲು ಸ್ಪೈಸ್]. ಒಂದು ದಿನ ಕಾಲ್ರ್ ಟ್ಯೂನ್ ಸೇವೆಯ ಕಾಲ್ ಬಂತು.ಬಸ್ ನಲ್ಲಿ ಬೇಜರ್ ಬಂದಿದ್ದರಿಂದ ಪುಕ್ಕಟೆ ಹಾಡು ೨ ನಿಮಿಷ ಕೆಳಿದರಾಯಿತು ಎಂದು ಕೇಳಿದೆ. ಕೊನೆಯಲ್ಲಿ ನಿಮ್ಮ ಸೇವೆ ಚಾಲನೆ ಆಗಲು ೨೪ ಗಂಟೆ ಬೇಕು ಎಂದು ಸುಂದರ ಹುಡುಗಿ ಉಲಿದಳು!! ನಾನು ಯಾವುದೇ ಬಟನ್ ಒತ್ತಿರಲಿಲ್ಲ.!! ೩೦ ರೂ ಮಾಯವಾಗಿತ್ತು. ಕಸ್ಟಮರ್ ಕೇರ್ ನಲ್ಲೂ ಈ ಬಗ್ಗೆ ದೂರು ಹೇಳಿದರೆ ನೀವು ಬಟನ್ ಪ್ರೇಸ್ ಮಾಡದಿದ್ದರೆ ಆಗಲ್ಲ ಎಂದು ಹೇಳಿದರೆ ವಿನಹ ದೂರು ದಾಖಲಿಸಿಕೊಳ್ಳಲಿಲ್ಲ. ನನ್ನ ಇತರ ಸ್ನೇಹಿತರಿಗೂ ಈ ರೀತಿ ಆಗಿದ್ದು ದೂರು ಕೊಟ್ಟಿದ್ದಾರೆ.ಆದರೆ ಮುಂದಿನ ಫಲಿತಾಂಶ ಇಲ್ಲ.

ನಿಮ್ಮ ಲೇಖನ ಮಾಹಿತಿ ಒದಗಿಸಿತು.ನಿಮಗೆ ಮಾತ್ರ ೩೦ ರೂ ವಾಪಸ್ ಬಂತು ಎಂದು ತಿಳಿದು ಹೊಟ್ಟೆ ಉರಿತಾ ಇದೆ!!!!! :)

 
200812023996