ಮಂಗಳವಾರ, ಫೆಬ್ರವರಿ 16, 2010

ಥರ್ಡ್ ಅಂಪೈರ್‌ಗೆ ಕೊಕ್!


ಈಗಂತೂ ಅಂಕಣದಲ್ಲಿರುವ ಅಂಪೈರ್‌ಗಳು ಯಾವುದೇ ರನ್‌ಔಟ್, ಸ್ಟಂಪಿಂಗ್ ಸಂದರ್ಭದಲ್ಲಿ ಗುಲಗುಂಜಿ ತೂಕದಲ್ಲಿಯೂ ಯೋಚಿಸುವುದಿಲ್ಲ. ಫೀಲ್ಡರ್‌ಗಳು ಮನವಿ ಸಲ್ಲಿಸುತ್ತಿದ್ದಂತೆ ಅವರ ಕೆಲಸವೆಂದರೆ, ತಮ್ಮ ಎರಡೂ ಕೈ ಬಳಸಿ ಟಿವಿ ಅಂಪೈರ್‌ಗೆ ‘ದಾರಿ ತೋರಿಸಿ’ ಎಂದು ಸಂಜ್ಞೆ ಮಾಡಿ ಸೂಚಿಸುವುದಷ್ಟೇ. ಅಂತವರಿಗೆಲ್ಲ ಶಾಕಿಂಗ್ ಸುದ್ದಿ ಬಂದಿದೆ. ಐಸಿಸಿ ಇನ್ನು ಮುಂದೆ ಮೂರನೇ ಅಂಪೈರ್ ವ್ಯವಸ್ಥೆಯನ್ನೇ ಹಿಂದಕ್ಕೆ ಪಡೆಯುತ್ತದೆ!
ಐಸಿಸಿಯ ಜನರಲ್ ಮ್ಯಾನೇಜರ್ ಡೇವ್ ರಿಚರ್ಡ್‌ಸನ್ ಈ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಹುಷಃ ಐಸಿಸಿಯ ಮುಂದಿನ ಕ್ರಿಕೆಟ್ ಕಮಿಟಿ ಸಭೆ ಮೇ ೧೦ರಂದು ಜರುಗಲಿದೆ. ಆ ದಿನ ಥರ್ಡ್ ಅಂಪೈರ್ ವ್ಯವಸ್ಥೆ ಉಳಿವಿನ ಬಗ್ಗೆ ವಿಸ್ತೃತ ಚರ್ಚೆ ನಡೆಯಬಹುದು. ಈಗಿನ ವಾತಾವರಣವನ್ನು ನೋಡಿದರೆ ಬರುವ ದಿನಗಳಲ್ಲಿ ರೆಫ್ರಿ ಪಕ್ಕದಲ್ಲಿ ಕುಳಿತುಕೊಳ್ಳಲು ಮೂರನೇ ಅಂಪೈರ್‌ಗೆ ಸ್ಥಳವಿಲ್ಲ!
ಇನ್ನಷ್ಟು ಗೊಂದಲಗಳಾಗುವ ಮುನ್ನ ವಾಸ್ತವವನ್ನು ಹೇಳುವುದೊಳ್ಳೆಯದು. ನಿಜ, ಭವಿಷ್ಯದಲ್ಲಿ ಥರ್ಡ್ ಅಂಪೈರ್ ಇರಲಿಕ್ಕಿಲ್ಲ. ಆದರೆ ರೆಫ್ರಿ ಪಕ್ಕದಲ್ಲಿ ಒಬ್ಬ ಅಧಿಕೃತ ಕ್ರಿಕೆಟ್ ತಜ್ಞನಂತೂ ಕುಳಿತಿರಲೇಬೇಕು. ಅವರು ಕ್ರಿಕೆಟ್ ಸ್ಲೋ ಮೋಷನ್, ಹ್ವಾಕ್ ಐಗಳಲ್ಲದೆ ಇನ್ನಷ್ಟು ದುಬಾರಿ ತಂತ್ರಜ್ಞಾನದ ಉಪಕರಣಗಳನ್ನು ಬಳಸಿ ತೆಗೆದ ಚಿತ್ರಗಳನ್ನು ನೋಡಿ ಆಟಗಾರರ ಔಟ್-ನಾಟೌಟ್ ತೀರ್ಮಾನವೀಯುತ್ತಾರೆ. ಇದೇ ಡಿಆರ್‌ಎಸ್.
ಡಿಸಿಷನ್ ರಿವ್ಯೂ ಸಿಸ್ಟಮ್‌ನ ಹೃಸ್ವ ರೂಪ ಈ ಡಿಆರ್‌ಎಸ್. ಅಂದರೆ ಪಂದ್ಯವಾಡುವ ಎರಡು ತಂಡಕ್ಕೆ ಇನ್ನಿಂಗ್ಸ್ ಒಂದರಲ್ಲಿ ತಲಾ ಮೂರು ಬಾರಿ ಅಂಕಣದ ಅಂಪೈರ್ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಒಂದೊಮ್ಮೆ ಮೇಲ್ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕರೆ ಈ ಮೂರೂ ಚಾಲೆಂಜ್ ಅವಕಾಶ ಊರ್ಜಿತವಾಗುತ್ತದೆ. ಅಂಪೈರ್‌ಗಳ ತೀರ್ಮಾನವೇ ಸರಿ ಎಂದಾದರೆ ಚಾಲೆಂಜ್‌ಗಳಲ್ಲಿ ಒಂದು ನಷ್ಟ. ಇತ್ತೀಚಿನ ದಿನಗಳಲ್ಲಿ ಗ್ರಾನ್‌ಸ್ಲಾಂ ಟೆನಿಸ್‌ನ್ನು ನೋಡುವವರಿಗೆಲ್ಲ ಈ ‘ಪ್ಲೇಯರ್ ಚಾಲೆಂಜ್’ ವ್ಯವಸ್ಥೆ ಅರ್ಥವಾಗುತ್ತದೆ.
ಮೊನ್ನೆ ಮೊನ್ನೆ ಮುಕ್ತಾಯ ಕಂಡ ಇಂಗ್ಲೆಂಡ್ - ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯಲ್ಲಿ ಈ ಡಿಆರ್‌ಎಸ್ ಸೌಲಭ್ಯ ಇತ್ತು. ಎರಡನೇ ಟೆಸ್ಟ್‌ನ ಅಂತಿಮ ಘಟ್ಟದಲ್ಲಿ ಇಂಗ್ಲೆಂಡ್‌ನ ಕೊನೆಯ ಎರಡು ವಿಕೆಟ್ ಪಡೆಯಲು ಸರ್ಕಸ್ ನಡೆಸಿದ್ದ ದ.ಆಫ್ರಿಕಾ ಈ ಡಿಆರ್‌ಎಸ್‌ನ್ನು ಹಲವು ಬಾರಿ ಬಳಸಿಕೊಂಡದ್ದು ಕ್ಲೈಮ್ಯಾಕ್ಸ್‌ಗೆ ರಂಗುರಂಗಿನ ಆಯಾಮ ನೀಡಿತ್ತು. ಹಿಂದೊಮ್ಮೆ ಅನಿಲ್ ಕುಂಬ್ಳೆ ನಾಯಕತ್ವದ ಭಾರತ ಶ್ರೀಲಂಕಾಕ್ಕೆ ಟೆಸ್ಟ್ ಪ್ರವಾಸಗೈದಾಗ ಈ ‘ಮೇಲ್ಮನವಿ ವ್ಯವಸ್ಥೆ’ ಇತ್ತು. ಅದರ ಲಾಭ ಮಾತ್ರ ಶ್ರೀಲಂಕಾಕ್ಕಾಗಿತ್ತು!
ಪ್ರಸ್ತುತ ಮೈದಾನದ ಅಂಪೈರ್‌ಗಳ ತೀರ್ಮಾನ ಶೇ.೯೨.೨ರಷ್ಟು ಸರಿಯಾಗಿರುತ್ತದಂತೆ. ಬರಿಗಣ್ಣಿನ, ವಾಸ್ತವ ವೇಗದಲ್ಲಿ ದೃಶ್ಯ ನೋಡುವ ಮಾನವ ತೀರ್ಮಾನಗಳ ಈ ಪ್ರಮಾಣ ಭೇಷ್ ಎನ್ನುವಂತದ್ದೇ. ಆದರೆ ಡಿಆರ್‌ಎಸ್ ಬಳಸಿಕೊಂಡದ್ದೇ ಆದರೆ ಈ ಸರಿ ಪ್ರಮಾಣ ಶೇ.೯೭ಕ್ಕೆ ಏರಬಲ್ಲದು. ಇಂತಹ ಸನ್ನಿವೇಶದಲ್ಲಿ, ಆಟಗಾರರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವಾಗ ಮತ್ತು ಥರ್ಡ್ ಅಂಪೈರ್ ವ್ಯವಸ್ಥೆ ಡಿಆರ್‌ಎಸ್ ಒಂದೇ ಉದ್ದೇಶದ ಎರಡು ಮಾದರಿ ಎಂದು ಐಸಿಸಿಗೆ ಅನ್ನಿಸಿದೆ. ಹಾಗಾಗಿ ಡಿಆರ್‌ಎಸ್‌ನ್ನು ಉಳಿಸಿಕೊಂಡು ಟಿವಿ ಅಂಪೈರ್‌ಗೆ ತಿಲಾಂಜಲಿ ನೀಡಲು ಯೋಚಿಸಲಾಗುತ್ತಿದೆ.
ಇವತ್ತು ಡಿಆರ್‌ಎಸ್ ಪ್ರತಿ ಸರಣಿಯ ಷರತ್ತಲ್ಲ. ಅದು ಒಂದು ಸರಣಿಯಲ್ಲಿ ಅಳವಡಿಸಿಕೊಳ್ಳಲು ಬೇಕಾದ ಪರವಾನಗಿ ಪಡೆದಿದೆ. ಐಸಿಸಿ ಮಾನ್ಯತೆ ಇದೆ. ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ, ‘ಪಾರ್ಟ್ ಆಫ್ ಸ್ಟಾಂಡರ್ಡ್ ಟೆಸ್ಟ್ ಪ್ಲೇಯಿಂಗ್ ಕಂಡೀಷನ್’ನ ಒಂದು ಭಾಗ. ಆದರೆ ಸರಣಿಯಲ್ಲಿ ಪಾಲ್ಗೊಳ್ಳುವ ಎರಡೂ ದೇಶಗಳಿಗೆ ಇಷ್ಟವಿಲ್ಲದಿದ್ದರೆ ಇದನ್ನು ಅಳವಡಿಸಿಕೊಳ್ಳದೇ ಬಿಡಬಹುದು. ಭಾರತ-ಶ್ರೀಲಂಕಾ, ಭಾರತ-ಬಾಂಗ್ಲಾ, ಭಾರತ-ದ.ಆಫ್ರಿಕಾ... ಹೀಗೆ ಇತ್ತೀಚಿನ ಹಲವು ಸರಣಿಗಳಲ್ಲಿ ಈ ಡಿಆರ್‌ಎಸ್ ಅಳವಡಿಸಿರಲಿಲ್ಲ. ಥರ್ಡ್ ಅಂಪೈರ್ ವ್ಯವಸ್ಥೆಯನ್ನು ಕಡಿತಗೊಳಿಸಿದರೆ ಮಾತ್ರ ಡಿಆರ್‌ಎಸ್‌ನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆಗದು ಕಡ್ಡಾಯ.
ಒಪ್ಪಿಕೊಳ್ಳುವ ಮಾತು ಪಕ್ಕದಲ್ಲಿಡಿ. ಅಳವಡಿಕೆಯೇ ಅಷ್ಟು ಸುಲಭದ ಮಾತಲ್ಲ. ಸೂಪರ್ ಸ್ಲೋ ಮೋ, ಬ್ಲಾಕ್ -ವೈಟ್ ಶಾಡೋ ಮಾದರಿಯ ಎಕ್ಸ್‌ರೇ ಇಕ್ವಿಪ್‌ಮೆಂಟ್‌ಗಳೆಲ್ಲ ಸೇರಿದಂತೆ ಒಂದು ಸರಣಿಗೆ ಬರೋಬ್ಬರಿ ೭೦ರಿಂದ ೮೦ ಸಾವಿರ ಡಾಲರ್‌ಗಳು ಡಿಆರ್‌ಎಸ್‌ಗೆ ಅಗತ್ಯ. ಹಾಗಾಗಿಯೇ ಮೊತ್ತ ಮೊದಲಾಗಿ ಕೇಳಿ ಬರುವ ಪ್ರಶ್ನೆ, ಕೇವಲ ನಾಲ್ಕರಿಂದ ಐದು ಶೇಕಡಾ ಹೆಚ್ಚಿನ ಸರಿ ತೀರ್ಪಿಗೆ ಈ ಪರಿಯ ಖರ್ಚು ಅಗತ್ಯವೇ?
ಲೆಕ್ಕಾಚಾರ ಇಷ್ಟಕ್ಕೆ ನಿಲ್ಲದು. ಐಸಿಸಿಯೇನೋ ಈ ಮೊತ್ತದ ಉಪಕರಣಗಳನ್ನು ನೇರಪ್ರಸಾರದ ಹಕ್ಕು ಪಡೆದ ಟಿವಿ ಚಾನೆಲ್ ಜೊತೆ ಹಂಚಿಕೊಳ್ಳಲು ಹೊಂಚುಹಾಕಿದೆ. ಪರಿಸ್ಥಿತಿ ಹಾಗಿಲ್ಲ, ಭಾರತ-ಶ್ರೀಲಂಕಾದಂತ ತಂಡಗಳ ಹಣಾಹಣಿ ಟೆಸ್ಟ್ ಸರಣಿಯಲ್ಲಿಯೇ ಈ ದುಬಾರಿ ಬಂಡವಾಳ ತೊಡಗಿಸಿರುವ ನಿಂಬಸ್ ಇಷ್ಟಪಡಲಿಲ್ಲ. ಇನ್ನು ಬಾಂಗ್ಲಾ-ಜಿಂಬಾಬ್ವೆ, ವೆಸ್ಟ್‌ಇಂಡೀಸ್ ತಂಡಗಳ ಟೆಸ್ಟ್ ಸರಣಿಯಲ್ಲಿ ಬಳಸಲು ಮತ್ತು ಖರ್ಚು ಹಂಚಿಕೊಳ್ಳಲು ಟಿವಿ ಚಾನೆಲ್ ಒಪ್ಪುತ್ತದೆಯೇ?
ಹಣಕಾಸಿನ ಹೊರತಾಗಿ ಇನ್ನೊಂದು ತತ್ವದ ವಿಚಾರವೂ ಇದರಲ್ಲಿದೆ. ಡಿಆರ್‌ಎಸ್ ಜಾರಿಯಲ್ಲಿರುವಾಗ ಒಂದು ತಂಡ ಬಲು ಬೇಗನೆ ತನ್ನ ಮೂರೂ ಚಾಲೆಂಜ್ ಕಳೆದುಕೊಂಡಿತು ಎಂದುಕೊಳ್ಳೋಣ. ಆ ನಂತರ ಅವರು ತಪ್ಪು ತೀರ್ಮಾನಗಳಾವುವನ್ನೂ ಪ್ರಶ್ನಿಸುವ ಅಧಿಕಾರವನ್ನೇ ಕಳೆದುಕೊಂಡುಬಿಡುತ್ತಾರೆ. ಥರ್ಡ್ ಅಂಪೈರ್ ಪದ್ಧತಿಯಲ್ಲಿ ಈ ಅಪಾಯವಿರಲಿಲ್ಲ. ಸರಿ ತೀರ್ಪುಗಳೇ ಐಸಿಸಿ ಆದ್ಯತೆಯಾಗಿದ್ದರೆ ಮೂರು ಚಾಲೆಂಜ್ ಎಂಬ ಕಡಿವಾಣ ಅಪಕ್ವವೆನಿಸುತ್ತದೆ.
ಇನ್ನೊಂದು ಅಸಲು ಸಮಸ್ಯೆಯೇ ಇದೆ. ಕ್ರಿಕೆಟ್ ಟೆನಿಸ್‌ನ ಹಾಗಲ್ಲ, ಅಲ್ಲಾದರೆ ಬರೀ ಲೈನ್‌ಕಾಲ್‌ಗಳ ವಿರುದ್ಧ ತಂತ್ರಜ್ಞಾನದ ಬೆಳಕು. ಹ್ವಾಕ್ ಐ ಅದಕ್ಕೆ ಸಾಕೇ ಸಾಕು. ಕ್ರಿಕೆಟ್ ಕಥೆ ಬೇರೆ, ಇದು ಸಂಕೀರ್ಣ ಆಟ, ಪಿಚ್‌ನ ಪುಟಿತ, ಗಾಳಿಯ ಆಯಾಮ, ಚೆಂಡಿನ ವೇಗ ಮುಂತಾದ ಅಂಶಗಳು ಒಂದು ಎಲ್‌ಬಿಡಬ್ಲ್ಯು ಮನವಿಯಲ್ಲಿರುತ್ತದೆ. ಅಲ್ಲದೆ, ಎಷ್ಟೋ ರನ್‌ಔಟ್, ಸ್ಟಂಪಿಂಗ್ ಪ್ರಕರಣಗಳಲ್ಲಿ ಚಿತ್ರದ ಫ್ರೇಮ್ ಸಾಕಾಗುವುದಿಲ್ಲ. ಅನಿಶ್ಚಿತತೆ ಮುಂದುವರಿಯುವಂತಾಗುತ್ತದೆ. ಆಗ ಬೆನಿಫಿಟ್ ಆಫ್ ಡೌಟ್ ಎಂಬ ತರ್ಕ ಬರುತ್ತದೆ. ಇಂತಿರುವಾಗ ಡಿಆರ್‌ಎಸ್‌ನಲ್ಲಿ ಅನುಮಾನದ ಲಾಭ ಕೊಡುವುದರಿಂದ ಮಗದೊಂದು ತಂಡಕ್ಕೆ ಚಾಲೆಂಜ್ ಅವಕಾಶದಲ್ಲೂ ಹೊಡೆತ ಕೊಟ್ಟಂತಾಗುವುದು ನ್ಯಾಯವೇ?
ಈ ಗೊಂದಲಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಒಂದಂತೂ ಸತ್ಯ, ಫೀಲ್ಡ್ ಅಂಪೈರ್‌ಗಳು ಇನ್ನು ತೀರ್ಪು ಕೊಡಲೇಬೇಕು!!
-ಮಾ.ವೆಂ.ಸ

 
200812023996