ಇದು ಈ ಹಿಂದೆ ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಲೇಖನ. ಈಗ ನೀವೂ ಓದಿ.......
ಟೆಲಿಕಾಂ ರೆಗ್ಯುಲೇಟರಿ ಆಧಾರದ ಆಥಾರಿಟಿ ಆಫ್ ಇಂಡಿಯಾ- ಟ್ರಾಯ್‌ನಲ್ಲಿ ನೊಂದಾಯಿತವಾಗಿರುವ ಗ್ರಾಹಕಪರ ಸಂಘಟನೆಗಳ ಸಂಖ್ಯೆ ಒಟ್ಟು ೪೧. ಅದರಲ್ಲಿ ರಾಜ್ಯದಿಂದ ದಾಖಲಾಗಿರುವುದು ಮೂರು ಎನ್.ಜಿ.ಓ. ಮಾತ್ರ. ಇವುಗಳಲ್ಲಿ ಎರಡು ಬೆಂಗಳೂರಿನಿಂದ ಕೆಲಸ ಮಾಡುವುದಾದರೆ ಅಕ್ಷರಶಃ ಹಳ್ಳಿಮೂಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಾ ರಾಜಧಾನಿ ದೆಹಲಿಗೆ ಬಳಕೆದಾರರ ಕೂಗನ್ನು ಒಯ್ಯುವ ಜವಾಬ್ದಾರಿ ನಿರ್ವಹಿಸುತ್ತಿರುವ ಸಾಗರದ ಬಳಕೆದಾರರ ವೇದಿಕೆ ಇನ್ನೊಂದು. ಇವುಗಳ ಜೊತೆ ಟ್ರಾಯ್ ವರ್ಷಕ್ಕೆ ಎರಡು ಬಾರಿ ಸಭೆ ನಡೆಸುತ್ತದೆ. ಅಂತಹ ಒಂದು ಸಭೆ ಇತ್ತೀಚೆಗೆ ದೆಹಲಿಯಲ್ಲಿ ನಡೆದಿತ್ತು. ಅದರಲ್ಲಿ ಪ್ರಸ್ತಾಪಿಸಲ್ಪಟ್ಟ ಹಲವು ವಿಚಾರಗಳು ದೂರವಾಣಿ ಗ್ರಾಹಕರಿಗೆ ಆಪ್ತವಾಗುವಂತದು.
ದೂರವಾಣಿ ನಿಯಂತ್ರಣ ಪ್ರಾಧಿಕಾರಕ್ಕೆ ಈಗ ಹೊಸ ಅಧ್ಯಕ್ಷರು. ಈ ಹಿಂದೆ ಟಿಡಿಸ್ಯಾಟ್‌ನಲ್ಲಿ ಸೇವೆ ಸಲ್ಲಿಸಿ ಬಂದಿರುವ ಎಸ್.ಕೆ.ಶರ್ಮ ಟ್ರಾಯ್‌ನ ಹೊಸ ಚಿಂತನೆ ಗುರಿಗಳನ್ನು ಪ್ರಸ್ತುತಪಡಿಸುತ್ತಾರೆ. ಡು ನಾಟ್ ಕಾಲ್ ನೊಂದಣಿಯ ಕ್ರಾಂತಿಕಾರಕ ಯೋಜನೆ ಪೂರ್ಣ ಫಲಪ್ರದವಾಗದೇ ಇರುವುದು ಟ್ರಾಯ್‌ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಘೊಷಿಸಿದ ಹೊಸ ಯೋಜನೆ ‘ಡು ಕಾಲ್ ರಿಜಿಸ್ಟ್ರಿ’
ವಾಸ್ತವವಾಗಿ ಟ್ರಾಯ್‌ಗೆ ಡು ನಾಟ್ ಕಾಲ್ ವ್ಯವಸ್ಥೆ ಜಾರಿಯ ಬಗ್ಗೆ ಪೂರ್ಣ ಪ್ರಮಾಣದ ಒಪ್ಪಿಗೆ ಇರಲಿಲ್ಲ. ಅದರ ಗ್ರಾಹಕ ವ್ಯವಹಾರಗಳ ವಿಭಾಗದ ಮ್ಯಾಥ್ಯೂ ಫಾಲಮಟ್ಟಮ್, ‘ಈ ನೊಂದಣಿ ಮಾಡಿಸಿಕೊಂಡು ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುವ ನಮ್ಮ ದೇಶದ ಯುವಕರ ಹೊಟ್ಟೆಯ ಮೇಲೆ ಕಲ್ಲು ಹಾಕದಿರಿ’ ಎಂದು ಅಭಿಪ್ರಾಯ ಪಟ್ಟಿರುವುದು ಗಮನಾರ್ಹ. ಅದೆಷ್ಟೇ ಕಠಿಣ ಕಾನೂನು ರೂಪಿಸಿದರೂ ಅದರ ಕಬಂಧ ಬಾಹುಗಳಿಂದ ಟೆಲಿಮಾರ್ಕೆಟಿಂಗ್ ಕಂಪನಿಗಳು ನುಸುಳಿ ತಪ್ಪಿಸಿಕೊಳ್ಳುತ್ತಿರುವುದು ಹಾಗೂ ಒಂದು ವ್ಯಾಪಾರಿ ಮಾಧ್ಯಮಕ್ಕೆ ಧಕ್ಕೆಯುಂಟಾಗುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಪುನರ್ರೂಪಿಸಲು ಟ್ರಾಯ್ ನಿರ್ಧರಿಸಿದೆ.
ಹೇಳಿ ಕೇಳಿ ಟೆಲಿಮಾರ್ಕೆಟಿಂಗ್ ಪ್ರಭಾವಯುತ ಸಂಪರ್ಕ ಮಾಧ್ಯಮ. ಈ ಜಾಹಿರಾತು ಯುಗದಲ್ಲಿ ಅದಕ್ಕೆ ಸಂಪೂರ್ಣ ನಿಷೇಧ ಹೇರುವುದು ಸಾಧ್ಯವೇ ಇಲ್ಲ. ಡು ನಾಟ್ ಕಾಲ್ ವ್ಯವಸ್ಥೆಯಿಂದ ಮೊಬೈಲ್ ಸೇವಾದಾತರಿಗೂ ನಷ್ಟ. ಅವರಿಗೆ ಕರೆಗಳಿಂದ ಎಸ್.ಎಂ.ಎಸ್.ನಿಂದ ಹುಟ್ಟುತ್ತಿದ್ದ ಆದಾಯಕ್ಕೆ ಸಂಚಕಾರವಾದಂತೆ. ಪತ್ರಿಕೆಗಳೊಂದಿಗೆ ಬರುವ ‘ವರ್ಗೀಕೃತ ಜಾಹಿರಾತು’ಗಳ ಕ್ಲಾಸಿಫೈಡ್ ಪುರವಣಿಯನ್ನು ಯಾರೂ ಓದುವುದಿಲ್ಲ! ಆದರೆ ಬಾಡಿಗೆ ಮನೆಯ ಅಗತ್ಯಬಿದ್ದಾಗ, ಉದ್ಯೋಗಾಕಾಂಕ್ಷಿಯಾದಾಗ ಆ ಪುಟಗಳೇ ಪರಮಾಪ್ತವಾಗುತ್ತವೆ. ಸಾರಾಂಶ ಇಷ್ಟೇ, ಅಗತ್ಯತೆಯ ಆಧಾರದ ಮೇಲೆ ಇಷ್ಟಾನಿಷ್ಟಗಳು ನಿಂತಿರುತ್ತವೆ.
ಇದು ದೂರವಾಣಿಯ ಟೆಲಿಮಾರ್ಕೆಟಿಂಗ್ ಕರೆಗಳಿಗೂ ಅನ್ವಯಿಸುತ್ತದೆ. ಡು ನಾಟ್ ಕಾಲ್‌ನಲ್ಲಿ ನೋಂದಾಯಿಸಿಕೊಂಡ ಚಂದಾದಾರರಿಗೆ ಪೂರಾ ಪೂರಾ ಜಾಹಿರಾತು ಕರೆಗಳು ನಿಂತುಹೋದರೆ ಆ ಗ್ರಾಹಕರಿಗೂ ನಷ್ಟ. ಅವರಿಗೆ ಬೇಕಾದ, ಅಗತ್ಯವಾದ ‘ವರ್ಗೀಕೃತ ಜಾಹಿರಾತು’ ಬೇಕೆಂದರೂ ಸಿಗದು. ಅಂದರೆ ಎಲ್ಲ ಕೆಲಸಗಳಿಂದಲೂ ಡಿ.ಎನ್.ಸಿ ವ್ಯವಸ್ಥೆ ಪೂರಕವಲ್ಲ. ಹಾಗೆಂದು ಯೋಚಿಸಿರುವ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ‘ ಡು ಕಾಲ್’ ನೊಂದಣಿಯ ವ್ಯವಸ್ಥೆ ಜಾರಿಗೆ ಸನ್ನದ್ಧವಾಗಿದೆ.
ಏನಿದು ಡು ಕಾಲ್ ?
ಈ ದಾಖಲಾತಿ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಇನ್ನೂ ಮುಂದೆ ಟೆಲಿಮಾರ್ಕೆಟಿಂಗ್ ಕರೆಗಳು ಬರುತ್ತವೆ. ಈ ವ್ಯವಸ್ಥೆಯಲ್ಲಿ ದೂರವಾಣಿ ಗ್ರಾಹಕ ತನ್ನ ಆಸಕ್ತಿಯ ಕ್ಷೇತ್ರಗಳನ್ನು ದಾಖಲಿಸಬೇಕು. ಇದರಿಂದ ಆ ವಿಭಾಗದ ಜಾಹಿರಾತು ಕರೆಗಳು ಮಾತ್ರ ಬರುತ್ತವೆ. ಗ್ರಾಹಕನಿಗೆ ದಿನದ ಯಾವ ವೇಳೆಯಲ್ಲಿ ಜಾಹಿರಾತು ಕೇಳಲು ಸಮಯವಿದೆ ಎನ್ನುವುದನ್ನೂ ಸೂಚಿಸಲು ಅವಕಾಶವಿದೆ. ಅಷ್ಟೇಕೆ, ನಿರ್ದಿಷ್ಟ ಕ್ಷೇತ್ರದ ಜಾಹಿರಾತು ಯಾವ ಅವಧಿಯವರೆಗೆ ಆಲಿಸುವ ಆಸಕ್ತಿಯಿದೆ ಎಂಬುದನ್ನೂ ನಿರ್ದೇಶಿಸಬಹುದು. ಉದಾಹರಣೆಗೆ ಓರ್ವ ಗ್ರಾಹಕನಿಗೆ ಬ್ಯಾಂಕ್‌ಸಾಲದ ಬಗ್ಗೆ ಈ ತಿಂಗಳು ಮಾತ್ರ ಮಾಹಿತಿ ಬೇಕು ಎಂದರೆ ಅದೂ ಸಾಧ್ಯ. ಇದನ್ನು ಟೆಲಿ ಮಾರ್ಕೆಟಿಂಗ್ ಕಂಪನಿಗಳು ಗಮನಿಸಿ ಅನುಸರಿಸುತ್ತವೆ. ಟ್ರಾಯ್ ಬರುವ ದಿನಗಳಲ್ಲಿ ಡು ಕಾಲ್ ವ್ಯವಸ್ಥೆಯನ್ನು ಚಾಲ್ತಿಗೆ ತರುವುದು ಖಚಿತ.
ಟ್ರಾಯ್‌ನ ಅಧಿಕೃತ ವೆಬ್‌ಸೈಟ್ www.trai.gov.inನಲ್ಲಿ ಗ್ರಾಹಕರ ದೂರು ದಾಖಲಿಸಲೆಂದೇ ಒಂದು ಪೋರ್ಟಲ್ ಇದೆ. ದುರಂತವೆಂದರೆ ಈ ಕ್ರಮ ಕೇವಲ ಔಪಚಾರಿಕವಾಗಷ್ಟೇ ಇದೆ ಎಂದು ಆರೋಪಿಸುವಂತಾಗಿದೆ. ಗ್ರಾಹಕರು ಈ ಪೋರ್ಟ್‌ಲ್‌ನಲ್ಲಿ ದೂರು ದಾಖಲಿಸಿದರೆ, ಮಾಹಿತಿ ಕೇಳಿದರೆ ಮಾರುತ್ತರವಾಗಲಿ, ಪರಿಹಾರವಾಗಲೀ ಸಿಕ್ಕುವ ಸಂಭಾವ್ಯತೆ ಇಲ್ಲ. ಇದು ಹಲವರ ಗಮನಕ್ಕೆ ಬಂದಿದೆ. ನಿಜಕ್ಕೂ ಟ್ರಾಯ್ ಇದಕ್ಕೊಂದು ವ್ಯವಸ್ಥಿತ ರೂಪ ಕೊಡುವುದು ಅಪೇಕ್ಷಣೀಯ.ಹಾಗಾದರೆ ಇಲ್ಲಿ ದಾಖಲಾಗುವ ದೂರುಗಳನ್ನು ಟ್ರಾಯ್ ಸ್ವತಃ ಗಮನಿಸುವುದರಿಂದ ದೂರವಾಣಿ ಸೇವಾದಾತರು ಟ್ರಾಯ್ ನಿರ್ದೇಶನ, ನಿಯಮಗಳನ್ನು ಯಾವ ಪರಿಯಲ್ಲಿ ಉಲ್ಲಂಘಿಸುತ್ತಿದ್ದಾರೆ ಎಂಬ ಅರಿವು ದಕ್ಕುತ್ತದೆ. ಹೊಸದಾದ ತಿದ್ದುಪಡಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಒಂದರ್ಥದಲ್ಲಿ ಸಮರ್ಪಕ ನಿರ್ವಹಣೆ ತೋರಿದರೆ ಈ ಪೋರ್ಟಲ್ ಟ್ರಾಯ್‌ಗೆ ಅತ್ಯುತ್ತಮ. ‘ಫೀಡ್ ಬ್ಯಾಕ್’ ಸಾಧನವೇ ಆಗಬಲ್ಲದು. ಮುಖ್ಯವಾಗಿ ಇದು ಸಾಮಾನ್ಯ ಬಳಕೆದಾರೊಂದಿಗೆ ಟ್ರಾಯ್ ಹೊಂದಿರುವ ಏಕೈಕ ಸಂಪರ್ಕ ಮಾಧ್ಯಮ .ಇನ್ನಾದರೂ ಇದನ್ನು ಗಂಭೀರವಾಗಿ ಪರಿಗಣಿಸುವ ಕೆಲಸ ಆಗಬೇಕು.
ಈ ಮಧ್ಯೆ ಟ್ರಾಯ್ ಅಧ್ಯಕ್ಷ ಶರ್ಮರ ತಲೆಯಲ್ಲಿ ಹೊಸದೊಂದು ವಿಚಾರವೇ ಸುಳಿದಾಡುತ್ತಿದೆ. ಬರುವ ದಿನಗಳಲ್ಲಿ ನೊಂದಾಯಿತ ಗ್ರಾಹಕ ಸಂಘಟನೆಗಳಿಗೆಂದೇ ಒಂದು ಪ್ರತ್ಯೇಕ ವಿಭಾಗವನ್ನು ತನ್ನ ವೆಬ್‌ಸೈಟ್‌ನಲ್ಲಿ ಆರಂಭಿಸಲಿದೆ. ಇದು ಟ್ರಾಯ್‌ನೊಂದಿಗೆ ಈ ಸಂಘಟನೆಗಳಿಗೆ ನೇರ ಸಂಪರ್ಕ ಮಾಧ್ಯಮ. ಸಂಘಟನೆಗಳಿಗೆ ಪ್ರತ್ಯೇಕ ಪಾಸ್‌ವರ್ಡ್‌ಗಳನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ಬೇರೆಯವರಿಗೆ ಪ್ರವೇಶವಿಲ್ಲ. ವಾಸ್ತವವಾಗಿ ತಳ ಮಟ್ಟದ ದೂರವಾಣಿ ಚಂದಾದಾರರ ಸಮಸ್ಯೆಗಳ ಅರಿವಿರುವ ಬಳಕೆದಾರರ ವೇದಿಕೆಗಳಿಗೆ ಈ ಪೋರ್ಟಲ್ ಹೆಚ್ಚಿನ ಅನುಕೂಲ ಒದಗಿಸುತ್ತದೆ. ಪ್ರತಿ ಸಂಘಟನೆಗಳಿಂದ ಜಿಲ್ಲಾ ಮಟ್ಟದ ದೂರು ದಾಖಲಾತಿ ಕೇಂದ್ರಗಳನ್ನು ರೂಪಿಸಲೂ ಟ್ರಾಯ್ ಯೋಚಿಸಿದೆ. ಇದರಿಂದ ಪ್ರಾದೇಶಿಕ ಭಾಷೆಯ ಚಂದಾದಾರರಿಗೆ ಹೆಚ್ಚಿನ ಅನುಕೂಲವಾದೀತು.
ಇನ್ನೆಷ್ಟು ದಿನ ಬ್ಲಾಕ್‌ಔಟ್?
ಮೊಬೈಲ್ ಕಂಪನಿಗಳಿಗೆ ಟ್ರಾಯ್ ಒದಗಿಸಿರುವ ಒಂದು ವಿಶೇಷ ರಿಯಾಯ್ತಿಯೆಂದರೆ ಬ್ಲಾಕ್‌ಔಟ್ ಡೇ ಸೌಲಭ್ಯ. ಈ ಪ್ರಕಾರ ವರ್ಷದ ಗರಿಷ್ಠ ಐದು ದಿನಗಳಲ್ಲಿ ಮೊಬೈಲ್ ಸೇವಾದಾತರು ತಾವು ಕೊಡುತ್ತಿರುವ ಉಚಿತ ಅಥವಾ ರಿಯಾಯ್ತಿಯ ಎಸ್‌ಎಂಎಸ್‌ನ ಸೇವೆಯನ್ನು ರದ್ದುಗೊಳಿಸಬಹುದು. ನಿಜಕ್ಕಾದರೆ ಟ್ರಾಯ್ ಈ ರಿಯಾಯತಿಗೆ ಒಂದು ಸಮಯ ಮಿತಿಯನ್ನು ನಿಗದಿಪಡಿಸಬೇಕಾಗಿತ್ತು. ಒಂದು ಅಥವಾ ಎರಡು ವರ್ಷಗಳೊಳಗೆ ಈ ರಿಯಾಯತಿಯನ್ನು ಹಿಂಪಡೆಯುವ ಷರತ್ತು ನಿಗದಿಪಡಿಸಬೇಕಿತ್ತು. ಈವರೆಗೆ ಟ್ರಾಯ್ ಅವಧಿಯನ್ನು ನಿಗದಿಪಡಿಸಿಲ್ಲ. ನಿರ್ದಿಷ್ಟ ಕಾಲದ ಅಂತರದಲ್ಲಿ ಮೊಬೈಲ್ ಸೇವಾದಾತರು ತಮ್ಮ ತಾಂತ್ರಿಕತೆಯನ್ನು ಉನ್ನತೀಕರಿಸಿ ತನ್ನೆಲ್ಲ ಚಂದಾದಾರರು ಒಮ್ಮೆಗೆ ಎಸ್‌ಎಂಎಸ್ ಮಾಡಿದರೂ ಗುಣಮಟ್ಟ ಕುಸಿಯದಂತೆ ನೋಡಿಕೊಳ್ಳುವ ಹಂತಕ್ಕೆ ಬರಬೇಕಿತ್ತು. ಈ ಬ್ಲಾಕ್‌ಔಟ್ ನಿಯಮದಿಂದಾಗಿ ಎಸ್‌ಎಂಎಸ್ ಪ್ಯಾಕೇಜ್ ಅಳವಡಿಸಿಕೊಂಡು ಹೆಚ್ಚುವರಿ ಶುಲ್ಕ ಪಾವತಿಸಿದ ಗ್ರಾಹಕರಿಗೆ ನಷ್ಟವಾಗುವುದು ವಿಪರ್ಯಾಸ. ದೃಷ್ಟಾಂತ ಬೇಕೆಂದರೆ ಮುಂದೆ ಓದಿ. ವಡಾಫೋನಿನ ಮಣಿಪಾಲ್ ಪ್ಲಾನಿನಲ್ಲಿ ದಿನಕ್ಕೆ ಒಂದು ರೂಪಾಯಿ ಬಾಡಿಗೆ. ಆ ದಿನಕ್ಕೆ ೧೦೦ ಎಸ್‌ಎಂಎಸ್ ಉಚಿತ! ವರ್ಷದ ೩೬೦ ದಿನವೂ ಬಾಡಿಗೆ ತೆರುವ ಗ್ರಾಹಕ ಹೊಸ ವರ್ಷ ದೀಪಾವಳಿ, ವ್ಯಾಲಂಟೈನ್ಸ್ ಡೇಗಳಂತ ಸಂದರ್ಭದಲ್ಲಿ ಮಾತ್ರ ದುಬಾರಿ ಶುಲ್ಕದ ಎಸ್‌ಎಂಎಸ್ ಮಾಡಬೇಕು. ಉಚಿತ ಇಲ್ಲ. ಕಾರಣ ಬ್ಲಾಕ್‌ಔಟ್ ಡೇ! ನ್ಯಾಯವೇ?
ಈ ಹಿನ್ನೆಲೆಯಲ್ಲಿ ಟ್ರಾಯ್ ಈ ನಿಮಯವನ್ನು ಪುನರ್ವಿಮರ್ಶಿಸಬೇಕು ಹಾಗೂ ತಿದ್ದುಪಡಿಗಳನ್ನು ಅಳವಡಿಸಬೇಕೆಂದು ದೆಹಲಿ ಸಭೆಯಲ್ಲಿ ಒತ್ತಾಯಿಸಲಾಗಿದೆ. ತಕ್ಷಣಕ್ಕೆ ನಿಯಮದ ರದ್ದು ಸಾಧ್ಯವಿಲ್ಲವೆಂದಾದರೆ ೨೦೧೦ರಿಂದ ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲು ಟ್ರಾಯ್‌ಗೆ ಸೂಚಿಸಲಾಗಿದೆ.
ಅವುಗಳೆಂದರೆ (೧) ಗರಿಷ್ಠ ಐದು ಬ್ಲಾಕ್‌ಔಟ್ ದಿನಗಳಲ್ಲಿ ಸತತ ಎರಡು ದಿನ ಬ್ಲಾಕ್‌ಔಟ್ ಮಾಡದಿರಲು ನಿರ್ಬಂಧ. ಪ್ರಸ್ತುತ ಡಿಸೆಂಬರ್ ೩೧ ಹಾಗೂ ಜನವರಿ ಒಂದು, ಫೆಬ್ರುವರಿ ೧೩, ೧೪ರ ದಿನ ಬ್ಲಾಕ್‌ಔಟ್ ಮಾಡುವ ಕ್ರಮ ಜಾರಿಯಲ್ಲಿದೆ.
(೨) ತಮ್ಮ ಪ್ಲಾನ್‌ನಲ್ಲಿಯೇ ಉಚಿತ ಯಾ ರಿಯಾಯ್ತಿ ಎಸ್‌ಎಂಎಸ್ ಪಡೆದವರಿಗೆ ಈ ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ಉಚಿತ, ರಿಯಾಯ್ತಿ ಎಸ್‌ಎಂಎಸ್ ಕೊಡಬೇಕು. ಉದಾಹರಣೆಗೆ ದೈನಿಕ ೧೦೦ ಎಸ್‌ಎಂಎಸ್ ಇರುವವರಿಗೆ ಆ ದಿನದ ಮಟ್ಟಿಗೆ ಉಚಿತ ೨೦, ಶೇ.೨೦ರ ದರದಲ್ಲಿ.
(೩) ಬ್ಲಾಕ್‌ಔಟ್ ದಿನವನ್ನು ಅದರ ಹಿಂದಿನ ದಿನ ಎಲ್ಲಾ ಗ್ರಾಹಕರಿಗೆ ತಿಳಿಸಿ ಸೇವಾದಾತ ಎಸ್‌ಎಂಎಸ್ ಸೂಚನೆ ಒದಗಿಸಬೇಕು. ಪ್ರಸ್ತುತ ಪೂರ್ವ ಸೂಚನೆ ನೀಡಬೇಕೆಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ.
ಸೆಕೆಂಡ್ ಮಾತು!
ಈ ಹಿಂದೆ ಜೂನ್‌ನಲ್ಲಿ ಮೈಸೂರಿನಲ್ಲಿ ದಕ್ಷಿಣ ಭಾರತದ ಗ್ರಾಹಕ ಸಂಘಟನೆಗಳ ತರಬೇತಿ ಕಾರ್ಯಾಗಾರವನ್ನು ಟ್ರಾಯ್‌ನಿಂದ ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಾಗಾರದಲ್ಲಿ ಕರೆಯ ಪಲ್ಸ್ ದರವನ್ನು ಸೆಕೆಂಡ್‌ಗಳಲ್ಲಿ ಜಾರಿಗೊಳಿಸಲು ಟ್ರಾಯ್‌ನ್ನು ಒತ್ತಾಯಿಲಾಗಿತ್ತು. ವಿಪರೀತ ಎನ್ನಿಸುವಷ್ಟು ಕಾಲ್ ಡ್ರಾಪ್ ಪ್ರಮಾಣವಿರುವುದರಿಂದ ಟ್ರಾಯ್ ಕೂಡ ತಾತ್ವಿಕವಾಗಿ ಒಪ್ಪಿತ್ತು. ಜೊತೆಗೆ ಅಡೆತಡೆಗಳನ್ನು ಪಟ್ಟಿ ಮಾಡಿತ್ತು. ಒಂದರ್ಥದಲ್ಲಿ ಅದೂ ಕೂಡ ಸಮರ್ಪಕವಾದುದು. ಟ್ರಾಯ್ ಎಂಬ ಈ ಸ್ವಾಯತ್ತ ಸಂಸ್ಥೆ ಗ್ರಾಹಕರ ಪರವಿರುವ ಪೂರಾಪೂರ ವ್ಯವಸ್ಥೆಯಲ್ಲ. ಅತ್ತ ಗ್ರಾಹಕರಿಗೆ, ಇತ್ತ ಸೇವಾದಾತರಿಗೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳುವ ಮತ್ತು ಅದೇ ಕಾಲದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಯಾಗುವಂತಾಗಲೂ ನೋಡಿಕೊಳ್ಳುತ್ತದೆ. ಆ ಲೆಕ್ಕದಲ್ಲಿ ಟ್ರಾಯ್ ಒಮ್ಮೆಗೇ ಒಂದು ತೀರ್ಮಾನಕ್ಕೆ ಬರುವುದಿಲ್ಲ.
ಸ್ವಾರಸ್ಯವೆಂದರೆ, ಟ್ರಾಯ್ ಇನ್ನೂ ಮೀನಾಮೇಷ ಎಣಿಸುತ್ತಿರುವಾಗಲೇ ಟಾಟಾ ಡೊಕೋಮೋ, ಏರ್‌ಸೆಲ್ ಹಾಗೂ ಬಿಎಸ್‌ಎನ್‌ಎಲ್ ಸೆಕೆಂಡ್‌ಗಳ ಪಲ್ಸ್ ದರವನ್ನು ಜಾರಿಗೆ ತಂದಾಗಿತ್ತು! ಈಗ ಟ್ರಾಯ್ ಎಲ್ಲ ಮೊಬೈಲ್ ಸೇವಾದಾತರು ಗ್ರಾಹಕರಿಗೆ ಸೆಕೆಂಡ್‌ಗಳ ಪಲ್ಸ್ ದರದ ನಿಯಮವನ್ನು ಜಾರಿಗೆ ತರಲು ಸಿದ್ಧತೆಗಳನ್ನು ನಡೆಸಿದೆ. ಟ್ರಾಯ್ ನೇರವಾಗಿ ಸೆಕೆಂಡ್‌ಗಳ ಪಲ್ಸ್ ದರದ ಮಾದರಿಗೂ ಸಿದ್ಧವಿರಲಿಲ್ಲ. ಅದರ ಪ್ರಕಾರ, ಪ್ರತಿ ಕರೆ ‘ಏರ್ಪಡಿಸಲು’ ಕೆಲ ಖರ್ಚು ಇರುವುದರಿಂದ ಒಂದು ಕನಿಷ್ಟ ಶುಲ್ಕ ನಿಗದಿಪಡಿಸಿ ನಂತರದ ಪ್ರತಿ ಸೆಕೆಂಡ್‌ಗೆ ದರ ನಿಗದಿಪಡಿಸುವ ಯೋಚನೆಯಲ್ಲಿತ್ತು. ಒಂದು ರೀತಿಯಲ್ಲಿ ಆಟೋ ಮೀಟರ್ ವ್ಯವಸ್ಥೆಯ ಮಾದರಿಯಲ್ಲಿ. ಮೊಬೈಲ್ ಕಂಪನಿಗಳಿಗೆ ಗೊತ್ತು, ಈ ಭಾರತೀಯರು ಮಾತಿನ ಮಲ್ಲರು. ಸೆಕೆಂಡ್‌ಗಳು ನಿಮಿಷಗಳಾಗೇ ತೀರುತ್ತವೆ! ನಿಮಿಷಕ್ಕೆ ೬೦ ಪೈಸೆಯಾಗುವ ಸೆಕೆಂಡ್ ಪಲ್ಸ್ ದರ ಮೊಬೈಲ್ ಸೇವಾದಾತರು ಕರೆ ದರವನ್ನು ೩೦ - ೫೦ ಪೈಸೆಯಿಂದ ೬೦ ಪೈಸೆಗೆ ಹೆಚ್ಚಿಸಿದಂತೆಯೂ ಆದೀತು!! ಹಾಗಾಗಿ ಅವು ಮೊದಲ ಸೆಕೆಂಡ್‌ನಿಂದಲೇ ಪಲ್ಸ್ ದರ ನಿಗದಿಪಡಿಸಿವೆ. ಕನಿಷ್ಟ ಶುಲ್ಕದ ಗೋಜಿಗೆ ಹೋಗಿಲ್ಲ. ಈಗಾಗಲೇ ಟಾಟಾ ಡೊಕೋಮೋ ತನ್ನ ಯೋಜನೆಗಳು ಆರು ತಿಂಗಳ ನಂತರವೂ ಮುಂದುವರೆಯುವುದನ್ನು ಸ್ಪಷ್ಟಪಡಿಸಿದೆ. ಇದೀಗ ಏರ್‌ಸೆಲ್ ಸೆಕೆಂಡ್‌ಗಳ ಪಲ್ಸ್ ದರಕ್ಕೆ ಹೆಜ್ಜೆ ಹಾಕಿದೆ. ಇದು ಖುದ್ದು ಟ್ರಾಯ್ ಉಗುಳು ನುಂಗಬೇಕಾದ ಪರಿಸ್ಥಿತಿ!
ಸೆಕೆಂಡ್‌ಗಳ ಪಲ್ಸ್ ದರದ ಕೂಗಿಗೆ ಇನ್ನೊಂದು ಕಾರಣವಿದೆ. ಇಂದು ನಾವು ಖರೀದಿಸುವುದು ಟಾಕ್‌ಟೈಮ್. ನಿಮಿಷದ ಪಲ್ಸ್‌ನಲ್ಲಿ ೧೦ ಸೆಕೆಂಡ್ ಮಾತನಾಡಿದರೂ ಟಾಕ್‌ಟೈಮ್‌ನಲ್ಲಿ ಉಳಿದ ೯೦ ಪೈಸೆಯ ನಷ್ಟ. ಅಂದರೆ ಸೇವಾದಾತರಿಗೆ ಸೇವೆ ಒದಗಿಸದೆಯೂ ಅದೆಷ್ಟೋ ಕೋಟಿ ರೂಪಾಯಿ ಖಜಾನೆಗೆ ಬಂದಂತೆ. ಈ ಹಿನ್ನೆಲೆಯಲ್ಲಿಯೂ ಸೆಕೆಂಡ್ ಪಲ್ಸ್‌ನ್ನು ಗ್ರಾಹಕ ಸಂಘಟನೆಗಳು ಒತ್ತಾಯಿಸಿದ್ದವು.
ಇಂದು ಮೊಬೈಲ್ ನಂತರದಲ್ಲಿ ತೀವ್ರ ಬೆಳವಣಿಗೆ ಕಾಣುತ್ತಿರುವುದು ಡೈರೆಕ್ಟ್ ಟು ಹೋಂ ಸರ್ವೀಸ್. ಆದರೆ ಟ್ರಾಯ್‌ನ ನಿಯಮ, ನಿರ್ದೇಶನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅನುಸರಿಸಲಾಗಿರುವುದೂ ಇಲ್ಲಿಯೇ. ನಿಯಮ ಪ್ರಕಾರ ಅವು ಉಚಿತ ಗ್ರಾಹಕ ದೂರು ಸಂಖ್ಯೆ ಒದಗಿಸಬೇಕು. ಇವತ್ತಿಗೂ ಕೇವಲ ಎರಡು ಸೇವಾದಾತರು ಮಾತ್ರ ಉಚಿತ ಗ್ರಾಹಕ ಕರೆ ನಂಬರ್ ಒದಗಿಸಿದ್ದು, ಅವೆಂದರೆ ರಿಲಯನ್ಸ್ ಹಾಗೂ ಏರ್‌ಟೆಲ್. ಉಳಿದ ನಾಲ್ಕು ಸೇವಾದಾತರು ಈವರೆಗೆ ಉಚಿತ ಕರೆಸಂಖ್ಯೆಯನ್ನೇ ಒದಗಿಸಿಲ್ಲ. ಇನ್ನು ಗ್ರಾಹಕ ದೂರು ಪರಿಹಾರ ಕ್ರಮಗಳಾದ ನೋಡಲ್ ಆಫೀಸರ್, ಅಪಲೇಟ್ ಅಥಾರಿಟಿಗಳೆಲ್ಲ ದೂರದ ಮಾತು. ಟ್ರಾಯ್ ಇತ್ತ ಗಮನ ಹರಿಸದಿದ್ದರೆ ನಡೆಯುತ್ತಿರುವ ಹಗಲುದರೋಡೆ ಮಿತಿಮೀರೀತು ಎಂದು ಟ್ರಾಯ್‌ನ ದೆಹಲಿ ಸಭೆಯಲ್ಲಿ ಪಾಲ್ಗೊಂಡ ಸಾಗರದ ಬಳಕೆದಾರರ ವೇದಿಕೆ ಕಳವಳ ವ್ಯಕ್ತಪಡಿಸಿತು.
ಒಂದಂತೂ ನಿಜ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಸುಮ್ಮಸುಮ್ಮನೆ ನಿಯಮಗಳನ್ನು ಜಾರಿಗೆ ತರುವುದಿಲ್ಲ. ಪ್ರತಿ ನಿಯಮ ಜಾರಿಗೆ ಮುನ್ನ ಎಲ್ಲ ಸಂಬಂಧಪಟ್ಟ ವರ್ಗದ ಅಭಿಪ್ರಾಯ ಪಡೆದೇ ಮುಂದಿನ ಹೆಜ್ಜೆ ರೂಪಿಸುತ್ತದೆ. ಟೀಕೆಗಳ ಹೊರತಾಗಿಯೂ ಟ್ರಾಯ್ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಗಾಳಿ ತಂದಿರುವುದು ಎದ್ದು ಕಾಣುತ್ತದೆ.
-ಮಾವೆಂಸ
1 comments:
ಉತ್ತಮ ವಿಶ್ಲೇಷಣೆಯುಳ್ಳ ಮಾಹಿತಿ.
ಧನ್ಯವಾದಗಳು.
200812023996 ಕಾಮೆಂಟ್ ಪೋಸ್ಟ್ ಮಾಡಿ