
ಸಚಿನ್ ರಮೇಶ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಕ್ಯಾರಿಯರ್ನ ೨೦ ವಸಂತಗಳನ್ನು ಪೂರೈಸುತ್ತಿದ್ದಂತೆ ಪುಂಖಾನುಪುಂಖವಾಗಿ ಅವರನ್ನು ಶ್ಲಾಘನೆಗಳಿಂದ ಅಭಿಷೇಕಗೈಯುವ ಮಾಧ್ಯಮಪ್ರಚಾರ ಜಾರಿಯಲ್ಲಿದೆ. ಹತ್ತಿರಹತ್ತಿರ ಏಳೂವರೆ ಸಾವಿರ ದಿನಗಳಿಂದ ನಿರಂತರವಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವವನ ದೇಹ, ಮನಸ್ಸು ಜರ್ಜರಿತಗೊಳ್ಳಬೇಕಿತ್ತು. ಆದರೆ ಸಚಿನ್ ಉಸಿರಾಡುತ್ತಿರುವುದೇ ಕ್ರಿಕೆಟ್ನ್ನು. ಉಸಿರಾಟದಿಂದಾಗಿ ಸುಸ್ತಾದ ಮನುಷ್ಯ ಯಾರೂ ಇಲ್ಲವಲ್ಲ! ಮೊನ್ನೆ ಮೊನ್ನೆ ಆಸ್ಟ್ರೇಲಿಯಾದೆದುರು ಏಕದಿನ ಪಂದ್ಯದಲ್ಲಿ ಗಳಿಸಿದ ೧೭೫ ರನ್, ನಿನ್ನೆ ಶ್ರೀಲಂಕಾದೆದುರು ಟೆಸ್ಟ್ನಲ್ಲಿ ಗಳಿಸಿದ ೪೩ನೇ ಶತಕ... ಬಿಡಿ, ಅಂಕಿಅಂಶಗಳಲ್ಲಿ ಸಚಿನ್ ಪರಾಕ್ರಮ ವಿವರಿಸಲು ‘ರಾಮಾಯಣ’ ಗ್ರಂಥದುದ್ದಕ್ಕೂ ಬರೆಯಬೇಕಾದೀತು!!
ಇಲ್ಲಿ ಅಂಕಿಅಂಶ, ದಾಖಲೆ, ಸಾಧನೆಗಳ ಗೋಜಿಗೆ ಹೋಗುತ್ತಿಲ್ಲ. ಸುಮ್ಮನೆ ಸಚಿನ್ರ ಕ್ರಿಕೆಟ್ ಬದುಕಿನಲ್ಲಿ ಓಡಾಡಿ ಹಲವು ಘಟನೆಗಳನ್ನು ಸಂಗ್ರಹಿಸಿದೆ. ಬರೀ ರನ್, ಧನ ಸಂಪಾದನೆಯಲ್ಲಿ ಅಲ್ಲದೆ ನಡೆನುಡಿಯಲ್ಲೂ ಸಚಿನ್ ಮಾದರಿಯಾಗುವಂತವರು. ಅವರಂತ ವ್ಯಕ್ತಿ ಇರುವುದರಿಂದಲೇ ನಮ್ಮ ದೇಶದ ಕಿಮ್ಮತ್ತು ನಿಸ್ಸಂಶಯವಾಗಿ ಜಾಸ್ತಯಾಗಿದೆ. ಇಲ್ಲಿ ಆಯ್ದ ವಿಶೇಷ ಪ್ರಸಂಗಗಳನ್ನು ನೀವೂ ಸವಿದು ಚಪ್ಪರಿಸಿ.
ರಾತ್ರಿ ಬ್ಯಾಟಿಂಗ್!೧೯೮೯ರ ಪಾಕಿಸ್ತಾನದ ಪ್ರವಾಸ. ಸಚಿನ್ ತೆಂಡೂಲ್ಕರ್ಗೆ ಅದು ಚೊಚ್ಚಲ ಅಂತರ್ರಾಷ್ಟ್ರೀಯ ಅನುಭವ. ಸಿಯಾಲ್ಕೋಟ್ ಟೆಸ್ಟ್ನ ಹಿಂದಿನ ರಾತ್ರಿ. ಮರುದಿನ ಬೆಳಿಗ್ಗೆ ಸಚಿನ್ರಿಗೆ ತಂಡದ ಹಿರಿಯರಿಂದ ಎರಡು ಬ್ಯಾಟ್ ಸಿಗುವುದಿತ್ತು. ತಂಡಕ್ಕೆ ಆಯ್ಕೆ ಆದರೂ ಅಚ್ಚರಿಯಿರಲಿಲ್ಲ. ಹಾಗೊಂದು ಯೋಚನೆ ಹೊತ್ತೇ ಸಚಿನ್ ಹೋಟೆಲ್ ರೂಂನ ಹಾಸಿಗೆ ದಿಂಬಿಗೆ ತಲೆ ಕೊಟ್ಟರು. ಹೇಳಿ ಕೇಳಿ ಸಚಿನ್ ‘ಬೇಗ ಮಲಗಿ ಬೇಗ ಏಳು’ ಮಾಡೆಲ್! ಒಂದೆರಡು ತಾಸು ಕಳೆದಿರಬಹುದು. ತಂಡದ ಕೆಲವರು ಇನ್ನೂ ಕಾರಿಡಾರ್ನಲ್ಲಿ ಆರಾಮವಾಗಿ ಮಾತನಾಡಿಕೊಂಡಿದ್ದರು. ಇದ್ದಕ್ಕಿದ್ದಂತೆ ಸಚಿನ್ ಕೊಠಡಿಯಿಂದ ಹೊರಬಂದರು. ಅಲ್ಲಿದ್ದ ಸಹ ಆಟಗಾರರಲ್ಲಿ ಬ್ಯಾಟ್ ಬಗ್ಗೆ ವಿಚಾರಿಸಿದರು. ಬೆಳಗಾಯಿತು ಎಂದುಕೊಂಡರೇನೋ? ಛೆ, ಆಗಿನ್ನೂ ಮಟಮಟ ರಾತ್ರಿ ಹನ್ನೊಂದೂವರೆ. ‘ಬ್ಯಾಟ್ ಬರುತ್ತೆ. ಚಿಂತೆ ಬೇಡ. ಮಲಕ್ಕೋ ಹೋಗಪ್ಪ’ ಎಂದು ಹಿರಿಯ ಆಟಗಾರರು ಸಚಿನ್ರನ್ನು ಮರಳಿ ಕೊಠಡಿಗೆ ಕಳಿಸಿದರು. ಅಕ್ಷರಶಃ ದಬ್ಬಿದರು ಎಂದರೂ ಸರಿ.
ಇಲ್ಲ, ರಾತ್ರಿ ರಾತ್ರಿಯೇ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ತರದೂದು ಇರಲಿಲ್ಲ. ಅಷ್ಟಕ್ಕೂ ಸಚಿನ್ರಿಗಾಗ ಕಾಡಿದ್ದು ಇನ್ಸೋಮ್ನಿಯಾ, ರಾತ್ರಿ ನಿದ್ರಾನಡಿಗೆ!
ಕೈ ಕೊಟ್ಟ ಫಾರಂ!ಒಂದು ಪೂರ್ವಭಾವಿ ಶಿಬಿರ. ಚೆನ್ನೈನಲ್ಲಿ. ಇಂಗ್ಲೆಂಡ್ ವಿಶ್ವಕಪ್ಗೆ ಮುನ್ನ. ಆಸ್ಟ್ರೇಲಿಯಾದ ಖ್ಯಾತ ಆಟಗಾರ ಹಾಗೂ ಭಾರತದ ಅಂದಿನ ಕೋಚ್ ಬಾಬ್ ಸಿಂಪ್ಸನ್ ನೇತೃತ್ವ ವಹಿಸಿದ್ದರು. ಆ ಸಂದರ್ಭದಲ್ಲಿ ನೆಟ್ಸ್ನಲ್ಲಿ ಹರ್ಭಜನ್ ಸಿಂಗ್ ತುಂಬಾ ಹತ್ತಿರದಿಂದ ತೆಂಡೂಲ್ಕರ್ಗೆ ಬೌಲ್ ಮಾಡುತ್ತಿದ್ದರು. ಅದೂ ಟೆನಿಸ್ ಬಾಲ್ನಿಂದ. ಸಚಿನ್ ಎದುರಿಸಿದ ಐದು ಎಸೆತಗಳಲ್ಲಿ ಒಮ್ಮೆ ಬೀಟ್ ಆದರು. ಹೇ, ಸಚಿನ್ರ ಫಾರಂ ಕೈಕೊಟ್ಟಿದೆ ಬಿಡಿ, ಅದಕ್ಕೇ ‘ಮಿಸ್’ ಆಗಿದ್ದು ಅಂತ ಮಾತ್ರ ಅನ್ನುವಂತಿಲ್ಲ. ಅವತ್ತು ಸಚಿನ್ ಬ್ಯಾಟ್ ಆಗಿ ಬಳಸಿದ್ದು ಒಂದು ಸ್ಟಂಪ್ನ್ನು!
ಬದಲಿ ಕೀಪರ್ ಯಾರು? ಪಂದ್ಯವೊಂದರಲ್ಲಿ ಹೀಗಾಗುತ್ತದೆಯೆಂದು ಊಹಿಸಿಕೊಳ್ಳಿ. ಹರ್ಭಜನ್ರ ಎಸೆತವೊಂದು ಪಿಚ್ನ ರಫ್ಗೆ ಬಿದ್ದು ಅಚಾನಕ್ ಎಗರುತ್ತದೆ. ಬ್ಯಾಟ್ನಿಂದ ತಪ್ಪಿಸಿಕೊಂಡ ಅದು ಅಷ್ಟೇ ಆಕಸ್ಮಿಕವಾಗಿ ವಿಕೆಟ್ ಕೀಪರ್ ಧೋನಿಯವರ ಮುಖಕ್ಕೆ ಅಪ್ಪಳಿಸುತ್ತದೆ. ಅವರು ಕೀಪಿಂಗ್ ಮುಂದುವರೆಸುವ ಸ್ಥಿತಿಯಲ್ಲಿಲ್ಲ. ಹಾಗಾದರೆ ಬದಲಿ ವಿಕೆಟ್ ಕೀಪರ್ ಯಾರಾದಾರು? ಯುವರಾಜ್ ಸಿಂಗ್, ರೈನಾ, ಗೌತಮ್ ಗಂಭೀರ್... ಹೇಳಿ, ಯಾರು?
ಖ್ಯಾತ ಕ್ರಿಕೆಟ್ ಅಂಕಣಕಾರ, ಭಾರತೀಯ ಕ್ರಿಕೆಟ್ನ ಸಂಪರ್ಕಾಧಿಕಾರಿಗಳೂ ಆಗಿದ್ದ ಅಮೃತ್ ಮಾಥುರ್ರ ಪ್ರಕಾರ, ಸಚಿನ್ ತೆಂಡೂಲ್ಕರ್! ಏಕೆಂದರೆ ಈವರೆಗೆ ಸಚಿನ್ ತಮ್ಮ ಜಾದೂವನ್ನು ಪ್ರದರ್ಶಿಸದೆ ಬಿಟ್ಟಿರುವುದು ಈ ಸ್ಥಾನದಲ್ಲಿ ಮಾತ್ರ. ಇಲ್ಲೂ ಒಂದು ಕೈ ನೋಡಲಿ ಅಲ್ಲವೇ?
ಬಿಟ್ಟದ್ದು ಬೈಕೋ, ರೈಲೋ?ಎಳೆಯ ಸಚಿನ್ರ ಮೊತ್ತಮೊದಲ ಜಾಹೀರಾತು ಶೂಟಿಂಗ್ ಇದ್ದುದೇ ಬೈಕ್ ಮೇಲೆ, ೧೯೯೦ರಲ್ಲಿ. ಅದನ್ನು ಓಡಿಸುವ ಸನ್ನಿವೇಶವನ್ನು ಚಿತ್ರೀಕರಿಸಬೇಕಿತ್ತು. ರಸ್ತೆಯ ಮೇಲೆಯೇ ಶೂಟಿಂಗ್ ಮಾಡಬಹುದಾದುದನ್ನು ಇದ್ದಕ್ಕಿದ್ದಂತೆ ರದ್ದು ಮಾಡಿ ಹೈದರಾಬಾದ್ನ ಸ್ಟೇಡಿಯಂ ಒಳಗೆ ಚಿತ್ರೀಕರಿಸಲಾಯಿತು. ಅಲ್ಲೇ ರಸ್ತೆಯ ಮಾದರಿಯ ಸೃಷ್ಟಿ. ‘ಪಸಂದಾಗಿದೆ ಬೈಕು’ ಎಂದು ಸಚಿನ್ ನಮಗೆಲ್ಲ ಶಿಫಾರಸು ಮಾಡುವ ದೃಶ್ಯ. ಯಾಕಿಂಗಪ್ಪಾ ಎಂದರೆ ಸಚಿನ್ರಿಗಾಗ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಕೊಡೋಣ ಎಂದರೂ ಅವರಿಗಿನ್ನೂ ೧೮ ವರ್ಷವಾಗಿರಲಿಲ್ಲ. ಅವತ್ತಿಗೆ ಬಿಡಲೂ ಬರುತ್ತಿರಲಿಲ್ಲ. ಅಂದರೆ ‘ನನಗಿದು ಇಷ್ಟದ ಬೈಕ್’ ಎಂದು ಸಚಿನ್ ಬಿಟ್ಟದ್ದು ರೈಲು!
ಸಚಿನ್ ಔಟ್!ಮುಂಬೈಕರ್ನ ಬ್ಯಾಟಿಂಗ್ ಪ್ರತಿಭೆಯ ಬಗ್ಗೆ ಎರಡು ಮಾತಿರಲು ಸಾಧ್ಯವಿಲ್ಲ. ಕೆಲವರು ಹೇಳುವಂತೆ ಸಚಿನ್ರಿಗೆ ತಾವು ಎದುರಿಸುವ ಪ್ರತಿ ಚೆಂಡಿಗೆ ಎರಡು ವಿಧದ ಹೊಡೆತಗಳನ್ನು ಕ್ರಿಯೇಟ್ ಮಾಡುವ ಸಾಮರ್ಥ್ಯವಿದೆ. ಅದು ಸರಿ, ಹಾಗಿದ್ದರೂ ಸಚಿನ್ ಔಟಾಗುವುದಾದರೂ ಹೇಗೆ? ಹೀಗೆಂದು ಕುಹಕಿಗಳು ಪ್ರಶ್ನೆ ಕೇಳಿದರೆ ಆ ಕೆಲವರ ಉತ್ತರ ನೇರ ನೇರ - ಅಯ್ಯಾ, ಈ ಸಚಿನ್ ಆ ಎರಡೂ ಹೊಡೆತ ಬಿಟ್ಟು ಮೂರನೆಯ ಮಾದರಿಯನ್ನು ಪ್ರಯೋಗಿಸಲು ಪ್ರಯತ್ನಿಸುವುದರಿಂದ!!
ಮುಯ್ಯಿ!ಹದಿನಾರು ವರ್ಷಗಳ ಹಿಂದಿನ ನೆನಪು. ಭರ್ಜರಿ ಬಿಸಿಲಿನ ಮಧ್ಯಾಹ್ನ. ವಾಂಖೆಡೆ ಸ್ಟೆಡಿಯಂನಲ್ಲಿ ನಡೆಯುತ್ತಿದ್ದದು ಇರಾನಿ ಕಪ್. ಹದಿನಾರೇ ವರ್ಷದ ಸಚಿನ್ಗೂ ಅದು ಚೊಚ್ಚಲ ಇರಾನಿ.
ತೆಂಡೂಲ್ಕರ್ ಬ್ಯಾಟ್ ಬೀಸುತ್ತಿದ್ದರು. ಆದರೇನು? ಅವರ ಶತಕಕ್ಕೆ ಕೇವಲ ಹನ್ನೊಂದು ರನ್ ಬೇಕು ಎನ್ನುವಾಗ ತಂಡದ ಒಂಭತ್ತನೇ ಬ್ಯಾಟ್ಸ್ಮನ್ನ್ನೂ ಔಟಾಗಿದ್ದ. ತಂಡ ಇನ್ನಿಂಗ್ಸ್ ಮುಗಿಸಲೇಬೇಕಾದ ಸ್ಥಿತಿ. ಇನ್ನೊಬ್ಬ ಆಟಗಾರ ಗುರುಶರಣ್ ಸಿಂಗ್ ಬ್ಯಾಟ್ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರ ಬಲಗೈಯ ಪೂರ್ಣಭಾಗಕ್ಕೆ ಪ್ಲಾಸ್ಟರ್ ಹಾಕಲಾಗಿತ್ತು. ಮಧ್ಯದ ಬೆರಳು ಮುರಿದು ಹೋಗಿತ್ತು. ಅದೇನೆನಿಸಿತೋ ಏನೋ, ೯ನೇ ವಿಕೆಟ್ ಬಿದ್ದ ಕ್ಷಣಕ್ಕೆ ಯಾರ ಮಾತೂ ಕೇಳದೆ ಗುಶ್ ಬ್ಯಾಟ್ ಹಿಡಿದು ಅಂಕಣಕ್ಕೆ ಧಾವಿಸಿದರು. ಅಕ್ಷರಶಃ ಒಂದೇ ಕೈಯಲ್ಲಿ ಬ್ಯಾಟ್ ಹಿಡಿದು ಚೆಂಡು ಎದುರಿಸಿದರು. ೧೬ ಚೆಂಡುಗಳು, ಅಷ್ಟರಲ್ಲಿ ತೆಂಡೂಲ್ಕರ್ ಶತಕ ಬಾರಿಸಿದ್ದಾಗಿತ್ತು. ನೆನಪಿರಲಿ, ರಣಜಿ, ದುಲೀಪ್, ಇರಾನಿಗಳೆಲ್ಲದರ ಚೊಚ್ಚಲ ಪಂದ್ಯದಲ್ಲೇ ಸಚಿನ್ ಶತಕ ಬಾರಿಸಿದಂತಾಯಿತು.
ಶುದ್ಧ ದಶರಥನಂತೆ ಸಚಿನ್ ಅವತ್ತೇ ಉಸುರಿದ್ದರು, "ಈ ಅವಿಸ್ಮರಣೀಯ ಋಣವನ್ನು ನಾನೆಂದಾದರೂ ತೀರಿಸಿಯೇನು" ೧೬ ದೀರ್ಘ ವರ್ಷ. ಯಾರಿಗೆ ನೆನಪಿದ್ದೀತು? ಸಚಿನ್ ಕುಟುಂಬದೊಂದಿಗೆ ಅಮೆರಿಕದ ಪ್ರವಾಸಗೈಯುವ ತರಾತುರಿಯಲ್ಲಿದ್ದರು. ಆ ಕ್ಷಣಕ್ಕೆ ಗುಶ್ ಫೋನ್ ಬಂತು. ‘ಫಿರೋಜಾ ಕೋಟ್ಲಾದಲ್ಲಿ ನನ್ನ ಬೆನಿಫಿಟ್ ಪಂದ್ಯ ಇದೆ. ಪಾಲ್ಗೊಳ್ಳಲಾದೀತಾ?’ ಸಚಿನ್ರ ನೆನಪು ಹಸಿರು. ಆಹ್ವಾನಕ್ಕೆ ಎಸ್ ಎಂದರು. ಅಮೆರಿಕ ಪ್ರವಾಸ ರದ್ದು. ಸಚಿನ್ರಿಗೆ ಋಣ ಸಂದಾಯದ ತೃಪ್ತಿ!
ಈಗ ಹೇಳಿ, ಸಚಿನ್ ತೆಂಡೂಲ್ಕರ್ಗೆ ನಾವು ಪ್ರತಿದಿನ ಬೆಳಿಗ್ಗೆ ಒಂದು ನಮಸ್ಕಾರ ಸಲ್ಲಿಸಿದರೆ ತಪ್ಪಿದೆಯೇ?
-ಮಾವೆಂಸ