ಐಪಿಎಲ್ ಎರಡನೇ ವಾರ
ಮಾಂಗೂಸ್ ಬ್ಯಾಟ್, ಟೈಮ್ ಔಟ್,,,,ಇತ್ಯಾದಿ!
ಇಂಡಿಯನ್ ಪ್ರೀಮಿಯರ್ ಲೀಗ್‌ನ ಜ್ವರದ ಕಾವು ಹೆಚ್ಚಿದೆ. ಈಗಾಗಲೇ ಮೂರು ಪಂದ್ಯಗಳಲ್ಲಿ ಪಂದ್ಯ ವ್ಯಕ್ತಿಯಾಗಿ ಮೆರೆದ ಸಚಿನ್ ತೆಂಡೂಲ್ಕರ್ ಎಂಬ ಚಿರಯುವಕನಿಗೆ ಅಂತರ್ರಾಷ್ಟ್ರೀಯ ಟಿ೨೦ ಆಡಲು ಮನಸ್ಸು ಮಾಡುವಂತೆ ತೀವ್ರ ಒತ್ತಡ ಹುಟ್ಟಿಕೊಂಡಿರುವುದೂ ಇದೇ ವಾರ.
ವಾಸ್ತವವಾಗಿ, ಟ್ವೆಂಟಿ ೨೦ ಯುವಕರ ಆಟ ಎಂತಲೇ ಬಿಂಬಿಸಲಾಗಿತ್ತು. ಸತ್ಯ ಬೇರೆ, ತಾಂತ್ರಿಕವಾಗಿ ಶಸ್ತ್ರ ಸಜ್ಜಿತರಾದ ಟೆಸ್ಟ್ ಪರಿಣತರಿಗೆ ೨೦ ಸಲೀಸು ಪಂದ್ಯ. ಇಲ್ಲಿ ಪಿಚ್‌ನಲ್ಲಿ ಸವಾಲು ಎನಿಸುವಂತ ‘ಅಂಶ’ ಇರುವುದಿಲ್ಲ. ಮೈದಾನದಲ್ಲಿ ಚೆಂಡು ರಭಸದಿಂದ ಧಾವಿಸುವ ಬೋನಸ್ ಇರುವುದರಿಂದ ಶಕ್ತಿ ವಿಪರೀತ ಬೇಡ. ಬೌಂಡರಿ ಗೆರೆ ಇಲ್ಲಿ ಸಾಕಷ್ಟು ಹತ್ತಿರ. ಅಂದರೆ ಫೀಲ್ಡರ್‌ಗಳ ನಡುವೆ, ಅಪರೂಪಕ್ಕೊಮ್ಮೆ ಆತನ ತಲೆ ಮೇಲೆ ಚೆಂಡು ಬಾರಿಸುವ ತಾಕತ್ತು, ಧೈರ್ಯ ಇದ್ದರೆ ಆಯಿತು. ಇವತ್ತು ಸಚಿನ್‌ರ ಯಶಸ್ಸಿನ ಹಿಂದೆ ಇರುವುದೂ ಇದೇ ಸೂತ್ರ.
ಮಾಂಗೂಸ್ ಬ್ಯಾಟ್! ಈ ಸರ್ತಿಯ ಐಪಿಎಲ್ ಮೂರರ ಹೊಚ್ಚ ಹೊಸ ಪರಿಶೋಧವಿದು. ಏನಪ್ಪಾ ಇದರ ವಿಶೇಷ ಎಂದರೆ, ಮಾಮೂಲಿ ಬ್ಯಾಟ್‌ಗಿಂತ ಹಿಡಿಕೆ ಶೇ.೪೩ರಷ್ಟು ಉದ್ದ. ಬ್ಯಾಟ್‌ನ ಮುಖ ಭಾಗ ಶೇ.೩೩ರಷ್ಟು ಕಡಿಮೆ. ಆದರೆ ಬ್ಯಾಟ್‌ನ ಬುಡ ಐದು ಸೆಂ.ಮೀ. ದಪ್ಪ. ಕ್ರಿಕೆಟ್ ನಿಧಾನಕ್ಕೆ ಬೇಸ್‌ಬಾಲ್ ಆಗುತ್ತಿರುವುದರ ಸೂಚನೆಯನ್ನು ಮಾಂಗೂಸ್ ನೀಡುತ್ತದೆ. ಮುಖ್ಯವಾಗಿ, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ಆಂಡ್ರ್ಯೂ ಸೈಮಂಡ್ಸ್ ಬಳಸಿ ಸಂಚಲನವನ್ನು ಉಂಟುಮಾಡಿದ್ದಾರೆ.
ಮೊನ್ನೆ ಮೊನ್ನೆ ಸಾಂಪ್ರದಾಯಿಕ ಬ್ಯಾಟ್‌ನ್ನು ಪೆವಿಲಿಯನ್‌ಗೆ ವಾಪಾಸು ಕಳುಹಿಸಿ ಮಾಂಗೂಸ್ ಹಿಡಿದ ಹೇಡನ್ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ‍್ಸ್ ವಿರುದ್ಧ ಪಟಪಟನೆ ಮೂರು ಬೌಂಡರಿ ಬಾರಿಸಿದ್ದನ್ನು ನೊಡಿಬಿಟ್ಟಿದ್ದೇವೆ. ಇದು ಐಪಿಎಲ್‌ನಲ್ಲಿ ಮಾಂಗೂಸ್ ಬಳಕೆಯಾದ ಪ್ರಪ್ರಥಮ ನಿದರ್ಶನ. ಇದು ನಮ್ಮ ಭ್ರಮೆಗಳನ್ನು ಹೆಚ್ಚಿಸಿಬಿಟ್ಟಿದೆ!
ಬ್ಯಾಟ್ ಕುರಿತಂತೆ ಕ್ರಿಕೆಟ್ ನಿಯಮ ರೂಪಿಸುವ ಎಂಸಿಸಿ ಆರು ನಿಬಂಧನೆಗಳನ್ನು ಸೂಚಿಸಿದೆ. ಮಾಂಗೂಸ್ ಈ ಆರು ನಿಯಮಗಳನ್ನು ಶಿರಸಾವಹಿಸಿ ಪಾಲಿಸಿದೆ! ಅಷ್ಟಕ್ಕೂ ೨೦೦೯ರ ಮೇನಲ್ಲಿಯೇ ಆಸ್ಟ್ರೇಲಿಯಾದ ಸ್ಪರ್ಧಾತ್ಮಕ ಟೂರ್ನಿಯೊಂದರಲ್ಲಿ ಅಲ್ಲಿನ ಸ್ಟುವರ್ಟ್ ಲಾ ಇದನ್ನು ಬಳಸಿದ ಪ್ರಥಮ ಬ್ಯಾಟ್ಸ್‌ಮನ್ ಎಂಬ ಹಿರಿಮೆ ಹೊತ್ತಿದ್ದಾರೆ. ಭಾರತದ ದಿನೇಶ್ ಕಾರ್ತೀಕ್ ‘ಇದು ನಮಗಲ್ಲ’ ಎಂದು ತಿರಸ್ಕರಿಸಿದ್ದಾರೆ. ನಿಜಕ್ಕಾದರೆ, ಹೊಡೆತಗಳಿಗೆ ತುಸು ಲಾಭ ಒದಗಿಸುವ ಈ ಬ್ಯಾಟ್ ಶಾರ್ಟ್ ಪಿಚ್ ಎಸೆತ ಬ್ಯಾಟ್ಸ್‌ಮನ್‌ನ ದೇಹದ ಕಡೆ ಬಂದರೆ ವಿಪರೀತ ಕಷ್ಟದ ಮಾತು ಆದೀತು ಎಂಬ ಅನುಮಾನವಿದೆ. ಒಂದೆಂದರೆ, ಬ್ಯಾಟ್‌ನ ಸ್ವೀಟ್ ಪಾರ್ಟ್ ಶೇ.೧೨೦ರ ಅಗಾಧ ಪ್ರಮಾಣದಲ್ಲಿರುವುದು ಗಮನೀಯ.
ಖ್ಯಾತ ವೀಕ್ಷಕ ವಿವರಣೆಕಾರ ಹರ್ಷ ಬೋಗ್ಲೆ ಹೇಳುವುದೇ ಬೇರೆ, "ಓರ್ವ ಬ್ಯಾಟ್ಸ್‌ಮನ್‌ಗಿಂತ ಮಾಂಗೂಸ್ ಬ್ಯಾಟ್ ಉತ್ತಮವಾಗಿರಲು ಸಾಧ್ಯವಿಲ್ಲ. ಬ್ಯಾಟಿಂಗ್‌ನಲ್ಲಿ ಟೈಮಿಂಗ್, ಗ್ಯಾಪ್ ಹುಡುಕುವ ಜಾಣ್ಮೆಗಳನ್ನು ಬ್ಯಾಟ್ ಹೇಳಿಕೊಡುವುದಿಲ್ಲ. ಅದನ್ನು ಬ್ಯಾಟ್ಸ್‌ಮನ್ ಖುದ್ದು ಮಾಡಬೇಕು! ತಾಕತ್ತಿರುವ ಬ್ಯಾಟ್ಸ್‌ಮನ್ ಯಾವುದೇ ಬ್ಯಾಟ್‌ನಲ್ಲಿ ಮಿಂಚಬಲ್ಲ. ಜಾಕ್ ಕಾಲಿಸ್, ಸಚಿನ್ ಬಳಸುತ್ತಿರುವುದು ಸಾಂಪ್ರದಾಯಿಕ ಬ್ಯಾಟನ್ನೇ. ಒಂದಂತೂ ನಿಜ, ಮಾಂಗೂಸ್‌ನಲ್ಲಿ ಕೆಲವು ಅನುಕೂಲಗಳಿವೆ. ಹಲವು ದೌರ್ಬಲ್ಯಗಳಿವೆ. ನಾವು, ಮಾಧ್ಯಮದವರು ಮಾಂಗೂಸ್‌ಗೆ ಅನಗತ್ಯವಾದ ಪ್ರಚಾರವನ್ನು ಕೊಟ್ಟಿದ್ದೇವೆ ಅಷ್ಟೇ!!"
ಕಳೆದ ಆವೃತ್ತಿಯಲ್ಲಿಯೇ ಜಾರಿಗೆ ಬಂದಿದ್ದ ‘ಸ್ಟ್ರಾಟೆಜಿಕ್ ಟೈಂ ಔಟ್’ ಅತೀವ ಟೀಕೆಗೊಳಗಾದ ಐಪಿಎಲ್ ತಂತ್ರ. ಇದು ಐಪಿಎಲ್‌ನ ಸಂಚಾಲಕ ಲಲಿತ್ ಮೋದಿಯವರ ಮೆದುಳಿನ ಕೂಸು. ಕಳೆದ ಬಾರಿ ಹತ್ತನೇ ಓವರ್ ನಂತರ ತೆಗೆದುಕೊಳ್ಳುತ್ತಿದ್ದ ಕಡ್ಡಾಯ ಐದು ನಿಮಿಷಗಳ ಟೈಂ ಔಟ್ ನಿಯಮವನ್ನು ಈಗ ಬದಲಿಸಲಾಗಿದೆ.
ಆರನೇ ಓವರ್‌ನಿಂದ ಎಂಟನೇ ಓವರ್‌ನ ಕೊನೆವರೆಗೆ ಬ್ಯಾಟಿಂಗ್ ತಂಡ ಹಾಗೂ ೧೧ರಿಂದ ೧೬ನೇ ಓವರ್ ನಡುವೆ ಫೀಲ್ಡಿಂಗ್ ಪಡೆ ಟೈಂ ಔಟ್ ತೆಗೆದುಕೊಳ್ಳುವ ಅವಕಾಶ. ಬಾಕಿಯಾದಲ್ಲಿ ಎಂಟು ಮತ್ತು ಹದಿನಾರನೇ ಓವರ್ ಅಂತ್ಯಕ್ಕೆ ಕಡ್ಡಾಯವಾಗಿ ಅಂಪೈರ್‌ಗಳು ಎರಡೂವರೆ ನಿಮಿಷಗಳ ಟೈಂ ಔಟ್ ಘೋಷಿಸುತ್ತಾರೆ.
ಉಹ್ಞೂ, ಯಾವುದೇ ತಂಡ ಹಾರ್ದಿಕವಾಗಿ ಟೈಂ ಔಟ್‌ನ್ನು ಬಯಸುವುದನ್ನು ಕಾಣುತ್ತಿಲ್ಲ. ಇದು ಅಕ್ಷರಶಃ ಟಿವಿ ರೈಟ್ಸ್ ಕೊಂಡವರ ಹಿತಾಸಕ್ತಿ ಕಾಯುವ ಕಾಯಕ. ೧೦ ಸೆಕೆಂಡ್‌ಗಳ ಕಾಲಾವಧಿಗೆ ಸರಿಸುಮಾರು ಎರಡು ಲಕ್ಷದ ಸ್ಲಾಟ್ ಬೆಲೆ ಇರುವಾಗ ಬರೀ ಹತ್ತು ನಿಮಿಷದ ಟೈಂ ಔಟ್‌ನಿಂದಲೇ ಪಂದ್ಯವೊಂದರಲ್ಲಿ ಸೆಟ್‌ಮ್ಯಾಕ್ಸ್‌ಗೆ ಆದಾಯ ಕನಿಷ್ಟ ಒಂದೂಕಾಲು ಕೋಟಿ! ಈಗಂತೂ ಓವರ್‌ಗಳ ಮಧ್ಯೆಯೇ ಜಾಹೀರಾತು ತೂರಬಲ್ಲ ಚಾಣಾಕ್ಷತೆ ಮೆರೆಯುವ ಟಿವಿ ಮಾಧ್ಯಮದ ಗಳಿಕೆಯ ಸೂತ್ರಕ್ಕೆ ಲಲಿತ್ ಮೋದಿ ತಾಳ ಹಾಕಲೇಬೇಕಾದ ಒತ್ತಡವಿದೆ.
ಕೊನೆಮಾತು - ಐಪಿಎಲ್ ತಂಡಗಳ ಆಟಗಾರರು ಒಂದು ರೀತಿಯಲ್ಲಿ ಜಾಹೀರಾತು ಹೋರ್ಡಿಂಗ್‌ಗಳಂತೆ ಕಾಣುತ್ತಾರಲ್ಲವೇ? ನೀವೇ ನೋಡಿ, ಅವರ ಅಂಗಿಯ ತೋಳು, ಬೆನ್ನು, ಎದೆ ಭಾಗಗಳಲ್ಲಿ ವಿವಿಧ ಪ್ರಾಯೋಜಕರ ಸ್ಟಿಕ್ಕರ್‌ಗಳು. ಹೆಲ್ಮೆಟ್ ನೋಡಿದರೆ ಅಲ್ಲಿಯೂ ಅವೇ. ಪ್ಯಾಂಟ್ ನೋಡಿದರೆ ಅಲ್ಲೂ. ಬ್ಯಾಟ್ ಮುಖದಲ್ಲಂತೂ ಕೇಳುವುದೇ ಬೇಡ. ಅಂದರೆ ಆಟಗಾರರಿಗೆ ಅವರ ಒಳಚೆಡ್ಡಿ ಮಾತ್ರ ಸ್ವಂತ! ಈ ಮಾತನ್ನು ತುಸು ವಿಷಾಧದಿಂದಲೇ ಹೇಳಬೇಕಾಗಿದೆ.
ಹೇಳಲು ಮರೆತಿದ್ದು, ಐಪಿಎಲ್ ಮುಖ್ಯಸ್ಥ ಲಲಿತ್ ಇನ್ನಷ್ಟು ಜಾಹೀರಾತು ಪ್ರಚಾರ ಮಾರ್ಗಗಳನ್ನು ಹುಡುಕಲು ಖುದ್ದು ತಮ್ಮ ನೇತೃತ್ವದಲ್ಲಿ ಉಪಸಮಿತಿಯನ್ನು ರಚಿಸಿದ್ದಾರೆ ಎನ್ನುವುದು ಮಾತ್ರ ನಿಜಕ್ಕೂ ಸುಳ್ಳು ಸುದ್ದಿ!!
-ಮಾವೆಂಸ
0 comments:
200812023996 ಕಾಮೆಂಟ್ ಪೋಸ್ಟ್ ಮಾಡಿ