ಭಾನುವಾರ, ಜುಲೈ 26, 2009

ಚೆಕ್ ಸಂಗ್ರಹಣೆ ದರಗಳು

ಸ್ನೇಹಿತ ರಾಮಸ್ವಾಮಿ ಕಳಸವಳ್ಳಿ ಬ್ಯಾಂಕ್ ಒಂದರ ಉದ್ಯೋಗಿ. ಅವರು ಈ ಮಾಹಿತಿಯನ್ನು ಅವರದೇ ಶೈಲಿಯಲ್ಲಿ ತಿಳಿಸಿದ್ದಾರೆ. ನಿಮಗೆಲ್ಲ ಅನುಕೂಲವಾದೀತೆಂಬ ಕಾರಣಕ್ಕೆ ಇಲ್ಲಿ ಸ್ಥಳಾವಕಾಶ ನೀಡಿರುವೆ. ಮಾಹಿತಿ ಕೊಟ್ಟ ರಾಮ್ಸ್‌ರಿಗೆ ವಂದನೆಗಳು.....
-ಮಾವೆಂಸ


ಈಗ ಹೆಚ್ಚಿನ ಜನ ಬ್ಯಾಂಕಿನ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಈಗಿನ ಜಮಾನದಲ್ಲಿ ಇದು ಅನಿವಾರ್ಯವಾಗಿ ಬಿಟ್ಟಿದೆ. ಸರ್ಕಾರದ ಯಾವೊಂದು ಸವಲತ್ತುಗಳನ್ನು ಪಡೆಯಬೇಕಿದ್ದರೂ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕಾದ್ದು ಅನಿವಾರ್ಯ. ಸರ್ಕಾರ ನೀಡುವ ಎಲ್ಲಾ ಸಹಾಯಧನಗಳನ್ನು ಚೆಕ್ಕುಗಳ ಮೂಲಕ ವಿತರಿಸಲಾಗುತ್ತಿದೆ. ಇದು ಸಾಮಾನ್ಯ ಜನರ ಪಾಡಾದರೆ ಇನ್ನುಳಿದ ವ್ಯವಹಾರಸ್ಥರು, ನೌಕರರು ಸಹಾ ಇನ್ಯಾವುದೇ ಉದ್ದೇಶಗಳಿಗೆ ಪಡೆದ ಚೆಕ್ಕುಗಳನ್ನು ನಗದೀಕರಿಸಲು ಬ್ಯಾಂಕುಗಳಲ್ಲಿ ಸಂಗ್ರಹಣೆಗೆ(ಕಲೆಕ್ಷನ್) ಹಾಕುವುದು ಅನಿವಾರ್ಯ. ಈ ರೀತಿಯ ಚೆಕ್ಕುಗಳ ಸಂಗ್ರಹಣೆಗೆ ಒಂದೊಂದು ಬ್ಯಾಂಕುಗಳು ತರಹವಾರಿ ಸೇವಾಶುಲ್ಕ ವಿಧಿಸುತ್ತಿದ್ದರು. ಜೊತೆಗೆ ಚೆಕ್ಕಿನ ಮೊತ್ತಕ್ಕನುಗುಣವಾಗಿ ಅಂಚೆವೆಚ್ಚ ಬೇರೆ ಖಟಾವುಗೊಳ್ಳುತ್ತಿತ್ತು. ಇದು ಕೂಡಾ ಒಂದೇ ರೀತಿಯಾಗಿರಲಿಲ್ಲ. ಒಂದು ಬ್ಯಾಂಕು ಕೊರಿಯರ್ ವೆಚ್ಚ ವಸೂಲಿ ಮಾಡಿದರೆ ಕೆಲವು ಬ್ಯಾಂಕುಗಳು ಅಷ್ಟೇ ಮೊತ್ತದ ಚೆಕ್ಕಿಗೆ ರಿಜಿಸ್ಟರ್ ಅಂಚೆ ವೆಚ್ಚ ವಸೂಲಿ ಮಾಡುತ್ತ್ತಿದ್ದವು. ಇಂತಹ ವಿವಿಧ ಚೆಕ್ ಸಂಗ್ರಹಣಾ ವೆಚ್ಚವನ್ನು ವಸೂಲಿ ಮಾಡುತ್ತಿರುವ ಬ್ಯಾಂಕುಗಳ ನೀತಿಗೆ ಕಡಿವಾಣ ಹಾಕಿರುವ ರಿಸರ್ವ್ ಬ್ಯಾಂಕ್ ಒಂದೇ ರೀತಿ ಚೆಕ್ ಸಂಗ್ರಹಣ ಸೇವಾಶುಲ್ಕ ವಿಧಿಸಬೇಕೆಂದು ೨೦೦೮ ರ ಅಕ್ಟೋಬರ್ ತಿಂಗಳಿನಲ್ಲಿಯೇ ಆದೇಶವಿತ್ತಿದೆ. ಈ ಬಗ್ಗೆ ಬಳಕೆ ತಿಳುವಳಿಕೆಯಲ್ಲಿ ವಿವರವಾಗಿ ತಿಳಿಸಿದ್ದೇವೆ. ಆದರೆ ಕೆಲವು ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ಈ ಅದೇಶಕ್ಕೆ ಗೌರವ ತೋರಿಸದೇ ಗ್ರಾಹಕ ವಿರೋಧಿ ನೀತಿಯನ್ನು ಅನುಸರಿಸಿ ಕಾನೂನು ಮುರಿಯುತ್ತಿವೆ. ಮತ್ತೊಮ್ಮೆ ಓದುಗರ ನೆನಪಿಗಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಸುತ್ತೋಲೆ ಸಂ. RBI / 2008-09 / 207 DPSS.CO.No. 611 / 03.01.03(P) / 2008-09 ದಿನಾಂಕ ೦೮.೧೦.೨೦೦೮ ರ ಸಾರಾಂಶವನ್ನು ಮತ್ತೆ ಕೊಡುತ್ತಿದ್ದೇವೆ. ಅನ್ಯಾಯಕ್ಕೊಳಗಾದ ಗ್ರಾಹಕರು ತಮ್ಮ ವಹಿವಾಟು ನಡೆಸುತ್ತಿರುವ ಬ್ಯಾಂಕುಗಳಿಗೆ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಹಕ್ಕೊತ್ತಾಯ ಮಾಡಬೇಕಿದೆ.

ಹೊರ ಪ್ರದೇಶಗಳ ಚೆಕ್ ಸಂಗ್ರಹಣ ಸೇವಾಶುಲ್ಕ
ರೂ.೧೦,೦೦೦ ದ ವರಗೆ ರೂ.೫೦.೦೦
ರೂ.೧೦,೦೦೧ರಿಂದರೂ.೧ಲಕ್ಷದವರೆಗೆ ರೂ.೧೦೦.೦೦
ರೂ.೧,೦೦,೦೦೧ ರಿಂದ ಮೇಲ್ಪಟ್ಟು ರೂ.೧೫೦.೦೦
ಎಷ್ಟೇ ಮೊತ್ತವಿದ್ದರೂ

ಈ ರೀತಿಯ ಚೆಕ್ ಸಂಗ್ರಹಣ ಸೇವಾಶುಲ್ಕದಲ್ಲಿ ಅಂಚೆವೆಚ್ಚ/ಕೊರಿಯರ್ ವೆಚ್ಚ ಎಲ್ಲಾ ಸೇರಿದೆ. ಅದಕ್ಕೆ ಮತ್ತೆ ಪ್ರತ್ಯೇಕ ಶುಲ್ಕವಿಧಿಸುವಂತಿಲ್ಲ.

- ರಾಮಸ್ವಾಮಿ ಕಳಸವಳ್ಳಿ

 
200812023996