ಶನಿವಾರ, ಫೆಬ್ರವರಿ 21, 2009

ಪುಸ್ತಕ - ಮೂರು ಮತ್ತೊಂದು ಮಾಹಿತಿ ನೂರು ನೂರೊಂದು
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಜೆ.ಎಂ. ರಾಜಶೇಖರ್ ನನ್ನ ಆತ್ಮೀಯ ಸ್ನೇಹಿತರು. ಹಾಗಂತ ಈವರೆಗಿನ ಬದುಕಿ
ನಲ್ಲಿ ಅವರನ್ನು ಪ್ರತ್ಯಕ್ಷ ಕಂಡದ್ದು ಕೇವಲ ಒಮ್ಮೆ! ಬಿಡಿ, ಇಂತಹ ಹಲವರ ಸ್ನೇಹ ಬಳಗ ನನ್ನದು. ವಿಷಯ ಅದಲ್ಲ, ರಾಜಶೇಖರ್ ಹಲವು ವರ್ಷಗಳಿಂದ ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ದುಡಿಯುತ್ತಿದ್ದಾರೆ. ಮೂರು ವರ್ಷಗಳ ಕೆಳಗೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರವಂತೂ ಅವರು ‘ಮಾಹಿತಿ ತಜ್ಞ’ರೇ ಆಗಿದ್ದಾರೆ. ಬಹುಷಃ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದುದರಲ್ಲಿ ಗರಿಷ್ಟ ದಾಖಲೆ ಅವರದಿರಬಹುದು. ತಮ್ಮ ಅನುಭವದ ಆಧಾರದಲ್ಲಿ ರಾಜಶೇಖರ್ ಬರೆದ ಮೂರು ಪುಸ್ತಕಗಳು ಇತ್ತೀಚೆಗೆ ಬೆಳಕು ಕಂಡಿವೆ. 
ಭಾರತ ಪೌರರ ಬ್ರಹ್ಮಾಸ್ತ್ರ ಮಾಹಿತಿ ಹಕ್ಕು, ಪ್ರಭುತ್ವ ಸ್ವಾಸ್ಥ್ಯಕ್ಕೆ ಮಾಹಿತಿ ಹಕ್ಕು ಹಾಗೂ ಮಾಹಿತಿ ಹಕ್ಕು ಪ್ರಕರಣ ಅಧ್ಯಯನ ಎಂಬ ಶೀರ್ಷಿಕೆಗಳ ಅವರ ಮೂರು ಪುಸ್ತಕ ಮಾಹಿತಿ ಹಕ್ಕಿನ ಮಗ್ಗಲುಗಳನ್ನು ಪರಿಚಯಿಸುತ್ತದೆ. ರಾಜಶೇಖರ್‌ರಿಗಿರುವ ಅನುಭವ ವಿಸ್ತಾರ 
ಈ ಪುಸ್ತಕಗಳಲ್ಲಿ ಪ್ರತಿಫಲಿಸಿದೆ. 
‘ಭಾರತ ಪೌರರ ಬ್ರಹ್ಮಾಸ್ತ್ರ....’ ಪುಸ್ತಕ ೨೦೬ ಪುಟಗಳನ್ನು ಹೊಂದಿದೆ. ಒಳಪುಟಗಳಲ್ಲಿ ಪ್ರಶ್ನೋತ್ತರದ ಮೂಲಕ ಮಾಹಿತಿ ಹಕ್ಕಿನ ಅರಿವು ಮೂಡಿಸುವ ಪ್ರಯತ್ನವಿದೆ. ಒಬ್ಬ ಸಾಮಾನ್ಯನಿಗೆ ಈ ವಿಭಾಗದಲ್ಲಿ ಬಳಕೆಯಾದ ಸರಳ ಭಾಷೆ ಆಪ್ತವೆನಿಸುತ್ತದೆ. ಉಳಿದಂತೆ ರಾಜಶೇಖರ್ ಮೂರು ವರ್ಷಗಳಿಂದ ಈ ಕುರಿತು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನಗಳ ಸಂಗ್ರಹವಿದೆ. ಕೆಲವು ಮಾಹಿತಿ 
ಪ್ರಕರಣಗಳ ಯಥಾವತ್ ನಿರೂಪಣೆಯಿದೆ. 
‘ಪ್ರಭುತ್ವ ಸ್ವಾಸ್ಥ್ಯಕ್ಕೆ..’ ಪುಸ್ತಕ ಮಾಹಿತಿ ಕಾಯ್ದೆಯನ್ನು ತುಸು ಆಳವಾಗಿ ವಿಶ್ಲೇಷಿಸುತ್ತದೆ. ಹತ್ತಾರು ದೂರುಗಳನ್ನು ದೂರು ಪ್ರತಿ - ಪತ್ರ ವ್ಯವಹಾರಗಳ ಸಮೇತ ಒದಗಿಸಿರುವುದು ಓದುಗನೊಬ್ಬನಿಗೆ ಒಂದು ಮಾಹಿತಿ ಪ್ರಕರಣದ ಫೈಲ್ ನೋಡಿದಂತೆನಿಸದೆ 
ಇರದು. ೧೩೪ ಪುಟಗಳ ಈ ಪುಸ್ತಕದ ಮುಖಪುಟ ಆಕರ್ಷಣೀಯವಾಗಿದೆ. 
‘ಮಾಹಿತಿ ಹಕ್ಕು ಪ್ರಕರಣ ಅಧ್ಯಯನ’ ಹೆಸರೇ ಅರುಹುವಂತೆ ಎಂಟು ಮಾಹಿತಿ ಪ್ರಕರಣಗಳ ಸಮಗ್ರ ಉಲ್ಲೇಖವಿದೆ. ಆರಂಭದ ೨೦ ಪುಟಗಳಲ್ಲಿ ಓರ್ವ ಪ್ರಾಥಮಿಕ ಜ್ಞಾನಿಗೆ ಈ ಕ್ರಾಂತಿಕಾರಕ ಕಾಯ್ದೆಯ ಬಗ್ಗೆ ಅಆಇಈ ತಿಳಿಸುವ ಲೇಖನಗಳು, ಸಾಮಾನ್ಯವಾಗಿ ಮೂಡುವ ಅನುಮಾನಗಳಿಗೆ ಉತ್ತರಿಸುವ ಪ್ರಯತ್ನವಾಗಿದೆ. ಮಾಹಿತಿ ಕಾಯ್ದೆ ಹಿಡಿದು ಹೋರಾಡಲು ಹೋರಾಡುವವರಿಗೆ ಇದೊಂದು ತರ ಮಾರ್ಗದರ್ಶಕವಾದೀತು. ಸುಮಾರು ೨೦೦ ಪುಟಗಳ ಪುಸ್ತಕದ ಬೆಲೆ ೧೧೫ರೂ. ಮೊದಲಿನೆರಡು ಪುಸ್ತಕಗಳಿಗೆ ಅನುಕ್ರಮವಾಗಿ ೧೧೮ ಮತ್ತು ೭೫ರೂ. 
ಸ್ವತಃ ಗ್ರಾಹಕ ನ್ಯಾಯಾಲಯದಲ್ಲಿ ಸೇವಾನ್ಯೂನತೆ ಬಗ್ಗೆ ಸೆಣಸುತ್ತಿರುವ ಜೆಎಂಆರ್, ಅದರ ಆಧಾರದಲ್ಲಿ ಬರೆದಿರುವ ಇನ್ನೊಂದು ಕೃತಿ ‘ಗ್ರಾಹಕರ ಹಕ್ಕು - ತೀರ್ಪು ವಿಜಯ’ ಗ್ರಾಹಕ ಹಕ್ಕು ರಕ್ಷಣಾ ಕಾಯ್ದೆಯನ್ನು ವಿಶ್ಲೇಷಿಸಿರುವುದು ಕಂಡುಬರುತ್ತದಾದರೂ ಆ ಮೂಲಕ ಓದುಗನಲ್ಲಿ ಸದರಿ ಹಕ್ಕಿನ ಕುರಿತಂತೆ ಜ್ಞಾನ ಒದಗಿಸಿದ್ದಾರೆ ಎಂತಲೂ ಹೇಳಬಹುದು. ಸುಮಾರು ೧೦೦ ಪುಟಗಳಲ್ಲಿ ಅವರ ಕೇಬಲ್ ವಿರುದ್ಧದ ದೂರಿನ ಎಲ್ಲ ಮಜಲುಗಳನ್ನು ವಿವರಿಸಲಾಗಿದೆ. ಪುಸ್ತಕದ ಮುಖ ಬೆಲೆ ೭೫ರೂ. 
ಬರಹ ಕ್ಷೇತ್ರದಲ್ಲಿ ಸಾಕಷ್ಟು ದುಡಿದಿರುವ ರಾಜಶೇಖರ ಬರೆದ, ಪ್ರಕಾಶಿತವಾದ ಕೃತಿಗಳ ಸಂಖ್ಯೆ ೩೦ ದಾಟಿದೆ. ಆರೋಗ್ಯದ ಕುರಿತಂತೆ ಅವರು ಅತ್ಯುತ್ತಮ ಕೃತಿಗಳನ್ನು ದಾಖಲಿಸಿದ್ದಾರೆ. ಮೇಲಿನ ಕೃತಿಗಳಲ್ಲಿ ಕೆಲ ಮಟ್ಟಿನ ಕತ್ತರಿ ಪ್ರಯೋಗ ಮತ್ತು ಸಂದರ್ಭೋಚಿತವಾದ ಟಿಪ್ಪಣಿಗಳನ್ನು ಸೇರಿಸುವ ಅಗತ್ಯವಿತ್ತು.
ಪುಸ್ತಕ ತರಿಸಿಕೊಳ್ಳಲು ಬಯಸುವವರು ಲೇಖಕ ಜೆ.ಎಂ. ರಾಜಶೇಖರ್‌ರನ್ನು ಮೊಬೈಲ್ ಸಂಖ್ಯೆ ೯೪೪೮೯ ೬೨೦೮೨ನಲ್ಲಿ ಸಂಪರ್ಕಿಸಬಹುದು. ಅಥವಾ ಪ್ರಕಾಶಕ ಇನ್ಫೋಟೆಕ್ ಸರ್ವೀಸ್‌ನ ಮೋಹನ್‌ಕುಮಾರ್(ಮೊ- ೯೮೪೪೧೦೪೯೫೪)ರಲ್ಲಿ ವಿಚಾರಿಸಬಹುದು.         
                          - ಮಾವೆಂಸ
mavemsa@gmail.com
 
200812023996