ಶುಕ್ರವಾರ, ಅಕ್ಟೋಬರ್ 30, 2009

ಅನಪೇಕ್ಷಿತ ಕರೆ ತಡೆಗೆ ‘ಡು ನಾಟ್ ಕಾಲ್’




ನಿಜ, ಟ್ರಾಯ್ ಬರುವ ದಿನಗಳಲ್ಲಿ ‘ಡು ಕಾಲ್’ ಎಂಬ ನೂತನ ಪದ್ಧತಿಯನ್ನು ಜಾರಿಗೆ ತರಲಿಕ್ಕಿದೆ. ಮೊಬೈಲ್‌ನಲ್ಲಿ ನಮಗೆ ಬೇಕಾದ ಜಾಹೀರಾತು ಕರೆಯನ್ನು ನಮಗೆ ಅನುಕೂಲವಾದ ಸಮಯದಲ್ಲಿ ಆಲಿಸಲು ಅವಕಾಶವಾಗುತ್ತದೆ. ಆದರೆ ಆ ನಿಯಮ ಬರಲು ತುಸು ಸಮಯ ಬೇಕು. ಟ್ರಾಯ್ ಕಚ್ಚಾ ನಿಯಮವನ್ನು ರೂಪಿಸಿ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಕೇಳಬೇಕು, ಮೊಬೈಲ್ ಸೇವಾದಾತರು - ಜಾಹಿರಾತುದಾರರು ಮತ್ತು ಗ್ರಾಹಕರಾರಿಗೂ ಅನ್ಯಾಯವಾಗದ ವ್ಯವಸ್ಥೆಯನ್ನು ರೂಪಿಸಬೇಕು. ಆವರೆಗೆ ಮೊಬೈಲ್ ಚಂದಾದಾರನಿಗೆ ಕಿರಿಕಿರಿ ಕರೆಗಳಿಂದ ಮುಕ್ತಿ ಇಲ್ಲವೇ? ಆಮಟ್ಟಿಗೆ ಪರಿಣಾಮಕಾರಿಯಾದ ಟ್ರಾಯ್ ನಿಯಮ ಈಗಾಗಲೇ ಜಾರಿಯಲ್ಲಿದೆ. ಕೈಹಿಡಿದು ನಡೆಸುವ ಮಾದರಿಯಲ್ಲಿ ವಿವರ ಇಲ್ಲಿವೆ.
ಬರ್ರ್ ಎಂದು ಬೈಕ್‌ನಲ್ಲಿ ಹೋಗುತ್ತಿರುವಿರಿ. ಜೇಬಿನಲ್ಲಿರುವ ಮೊಬೈಲ್ ರಿಂಗಾಗತೊಡಗಿದೆ. ಏನು ಅಜೆಂಟೋ ಎಂದು ರಸ್ತೆ ಬದಿಗೆ ಬಂದು ಮೊಬೈಲ್ ಎತ್ತಿದರೆ ‘ನಿಮಗೆ ಈ ಹಾಡು ಬೇಕಿದ್ದರೆ ಸ್ಟಾರ್ ಒತ್ತಿ.....’ ಎಂಬ ಕಾಲರ್‌ಟ್ಯೂನ್ ಜಾಹೀರಾತು! ಮಹತ್ವದ ಸಭೆ ನಡೆಯುತ್ತಿದೆ. ಗಂಭೀರ ಚರ್ಚೆಯಲ್ಲಿ ಭಾಗವಹಿಸಿದ್ದೀರಿ. ಮೊಬೈಲ್‌ನ ವೈಬ್ರೇಟರ್ ಮೋಡ್ ನಿಮ್ಮನ್ನು ಎಚ್ಚರಿಸುತ್ತಿದೆ. ಕರೆ ಬಂತು, ಕರೆಬಂತು... ನಂಬರ್ ನೋಡಿದರೆ ಅಪರಿಚಿತ. ವಿಷಯ ಏನಿದ್ದೀತೋ ಎಂದು ಕರೆ ಸ್ವೀಕರಿಸಿದರೆ " ನಿಮಗೆ ನಮ್ಮ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬೇಕೆ?...." ಎಂಬ ನುಲಿಯುವ ಯುವತಿಯ ಬಲವಂತದ ಒತ್ತಾಯ!!
ಈ ಸಂಬಂಧ ಕಿರಿಕಿರಿಗೊಳಗಾದ ಮೊಬೈಲ್ ಗ್ರಾಹಕರ ದೂರು ಇಂದು ನಿನ್ನೆಯದಲ್ಲ. ಆದರೆ ಅದರ ತಡೆಗೆ ಯಾವುದೇ ನಿರ್ದಿಷ್ಟ ಕಾನೂನುಗಳಿರಲಿಲ್ಲ. ಈ ಮುನ್ನ ಒಳಬರುವ ಕರೆಗಳಿಗೂ ವೆಚ್ಚ ವಿಧಿಸುತ್ತಿದ್ದ ಕಾಲದಲ್ಲಂತೂ ಈ ಅಪರಿಚಿತ ಕರೆಗಳು ಭಯವನ್ನೇ ಹುಟ್ಟಿಸುತ್ತಿದ್ದವು. ಪ್ರಸ್ತುತ ಕೇಂದ್ರ ಸರ್ಕಾರ ಕೂಡ ತನ್ನ ಜವಾಬ್ದಾರಿಗಳನ್ನು ಟ್ರಾಯ್‌ಗೆ ವಹಿಸಿದೆ. ಟ್ರಾಯ್ ಕಾನೂನು ಬಂದು ಹತ್ತು ವರ್ಷಗಳು ಸಂದಿವೆ. ಬಹುಪಾಲು ಗ್ರಾಹಕ ಪರ ವಹಿಸಿರುವ ಟ್ರಾಯ್ ಕಿರಿಕಿರಿ ಜಾಹೀರಾತು ಕರೆಯ ವಿಚಾರದಲ್ಲೂ ಪರಿಹಾರಕ್ಕೆ ಹೆಜ್ಜೆ ಇರಿಸಿದೆ. ಸ್ವತಃ ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪೋಷಿಸಿಕೊಂಡಂತೆ ಅನಗತ್ಯ ಜಾಹಿರಾತು ಕರೆ, ಸಂದೇಶಗಳನ್ನು ನಿರ್ಬಂಧಿಸುವ ಅದರ ಮಹಾತ್ವಾಕಾಂಕ್ಷೆಯ ಯೋಜನೆಯೇ ಈ ‘ಡು ನಾಟ್ ಕಾಲ್’ ನೊಂದಣಿ. (ಎನ್‌ಡಿಎನ್‌ಸಿ)
ತಡೆಗೆ ಹಲವು ಒತ್ತಾಯ
ಒಂದು ಚೂರು ಫ್ಲಾಶ್ ಬ್ಯಾಕ್‌ಗೆ ಹೋಗಿಬರುವುದು ರುಚಿಕರ. ೨೦೦೫ರಷ್ಟು ಹಿಂದೆಯೇ ಸುಪ್ರೀಂಕೋರ್ಟ್‌ನ ಮುಂದೆ ಅನಪೇಕ್ಷಿತ ಜಾಹಿರಾತು ಕರೆ, ಎಸ್‌ಎಂಎಸ್ ಸಂಬಂಧವಾಗಿ ಒಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (wp 35/2005) ದಾಖಲಾಗಿತ್ತು. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎಂಬ ಸ್ವಯಂಸೇವಾ ಸಂಸ್ಥೆಯಿಂದ ‘ಮೊಬೈಲ್ ಸೇವಾದಾತರು ತಾವು ನೀಡಿದ ವೈಯುಕ್ತಿಕ ದಾಖಲೆಗಳನ್ನು ಜಾಹಿರಾತು - ವೃತ್ತಿಪರ ಉದ್ದೇಶಗಳಿಗೆ ಬಳಸುತ್ತಿವೆ. ಭಾರತೀಯ ಟೆಲಿಗ್ರಾಫ್ ಕಾಯ್ದೆ ೧೯೫೧ರ ಸೆಕ್ಷನ್ ೪೨೭ ಮತ್ತು ೫೧೩ರ ಪ್ರಕಾರ ಇದು ಉಲ್ಲಂಘನೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಆ ಅರ್ಜಿಯಲ್ಲಿ ವಾದ ಮಾಡಲಾಗಿತ್ತು. ಆ ದಿನಗಳಲ್ಲಿ ಇಂತಹ ಕರೆಗಳನ್ನು ಬಲುಮುಖ್ಯವಾಗಿ ಮಾಡುತ್ತಿದ್ದುದು ಬ್ಯಾಂಕ್, ಫೈನಾನ್ಸ್‌ನಂತ ಹಣಕಾಸು ವ್ಯವಹಾರದ ಸಂಸ್ಥೆಗಳು. ಹಾಗಾಗಿ ಕೋರ್ಟ್ ಆರ್‌ಬಿಐಗೆ ಸೂಚನೆ ನೀಡಿ, ಇನ್ನು ಮುಂದೆ ಈ ಅನಗತ್ಯ ಕರೆ ತಡೆಯಲೇಬೇಕು ಎಂದು ಆದೇಶಿಸಿತು. ಪಿಎಲ್‌ಐ ಅರ್ಜಿಗೆ ಗೆಲುವು ಸಿಕ್ಕಿತ್ತು!
ಚುರುಕಾಗಿ ಕೆಲಸ ಮಾಡಿದ ಆರ್‌ಬಿಐ ಏಪ್ರಿಲ್ ವೇಳೆಗಾಗಲೇ ತನ್ನ ವರದಿಯನ್ನು ಸಲ್ಲಿಸಿಯಾಗಿತ್ತು. ಅದರ ಪ್ರಕಾರ, ಒಮ್ಮಿಂದೊಮ್ಮೆಗೆ ಈ ಕರೆ ಮಾದರಿಯನ್ನೇ ನಿಷೇಧಿಸುವಂತಾಗಬಾರದು, ವೃತ್ತಿಪರ ಉದ್ದೇಶಗಳಿಗೆ ಇದನ್ನು ಬಳಸುವಂತ ಅತ್ಯಪರೂಪದ ಸಂಪರ್ಕ ಮಾಧ್ಯಮವನ್ನು ಬಿಟ್ಟುಕೊಡುವುದು ಸರಿಯಲ್ಲ. ಪ್ರಚಾರಕ್ಕೆ ಹಾಗೂ ಮಾಹಿತಿಗೆ ಇದು ಅತ್ಯಗತ್ಯ’ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಆರ್‌ಬಿಐ ೨೦೦೫ರ ನವೆಂಬರ್‌ನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. ಅದರ ಪ್ರಕಾರ ಇನ್ನು ಮುಂದೆ ತಮಗೆ ಕಿರುಕುಳ ಕೊಡದಿರಿ ಎಂದು ಸೂಚಿಸಿದ ಗ್ರಾಹಕರಿಗೆ ಯಾವುದೇ ಬ್ಯಾಂಕ್ ಕರೆ ಮಾಡುವಂತಿರಲಿಲ್ಲ. ಆದರೆ ಇದು ಅಂತಹ ಪರಿಣಾಮವನ್ನೇನೂ ಬೀರಲಿಲ್ಲ. ಆರ್‌ಬಿಐ ಬ್ಯಾಂಕ್‌ಗಳ ಹಿತ ಕಾಪಾಡಿತು!
೨೦೦೬ರ ಮೇನಲ್ಲಿ ಒರಿಸ್ಸಾದ ಬಿ.ಜೆ.ಪಾಂಡಾ ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿದ್ದುಂಟು. ಅದು ‘ಪ್ರಿವೆನ್ಶನ್ ಆಫ್ ಅನ್‌ಸಾಲಿಸಿಟೆಡ್ ಟೆಲಿಫೋನಿಕ್ ಆಕ್ಟ್ ಎಂಡ್ ಪ್ರೊಟೆಕ್ಷನ್ ಆಫ್ ಪ್ರೈವೆಸಿ’ ಎಂಬ ಹೆಸರಿನಲ್ಲಿ ಮಂಡನೆಯಾಗಿತ್ತು. ಈ ಮಸೂದೆ ಅನಪೇಕ್ಷಿತವಾದ ವ್ಯಾಪಾರಿ ಜಾಹಿರಾತನ್ನು ನಿಷೇಧಿಸಲು ಸೂಚಿಸಿತ್ತು. ಉಲ್ಲಂಘನೆಗೆ ಎರಡು ವರ್ಷದ ಜೈಲು ಶಿಕ್ಷೆಯಿಂದ ಗರಿಷ್ಟ ನಾಲ್ಕು ವರ್ಷದವರೆಗೆ ಎಂದು ನಿಗದಿಪಡಿಸಲಾಗಿತ್ತು. ಎರಡು ಲಕ್ಷದವರೆಗೆ ದಂಡ ವಿಧಿಸಲೂ ಆ ಬಿಲ್‌ನಲ್ಲಿ ಪ್ರಾವಿಧಾನವನ್ನು ಇರಿಸಲಾಗಿತ್ತು. ಇತರ ರಾಜಕಾರಣಿಗಳ ಕೃಪಾ ಪೋಷಣೆಯಿಲ್ಲದ ಕಾಯ್ದೆ ಬರಕಾತ್ತಾಗಲಿಲ್ಲ.
ಅಷ್ಟಕ್ಕೆ ಮುಗಿಯಲೂ ಇಲ್ಲ. ಭಾರತಿ ಟೆಲಿ ವೆಂಚರ್ ವಿರುದ್ಧ ಶರ್ಮ ಎಂಬಾತ ದೆಹಲಿಯ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅನಪೇಕ್ಷಿತ ಕರೆಯ ಕಿರಿಕಿರಿಯನ್ನು ವಿರೋಧಿಸಿ ದೂರು ಸಲ್ಲಿಸಿದ. ಈ ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿತು. ಅದು ತನ್ನ ತೀರ್ಪಿನಲ್ಲಿ, ಈ ಕುರಿತು ಅಗತ್ಯ ನಿಯಮ ರೂಪಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಟ್ರಾಯ್‌ಗೆ ಆದೇಶ ನೀಡಿತು. ಇದರ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಹೋಗಲಾಗಿತ್ತಾದರೂ ಅದೂ ಮೇಲಿನ ಆದೇಶವನ್ನೇ ಎತ್ತಿಹಿಡಿಯಿತು. ಒಟ್ಟಾರೆಯಾಗಿ ಟ್ರಾಯ್‌ಗೆ ಈ ಸಂಬಂಧ ವ್ಯವಸ್ಥೆಯೊಂದನ್ನು ಸ್ಥಾಪಿಸಲು ಸಮಯ ಪಕ್ವವಾಗಿತ್ತು. ಹಾಗೆಂದು ಈ ಸೌಲಭ್ಯ ನೀಡಿದ ದೇಶಗಳಲ್ಲಿ ಭಾರತ ಮೊದಲನೆಯದೇನೂ ಆಗಿರಲಿಲ್ಲ. ಅಮೆರಿಕ, ಕೆನಡಾ, ಇಂಗ್ಲೆಂಡ್ ಹಾಗೂ ಐರ್ಲೆಂಡ್‌ಗಳಲ್ಲಿ ಹಿಂದಿನಿಂದಲೇ ಡು ನಾಟ್ ಕಾಲ್ ನೊಂದಣಿ ವ್ಯವಸ್ಥೆ ಜಾರಿಗೆ ಬಂದಿತ್ತು. ಹಾಂಗ್‌ಕಾಂಗ್‌ನಲ್ಲಿ ಯಾವುದೇ ಟೆಲಿ ಮಾರ್ಕೆಟಿಂಗ್ ಕಂಪನಿ ಮೊಬೈಲ್ ಗ್ರಾಹಕನ ಒಪ್ಪಿಗೆ ಪಡೆದ ನಂತರವಷ್ಟೇ ಟೆಲಿ ಮಾರ್ಕೆಟಿಂಗ್ ಮಾಡಬಹುದು ಎಂಬ ನಿಯಮವಿತ್ತು.
ಅಳೆದೂ ಸುರಿದು ೨೦೦೮ರ ಮಾರ್ಚ್‌ನಲ್ಲಿ ಟ್ರಾಯ್ ಜಾರಿಗೆ ತಂದ ಎನ್‌ಡಿಎನ್‌ಸಿ ಪದ್ಧತಿಯಲ್ಲಿ ಹಲವು ಕ್ಲಿಷ್ಟತೆಗಳಿತ್ತು. ಪ್ರತಿಯೊಂದು ಮೊಬೈಲ್ ಸೇವಾದಾರರು ವಿಭಿನ್ನ ವಿಭಿನ್ನ ಕರೆ ಸಂಖ್ಯೆ, ಎಸ್‌ಎಂಎಸ್ ಮಾದರಿಯಿಂದ ಈ ಡು ನಾಟ್ ಕಾಲ್ ನೊಂದಣಿಯನ್ನು ತಮ್ಮ ತಮ್ಮ ಮೊಬೈಲ್ ಕಂಪನಿಗಳಲ್ಲಿ ಮಾಡಿಕೊಳ್ಳಬೇಕಿತ್ತು. ಬಹುಪಾಲು ಗ್ರಾಹಕರಿಗೆ ಇದು ಗೊಂದಲವಾಗಿ ಪರಿಣಮಿಸುತ್ತಿದ್ದ ಪರಿಣಾಮವಾಗಿ ಅಗತ್ಯವಿದ್ದರೂ ಎನ್‌ಡಿಎನ್‌ಸಿ ನೊಂದಣಿ ಮಾಡಿಸಿಕೊಳ್ಳದೆ ಸುಮ್ಮನುಳಿಯುತ್ತಿದ್ದರು. ಇದನ್ನು ಮನಗಂಡ ಟ್ರಾಯ್ ಈ ವ್ಯವಸ್ಥೆಯನ್ನು ಸರಳೀಕೃತಗೊಳಿಸಿದೆ. ಈಗ ಡು ನಾಟ್ ಕಾಲ್ ನೊಂದಣಿ ಎಲ್ಲ ಕಂಪನಿಯ ಮೊಬೈಲ್ ಗ್ರಾಹಕರಿಗೂ, ಸ್ಥಿರ ದೂರವಾಣಿ ಚಂದಾದಾರರಿಗೂ ಏಕ ಪ್ರಕಾರ.
ನೀವೂ ನೊಂದಾಯಿಸಿ
ಹೇಗೆ? ಪ್ರಥಮ ಹೆಜ್ಜೆ ಈ ಮುಂದಿನಂತೆ. ೧೯೦೯ಕ್ಕೆ ಕರೆಮಾಡಿ. ಇದು ಸಂಪೂರ್ಣ ಉಚಿತ ಕರೆ. ಇಲ್ಲಿ ಸೂಚನೆಗಳನ್ನು ಪಾಲಿಸುತ್ತ ಬಂದರೆ ಎನ್‌ಡಿಎನ್‌ಸಿಯಲ್ಲಿ ನೊಂದಣಿಯಾಗುತ್ತದೆ. ಚಂದಾದಾರರು ಎಸ್‌ಎಂಎಸ್ ಮೂಲಕವೂ ನೊಂದಾಯಿಸಿಕೊಳ್ಳಬಹುದು. ಕ್ಯಾಪಿಟಲ್ ಅಕ್ಷರಗಳಲ್ಲಿ STARTಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟುDNDಎಂದು ಟೈಪ್ ಮಾಡಬೇಕು. (ಮಾದರಿ - START DND) ಇದನ್ನು ಕೂಡ ೧೯೦೯ಗೆ ಕಳುಹಿಸಬೇಕು. ಈ ಸಂಖ್ಯೆಗೆ ಮಾಡುವ ಎಸ್‌ಎಂಎಸ್ ಸಹ ಉಚಿತ. ಇಂದು ಹೊಸದಾಗಿ ಚಂದಾದಾರರಾಗುವವರಿಗೆ ಅರ್ಜಿ ಫಾರಂನಲ್ಲಿಯೇ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಿಕೊಳ್ಳುವ ಆಯ್ಕೆಯನ್ನು ಕೊಡಲಾಗುತ್ತಿದೆ.
ಮುಂದಿನ ಹೆಜ್ಜೆಯಲ್ಲಿ ನಿಮ್ಮ ಎಸ್‌ಎಂಎಸ್ ಯಾ ಕರೆ ಮೂಲಕ ನೊಂದಾವಣೆ ಮಾಡಿಕೊಂಡ ನಂತರ ಸೇವಾದಾರರು ನಿಮಗೊಂದು ‘ದಾಖಲಾತಿ ಸಂಖ್ಯೆ’ಯನ್ನು ನೀಡುತ್ತಾರೆ. ಇದನ್ನು ಕಾಪಿಟ್ಟುಕೊಳ್ಳಬೇಕು, ಮುಂದಿನ ಯಾವುದೇ ವ್ಯವಹಾರಕ್ಕೆ ಈ ಸಂಖ್ಯೆ ಬೇಕೇಬೇಕು. ಗ್ರಾಹಕ ಡು ನಾಟ್ ಕಾಲ್‌ಗೆ ವಿನಂತಿ ಸಲ್ಲಿಸಿದ ೪೫ ದಿನಗಳ ಅವಧಿಯಲ್ಲಿ ಚಾಲ್ತಿಗೆ ಬರುತ್ತದೆ. ಅಂದರೆ ನೊಂದಾಯಿಸಿದ ಒಂದೂವರೆ ತಿಂಗಳ ನಂತರದಿಂದಷ್ಟೆ ಈ ಜಾಹಿರಾತು ಕರೆ - ಎಸ್‌ಎಂಎಸ್ ನಿಲ್ಲುತ್ತದೆ. ಇದೇ ೧೯೦೯ಗೆ ಕರೆ ಮಾಡಿ ಅಥವಾ STOP DND ಎಂಬ ಎಸ್‌ಎಂಎಸ್ ಮಾಡಿ ನೊಂದಣಿಯನ್ನು ರದ್ದುಗೊಳಿಸಲು ಅವಕಾಶವಿದೆ.
ನೊಂದಾವಣೆಯಾದ ೪೫ ದಿನಗಳ ತದ ನಂತರವೂ ವಾಣಿಜ್ಯ ಕರೆ ಸಂದೇಶ ಬರುತ್ತಿದ್ದರೆ ನೀವು ದೂರು ದಾಖಲಿಸಬೇಕಾಗುತ್ತದೆ. ಇಂತಹ ಕರೆ ಸಂದೇಶ ಬಂದ ೧೫ ದಿನಗಳೊಳಗೆ ಗ್ರಾಹಕ ದೂರು ಕೊಡಬೇಕು. ಮೊತ್ತ ಮೊದಲು ಸೇವಾದಾತರ ಕಾಲ್ ಸೆಂಟರ್‌ಗೆ ಕರೆಮಾಡಿ ದೂರು ದಾಖಲಿಸಬೇಕು. ದಾಖಲಿಸುವ ವೇಳೆ ಇವನ್ನು ಗಮನಿಸಿ; ೧) ನಿಮ್ಮ ದೂರವಾಣಿ ಸಂಖ್ಯೆ, ೨) ಟೆಲಿ ಮಾರ್ಕೆಂಟಿಂಗ್ ಮಾಡಿದ ದೂರವಾಣಿ ಸಂಖ್ಯೆ, ೩) ಕರೆಯ ದಿನಾಂಕ ಮತ್ತು ಸಮಯ, ೪) ಈ ಕರೆ ಅಥವಾ ಎಸ್‌ಎಂಎಸ್‌ನ ವಿಷಯ - ಈ ನಾಲ್ಕು ಅಂಶಗಳನ್ನು ನೀವು ಉಲ್ಲೇಖಿಸಬೇಕು. ದೂರು ದಾಖಲಿಸಿದ್ದಕ್ಕೆ ಕಾಲ್ ಸೆಂಟರ್‌ನಿಂದ ಡಾಕೆಟ್ ಸಂಖ್ಯೆಯನ್ನು ಗ್ರಾಹಕ ಮುದ್ದಾಂ ಪಡೆಯಬೇಕು. ಇಂತಹ ಚಂದಾದಾರ ೫೦೦ ರೂ. ಪರಿಹಾರಕ್ಕೆ ಸೇವಾದಾತರನ್ನು ಒತ್ತಾಯಿಸಬೇಕು. ಮುಂದಿನ ೩೦ ದಿನಗಳಲ್ಲಿಯೂ ನಿಮ್ಮ ದೂರನ್ನು ಪರಿಹರಿಸದಿದ್ದರೆ, ಇನ್ನೂ ಅನಪೇಕ್ಷಿತ ವಾಣಿಜ್ಯ ಕರೆ- ಸಂದೇಶ ಹಿಂದಿನ ಟೆಲಿ ಮಾರ್ಕೆಂಟಿಂಗ್ ಕಂಪನಿಯಿಂದಲೇ ಬರುತ್ತಿದ್ದರೆ ನೀವು ಟ್ರಾಯ್‌ನಲ್ಲಿಯೇ ದೂರು ದಾಖಲಿಸಬಹುದು. ಅವರ ಇ-ಮೇಲ್ ಐಡಿucccomplaints@ndncregistry.gov.in
ಇದೀಗ ಟ್ರಾಯ್ ‘ಟೆಲಿಕಾಂ ಅನ್‌ಸಾಲಿಸಿಟೆಡ್ ಕಮರ್ಷಿಯಲ್ ಕಮ್ಯುನಿಕೇಷನ್(ಯುಸಿಸಿ) ಎರಡನೇ ತಿದ್ದುಪಡಿ - ೨೦೦೮’ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಮೊಬೈಲ್ ಕಂಪನಿ ದೂರು ಸ್ವೀಕರಿಸಿದ ೨೮ ದಿನಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಲೇಬೇಕು. ಒಂದೊಮ್ಮೆ ಈ ಗಡುವಿನಲ್ಲಿ ದೂರನ್ನು ನಿರ್ವಹಿಸದಿದ್ದರೆ, ಮೊದಲ ಸಂದರ್ಭದಲ್ಲಿ ಗರಿಷ್ಟ ೫ ಸಾವಿರ ರೂ. ದಂಡವನ್ನು ಸೇವಾದಾತ ಅರ್ಜಿದಾರನಿಗೆ ಕೊಡಬೇಕಾಗುತ್ತದೆ. ನಿರ್ಲಕ್ಷ್ಯ ಮುಂದುವರಿದಲ್ಲಿ ದಂಡದ ಮೊತ್ತ ೨೦ ಸಾವಿರದವರೆಗೆ ಹೆಚ್ಚಬಹುದು. ಅಷ್ಟೇ ಅಲ್ಲ, ಇನ್ನು ಮುಂದೆ ಪ್ರತಿ ಹೊಸ ಚಂದಾದಾರನಿಗೆ ಆಕ್ಟಿವೇಷನ್ ವೇಳೆಯಲ್ಲಿಯೇ ‘ಡು ನಾಟ್ ಕಾಲ್ ರಿಜಿಸ್ಟ್ರಿ’ಗೆ ನೊಂದಣಿ ಆಗಬೇಕೆ ಎಂಬ ವಿಚಾರಣೆಯನ್ನು ಸಿಮ್‌ದಾತರು ಮಾಡಲೇಬೇಕು. ಗಮನದಲ್ಲಿರಲಿ, ಈ ಯೋಜನೆ ೨೦೦೮ರ ಮಾರ್ಚ್ ಒಂದರಿಂದ ಜಾರಿಗೆ ಬಂದಿದೆ. ಚಂದಾದಾರರು ತಮ್ಮ ಸೇವಾದಾತರ ಅಧಿಕೃತ ವೆಬ್‌ಸೈಟ್‌ಗೆ ಹೋಗಿಯೂ ತಮ್ಮನ್ನು ಎನ್‌ಡಿಎನ್‌ಸಿ ವ್ಯವಸ್ಥೆಯಲ್ಲಿ ನೊಂದಾಯಿಸಿಕೊಳ್ಳಬಹುದು.
ಕಿರಿಕಿರಿ ಕರೆ ಹಿಂದೆ ಕರುಣೆಯ ಕತೆ
ಭಾರತದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಜಾರಿಗೆ ತಂದಿರುವ ಒಂದು ಕ್ರಾಂತಿಕಾರಕ ಕ್ರಮವೆಂದರೆ, ಅದು ನ್ಯಾಷನಲ್ ಡು ನಾಟ್ ಕಾಲ್ ರಿಜಿಸ್ಟ್ರಿ ಎಂದು ತಮ್ಮ ಭಾಷಣಗಳಲ್ಲಿ ಖುದ್ದು ಮ್ಯಾಥ್ಯೂ ಫಾಲಮಟ್ಟಮ್ ಹೇಳದಿರರು. ‘ಈ ವ್ಯವಸ್ಥೆಯಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದವರಿಗೆ ಯಾವುದೇ ಕಮರ್ಷಿಯಲ್ ಕರೆ ಬರುವುದಿಲ್ಲ.’ ಅವರ ವಿವರಣೆ ಕೇಳಿ ಪ್ರೇರಿತರಾಗುವವರು ಹೆಚ್ಚು ಜನರಿದ್ದಾರು. ತನ್ನ ನಿಬಿಡ ಕೆಲಸ ಕಾರ್ಯಗಳ ನಡುವೆ ಈ ಕಮರ್ಷಿಯಲ್ ಕರೆ, ಸಂದೇಶಗಳ ಕಿರಿ ಕಿರಿ ಬೇಡವೆಂದು ನಮ್ಮಲ್ಲಿನ ಬಹುಸಂಖ್ಯಾತ ಗಣ್ಯರು, ಅಧಿಕಾರಿಗಳು ತಮ್ಮ ಮೊಬೈಲ್ ನಂಬರ್‌ನ್ನು ನೊಂದಾಯಿಸಿಬಿಟ್ಟಿರುತ್ತಾರೆ. ಆಶ್ಚರ್ಯ, ಸ್ವತಃ ಟ್ರಾಯ್‌ನ ಗ್ರಾಹಕ ವ್ಯವಹಾರಗಳ ಉಪ ಆಯುಕ್ತ ಈ ಮ್ಯಾಥ್ಯೂ ಫಾಲಮಟ್ಟಮ್ ತಮ್ಮ ನಂಬರ್ ನೊಂದಾಯಿಸಿಲ್ಲ!
ಮ್ಯಾಥ್ಯೂ ಹೇಳುತ್ತಾರೆ, “ಭಾರತದಲ್ಲಿ ಇಂತಹ ವ್ಯಾಪಾರೀ ಕರೆ ವ್ಯವಸ್ಥೆಗಳ ಕಾರಣದಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಒಂದೊಮ್ಮೆ ನಾವೆಲ್ಲರೂ ಎನ್‌ಡಿಸಿಯಲ್ಲಿ ಹೆಸರು ನೊಂದಾಯಿಸಿದರೆ ನಮ್ಮಲ್ಲಿನ ಯುವ ಜನರ ಉದ್ಯೋಗಾವಕಾಶವನ್ನೇ ಕಸಿದಂತಾಗುತ್ತದೆ. ಹಾಗಾಗಿ ನಾನು ...”
ಕಮರ್ಷಿಯಲ್ ಕರೆಯ ಕಿರಿಕಿರಿಯ ಇನ್ನೊಂದು ಮಗ್ಗುಲಿನಲ್ಲಿ ಮಾನವೀಯ ಆಶಯ!

-ಮಾವೆಂಸ

 
200812023996