ಸೋಮವಾರ, ಜೂನ್ 29, 2009

ಟ್ವೆಂಟಿ ಕ್ರಿಕೆಟ್ಟೂ, ಪಾಕ್ ವಿಜಯ ಸಂಭ್ರಮವೂ....ಟ್ವೆಂಟಿ ೨೦ ವಿಶ್ವಕಪ್‌ನ ಎರಡನೇ ಆವೃತ್ತಿ ಭಾರತೀಯರಲ್ಲಿ ಎರಡು ಕಾರಣಕ್ಕೆ ಬೇಸರವನ್ನು ತಂದಿದೆ. ಮೊದಲನೆಯದು ನೇರವಾದ ಅಂಶ, ನಾವು ಹಾಲಿ ಚಾಂಪಿಯನ್ ಎನ್ನಿಸಿಕೊಂಡೂ ಸೂಪರ್ ಎಂಟರ ಹಂತ ದಾಟಲಿಲ್ಲ. ಆ ಸುತ್ತಲ್ಲಿ ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಇದು ಬೇಸರ ತರುವುದು ಸಹಜ. ಇನ್ನೊಂದು, ಒಂದೇಟಿಗೆ ಒಪ್ಪಿಕೊಳ್ಳುವುದು ಕಷ್ಟವಾಗುವಂತದು. ಅದು ಪಾಕಿಸ್ತಾನದ ಪ್ರಶಸ್ತಿ ಗೆಲವು! ಪ್ರತಿಯೊಬ್ಬ ಭಾರತೀಯನಿಗೂ ಫೈನಲ್‌ನಲ್ಲಿ ಶ್ರೀಲಂಕಾ ತಂಡವೇ ಪಾಕಿಸ್ತಾನವನ್ನು ಸೋಲಿಸಲಿ ಎಂಬ ಆಶಯ ಇದ್ದರೆ ಅದು ತಪ್ಪು ಎನ್ನಲಾಗದು. ಆದರೆ.....
ಪಾಕ್‌ನ ಟಿ೨೦ ದಿಗ್ವಿಜಯ ಕ್ರಿಕೆಟ್ ವಿಶ್ವದ ಮಟ್ಟಿಗೆ ಸ್ವಾಗತಾರ್ಹವಾದುದು. ಪದೇ ಪದೇ ಆಸ್ಟ್ರೇಲಿಯಾವೋ, ಮತ್ತೆ ಭಾರತವೋ ವಿಶ್ವಕಪ್‌ನ್ನು ಎತ್ತುವುದು ಹೊಸ ವಲಯಗಳಿಗೆ ಉತ್ತೇಜನ ಕೊಡುವ ಗುರಿಗೆ ತೊಡಕೇ. ಆ ಲೆಕ್ಕದಲ್ಲಿ ಪಾಕ್ ಗೆದ್ದುದು ಡಬಲ್ ಬೋನಸ್. ಅಲ್ಲಿನ ಕ್ರಿಕೆಟ್ ತಂಡದಲ್ಲಿ ಪ್ರತಿಭೆಗಳಿದ್ದರೂ ನಮ್ಮ ರಾಜಕೀಯ ವಲಯವನ್ನು ನಾಚಿಸುವಂತ ಭಿನ್ನಮತವಿದ್ದುದು ಫಲಿತಾಂಶದಲ್ಲಿ ಸದಾ ಪ್ರತಿಫಲಿಸುತ್ತಿತ್ತು. ಆ ತಂಡದಲ್ಲಿ ಈ ವಿಜಯ ಒಗ್ಗಟ್ಟನ್ನು ಮೂಡಿಸಿದರೆ ಜಯದ ಮೌಲ್ಯ ಹೆಚ್ಚೀತು.
ಮುಖ್ಯವಾಗಿ, ಪಾಕ್‌ನ ಬಡ ಪ್ರಜೆಗೆ ಇದು ಮರುಭೂಮಿಯ ಓಯಸಿಸ್. ಭಾರತ ತಂಡದ ಪ್ರವಾಸ ರದ್ದಾದ ದುಃಖ ಮತ್ತು ಆ ಗಾಯದ ಮೇಲೆ ಬರೆಯೆಳೆದಂತೆ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದ ಮಾರಣಾಂತಿಕ ದಾಳಿ ಆತನಿಗೆ ಸ್ವದೇಶದಲ್ಲಿ ಪಾಕ್ ತಂಡ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ನೋಡುವುದರಿಂದ ವಂಚಿಸಿತ್ತು. ಪಾಕ್‌ಗೆ ಬರಲು ಕೊನೆಗೆ ಬಾಂಗ್ಲಾ ದೇಶವೂ ನಿರಾಕರಿಸುವ ಸ್ಥಿತಿ ಬಂದಿದೆ!
ಇದರರ್ಥ ಪಾಕ್ ಆಟಗಾರರಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಕಡಿಮೆಯಾಗಿದೆ. ಐಪಿಎಲ್‌ನಲ್ಲಿ ಪ್ರವೇಶ ನಿರ್ಬಂಧ. ಐಸಿಎಲ್‌ನಲ್ಲಿ ‘ಲಾಹೋರ್ ಬಾದ್‌ಶಾಹ್’ಗಳಾದರೂ ಅಲ್ಲಿ ಪಂದ್ಯಗಳೆ ನಡೆಯುತ್ತಿಲ್ಲ. ಇಂತಹ ವೇಳೆ ಟ್ವೆಂಟಿ ೨೦ ವಿಶ್ವಕಪ್ ಗೆಲುವು ಒಂದು ನಿಟ್ಟುಸಿರು ಹುಟ್ಟಿಸಿರಬಹುದು. ಅಲ್ಲಿನ ಯುವ ವರ್ಗಕ್ಕೆ ಮತೆ ಕ್ರಿಕೆಟ್ ಆಟದತ್ತ ಗಂಭೀರ ತರಬೇತಿಗೆ ಪ್ರೋತ್ಸಾಹಿಸಬಹುದು. ಅಷ್ಟೇಕೆ, ಇತರ ರಾಷ್ಟ್ರಗಳು ಪಾಕಿಸ್ತಾನಕ್ಕೆ ಒಂದು ಚೂರು ಹೆಚ್ಚಿನ ಆದ್ಯತೆ ಕೊಟ್ಟು ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಬಹುದು. ಅದರ ಮೊದಲ ಕುರುಹು ಇದೀಗ ಸಿಕ್ಕಿದೆ. ಪಾಕ್ - ಆಸ್ಟ್ರೇಲಿಯಾ ನಡುವೆ ೨೦೧೦ರ ಸರಣಿಯ ಆತಿಥ್ಯ ವಹಿಸಲು ಇಂಗ್ಲೆಂಡ್ ಮುಂದೆ ಬಂದಿದೆ. ಮುಳುಗುತ್ತಿರುವವನಿಗೆ ಇದು ಹುಲ್ಲುಕಡ್ಡಿ!
ನಿಜ, ಕ್ರಿಕೆಟ್‌ನಲ್ಲಿ ಅದೃಷ್ಟದ್ದು ಮಹತ್ವದ ಪಾತ್ರ. ಇಂದು ಯೂನಿಸ್ ಖಾನ್‌ರ ತಂಡ ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದು, ಸೂಪರ್ ಎಂಟರ ಸೆಣಸಾಟದಲ್ಲಿ ಫೈನಲ್ ಎದುರಾಳಿ ಶ್ರೀಲಂಕಾದ ಎದುರೇ ಪರಾಜಿತರಾಗಿದ್ದು ನೆನಪಾಗುತ್ತದೆ. ಅದರ ಬೌಲಿಂಗ್, ಬ್ಯಾಟಿಂಗ್ ಅಥವಾ ಫೀಲ್ಡಿಂಗ್‌ಗಳಾವುವೂ ಅತ್ಯುತ್ತಮ ಮಟ್ಟದಲ್ಲಿರಲಿಲ್ಲ. ಇಂಗ್ಲೆಂಡ್ ಎದುರಿನದ್ದಂತೂ ಹೀನಾಯ ಸೋಲು. ಆದರೂ ಅದೃಷ್ಟ, ತಂಡ ಉಪಾಂತ್ಯ ತಲುಪಿತ್ತು. ಮುಂದಿನದು ಶಾಹೀದ್ ಅಫ್ರಿದಿ ಮ್ಯಾಜಿಕ್!
ಟ್ವೆಂಟಿ ೨೦ಯಲ್ಲಿ ಓರ್ವ ಅದ್ಭುತ ಆಟ ತೋರಿದರೂ ಸಾಕು. ತಂಡ ಗೆಲುವಿನತ್ತ ನಾಗಲೋಟ ಹಾಕಬಲ್ಲದು. ಆದರೆ ವಿಶ್ವಕಪ್‌ನ ಸ್ವರೂಪದಲ್ಲಿಯೇ ದೋಷಗಳಿವೆ. ಅದು ಪಾಕ್‌ನ ಗೆಲುವಿನಲ್ಲಿಯೂ ಪಾತ್ರ ವಹಿಸಿದೆ. ಸೂಪರ್ ಎಂಟರ ರೂಪರೇಷೆ ಬದಲಾಗಬೇಕು. ಇಲ್ಲಿ ಎಲ್ಲಾ ತಂಡಗಳು ಪರಸ್ಪರ ಮುಖಾಮುಖಿಯಾಗಬೇಕಿತ್ತು ಅಥವಾ ಒಂದು ಗುಂಪಿನ ತಂಡಗಳು ಎರಡೆರಡು ಬಾರಿ ಸೆಣಸಾಡಬೇಕಿದ್ದುದು ಸೂಕ್ತ. ಈ ವಿಶ್ವಕಪ್ ಕ್ಲುಪ್ತವಾಗಿ ನಡೆದುಹೋಗಿ ಅಸಲಿ ಚಾಂಪಿಯನ್‌ನ್ನು ಆರಿಸಲಾಗಿದೆ ಎಂದರೆ ಸಂಶಯ!
ಇವೆಲ್ಲ ಕಾರಣಗಳನ್ನು ನೀಡಿ ಪಾಕಿಸ್ತಾನದ ಅಪ್ರತಿಮ ವಿಜಯದ ಬೆಲೆಯನ್ನು ಇಳಿಸುವುದು ಉದ್ದೇಶವಲ್ಲ. ಸೆಮಿಫೈನಲ್, ಫೈನಲ್‌ಗಳೆರಡು ನಾಕ್‌ಔಟ್ ಸ್ಪರ್ಧೆಗಳಲ್ಲಿ ಪಾಕ್ ತೋರಿದ್ದು ಆಕರ್ಷಕ ಪ್ರದರ್ಶನ. ಪಕ್ಕಾ ವೃತ್ತಿಪರ ಸ್ಪರ್ಶ. ಉಮರ್ ಗುಲ್, ಅಫ್ರಿದಿ ಬೌಲಿಂಗ್, ಕಮ್ರಾನ್ ಅಕ್ಮಲ್‌ರ ಬ್ಯಾಟಿಂಗ್. ಒಟ್ಟಾರೆ ಫೀಲ್ಡಿಂಗ್ ತಲೆದೂಗುವಂತಿತ್ತು. ಗೆಲುವಿಗೆ ಸಲಾಂ. ಆದರೆ....
ಟ್ವೆಂಟಿ ೨೦ ಯಶಸ್ಸಿಗೆ ಕೆಲವು ಸೂತ್ರಗಳನ್ನು ಪಾಕ್ ಕಂಡುಕೊಂಡಂತಿದೆ. ಮೊದಲ ಆರು ಓವರ್‌ಗಳ ಪವರ್ ಪ್ಲೇನಲ್ಲಿ ರನ್‌ಗಳ ಹೊಳೆ ಹರಿಯುವುದು ತುಸು ಮಂದವಾದರೂ ಓ.ಕೆ. ಅಗ್ರ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪತನವಾಗದಿರುವುದು ಯಶಸ್ಸಿನ ಮಂತ್ರ. ಇದನ್ನು ಪಾಕ್ ವಿಭಿನ್ನ ಮಾದರಿಯಲ್ಲಿ ವ್ಯಾಖ್ಯಾನಿಸಿದೆ. ಅದು ಕಮ್ರಾನ್ ಅಕ್ಮಲ್‌ರನ್ನು ಪಿಂಚ್ ಹಿಟ್ಟರ್‌ನ್ನಾಗಿ ಬಳಸಿತು. ಬಹುಷಃ ಬರುವ ದಿನಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಪಿಂಚ್ ಹಿಟ್ಟರ್‌ಗಳನ್ನೇ ಕಣಕ್ಕಿಳಿಸುವುದು ಗಿಟ್ಟೀತು.
ಮೊದಲ ಹತ್ತು ಓವರ್‌ಗಳಲ್ಲಿ ೭೦-೮೦ ರನ್ ಗಳಿಸಿದರೂ ಮುಂದೆ ಅದೇ ಲಯವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಚೆಂಡು ಹಳೆಯದಾಗುವುದು, ಪಿಚ್ ಸ್ವಲ್ಪ ಮೃದುವಾಗುವುದು ಇದಕ್ಕೆ ಕಾರಣವಿರಬಹುದೇನೋ. ಆದರೆ ಪಾಕ್ ಉಮರ್ ಗುಲ್‌ರನ್ನು ಹತ್ತನೇ ಓವರ್‌ನ ನಂತರವೇ ಬೌಲಿಂಗ್‌ಗೆ ಇಳಿಸಿದ್ದು ಜಾಣ್ಮೆಯ ಪ್ರತೀಕ. ತಂತ್ರಗಾರಿಕೆಯ ಶೈಲಿಯ ಬೌಲರ್‌ಗಳನ್ನು ಇನ್ನಿಂಗ್ಸ್‌ನ ಎರಡನೇ ಭಾಗದಲ್ಲಿ ಬಳಸುವುದು ಇನ್ನು ಮುಂದೆ ಮಾದರಿಯಾಗಬಹುದು.
ಸ್ವಾರಸ್ಯವೆಂದರೆ, ಪಾಕ್‌ನಲ್ಲಿ ಯಾವತ್ತೂ ಯಶಸ್ಸು ಒಗ್ಗಟ್ಟನ್ನು ತಂದುಕೊಟ್ಟಿಲ್ಲ. ಹಿಂದೆ ೧೯೯೨ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗಲೂ ಇಮ್ರಾನ್‌ಖಾನ್‌ರಿಗೆ ಉಘೇ ಉಘೇ ಎನ್ನುವ ಬದಲು ಅವರ ಕ್ಯಾನ್ಸರ್ ಆಸ್ಪತ್ರೆ, ನಿಲುವುಗಳ ಬಗ್ಗೆ ತಂಡದೊಳಗಿನ ಆಕ್ಷೇಪ ಮುಗಿಲುಮಿಟ್ಟಿತ್ತು. ಈ ಬಾರಿ ಹಾಗಾಗದಿದ್ದರೆ ಸಾಕು. ಇದೇ ವೇಳೆ, ಗೆಲುವಿನ ಅಮಲಿನಲ್ಲಿ ಅಫ್ರಿದಿ ಭಾರತದ ವಿರುದ್ಧ ಕೆಂಡಕಾರಿದ್ದಾರೆ. ಫೈನಲ್‌ನಲ್ಲಿ ಅಫ್ರಿದಿ ಆಟ ಕಂಡವರಿಗೆ ಭವಿಷ್ಯದ ನಾಯಕ ಕಂಡರೆ ಇಲ್ಲಿ ನಿರಾಶೆ ಮೂಡಿಸಿದರು. ಗೆಲುವು ಅವರಲ್ಲಿ ಪ್ರಬುದ್ಧತೆಯನ್ನು ತಂದಂತಿಲ್ಲ!
ಒಂದು ಮಾತು - ಪಾಕ್ ಗೆಲುವಿಗಾಗಿ ಎಂತಹ ತಹತಹದಲ್ಲಿತ್ತು ಎಂದರೆ ತಾನೇ ಜೀವನಪರ್ಯಂತ ನಿಷೇಧ ಹೇರಿದ್ದ, ಅದು ರದ್ದಾದಾಗಲೂ ‘ಕೂಲಿಂಗ್ ಪೀರಿಯಡ್’ ಎಂದು ಒಂದು ವರ್ಷ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಇಲ್ಲ ಎಂಬ ನಿರ್ಬಂಧ ಸೂಚಿಸಿಯೂ ದಡಕ್ಕನೆ ಈ ಟಿ೨೦ ವಿಶ್ವಕಪ್‌ಗೆ ಅಬ್ದುಲ್ ರಜಾಕ್‌ರನ್ನು ಸೇರಿಸಿಕೊಂಡುಬಿಡುವುದೇ? ನೀತಿಗೆ ಕೊನೆಯ ಸ್ಥಾನ ಎಂಬ ರಾಜಕೀಯ ನೇತಾರರ ಅಜೆಂಡಾವೇ ಪಾಕ್ ತಂಡದ್ದೂ!
-ಮಾವೆಂಸ

 
200812023996