ಭಾನುವಾರ, ನವೆಂಬರ್ 15, 2009

ತಾಯಿತನ-ಮಗುವಿನ ಜೊತೆಗೆ ಪ್ರಶಸ್ತಿ ಬೋನಸ್!ಪಡ್ಡೆ ಹೈಕಳಿಗೆ ರೋಮಾಂಚನ ಹುಟ್ಟಿಸುವ ಸುದ್ದಿಯೊಂದು ದಕ್ಷಿಣ ಆಫ್ರಿಕಾದಿಂದ ಬಂದಿತ್ತು. ಭಾರತೀಯ ಕ್ರಿಕೆಟ್ ತಂಡದ ಕೋಚ್ ಗ್ಯಾರಿ ಕರ್ಸೈನ್ ತಂಡದ ಆಟಗಾರರಿಗೆ ಸಕ್ರಿಯ ಸೆಕ್ಸ್ ನಡೆಸಲು ಆದೇಶಿಸಿದರೆಂಬ ವಿಚಾರ ಗುಲ್ಲಾಗಿತ್ತು. ಪಂದ್ಯಗಳ ಮುನ್ನಾದಿನ ಸಕ್ರಿಯ ಸೆಕ್ಸ್ ನಡೆಸುವುದರಿಂದ ಸಾಮರ್ಥ್ಯ ಹೆಚ್ಚುತ್ತದೆ ಎಂದು ಗ್ಯಾರಿ ಕೋಚಿಂಗ್ ಕೊಟ್ಟಿದ್ದರಂತೆ! ಯಥಾಪ್ರಕಾರ ಅಲ್ಲಗಳೆಯುವ ವಿಧಿವಿಧಾನವೂ ಜರುಗಿತು. ಸ್ವದೇಶದಲ್ಲಿ ಗ್ಯಾರಿಗೆ ಕಸಿವಿಸಿಯಾಯಿತು. ಕ್ರಿಕೆಟ್‌ನೊಂದಿಗೆ ನೇರ ಸಂಬಂಧವಿಲ್ಲದ ಆದರೆ ಕ್ರೀಡಾಕ್ಷೇತ್ರದಲ್ಲಿ ಚರ್ಚೆಗೆ ಅಸ್ತ್ರವಾಗಬಲ್ಲ, ಸಕ್ರಿಯ ಸೆಕ್ಸ್‌ನ ಇನ್ನೊಂದು ಮಗ್ಗುಲಿನಂತಿರುವ ಸಂಗತಿಯೊಂದು ನಡೆದಿರುವುದಂತೂ ಖರೆ.
ಕಳೆದ ಯುಎಸ್ ಓಪನ್ ಟೆನಿಸ್ ಗ್ರಾನ್‌ಸ್ಲಾಂನಲ್ಲಿ ಆಗಷ್ಟೇ ಮರಳಿ ಬಂದ ಕಿಂ ಕ್ಲಿಸ್ಟರ‍್ಸ್ ಎಂಬಾಕೆ ದಡದಡನೆ ವಿಲಿಯಮ್ಸ್ ಸಹೋದರಿಯರನ್ನೂ ಪರಾಭವಗೊಳಿಸಿ ಸಿಂಗಲ್ಸ್ ಪ್ರಶಸ್ತಿ ಗೆದ್ದುಬಿಟ್ಟುದು ಟೆನಿಸ್ ತಜ್ಞರಲ್ಲೂ ಅಚ್ಚರಿ ಮೂಡಿತ್ತು. ೨೦೦೮ರಲ್ಲಿ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದ ಈ ಬೆಲ್ಜಿಯನ್ ತಾರೆ ಮತ್ತೆ ಮರಳಿದ್ದು ಮದುವೆಯಾಗಿ ಒಂದು ಹೆಣ್ಣು ಮಗುವಿನ ತಾಯಿಯಾದ ನಂತರ. ಈ ವಿದ್ಯಮಾನ ಈ ಹಿಂದೆಯೇ ಚರ್ಚೆಯಲ್ಲಿದ್ದ ವಿಷಯಕ್ಕೆ ಸಾಕ್ಷಿಯ ಒತ್ತು ನೀಡಿದೆ. ವಿಷಯವಿಷ್ಟೇ, ಕ್ರೀಡಾರಂಗದಲ್ಲಿ ಇರುವ ಮಹಿಳೆಯರಿಗೆ ಪ್ರೆಗ್ನೆನ್ಸಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ!
ವೈದ್ಯ ವಿಜ್ಞಾನದ ಸಮರ್ಥನೆ
ಇಂತದೊಂದು ವಾದ ಅಂತೆಕಂತೆಗಳ ಸರಕಲ್ಲ. ಮಿಚೆಗನ್ ಯೂನಿವರ್ಸಿಟಿಯ ಡಾ. ಜೇಮ್ಸ್ ಪಿವಾರ‍್ನಿಕ್ ಗರ್ಭಿಣಿ ಅಥ್ಲೇಟ್‌ಗಳ ಕುರಿತಂತೆ ಆಳ ಅಧ್ಯಯನವನ್ನು ನಡೆಸಿದ್ದಾರೆ. ಅಂತಿಮವಾಗಿ ಅವರು ಹೇಳುವುದೂ ಇದನ್ನೇ, ತಾಯಿಯಾಗುವ ಪ್ರಕ್ರಿಯೆ ಕ್ರೀಡಾಪಟುವಿಗೆ ಹಲವು ಕೋನಗಳಿಂದ ಅನುಕೂಲ ಒದಗಿಸುವುದಂತೂ ಸತ್ಯ.
ಹೇಗೆ? ಬಹುಷಃ ಎಲ್ಲರಿಗೂ ತಿಳಿದಿರುವಂತೆ, ಪ್ರಸವದವರೆಗಿನ ಗರ್ಭಿಣಿ ಅವಸ್ಥೆಯೇ ಮಹಿಳೆಯರ ಗರಿಷ್ಠ ದೈಹಿಕ ಸಾಮರ್ಥ್ಯವನ್ನು ಬಯಸುತ್ತದೆ. ಈ ವೇಳೆಯಲ್ಲಿ ತಾಯಿಯ ಪ್ರತಿಯೊಂದು ಅಂಗವೂ ಹೆಚ್ಚುವರಿ ಕೆಲಸದ ಭಾರವನ್ನು ನಿರ್ವಹಿಸಲು ಸರ್ವ ಸನ್ನದ್ಧವಾಗುತ್ತವೆ, ಗಟ್ಟಿತನ ಬೆಳೆಸಿಕೊಳ್ಳುತ್ತವೆ. ಬೆಳೆಯುತ್ತಿರುವ ಮಗುವಿನ ಪೋಷಣೆಗಾಗಿ ಮಹಿಳೆಯ ರಕ್ತದ ಪ್ರಮಾಣ ಅಚ್ಚರಿಯಾಗುವಂತೆ ಏರುತ್ತದೆ ಎಂಬುದು ವೈದ್ಯವಿಜ್ಞಾನದ ಗಮನಕ್ಕೆ ಬಂದಿವೆ. ಈ ಕಾರಣದಿಂದಾಗಿಯೇ ಆಮ್ಲಜನಕ ತಾಯಿಯ ಗರ್ಭಕ್ಕೆ ಸರಬರಾಜಾಗುವುದು ಸಾಧ್ಯವಾಗುತ್ತದೆ. ಈ ಎಲ್ಲ ಸಿದ್ಧತೆಗಳು ಒಮ್ಮೆ ಮಹಿಳೆ ಮಗುವಿಗೆ ಜನ್ಮ ಕೊಟ್ಟ ಮರುಕ್ಷಣವೇ ಯಥಾಸ್ಥಿತಿಗೆ ಬರುವುದಿಲ್ಲ. ಹಲವು ತಿಂಗಳವರೆಗೆ ಹಿಮೋಗ್ಲೋಬಿನ್‌ನಿಂದ ಸಮೃದ್ಧವಾದ ಕೆಂಪು ರಕ್ತ ಕಣಗಳು ತಾಯಿಯಲ್ಲೇ ಪವಡಿಸಿರುತ್ತವೆ. ಅಂದರೆ ಆಕೆಯ ದೇಹದಲ್ಲಿ ಮಾಂಸಖಂಡಗಳಿಗೆ ನಿರಾಯಾಸವಾಗಿ ಆಮ್ಲಜನಕ ಸರಬರಾಜಾಗುವ ಸ್ಥಿತಿ ನಿರ್ಮಾಣವಾಗಿರುತ್ತದೆ. ಫಲಿತಾಂಶವೆಂದರೆ, ಅಂತಹ ಕ್ರೀಡಾಳುವಿನ ದೈಹಿಕ ದೃಢತೆ (ಫಿಟ್‌ನೆಸ್) ಹೆಚ್ಚು ಕಾಲ ಬಾಳುತ್ತದೆ ಮತ್ತು ಆಕೆ ಹೆಚ್ಚಿನ ಅವಧಿಯ ತರಬೇತಿ ಪಡೆಯಲು ಸಾಧ್ಯವಾಗುತ್ತದೆ. ಅಂದಮೇಲೆ ತಂತ್ರಕ್ಕಿಂತ ಸಾಮರ್ಥ್ಯಕ್ಕೆ ಒಲವಿರುವ ಕ್ರೀಡೆಗಳಲ್ಲಿ ‘ತಾಯಿ’ಯರದು ಒಂದು ಕೈ ಮೇಲೆ ಎನ್ನುವಂತಾಗದೆ?
ಅಷ್ಟಕ್ಕೂ ಈ ಸತ್ಯಗಳು ಇದೀಗ ಕಂಡುಕೊಂಡಿದ್ದಲ್ಲ. ೮೮ರ ಉದಾಹರಣೆ ಮುಂದಿದೆ. ಗರ್ಭಿಣಿಯರಲ್ಲಿ ನಡೆಯುವ ದೈಹಿಕ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟತೆ ಮೂಡತೊಡಗಿದ್ದು ಮಾತ್ರ ಇತ್ತೀಚೆಗೆ. ಡಾ.ಜೇಮ್ಸ್ ಹೇಳುತ್ತಾರೆ, "ಮಗುವಿನ ಜನ್ಮ ಕೊಡುವ ಸಂದರ್ಭದಲ್ಲಿ ಉತ್ಪಾದನೆಯಾಗುವ ಹಾರ್ಮೋನ್ ರಿಲ್ಯಾಕ್ಸಿನ್ ಸೊಂಟದ ಮೂಳೆಗಳನ್ನು ಸಡಿಲಗೊಳಿಸುತ್ತದೆ. ಇದು ನಂತರ ಒದಗಬಹುದಾದ ಅಥ್ಲೆಟಿಕ್ ಸ್ಪಧೆಗಳ ಸಮಯದಲ್ಲಿ ಚಲನೆಯನ್ನು ಸುಧಾರಿಸುವುದು ಖಚಿತ. ಕ್ಲಿಸ್ಟರ‍್ಸ್ ಈ ಮುನ್ನ ಅಂಕಣದಲ್ಲಿ ಚಲನೆಯಲ್ಲಿ ತುಸು ಮಂದವಾಗಿದ್ದವರು ಈಗ ಚುರುಕಾಗಿರುವುದನ್ನು ನಾವೇ ಕಾಣುತ್ತಿದ್ದೇವೆ!
ಗ್ರಾಮೀಣ ಭಾಗದಲ್ಲೂ ಹೆರಿಗೆಯನ್ನು ಹೆಣ್ಣಿನ ಮರುಜನ್ಮವೆಂದು ಪರಿಗಣಿಸುವುದು ವಾಡಿಕೆ. ಬಹುಷಃ ಈ ಲೆಕ್ಕದಲ್ಲಿಯೇ ಇರಬೇಕು, ಹೆರಿಗೆ ನೋವು ತಿಂದ ಮಹಿಳೆ ಮುಂದಿನ ದಿನಗಳಲ್ಲಿ ನೋವನ್ನು ನುಂಗಿಕೊಳ್ಳುವ ಗಟ್ಟಿತನ ಬೆಳೆಸಿಕೊಳ್ಳುತ್ತಾಳೆ. ನೋವು - ನುಂಗುವ ಮಾತು ಮನಸ್ಸಿಗೆ ಸಂಬಂಧಪಟ್ಟಿದ್ದು. ಒಮ್ಮೆ ಕ್ರೀಡಾಪಟು ನೋವು ನುಂಗಿ ಆಡುವ ಪರಿಣತಿ ಪಡೆದರೆಂದರೆ ಫಿಟ್‌ನೆಸ್ ಎಂಬ ದೊಡ್ಡ ಎದುರಾಳಿಯನ್ನು ಪರಾಭವಗೊಳಿಸಿದಂತೆ ತಾನೇ?
ತಾಕತ್ತಿಗಾಗಿ ಗರ್ಭಪಾತ!
ಇಂಗ್ಲೆಂಡ್‌ನ ಕ್ರೀಡಾ ಸಚಿವಾಲಯ ಎಥಿಕ್ಸ್ ಎಂಡ್ ಆಂಟಿ ಡೋಪಿಂಗ್ ವಿಭಾಗ ಹಲವು ಬಾರಿ ಗರ್ಭಿಣಿ-ತಾಯಿ ಕ್ರೀಡಾಪಟುಗಳ ವಿಚಾರವನ್ನು ಎತ್ತಿದೆ. ಒಂದರ್ಥದಲ್ಲಿ, ‘ಪ್ರಗ್ನೆನ್ಸಿ’ ಎಂದರೆ ಕಾನೂನಿನ ಚೌಕಟ್ಟಿನಲ್ಲಿಯೇ ಪ್ರದರ್ಶನದ ಮಟ್ಟವನ್ನು ಉತ್ತೇಜಿಸುವ ಹಾರ್ಮೋನ್ ತೆಗೆದುಕೊಂಡಂತೆ. ಸಚಿವಾಲಯದ ಈ ವಾದಕ್ಕೆ ಪ್ರಸ್ತುತ ಹೆಚ್ಚಿನ ಬೆಂಬಲ ಸಿಕ್ಕಿಲ್ಲ. ಸತ್ಯ ಈ ವಾದದ ಆಚೀಚೆಯೇ ಇದೆ! ಸ್ವಾರಸ್ಯವೆಂದರೆ, ೧೯೮೮ರಷ್ಟು ಹಿಂದೆಯೇ ಈ ಕುರಿತು ಗಂಭೀರ ಚರ್ಚೆ ನಡೆದಿತ್ತು. ಆಗ ನಡೆದಿದ್ದ ಸೋರ್ಟ್ಸ್ ಆಂಟಿ ಡೋಪಿಂಗ್ ವಿಶ್ವ ಸಮಿತಿ ಪ್ರಥಮ ಸಭೆಯಲ್ಲಿಯೇ ‘ಅಬಾರ್ಷನ್ ಡೋಪಿಂಗ್’ನ್ನು ವಿಷಯಸೂಚಿಯಲ್ಲಿ ಸೇರಿಸಲಾಗಿತ್ತು. ಅದಕ್ಕೆ ಕಾರಣವೂ ಇತ್ತು. ಪೂರ್ವ ಯುರೋಪಿಯನ್ ಕ್ರೀಡಾಳುಗಳು ಪ್ರಮುಖ ಕ್ರೀಡಾಕೂಟಗಳಿಗೆ ಮುನ್ನ ಐಚ್ಛಿಕವಾಗಿ ಗರ್ಭಿಣಿಯರಾಗಿ ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದರು ಮತ್ತು ಆ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ತಂತ್ರ ರೂಪಿಸುತ್ತಿದ್ದರು ಎಂಬ ಆರೋಪಗಳಿದ್ದವು. ಯಾಕೋ ಗೊತ್ತಿಲ್ಲ, ಈ ಸುದ್ದಿಯ ಹಿಂದೆ ಯಾವುದೇ ಸಂಶೋಧನೆಗಳು ಆಗ ನಡೆಯಲೇ ಇಲ್ಲ.
ದಡೂತಿ, ಸುಸ್ತುಗಳ ಫಲಿತಾಂಶ?
ಕ್ರೀಡಾಳುವಿಗೆ ತಾಯಿತನ ತಂದುಕೊಡುವ ತಾಕತ್ತು ನಾಣ್ಯದ ಒಂದು ಮುಖ. ಕನ್ನಡದ ಪ್ರಖ್ಯಾತ ಚಿತ್ರನಟಿ ರಕ್ಷಿತಾ ಪ್ರೇಮ್ ಗಂಡುಮಗುವಿನ ತಾಯಿಯಾದ ನಂತರ ಊದಿದ ಪರಿಯನ್ನು ಗಮನಿಸಿದವರಿಗೆ ‘ತಾಕತ್ತು ಹೆಚ್ಚುವ ಸೂತ್ರ’ ಸುಳ್ಳಿನ ಕಂತೆ ಎನ್ನಿಸಿದರೆ ಅಚ್ಚರಿಯಿಲ್ಲ. ವಾಸ್ತವವಾಗಿ ಕ್ರೀಡಾಳುವಿನ ಜೀವನದಲ್ಲಿ ತಾಯ್ತನದ ನಂತರದ ಕ್ಯಾರಿಯರ್ ದೊಡ್ಡ ಸವಾಲೂ ಆದೀತು. ಮಹಿಳೆಯರ ಸ್ಪೋರ್ಟ್ಸ್ ಎಂಡ್ ಪಿಟ್‌ನೆಸ್ ಫೌಂಡೇಷನ್ ಈ ಮಗ್ಗುಲಿನತ್ತ ಬೆಳಕು ಚೆಲ್ಲುತ್ತದೆ. ಅದರ ಸಂಶೋಧನೆಗಳ ಪ್ರಕಾರ, ತಾಯಿಯಾದಾಕೆಗೆ ಸಮಯದ ಒತ್ತಡ ಹೆಚ್ಚು. "ಮಗುವಿನ ಲಾಲನೆ ಪಾಲನೆಯ ಹಿನ್ನೆಲೆಯಲ್ಲಿ ಮೊತ್ತಮೊದಲ ಕತ್ತರಿ ಬೀಳುವುದು ಅಭ್ಯಾಸಕ್ಕೆ, ವ್ಯಾಯಾಮಕ್ಕೆ. ಮಗುವಿನ ಜೊತೆಜೊತೆಗೆ ವ್ಯಾಯಾಮ ನಡೆಸುವಂತ ಮಾದರಿಯನ್ನು ರೂಪಿಸಿದರಷ್ಟೇ ಕ್ಯಾರಿಯರ್ ಉಳಿದೀತು. ಉದಾಹರಣೆಗೆ ಮಗುವಿನ ಸಂಗಡ ಈಜು ಅಭ್ಯಾಸ ಒಳ್ಳೆಯ ತಂತ್ರ. ಪ್ರಾಕ್ಟೀಸ್ ಸೌಲಭ್ಯದ ಜೊತೆಗೆ ಚೈಲ್ಡ್ ಕೇರ್ ಇದ್ದರಂತೂ ಸ್ವಾಗತಾರ್ಹ. ಕಿಂ ಕ್ಲಿಸ್ಟರ‍್ಸ್ ಅಂಗಳದಲ್ಲಿ ಮಗಳ ಜೊತೆಗೆ ಅತ್ತಿತ್ತ ಅಡ್ಡಾಡುವುದು ಕೂಡ ಅಂತಹ ಧನಾತ್ಮಕ ಚಟುವಟಿಕೆಯ ಒಂದು ದೃಶ್ಯ" ಹೀಗೆನ್ನುತ್ತಾರೆ ಫಿಟ್‌ನೆಸ್ ಫೌಂಡೇಷನ್‌ನ ಹೌರಿಯಟ್ ಫಾಕ್ಸ್‌ವೆಲ್.
ಬಾತ್ ವಿಶ್ವವಿದ್ಯಾಲಯದ ಅಧ್ಯಯನದಿಂದ ಮಹಿಳೆಯರು ಪುರುಷರಿಗಿಂತ ಶೀಘ್ರವಾಗಿ ನೋವಿನ ಅನುಭವ ಪಡೆಯುತ್ತಾರೆ ಎಂಬುದು ಗೊತ್ತಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪುರುಷರಿಗಿಂತ ಬೇಗ ಮಹಿಳೆಯರು ದೈಹಿಕ ಹಿನ್ನಡೆ ಅನುಭವಿಸುವ ಕಾರಣವಿದು. ನೋವಿನ ಹೆರಿಗೆಯ ಅನುಭವ ಪಡೆದ ಮಹಿಳೆಯರು ಮಾನಸಿಕ ದೃಢತೆ, ಜಾಗೃತ ಮನೋಭಾವ ಮತ್ತು ಚುರುಕುತನವನ್ನು ಪಡೆಯುತ್ತಾರೆ ಎಂದು ಮೇಲಿನ ಉಸುರಿನಲ್ಲಿಯೇ ಅಧ್ಯಯನ ಅಭಿಪ್ರಾಯಪಡುತ್ತದೆ. ಕ್ರೀಡಾ ಅಂಕಣದಲ್ಲಿ ಈ ಸ್ವಭಾವಗಳೇ ಅತೀವ ಅಗತ್ಯ ಎಂಬುದು ಗಮನಾರ್ಹ ಅಂಶ. ಕಳೆದ ಬೇಸಿಗೆಯಲ್ಲಿ ಬಾಣಂತನದ ಆಹಾರ - ವ್ಯಾಯಾಮಗಳ ಕುರಿತು ವಿಶೇಷ ಸಂಶೋಧನೆಗಳು ಬೆಳಕು ಕಂಡಿವೆ. ಪೂರಕವಾಗಿ ನಡೆದಿರುವ ‘ತೂಕ ಇಳಿಸುವ ತಂತ್ರಜ್ಞಾನ’ ಪ್ರಬಂಧದ ಸಲಹೆಗಳಲ್ಲಿ ತೂಕ ಇಳಿಸುವ ವ್ಯಾಯಾಮದ ಷರತ್ತಿಗಿಂತ ವಿವೇಚನಾಶೀಳ ಆಹಾರ ಪದ್ಧತಿ ಕ್ಷೇಮ ಎನ್ನಲಾಗಿದೆ. ಕ್ರೀಡಾಳುಗಳು ತಮ್ಮ ಬಾಣಂತನದ ವೇಳೆ ಇದನ್ನು ಅನುಸರಿಸುತ್ತಿದ್ದಾರೆ ಎಂಬುದಂತೂ ಸ್ಪಷ್ಟ.
ವಾಸ್ತವವಾಗಿ ಗೊಂದಲ ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಸಂಶೋಧನೆಗೆ ವಿಷಯಗಳೇ ಬಾಕಿ ಉಳಿದಿಲ್ಲ. ಬಹುಪಾಲು ಎಲ್ಲವನ್ನು ಅರ್ಥೈಸಿ ಪರಿಹಾರ ಸೂಚಿಸಲಾಗಿದೆ ಎಂಬ ಭಾವ ಮೂಡಿದೆ. ಆದರೆ ಬಾಣಂತನದ ತಾಕತ್ತಿನ ಬಗ್ಗೆ ವಿಶ್ಲೇಷಣೆಗಳಾಗಿಲ್ಲ. ಒಂದು ತಾರ್ಕಿಕ ಅಂತ್ಯ ಕಾಣಲಾಗಿಲ್ಲ. ವೈದ್ಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ಸವಾಲು. ಡೋಪಿಂಗ್ ಪರೀಕ್ಷೆಗೆ ದಕ್ಕದ ಸಾಮರ್ಥ್ಯವರ್ಧಕ ಕಂಡುಹಿಡಿಯಲು ಚೀನಾ, ಅಮೆರಿಕನ್ ದೇಶಗಳಲ್ಲಿ ಪ್ರತ್ಯೇಕ, ಗುಪ್ತ ಸಂಶೋಧನಾಲಯಗಳನ್ನೇ ಹೊಂದಲಾಗಿರುತ್ತದೆ. ಪ್ರಗ್ನೆನ್ಸಿ ವಿಚಾರ ಗಿಟ್ಟುತ್ತದೆಂದಾದರೆ ಒಲಂಪಿಕ್ಸ್ ಪದಕಕ್ಕಾಗಿ ಬೇಕೆಂದೇ ಗರ್ಭ ಧರಿಸಿ ಅಬಾರ್ಷನ್ ಮಾಡಿಸಿಕೊಳ್ಳುವ ಕಾಲ ಬರಬಹುದು. ಡೋಪಿಂಗ್ ಪರೀಕ್ಷೆಯ ವಿಧಿ ವಿಧಾನಗಳು ಬದಲಾಗಲೇ ಬೇಕಾಗುತ್ತದೆ. ಅನಾಹುತವೇ ಭವಿಷ್ಯವಾದೀತು.
ಧನಾತ್ಮಕವಾಗಿ ನೋಡುವವರು ಕಿಂ ಕ್ಲಿಸ್ಟರ‍್ಸ್‌ರ ಗ್ರಾನ್‌ಸ್ಲಾಂ ಪ್ರಶಸ್ತಿಯನ್ನು ನೋಡಬೇಕು. ಅವರ ಛಲ, ಅಭ್ಯಾಸ, ಆಸಕ್ತಿಗಳೇ ಸ್ಫೂರ್ತಿಯಾಗಬೇಕು. ಈಗಾಗಲೇ ಅದೇ ಬೆಲ್ಜಿಯಂನ ಇನ್ನೋರ್ವ ನಿವೃತ್ತ ಟೆನಿಸ್ ತಾರೆ, ಏಳು ಸ್ಲಾಂ ವಿಜೇತೆ, ಅಲ್ಲದೆ ಮಗುವೊಂದರ ತಾಯಿಯಾಗಿರುವ ಜಸ್ಟಿನ್ ಹೆನಿನ್ ಮರಳಿ ಸರ್ಕ್ಯೂಟ್‌ಗೆ ಬರುವ ಮಾತನಾಡಿದ್ದಾರೆ. ಇನ್ನು ಮುಂದೆ ಮದುವೆ, ತಾಯ್ತನ ಚಿತ್ರರಂಗದ ಹಿರೋಯಿನ್‌ಗಳಿಗೆ ತೊಡಕಾಗಬಹುದು. ಕ್ರೀಡಾಕಣದ ಮಹಿಳೆಯರಿಗಲ್ಲ!!
ಕೊನೆ ಕೊಸರು
ಬಾಣಂತನದ ಅವಧಿಯಲ್ಲಿರುವ ಮಹಿಳೆಯರನ್ನು ಮಾತನಾಡಿಸಿ ನೋಡಿ. ಮಗುವಿನ ಆರೈಕೆ, ಮನೆಗೆಲಸದಿಂದ ಹೈರಾಣಾಗಿ ಎಲ್ಲವೂ ಮರೆತು ಹೋಗುತ್ತದೆ. ಫೋನ್ ನಂಬರ್, ಹೆಸರು..... ಎಲ್ಲವನ್ನೂ ನೆನಪಿಸಿಕೊಳ್ಳುವುದು ಈಗ ಕಷ್ಟ ಎಂದು ಆ ಬಾಣಂತಿಯರು ಗೊಣಗುತ್ತಾರೆ. ನಾವು ಗೋಣಾಡಿಸುತ್ತೇವೆ. ಇದೀಗ ವ್ಯಕ್ತವಾಗಿರುವ ವೈದ್ಯ ವಿಜ್ಞಾನ ಅಧ್ಯಯನದ ಪ್ರಕಾರ, ಹೆರುವ ಪ್ರಕ್ರಿಯೆ ಹಾಗೂ ಎದೆ ಹಾಲು ಕುಡಿಸುವ ಕ್ರಿಯೆ ನಡೆಯುವ ಕಾಲದಲ್ಲಿ ಹಾರ್ಮೋನ್ ಚಂಚಲತೆಯ ಕಾರಣದಿಂದಾಗಿ ಅವರ ಮೆದುಳಿನ ಕೆಲ ಭಾಗದ ಕೋಶಗಳ ಗಾತ್ರ ಹೆಚ್ಚಾಗುತ್ತದಂತೆ. ಅರೆರೆ, ಹಾಗಾದರೆ ಅವರಿಗಾಗ ನೆನಪಿನ ಶಕ್ತಿ ಜಾಸ್ತಿಯಾಗಬೇಕಿತ್ತಲ್ಲವೇ?!

-ಮಾವೆಂಸ

 
200812023996