ಗುರುವಾರ, ಡಿಸೆಂಬರ್ 4, 2008

ಚಾಕಲೇಟ್ ತಿಂದೀರಿ, ಜೋಕೆ!

                   ವಾಸ್ತವವಾಗಿ ಇದು ನಿಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಸೂಚಿಸಲು ತಯಾರಿಸಿದ ಲೇಖನವಲ್ಲ, ಆದರೆ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಮಾದರಿಯ ಚಾಕಲೇಟ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನವದೆಹಲಿಯ ಕನ್ಸ್ಯೂಮರ್ ವಾಯ್ಸ್‌ನ ವರದಿಯ ಮಾಹಿತಿ ಓದಿದವರು ಹೇಳಲೇಬೇಕಾಗುತ್ತದೆ, ಚಾಕಲೇಟ್ ತಿಂದೀರಿ, ಜೋಕೆ!
ಭಾರತದಲ್ಲಿ ಚಾಕಲೇಟ್ ಬಳಕೆ ರುಚಿಗೆ, ಮಜಕ್ಕೆ. ಅದೇ ಅಮೇರಿಕದಲ್ಲಿ, ಒಂದರ್ಥದಲ್ಲಿ ಇದು ಆಹಾರ ಪದಾರ್ಥ. ಅಲ್ಲಿನ ಎಫ್‌ಡಿಎ ಕಾನೂನು ಶೇ. ೧೦೦ರಷ್ಟು ಪ್ರಮಾಣದಲ್ಲಿ ಕೊಕೋ ಬೆಣ್ಣೆಯನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ. ಉಳಿದಂತೆ ಹಾಲಿನ ಕೆನೆ ಬಳಸಬಹುದಷ್ಟೆ. ಖಾದ್ಯ ತೈಲ ಬಳಸುವಂತಿಲ್ಲ. ಕಡಿಮೆ ಸಕ್ಕರೆ, ಬರೀ ಕೊಕೋ ಬೆಣ್ಣೆಯ ಮೃದು ತಯಾರಿಗಳು ಅಲ್ಲಿ ಆಹಾರ ಪದಾರ್ಥವಾಗಿ ಪರಿಗಣನೆಯಾದುದರಲ್ಲಿ ಅಚ್ಚರಿಯಿಲ್ಲ. ಅಲ್ಲೂ ಖಾದ್ಯ ತೈಲ ಬಳಸಿ ಸೃಷ್ಟಿಸಿದವುಗಳಿವೆ. ಅವುಗಳನ್ನು ಚಾಕಲೇಟ್ ಎನ್ನುವಂತಿಲ್ಲ! ಚಾಕಲೇಟ್‌ಗೆ ಪೂರಕ ಎನ್ನುತ್ತಾರಷ್ಟೆ. ಈ ಮಾಹಿತಿಗಳು ಲೇಬಲ್‌ನಲ್ಲಿ ಸ್ಪಷ್ಟವಾಗಿರುವುದರಿಂದ ಗ್ರಾಹಕ ಪಿಗ್ಗಿ ಬೀಳುವುದಿಲ್ಲ.
ಅತ್ತ ಬೆಲ್ಜಿಯಂನಲ್ಲಿ ವರ್ಷಕ್ಕೆ ೧೭೨ ಮಿಲಿಯನ್ ಟನ್ ಚಾಕಲೇಟ್ ತಯಾರಾಗುತ್ತದೆ! ವರ್ಷವೊಂದಕ್ಕೆ ಅಲ್ಲಿನ ವ್ಯಕ್ತಿ ಸರಾಸರಿ ೯ ಕೆ.ಜಿ. ಚಾಕಲೇಟ್ ತಿನ್ನುತ್ತಾನೆ. ಅಲ್ಲಿ ಚಾಕಲೇಟ್‌ಗೇ ಮೀಸಲಾದ ಮ್ಯೂಸಿಯಂಗಳಿವೆ. ಅಷ್ಟಕ್ಕೂ ಬೆಲ್ಜಿಯಂ ಚಾಕಲೇಟ್‌ಗಳು ವಿಶ್ವದಲ್ಲಿಯೇ ಶ್ರೇಷ್ಟವೆಂಬ ಖ್ಯಾತಿ ಪಡೆದಿವೆ. ಈಗಲೂ ಅಲ್ಲಿ ಚಾಕಲೇಟ್‌ಗಳು ಹಳೆಯ ತಾಂತ್ರಿಕತೆಯಲ್ಲಿ ತಯಾರಾಗುತ್ತಿವೆ. ಅವೆಲ್ಲ ನುರಿತ ಕೈಗಳಿಂದಲೇ ಸೃಷ್ಟಿಯಾಗುತ್ತಿವೆ!
೨೦೦೦ದಲ್ಲಿ ಯುರೋಪಿಯನ್ ಒಕ್ಕೂಟ ಚಾಕಲೇಟ್‌ಗಳಲ್ಲಿ ಶೇ.೫ರ ಖಾದ್ಯತೈಲ ಬಳಕೆಯನ್ನು ಒಪ್ಪಿ ನಿಯಮ ರೂಪಿಸಿತು. ಬೆಲ್ಜಿಯಂನಲ್ಲಿ ಸಮಾಜ ತೀಕ್ಷ ವಾಗಿ ಪ್ರತಿಕ್ರಿಯಿಸಿತು. ಜನಾಂದೋಲನವಾಯಿತು. ಅಲ್ಲಿನ ಸಚಿವಾಲಯ ಪೂರ್ಣ ಕೊಕೋ ಬಳಕೆಯ ಚಾಕಲೇಟ್‌ನ್ನೇ ಸಮರ್ಥಿಸಿ ವಿಶೇಷ ನಿಯಮ, ಎಎಂಬಿಎಓವನ್ನು ಜಾರಿಗೊಳಿಸಬೇಕಾಯಿತು. 
ಇಂತಹ ರಾಷ್ಟ್ರಗಳ ಉದಾಹರಣೆಗಳ ಹಿನ್ನೆಲೆಯಲ್ಲಿ ಭಾರತದೆಡೆಗೆ ನೋಡಿದರೆ ನಿರಾಶೆಯಾಗುತ್ತದೆ. ಜನಪ್ರಿಯ ೧೩ ಬ್ರಾಂಡ್‌ಗಳ ಪೈಕಿ ಏಳರಲ್ಲಿ ಖಾದ್ಯ ತೈಲ ಬಳಕೆಯಾಗಿದೆ. ಆರೋಗ್ಯ ಸಚಿವಾಲಯದ ಆಹಾರ ಕಲಬೆರಕೆ ತಡೆ ಕಾಯ್ದೆ  ಪಿಎಫ್‌ಎ ಪ್ರಕಾರ ಚಾಕಲೇಟ್‌ಗಳಲ್ಲಿ ಖಾದ್ಯ ತೈಲ ಉಪಯೋಗ ಸಂಪೂರ್ಣ ನಿಷಿದ್ಧ. ಕೆಲವು ಚಾಕಲೇಟ್‌ಗಳಲ್ಲಂತೂ ಅತ್ಯಂತ ಕೆಟ್ಟ ಪರಿಣಾಮದ ಹೈಡ್ರೋಜನರೇಟೆಡ್ ಖಾದ್ಯತೈಲ ಕಂಡುಬಂದಿವೆ.
ತಾವು ಖಾದ್ಯ ತೈಲ ಬಳಸಿರುವುದನ್ನಾಗಲೀ, ಯಾವ ಪ್ರಮಾಣದಲ್ಲಿ ಕೊಕೋ ಸೇರಿಸಿದ್ದೇವೆನ್ನುವುದನ್ನಾಗಲೀ ಭಾರತೀಯ ತಯಾರಿಕೆಗಳು ಲೇಬಲ್‌ನಲ್ಲಿ ನಮೂದಿಸಿರುವುದು ಕಡಿಮೆ. ಇಲ್ಲಿ ಲಭ್ಯವಾಗುವ ಟೋಬ್ಲರ್ ಕೊಕೋ ಬಳಸಿದ ಪ್ರಮಾಣವನ್ನು ನಮೂದಿಸಿವೆ. ಸ್ವಾರಸ್ಯವೆಂದರೆ, ಇವೆರಡೂ ಆಮದು ಚಾಕಲೇಟ್‌ಗಳು!
ಭಾರತೀಯ ಚಾಕಲೇಟ್ ತಯಾರಿಕೆಗಳಿಗೆ ಹಿಂಬಾಗಿಲ ಹಾದಿಗೆ ರಾಜಮಾರ್ಗವೇ ತೆರೆದಿದೆ. ಚಾಕಲೇಟ್‌ಗಳಲ್ಲಿನ ಕೊಕೋ ಪರಿಮಾಣವನ್ನು ಪತ್ತೆ ಹಚ್ಚಲು ತಾಂತ್ರಿಕತೆಯ ಕೊರತೆಯಿದೆ. ಕನ್ಸ್ಯೂಮರ್ ವಾಯ್ಸ್ ಸಂಸ್ಥೆಯು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್), ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಹಾಗೂ ಚೆನ್ನೈನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ನ್ಯೂಟ್ರಿಷನ್‌ನ್ನು ಸಂಪರ್ಕಿಸಿದರೂ ಅದಕ್ಕೆ ಅಗತ್ಯ ತಾಂತ್ರಿಕತೆ ಪಡೆಯಲು ಸಾಧ್ಯವಾಗದ್ದು ಇದಕ್ಕೆ ಸಾಕ್ಷಿ.
ಇದು ಬಿಐಎಸ್‌ಗೂ ಗೊತ್ತಿದೆ, ಹಾಗಾಗಿ ನಿಯಮ ಐಎಸ್ ೧೧೬೩:೧೯೯೨ ಮೂಲಕ ತಯಾರಿಕೆ ವೇಳೆಯಲ್ಲಿ ಬೆರೆಸುವ ಕೊಕೋ ದ್ರವ್ಯ ಪ್ರಮಾಣವನ್ನು ದಾಖಲಿಸಬೇಕೆಂಬ ಸಲಹೆ ನೀಡುತ್ತದೆ. ಇದೊಂದು ತರಹ ಹಾವು ಸಾಯದ, ಕೋಲೂ ಮುರಿಯದ ಸ್ಥಿತಿ. ಚಾಕ್‌ಲೇಟ್‌ನಲ್ಲಿರಬೇಕಾದ ಕನಿಷ್ಟ ಕೊಕೋ ಬಗ್ಗೆ ಯಾವುದೇ ಮಾನದಂಡ ಇಲ್ಲದಿರುವಾಗ ಲೇಬಲ್‌ನಲ್ಲಿ ಆ ಮಾಹಿತಿ ಕೊಡಬೇಕಾದ ಅಗತ್ಯವೇನು ಎಂದೇ ವಿಶ್ವ ಮಾರುಕಟ್ಟೆ ಹೊಂದಿರುವ ಕ್ಯಾಡ್‌ಬರಿ ‘ಭಾರತದಲ್ಲಿ’ ವಾದಿಸುತ್ತದೆ!
ಚಾಕಲೇಟ್‌ಗಳಲ್ಲಿ ಬಳಸುವ ಕೊಕೋ ಬೆಣ್ಣೆ ಸಸ್ಯಜನ್ಯವಾದುದು. ನಮ್ಮಲ್ಲಿನ ತೋಟ, ಗುಡ್ಡಗಳಲ್ಲಿ ಬೆಳೆಸುವ ಕೊಕೋ ಗಿಡಗಳ ಕಾಯಿಯೊಳಗೆ ಕೊಕೋ ಬೀಜಗಳಿರುತ್ತವೆ. ಕಾಯಿ ಹಣ್ಣಾದಂತೆ ಈ ಬೀಜಗಳನ್ನು ಬೇರ್ಪಡಿಸಿ, ನಿರ್ದಿಷ್ಟ ಉಷ್ಣತೆಯಲ್ಲಿ ಒಣಗಿಸಲಾಗುತ್ತದೆ. ಕರ್ನಾಟಕದಲ್ಲಿ ಕ್ಯಾಂಪ್ಕೋದಂತ ಸಹಕಾರಿ ಸಂಸ್ಥೆ ಕೊಕೋ ಬೀಜಗಳನ್ನು ಖರೀದಿಸಿ, ಸಂಸ್ಕರಿಸುತ್ತದೆ. ಆಫ್ರಿಕನ್ ದೇಶಗಳಲ್ಲಿ ರೈತರೇ ಸ್ವತಃ ಬೀಜ ಒಣಗಿಸುವ ಸಂಪ್ರದಾಯವಿದೆ. 
ಆದರೆ ಕೊಕೋ ಬೀಜದೊಳಗಿನಿಂದ ಬೆಣ್ಣೆಯನ್ನು ಯಾಂತ್ರಿಕ ಸಹಾಯದಿಂದ ತೆಗೆಯಲಾಗುತ್ತದೆ. ಇದೇ ಚಾಕಲೇಟ್‌ನ ಮುಖ್ಯ ಕಚ್ಚಾ ಪದಾರ್ಥ. ಈ ಕೊಕೋ ಬೆಣ್ಣೆಯ ಕೊಬ್ಬಿನ ಅಂಶ ಆರೋಗ್ಯಕ್ಕೆ ಏನೇನೂ ಹಾನಿಕರವಲ್ಲ ಎಂಬುದು ಯುನೈಟೆಡ್ ಸ್ಟೇಟ್ಸ್ ಫುಡ್ ಎಂಡ್ ಡ್ರಗ್ಸ್ ಅಡ್ಮಿನಿಸ್ಟೇಷನ್‌ನ ಸಂಶೋಧನೆಯಿಂದ ಖಚಿತವಾಗಿದೆ.  ಹಾಗಾಗಿಯೇ ಅದು ಅಮೆರಿಕದಲ್ಲಿ ಶೇ. ೧೦೦ರ ಕೊಕೋ ಬೆಣ್ಣೆಯನ್ನೇ ಬಳಸಬೇಕೆಂಬ ಕಟ್ಟುನಿಟ್ಟಿನ ಮಾನದಂಡವನ್ನು ನಿಗದಿಪಡಿಸಿದೆ.
ಚಾಕಲೇಟ್‌ನಲ್ಲಿ ಬಾಯಲ್ಲಿ ಕರಗುವ ಬೆಣ್ಣೆಯ ಅಂಶವಂತೂ ಬೇಕು. ಕೊಕೋ ಬೆಣ್ಣೆಯಲ್ಲವಾದರೆ ಇನ್ನಾವುದೇ ಖಾದ್ಯ ತೈಲವನ್ನಾದರೂ ಬಳಸಲೇಬೇಕು. ತಾಳೆ, ಶೇಂಗಾ, ಸೂರ್ಯಕಾಂತಿ ಎಣ್ಣೆಗಳನ್ನು ಮತ್ತು ಅವುಗಳ ಪರಿಷ್ಕರಿಸಿದ ರೂಪದಲ್ಲಿ ಬಳಸಬಹುದು. ಇವುಗಳ ಕೊಬ್ಬಿನ ಅಂಶ ನಮ್ಮ ಜೀರ್ಣಾಂಗದಲ್ಲಿ ಸುಲಭದಲ್ಲಿ ಕರಗುವಂತದಲ್ಲ. ಅದರಲ್ಲೂ ಚಿಕ್ಕ ಮಕ್ಕಳೇ ಚಾಕಲೇಟ್‌ಗಳನ್ನು ಹೆಚ್ಚಾಗಿ ತಿನ್ನುವ ಭಾರತೀಯ ಸನ್ನಿವೇಶದಲ್ಲಿ ಖಾದ್ಯ ತೈಲದ ವಿಪರೀತ ಉಪಯೋಗದ ಅಪಾಯ ಅರ್ಥವಾಗುವಂತದು. 
ಭಾರತೀಯ ಚಾಕಲೇಟ್ ತಯಾರಕರು ಖಾದ್ಯ ತೈಲ ಸೇರಿಸಿಯೂ ಮುಗುಂ ಆಗಿದ್ದಕ್ಕೆ ಇಟಲಿಯಲ್ಲಿ ಉತ್ಪಾದಿಸಲ್ಪಡುವ, ಇಲ್ಲಿ ಖರೀದಿಗೆ ಲಭಿಸುವ ಫೆರೆರೋ ರೋಚರ್ ತಾನು ತಾಳೆ ಎಣ್ಣೆ ಬೆರೆಸಿರುವುದನ್ನು ರ್‍ಯಾಪರ್‌ನಲ್ಲಿಯೇ ಒಪ್ಪಿಕೊಳ್ಳುತ್ತದೆ! 
ಭಾರತೀಯ ಮಾರುಕಟ್ಟೆಯಲ್ಲಿ ಅನಧಿಕೃತ, ಬೇನಾಮಿ ಚಾಕಲೇಟ್‌ಗಳು ಹೇರಳ. ತಿನ್ನುವ ನಾವೂ ಅಧಿಕೃತತೆಯ ಪರೀಕ್ಷೆಗೆ ಹೋಗುವುದಿಲ್ಲ. ‘ಮಂಚ್’ ಇಲ್ಲದಿದ್ದರೆ, ಅದೇ ರೂಪದ ನಕಲಿ ‘ಪಂಚ್’ ಆದರೂ ಆದೀತು. ನಮ್ಮ ಅಜ್ಞಾನ, ಅಲಕ್ಷ್ಯ ಚಾಕ್‌ಲೇಟ್ ತಯಾರಕರಿಗಂತೂ ವರದಾನವಾಗಿದೆ.
ನಾವು ನಿರೀಕ್ಷಿಸುವುದು ಸಿಹಿ. ಬಿಐಎಸ್ ಚಾಕಲೇಟ್‌ಗಳಲ್ಲಿ ಗರಿಷ್ಟ ಶೇ.೫೫ ಸಕ್ಕರೆ ಅಂಶ ಇರಬಹುದು ಎಂದಿದೆ. ವಾಸ್ತವದಲ್ಲಿ, ಕಡಿಮೆ ಸಕ್ಕರೆ ಇದ್ದಲ್ಲಿ ಹೆಚ್ಚಿನ ಕೊಕೋ ಪ್ರಮಾಣಕ್ಕೆ ಅವಕಾಶ. ಕ್ಯಾಡ್‌ಬರಿ ಕ್ರಾಕ್ಲ್‌ನಲ್ಲಿ                 ಶೇ.೫೪.೨೩ಯಷ್ಟು ಸಕ್ಕರೆ ಇದೆ. ನೆಸ್ಲೆ ಬಾರ್ ಒನ್, ಕ್ಯಾಡ್‌ಬರಿ ೫ ಸ್ಟಾರ್, ಅಮುಲ್ ಚಾಕೋಜೂಗಳಲ್ಲಿ ಹೈಡ್ರೋಜನರೇಟೆಡ್ ಖಾದ್ಯತೈಲವಿದೆ. ಇದಕ್ಕಿಂತ ಸಕ್ಕರೆ ಹೆಚ್ಚಿರುವ ಕ್ರಾಕ್ಲ್‌ನಂತವು ಕ್ಷೇಮ!
ಭಾರತೀಯರು ಮಿಲ್ಕೀಬಾರ್ ಚಾಕಲೇಟ್‌ಗಳಿಗೆ ಮುಗಿಬೀಳುವುದು ಕಂಡುಬರುತ್ತದೆ. ಹಾಲಿನಿಂದ ತಯಾರಿಸಲ್ಪಡುವ ಚಾಕಲೇಟ್ ಇದ್ದುದರಲ್ಲಿ ಒಳ್ಳೆಯದು ಎಂಬ ಕಲ್ಪನೆಯಿದೆ. ನಿಜ, ಹಾಲಿನ ಪ್ರಮಾಣ ಹೆಚ್ಚಿದ್ದರೆ ಒಳ್ಳೆಯದೇ. ಅಸಲಿಗೆ ಅವು ಚಾಕಲೇಟ್‌ನಲ್ಲಿ ಎಷ್ಟು ಇದೆ ಎಂಬುದು ಸಂಶಯ!
ನವದೆಹಲಿಯ ‘ವಾಯ್ಸ್’ ಸಂಸ್ಥೆ ಎನ್‌ಎಬಿಎಲ್ ಪ್ರಯೋಗಾಲಯದಲ್ಲಿ ೬ ತಿಂಗಳ ಕಾಲ ಚಾಕಲೇಟ್‌ಗಳ ನಾನಾತರದ ಪರೀಕ್ಷೆ ಮಾಡುತ್ತದೆ. ನೆಸ್ಲೆ ಬಾರ್ ಒನ್ ಹಾಗೂ ಅಮುಲ್ ಚಾಕೋಜೂನಂತ ಬ್ರಾಂಡ್‌ನಲ್ಲಿ ಇರುವ ಹಾಲಿನ ಪ್ರಮಾಣ ಎಷ್ಟು ಕಡಿಮೆ ಎಂದರೆ ಲ್ಯಾಬ್ ಟೆಸ್ಟ್‌ನಲ್ಲಿ ಪತ್ತೆಯಾಗುವುದೇ ಇಲ್ಲ!
ಮಾರ್‍ಸ್ ಬ್ರಾಂಡ್‌ನಲ್ಲಿ ಶೇ.೧೪.೫೮ರ ಹಾಲು ಪ್ರಮಾಣವಿರುವುದು ಉಲ್ಲೇಖಾರ್ಹ. ಉಳಿದವುಗಳಲ್ಲಿ ಶೇ. ೫ರ ಆಚೀಚೆಯಲ್ಲಿಯೇ ಹಾಲಿನ ಪ್ರಮಾಣವಿರುವುದು ವ್ಯಕ್ತ. 
ಯೋಚಿಸಬೇಕಾದವರು ನಾವು. ಶೇ.೫೦ ಸಕ್ಕರೆ, ಶೇ.೫ ಹಾಲು ಎಂದರೆ ಉಳಿದ ಶೇ.೪೫ ಭಾಗದಲ್ಲಿ ಪ್ರಿಜರ್‌ವೇಟಿವ್, ಬಣ್ಣ, ಸ್ವಾದದ ರಾಸಾಯನಿಕಗಳು. ಮಕ್ಕಳನ್ನೇ ಹೆಚ್ಚಾಗಿ ಆಕರ್ಷಿಸುವ ಚಾಕಲೇಟ್‌ಗಳನ್ನು ಹಟಕ್ಕೆ ಬಿದ್ದವರಂತೆ ತಿನ್ನಿಸುವ ನಾವು ಅಕ್ಷರಶಃ ಮಾಡುತ್ತಿರುವುದೇನು? 
ಮಕ್ಕಳಿಗೆ ಖುದ್ದು ವಿಷ ಇಕ್ಕುತ್ತಿದ್ದೇವೆ!
ಎರಡು ವಿಷಯ ಪ್ರಸ್ತಾಪಾರ್ಹ. ಇನ್ನು ಮುಂದೆ ಚಾಕಲೇಟ್ ಖರೀದಿಸುವವರು, ಅದರೊಳಗೆ ಅಳವಡಿಸಿರುವ ಅಂಶಗಳನ್ನು ಲೇಬಲ್‌ನಲ್ಲಿ ಓದಿ ನಂತರವೇ ಕೊಳ್ಳುವುದು ಕ್ಷೇಮ. ಆದರೆ ಲೇಬಲ್‌ನಲ್ಲಿ ಮಾಹಿತಿ ಇರುವುದಿಲ್ಲ, ಮುದ್ರಿಸಿರುವುದಿಲ್ಲ ಎಂಬುದೇ ದೊಡ್ಡ ದೂರು. ಆಗಲೂ ಒಳ್ಳೆಯ ಚಾಕಲೇಟ್‌ನ ಪರೀಕ್ಷೆಗೆ ಒಂದು ಸರಳ ಕ್ರಮವಿದೆ. ಆ ಚಾಕಲೇಟ್‌ನಲ್ಲಿ ಕೆಲಕಾಲ ಕೈಯಲ್ಲಿ ಭದ್ರವಾಗಿ ಹಿಡಿದುಕೊಳ್ಳಬೇಕು. ಅದೆಷ್ಟು ಬೇಗ ಮೆದುವಾಗುತ್ತದೋ ಅಷ್ಟು ಯೋಗ್ಯ. ಕೊಕೋ ಪ್ರಮಾಣ ಹೆಚ್ಚಿದೆ ಎಂದುಕೊಳ್ಳಬಹುದು.
ಲೇಬಲ್‌ನಲ್ಲಿ ಅದನ್ನು ಚಾಕೋಲೇಟ್ ಎಂದು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಅಮುಲ್ ಚಾಕೋಜೂ ಬ್ರಾಂಡ್ ಚಾಕಲೇಟ್ ಅಲ್ಲವೇ ಅಲ್ಲ. ಅದು ಚಾಕೋಬೈಟ್! !

ಚಾಕಲೇಟ್ - ಸಿಹಿ ಸ್ಥಾನ

ನವದೆಹಲಿಯ ಕನ್ಸ್ಯೂಮರ್ ವಾಯ್ಸ್ ಖ್ಯಾತಿವೆತ್ತ ೧೩ ಚಾಕಲೇಟ್ ಬ್ರಾಂಡ್‌ಗಳನ್ನು ಪರೀಕ್ಷೆಗೊಳಪಡಿಸಿದೆ. ತೂಕ, ಪ್ಯಾಕಿಂಗ್‌ಗಳೂ ಸೇರಿದಂತೆ ಆಹಾರ ದ್ರವ್ಯ ಪರೀಕ್ಷೆ ನಡೆಸಿ ರ್‍ಯಾಂಕಿಂಗ್ ನೀಡಿದೆ. ಆ ಪಟ್ಟಿ ಕೆಳಗಿದೆ. ಖರೀದಿಗೆ ಮುನ್ನ ಈ ಮಾಹಿತಿಯನ್ನು ನೀವು ಅಳವಡಿಸಿಕೊಂಡರೆ .... ಬಿಡಿ, ಅದು ನಿಮ್ಮದೇ ಆರೋಗ್ಯದ ವಿಷಯ. ನಮಗ್ಯಾಕೆ!? 
ಮಿಲ್ಕೀ ಚಾಕಲೇಟ್ ವರ್ಗದಲ್ಲಿ,
೧. ಕ್ಯಾಡ್‌ಬರಿ ಡೈರಿ ಮಿಲ್ಕ್
೨. ನೆಸ್ಲೆ ಮಿಲ್ಕ್
೩. ಟೋಬ್ಲೆರಾನ್
೪. ಮಾರ್‍ಸ್
೫. ವ್ಯಾನ್ ಹೌಟೆನ್
೬. ಕ್ಯಾಡ್ ಬರಿ ಫೈವ್ ಸ್ಟಾರ್
೭. ನೆಸ್ಲೆ ಬಾರ್ ಒನ್
೮. ಅಮುಲ್ ಚಾಕೋಜೂ
ಮಿಶ್ರ ಮಾದರಿ ವರ್ಗದಲ್ಲಿಲ,
೧. ಕ್ಯಾಡ್‌ಬರಿ ಟೆಂಪ್ಟೇಷನ್ ಆಲ್ಮಂಡ್ ಟ್ರೀಟ್
೨. ಕ್ಯಾಡ್‌ಬರಿ ಫ್ರೂಟ್ ಎಂಡ್ ನಟ್ 
೩. ಫೆರೆರೋ ರೋಚೆರ್
೪. ಮಿಸ್ಬಿಸ್ ಸ್ಲೋಬಾರ್‍ಸ್ 
೫. ಕ್ಯಾಡ್‌ಬರಿ ಕ್ರಾಕ್ಲ್

ಇನ್ನೊಂದು ಮುಖ

ಚಾಕಲೇಟ್‌ನ ಸವಿಯನ್ನು ಮೆಂದು ಮೈ ಮರೆತಿರುವವರಿಗೆ ಹಿಂದಿನ ಕರಾಳ ವ್ಯವಸ್ಥೆಯೊಂದರ ಅರಿವು ಇರಲಿಕ್ಕೆ ಸಾಧ್ಯವಿಲ್ಲ. ಚಾಕಲೇಟ್‌ನ ಮುಖ್ಯ ಪದಾರ್ಥ ಕೊಕೋನ ಬಹುಪಾಲು ಆಮದುಗೊಳ್ಳುವುದು ಬಡ ಆಫ್ರಿಕನ್ ದೇಶಗಳಿಂದ. ಘಾನಾ ದೇಶ ತನ್ನ ರಫ್ತಿನಿಂದ ಗಳಿಸುವ ಆದಾಯದಲ್ಲಿ ಶೇ. ೪೬ ಕೊಕೋ ಬಾಬತ್ತಿನದು-ಅದೇ ಐವರಿ ಕೋಸ್ಟಾ ವಿಶ್ವ ಮಾರುಕಟ್ಟೆಯ ಶೇ. ೪೩ ಭಾಗವನ್ನು ತಾನೇ ಪೂರೈಸುತ್ತದೆ.
ಅತ್ಯಂತ ಕಡಿಮೆ ಬೆಲೆಗೆ ಕೊಕೋವನ್ನು ರಫ್ತು ಮಾಡಲು ಪಶ್ಚಿಮ ಆಫ್ರಿಕಾ ದೇಶಗಳಿಗೆ ಸಾಧ್ಯವಾಗುವುದು ಬಾಲ ಕಾರ್ಮಿಕರಿಂದ! ಒಂದು ಅಂದಾಜಿನ ಪ್ರಕಾರ, ೨ ಲಕ್ಷದ ೮೪ ಸಾವಿರ ಮಕ್ಕಳು ಅಹರ್ನಿಶಿ ಜುಜುಬಿ ಸಂಬಳಕ್ಕೆ ದುಡಿಯುತ್ತಿದ್ದಾರೆ. ೨೦೦೦ದಲ್ಲೊಮ್ಮೆ ಅಮೆರಿಕದ ಕಾರ್ಮಿಕ ಇಲಾಖೆ ತನಿಖೆ ನಡೆಸಿ ಕಂಡುಹಿಡಿದಿತ್ತು. ಆ ವರ್ಷ ಘಾನಾದಲ್ಲಿ ೯ ರಿಂದ ೧೨ರ ಮಧ್ಯದ ೧೫ ಸಾವಿರ ಮಕ್ಕಳು ಹತ್ತಿ, ಕಾಫಿ, ಕೊಕೋ ಪ್ಲಾಂಟೇಷನ್‌ಗೆ ಮಾರಲ್ಪಟ್ಟಿದ್ದರು. ಇವರೆಲ್ಲ ಕಳ್ಳ ಸಾಗಾಣಿಕೆಯಾದ ಮಕ್ಕಳು! ಅಲ್ಲಿನ ಕಾರ್ಮಿಕರ, ಅವರ ಕುಟುಂಬಗಳ ಸ್ಥಿತಿ ಹೀನಾಯ.
ಚಾಕಲೇಟ್ ಕಂಪನಿಗಳು ಮಾತ್ರ ಅದಕ್ಕೂ ತಮಗೂ ಸಂಬಂಧವಿಲ್ಲ ಎಂತಲೇ ವಾದಿಸುತ್ತವೆ. ತಾವು ಕೊಕೋವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆಯೇ ವಿನಃ ಕಾರ್ಮಿಕ ಶೋಷಣೆಯನ್ನು ಬೆಂಬಲಿಸುವುದಿಲ್ಲ. ಆದರೆ ಸದರಿ ವಿಚಾರದಲ್ಲಿ ತಾವು ಅಸಹಾಯಕರು ಎನ್ನುತ್ತಾರೆ.
ಕೊನೆ ಪಕ್ಷ ಅಮೆರಿಕನ್ ಕಂಪನಿಗಳ ವಿಚಾರದಲ್ಲಿ ಇದು ಸುಳ್ಳು. ಅಲ್ಲಿನ ಹೆರ್ಷೆಯ್ ಹಾಗೂ ಮಾರ್‍ಸ್ ಚಾಕಲೇಟ್ ಕಂಪನಿಗಳು ಬೃಹತ್ ಮಾರುಕಟ್ಟೆಯ ಭಾಗವಾಗಿದ್ದು, ಅವು ಅನಾಯಾಸವಾಗಿ ಕೊಕೋ ಕಾರ್ಮಿಕರ ಕಲ್ಯಾಣದ ಷರತ್ತು ಒಡ್ಡಿ ಕಚ್ಚಾ ಕೊಕೋ ಖರೀದಿಸಬಹುದು. ಈ ಕಂಪನಿಗಳ ಒತ್ತಡವನ್ನು ಭರಿಸಲು ಪ್ಲಾಂಟೇಶನ್ ಮಾಲಿಕರಿಗೆ ಸಾಧ್ಯವಿಲ್ಲ.
ಒಂದು ಪೌಂಡ್ ಚಾಕಲೇಟ್‌ಗೆ ೪೦೦ ಕೊಕೋ ಬೀಜ ಹೆಕ್ಕುವ ಆಫ್ರಿಕನ್ ಬಾಲಕ ಮಾತ್ರ ತನ್ನ ಜೀವಮಾನದಲ್ಲಿ ಹೊಳೆಯುವ ಪ್ಯಾಕ್‌ನಲ್ಲಿರುವ ಚಾಕಲೇಟ್ ರುಚಿ ನೋಡುವುದೇ ಇಲ್ಲ!

ಕೊನೆ ಮಾತು - ಚಾಕಲೇಟ್‌ಗಳಲ್ಲೂ ಕೆಲವು ಮೊಟ್ಟೆಯ ಬಿಳಿ ಅಂಶ ಬಳಸಿಕೊಂಡಿರುತ್ತವೆ. ಉದಾಹರಣೆಗೆ, ಮಾರ್‍ಸ್ ಹಾಗೂ ಟೋಬ್ಲೆರಾನ್ ಚಾಕಲೇಟ್‌ಗಳು ಸಸ್ಯಹಾರಿ ಅಲ್ಲ! ಹಾಗೆಂದು ಇವ್ಯಾವುದೇ ಚಾಕಲೇಟ್ ರ್‍ಯಾಪರ್‌ನಲ್ಲಿ ಕೆಂಪು ಚುಕ್ಕೆ, ಹಸಿರು ಚುಕ್ಕೆ ಇಲ್ಲ!
ಇನ್ನುಳಿದಂತೆ, ಚಾಕಲೇಟ್ ಬಗ್ಗೆ ತೀರ್ಮಾನ ನಿಮ್ಮದು.
-ಮಾವೆಂಸ

11 comments:

ಹರೀಶ ಮಾಂಬಾಡಿ ಹೇಳಿದರು...

please change your font style
it is not visible

NilGiri ಹೇಳಿದರು...

ಮಾಹಿತಿಯುಕ್ತ ಲೇಖನ. ಹಾಗೆಯೇ ಚೀನಾದಿಂದ ಆಮದಾಗುವ ಚಾಕಲೇಟುಗಳ ಬಗ್ಗೆಯೂ ತಿಳಿಸಿದ್ದರೆ ಒಳ್ಳೆಯದಿತ್ತು. ಅದರಲ್ಲಿ ಮೆಲಮೈನ್(Melamine) ಎನ್ನುವ ರಾಸಾಯನಿಕ ವಸ್ತು ಕಂಡುಬಂದಿದ್ದರಿಂದ ಇಲ್ಲಿ ಚೈನಾ ಚಾಕಲೇಟುಗಳನ್ನು ಬ್ಯಾನ್ ಮಾಡಿದ್ದಾರೆ.

ರಮೇಶ್ ಹಿರೇಜಂಬೂರು ಹೇಳಿದರು...

hi mavemsa, nimma chakotale tindiri joke tumba channagide... indin dinamanagalalli intha lekhanada avashyakate tumba ide.
-Ramesh Hirejambur.

ಯಜ್ಞೇಶ್ (yajnesh) ಹೇಳಿದರು...

ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

ಮಾವೆಂಸ ಹೇಳಿದರು...

@ಮಾಂಬಾಡಿ,
ನಮಸ್ಕಾರ. ಫಾಂಟ್ ನಿಮ್ಮ ನೆಟ್‌ಗೆ ಮಾತ್ರ ಯಾಕೆ ಕೈಕೊಡುತ್ತಿದೆ ಗೊತ್ತಾಗುತ್ತಿಲ್ಲ. ಉಳಿದ ಹಲವರು ಓದಿ ಪ್ರತಿಕ್ರಿಯಿಸುತ್ತಿದ್ದಾರೆ. ಅದಿರಲಿ, ಎಲ್ಲರಿಗೂ ಓದುವಂತೆ ಮಾಡಲು ಯಾವ ಫಾಂಟ್ ಬಳಸಬೇಕು? ತಿಳಿಸಿ ಪ್ಲೀಸ್.... ಕನ್ನಡಪ್ರಭದಲ್ಲಿ ಇರುವಿರೇ ಹೇಗೆ?

@ನೀಲಗಿರಿ,
ಚೀನಾ ಚಾಕಲೇಟ್‌ಗಳ ಬಗ್ಗೆ ಗೊತ್ತಿರಲಿಲ್ಲ. ಈ ಚೀನಾದ ಯಾವುದೇ ಪದಾರ್ಥ ಅಪಾಯ ಎಂಬುದು ರುಜುವಾತಾಗಿದೆ. ಮೊನ್ನೆ ಮೊನ್ನೆ ಮಕ್ಕಳ ಮಿಲ್ಕ್ ಪೌಡರ್ ತಿಂದು ಅಲ್ಲಿ ಹಸುಕಂದಮ್ಮಗಳು ಸತ್ತವಲ್ಲ..... ನಿಮ್ಮ ಮಾಹಿತಿಗೆ ಸಲಾಂ. ಹೀಗೆ ಪ್ರತಿಕ್ರಿಯಿಸುತ್ತಿರಿ....

@ರಮೇಶ್ ಹಿರೇಜಂಬೂರು
ಧನ್ಯವಾದಗಳು. ನಿಮ್ಮ ಮೆಚ್ಚುಗೆ ನನಗೆ ಸಾವಿರ ಆನೆಯ ಬಲ ತಂದಂತೆ...... ನಿಮ್ಮ ಬ್ಲಾಗ್ ನೋಡಿದ ನಂತರ ಪ್ರತಿಕ್ರಿಯಿಸುವೆ.

@ಯಜ್ಞೇಶ್,
ಟೀಕೆ ಟಿಪ್ಪಣಿ ಇದ್ದರೂ ನಾನು ತೆರೆದಿದ್ದೇನೆ...... ಸ್ತುತಿಗೆ ಚೂರು ನಾಚಿಕೆಯೇ!!

sunaath ಹೇಳಿದರು...

ಬಂಡವಾಳಶಾಹಿ ದೇಶಗಳ concern ಏನಿದ್ದರೂ ಬಾಯಿಬಡಾಯಿಗೆ ಮಾತ್ರ ಸೀಮಿತ.

Unknown ಹೇಳಿದರು...

Tumbane Chennagide....
poorti oodide..
kushiyayitu.../.

ಮಾಧ್ವ ಯುವ ವೇದಿಕೆ, ಮೈಸೂರು ಹೇಳಿದರು...

ಶ್ರೀಯುತ ಮಾವೆಂಸ ರವರಿಗೆ ನನ್ನ ನಮಸ್ಕಾರಗಳು,
ನಿಮಗೆ ಧನ್ಯವಾದಗಳು, ಚಾಕಟೇಟ್ ಬಗ್ಗೆ ಇಷ್ಟೊಂದು ಮಾಹಿತಿ ಗೊತ್ತಿರಲಿಲ್ಲ, ಮತ್ತು ಮೊನ್ನೆ ನಾನು ನೀಲಗಿರೀಸ್ ಸೆಂಟರ್ (ಮೈಸೂರಿನಲ್ಲಿ )ನಲ್ಲಿ ಚಾಕಲೇಟ್ ತೆಗೆದುಕೊಳ್ಳುವ ಮುನ್ನ ಹಿಂದಿನ ಲೇಬಲ್ ನ್ನು ಓದಿದೆ ಅದರಲ್ಲಿ ಮೊಟ್ಟೆಯ ಬಿಳಿ ಪುಡಿ ಇರುವ ಬಗ್ಗೆ ಮಾಹಿತಿ ಇತ್ತು, ಮತ್ತು ನಾನು ಯಾವುದೇ ಕಾರಣಕ್ಕೂ ವಿದೇಶದಲ್ಲಿ ತಯಾರಾದ ಚಾಕಲೇಟ್ ಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ತಿನ್ನುವುದಿಲ್ಲ. ನಮ್ಮ ಸಸ್ಯಹಾರಿ ಸ್ನೇಹಿತರಲ್ಲಿ ಒಂದು ಕಿವಿಮಾತು, ತಾವು ಚಾಕಲೇಟ್ ಪ್ರಿಯರಾಗಿದ್ದಲ್ಲಿ ವಿದೇಶ ಅದರಲ್ಲೂ ದುಬೈನಲ್ಲಿ ತಯಾರಾದ ಚಾಕಲೇಟ್ ಗಳನ್ನು ತೆಗೆದುಕೊಳ್ಳುವುದು ಬೇಡ ಏಕೆಂದರೆ ಸಾಮಾನ್ಯವಾಗಿ ಅದರಲ್ಲಿ ಮೊಟ್ಟೆಯನ್ನು ಹಾಕಿರುತ್ತಾರೆ ಅಥವಾ ಪ್ರಾಣಿಗಳ ಕೊಬ್ಬನ್ನು ಸೇರಿಸಿರುತ್ತಾರೆ. ಚಾಕಲೇಟ್ ಕೊಳ್ಳುವ ಮುನ್ನ ಲೇಬಲ್ ನ್ನು ಪೂರ್ಣವಾಗಿ ಓದಿ ನಂತರ ಆಯ್ಯೆಮಾಡಿಕೊಳ್ಳುವುದು ಒಳಿತು.
ಗುರು

ರಾಜೇಶ ಹೆಗಡೆ / Rajesh Hegde / राजेश हेगडे ಹೇಳಿದರು...

lekhana tumba chennagide :) chocolate bagge halavu vishayagalu tilidavu.

innu ide reetiya barahagaLu barali.

VandanegaLu
--Rajesh Hegde
www.vismayanagari.com

ಅನಾಮಧೇಯ ಹೇಳಿದರು...

nanu kuwaitnalli eedene monne chocolate tegedukonde.horagininda nodalu tumba chennagittu.yako lable oduva anisitu nodidaga beef kobbu add madidare anta tiliyitu.matte adannu alle ettu bitte.eega yava vastu tegedu kollabekadaru odi tegedukolluttene.

ಮಾವೆಂಸ ಹೇಳಿದರು...

@ ಎಲ್ಲ ಓದುಗರಿಗೆ,
ಚಾಕಲೇಟ್ ತಿನ್ನುವ ಮುನ್ನ ಸಾವಿರ ಬಾರಿ ಯೋಚಿಸಬೇಕಾಗುತ್ತದೆ ಎಂಬುದು ಇನ್ನೊಮ್ಮೆ, ಬರಹ ಓದಿದ ಗುರು, ಅನಾಮಿಕರ ಪ್ರತಿಕ್ರಿಯೆಯಿಂದ ಸ್ಪಷ್ಟ. ಮೆಚ್ಚುಗೆ ಇತ್ತ ಸುನ್ನಾತ್, ರಾಜೇಶ್, ವಿವೇಕ್‌ರಿಗೆ ನನ್ನಿಂದ ಚಾಕಲೇಟ್!!
-ಮಾವೆಂಸ

 
200812023996