======
ಬಿಸಿಸಿಐ ಸಂಸ್ಥೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ವಿಶೇಷ ಪ್ರಭಾವ ಹೊಂದಿರುವ ದಿನಗಳಿವು. ಇಂತಹ ವೇಳೆ ಬಿಸಿಸಿಐನ ಅತಿ ಹಿರಿಯ ಅಧಿಕಾರಿಯೋರ್ವರ ಮನೆಯಲ್ಲಿ ಅವರ ಪುತ್ರನ ಮದುವೆ. ಖುದ್ದು ಬಿಸಿಸಿಐ ಕೂಡ ಆ ದಿನದ ತನ್ನ ಕಾರ್ಯಕಾರಿ ಸಭೆಯನ್ನು ಮದುವೆ ನಡೆವ ನಗರಕ್ಕೆ ಸ್ಥಳಾಂತರಿಸಲಾಗಿತ್ತು! ಅವತ್ತು ಮದುವೆಯ ಆರತಕ್ಷತೆಯಲ್ಲಿ ಭಾರತದ ಪ್ರಥಮ ದರ್ಜೆ ಅಂಪೈರ್‌ಗಳಲ್ಲಿ ಬಹುಸಂಖ್ಯಾತರು ಹಾಜರಿದ್ದರು. ಆಹ್ವಾನ ಪತ್ರಿಕೆ ಇಲ್ಲದ ಅಂಪೈರ್‌ಗಳೂ ಮುದ್ದಾಂ ಬಂದಿದ್ದರು ಎಂದರೆ?
ಆ ದಿನದ ಅಂಪೈರ್‌ಗಳ ಉಪಸ್ಥಿತಿ ನೋಡಿದವರು ಒಂದು ಮಾತು ಹೇಳಿದ್ದುಂಟು, ‘ಅಂಪೈರ್ ಸಮಾವೇಶ ನಡೆದಾಗಲೂ ಇಷ್ಟು ಮಂದಿ ಭಾರತೀಯ ಅಂಪೈರ್‌ಗಳು ಒಂದೆಡೆ ಸೇರಿದ್ದಿಲ್ಲ!’ ಹೆಸರು ಪ್ರಕಟಿಸಲಿಚ್ಛಿಸದ ಅಂಪೈರ್‌ರೋರ್ವರು ಹೇಳುವುದೇ ಬೇರೆ, "ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಟಾಪ್ ಬಿಸಿಸಿಐ ಅಧಿಕಾರಿಗಳಿಗೆ ಪರಿಚಿತರಾಗುವುದರಿಂದ ಕ್ಯಾರಿಯರ್‌ಗೆ ಅನುಕೂಲವಾಗುತ್ತದೆ. ಪಂದ್ಯಗಳಿಗೆ ಅವರು ವಶೀಲಿ ಮಾಡಿ ಪೋಸ್ಟಿಂಗ್ ಮಾಡುತ್ತಾರೆ ಗೊತ್ತೇ?"
ನಿಜ, ಅಂಪೈರ್‌ಗಳದು ಕೃತಜ್ಞತೆರಹಿತ ಉದ್ಯೋಗ. ಹನ್ನೊಂದು ಅತ್ಯುತ್ತಮ ನಿರ್ಣಯಗಳಿಗೆ ಸಲ್ಲಬೇಕಾದ ಶ್ಲಾಘನೆಯು ಒಂದೇ ಒಂದು ಪುಟ್ಟ ತಪ್ಪಿಗೆ ಕೊಚ್ಚಿ ಹೋಗಿಬಿಡುತ್ತದೆ. ಪಂದ್ಯದುದ್ದಕ್ಕೂ ಬಿಸಿಲಿನಲ್ಲಿ ಬಸವಳಿದು, ಏಕಾಗ್ರತೆ ಕಾಯ್ದುಕೊಂಡು ಪಂದ್ಯವನ್ನು ನಿರ್ವಹಿಸುವ ಅವರ ತಾಕತ್ತನ್ನು ಗಮನಿಸುವವರು ಕಡಿಮೆ. ನಿಜಕ್ಕಾದರೆ, ಆಟಗಾರರಿಗೆ ಇರುವಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಫಿಟ್‌ನೆಸ್ ಅಂಪೈರ್‌ಗಳಿಗಿರಬೇಕು. ಅಲ್ವೆ ಮತ್ತೇ, ದಿನದ ೯೦-೧೦೦ ಓವರ್‌ಗಳುದ್ದಕ್ಕೂ ನಿಂತುಕೊಂಡೇ ಇರಬೇಕಾದ ಅಂಪೈರಿಂಗ್‌ನ ಆ ಒಂದು ಜವಾಬ್ದಾರಿಗೇ ಎಷ್ಟು ಸಾಮರ್ಥ್ಯವಿದ್ದರೂ ಬೇಕು.
ಆದರೆ ಭಾರತೀಯ ಅಂಪೈರ್‌ಗಳ ದುರಂತವೇ ಬೇರೆ. ಅವರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ, ಅಂತರ್ರಾಷ್ಟ್ರೀಯ ಮಟ್ಟಕ್ಕೆ ಏರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಕುರಿತು ವರದಿಗಳಿಲ್ಲ. ಅಂಪೈರಿಂಗ್‌ಗೆ ಬೇಕಾದ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಭಾರತೀಯ ಅಂಪೈರ್‌ಗಳ ಗುಣಮಟ್ಟ ವಿಪರೀತವೆನ್ನಿಸುವಷ್ಟು ಕುಸಿದಿದೆ. ಇವತ್ತು ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿ ಭಾರತದ ಒಬ್ಬಾನೊಬ್ಬ ಅಂಪೈರ್ ಕೂಡ ಇಲ್ಲ. ಅವಮಾನ!
ಏನಿದು ಎಲೈಟ್ ಪ್ಯಾನೆಲ್?
ಐಸಿಸಿಯ ಟೆಸ್ಟ್ ಮಾನ್ಯ ರಾಷ್ಟ್ರಗಳು ತಮ್ಮ ದೇಶದ ಅತ್ಯುತ್ತಮ ಅಂಪೈರ್‌ರ ಹೆಸರನ್ನು ಶೀಫಾರಸು ಮಾಡುತ್ತವೆ. ಆ ಅಂಪೈರ್‌ಗಳ ಹಿಂದಿನ ದಾಖಲೆ, ನಾಯಕ-ರೆಫ್ರಿಯರ ವರದಿಗಳನ್ನು ಪರಿಶೀಲಿಸಿ ಅವರನ್ನು ಒಂದು ವಿಶಿಷ್ಟ ಗುಂಪಿನೊಳಗೆ ಸೇರಿಸಿಕೊಳ್ಳಲು ಐಸಿಸಿ ತೀರ್ಮಾನಿಸುತ್ತದೆ. ಅದೇ ಎಮಿರೇಟ್ಸ್ ಎಲೈಟ್ ಪ್ಯಾನೆಲ್. ಈ ಅಂಪೈರ್‌ಗಳು ಮಾತ್ರ ಟೆಸ್ಟ್ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಲು ಅರ್ಹರಾಗಿರುತ್ತಾರೆ. ಪ್ರಸ್ತುತ ಬಿಲ್ಲಿ ಬೌಡೆನ್, ಸ್ಟೀವ್ ಬಕ್ನರ್, ಅಲೀಂ ಧರ್, ಡರೆಲ್ ಹೇರ್, ಡರೆಲ್ ಹಾರ್ಪರ್, ರುಡಿ ಕುರ್ಟಿಜೆನ್, ಸೈಮನ್ ಟಾಫೆಲ್ ಮಾತ್ರ ಈಗ ಈ ಎಲೈಟ್ ಪ್ಯಾನೆಲ್‌ನಲ್ಲಿದ್ದಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಬಿಸಿಸಿಐಗೆ ಈ ಗುಂಪಿಗೆ ಸಮರ್ಥ ಶಿಫಾರಸು ಮಾಡಲೂ ಭಾರತದಲ್ಲೊಬ್ಬ ಅರ್ಹ ಅಂಪೈರ್ ಸಿಕ್ಕಿಲ್ಲ!
೨೦೦೪ರಲ್ಲಿ ಎಸ್.ವೆಂಕಟರಾಘವನ್ ಅಂಪೈರಿಂಗ್ ಹುದ್ದೆಯಿಂದ ನಿವೃತ್ತಿ ಹೊಂದಿದರು, ಅವರು ಎಲೈಟ್ ಗುಂಪಿನಲ್ಲಿದ್ದವರು. ಅಂಪೈರಿಂಗ್‌ನ ಕೊನೆಯ ದಿನಗಳಲ್ಲಿ ವೆಂಕಟ್‌ರ ತೋರುಬೆರಳಿನ ಬಗ್ಗೆ ಸಾಕಷ್ಟು ಅಸಮಾಧಾನ ಕೇಳಿಬಂದಿದ್ದು ಮತ್ತು ಎಲೈಟ್ ಗುಂಪಿನಿಂದ ಕೈಬಿಡುವುದರ ಬದಲು ಐಸಿಸಿ ಗೌರವಯುತವಾಗಿ ನಿವೃತ್ತರಾಗಲು ಸೂಚಿಸಿತ್ತೆನ್ನುವುದು ಬೇರೆಯದೇ ವಿಷಯ. ನಂತರದ ಈ ಐದು ವರ್ಷಗಳಲ್ಲಿ ಎಲೈಟ್ ಗುಂಪಿನಲ್ಲಿ ಭಾರತದ ಪ್ರತಿನಿಧಿಯಿಲ್ಲ. ಜೊತೆಗೆ ದಿನದಿಂದ ದಿನಕ್ಕೆ ದೇಶದೊಳಗಿನ ಅಂಪೈರ್‌ಗಳ ಗುಣಮಟ್ಟ ಕುಸಿಯುತ್ತಲೇ ಹೋಗುತ್ತಿದೆ.
ಬಿಸಿಸಿಐ ಈ ಕುರಿತು ಎಚ್ಚೆತ್ತುಕೊಳ್ಳಲೇಇಲ್ಲ ಎನ್ನುವಂತಿಲ್ಲ. ಜಗ್‌ಮೋಹನ್ ದಾಲ್ಮಿಯಾ ಬಿಸಿಸಿಐನ ಅಧ್ಯಕ್ಷರಾಗಿದ್ದಾಗಲೇ ಒಮ್ಮೆ ರಾಷ್ಟ್ರದ ಐದು ಟಾಪ್ ಅಂಪೈರ್‌ರನ್ನು ಒಳಗೊಂಡ ಎಂಟು ಜನರ ಸಮಿತಿ ಸಭೆಯನ್ನು ಆಯೋಜಿಸಿತ್ತು. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಆವರಣದಲ್ಲಿಯೇ ಅಂಪೈರಿಂಗ್ ಅಕಾಡೆಮಿಯನ್ನೂ ಆರಂಭಿಸಲು ತೀರ್ಮಾನಿಸಲಾಯಿತು. ವಿಪರ್ಯಾಸವೆಂದರೆ, ಸದರಿ ಅಕಾಡೆಮಿಯೂ ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ದುರಂತ, ದುರಂತ.....ಅಂಪೈರ್‌ಗಳು ಈಗಲೂ ಬಿಸಿಸಿಐ ಅಧಿಕಾರಿಗಳ ಮನೆ ಮದುವೆಯ ಆಹ್ವಾನವನ್ನೇ ಆಶಿಸುತ್ತಿದ್ದಾರೆ!
ಆ ಸಮಯದಲ್ಲಿಯೂ ಭಾರತದಲ್ಲಿ ಅಂಪೈರ್‌ಗಳಿಗೆ ಸಂಖ್ಯೆಯಲ್ಲಿ ಕೊರತೆ ಇರಲಿಲ್ಲ. ಐದು ವಲಯಗಳಿಂದ ೧೪೬ ಅಂಪೈರ್‌ಗಳು ಬಿಸಿಸಿಐ ಪಟ್ಟಿಯಲ್ಲಿದ್ದರು. ರಣಜಿ ಪ್ಯಾನೆಲ್‌ನಲ್ಲಿ ೬೯ ಮತ್ತು ಇತರ ಸರ್ವರ ಗುಂಪಿನಲ್ಲಿ ೭೭ ಜನರಿದ್ದರು. ಎ.ವಿ.ಜಯಪ್ರಕಾಶ್, ಕೆ.ಹರಿಹರನ್, ಬಿ.ವಿ.ಜಮೂಲಾ, ಸುಶಾಂತ್ ನಾಥುರ್, ಆಸ್ವಾನಿಯರಂತ ಅಂಪೈರ್‌ಗಳು ದೇಶದ ಸೇವೆಯಲ್ಲಿದ್ದರು. ಊಹ್ಞೂ, ಅದಕ್ಕಿಂತ ಮುಂದೆ ಹೋಗಲು ಈ ಐದು ವರ್ಷಗಳಲ್ಲಿ ಒಬ್ಬರಿಗೂ ಸಾಧ್ಯವಾಗಿಲ್ಲ.
ಪುಟ್ಟ ಸಮಾಧಾನವೆಂದರೆ, ಐಸಿಸಿಯ ಎಮಿರೇಟ್ಸ್ ಇಂಟರ್‌ನ್ಯಾಷನಲ್ ಪ್ಯಾನೆಲ್‌ನಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಈ ಅಂಪೈರ್‌ಗಳು ಸ್ವದೇಶದ ಏಕದಿನ, ಟಿ೨೦ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಬಹುದು. ಒಂದೊಮ್ಮೆ ಎಲೈಟ್ ಪ್ಯಾನೆಲ್‌ನ ಅಷ್ಟೂ ಅಂಪೈರ್‌ಗಳು ಲಭ್ಯರಿರದಿದ್ದರೆ, ಅನಿವಾರ್ಯತೆ ಬಿದ್ದರೆ ಈ ಅಂಪೈರ್‌ಗಳೂ ಟೆಸ್ಟ್‌ನಲ್ಲಿ ತೀರ್ಪುಗಾರರಾಗಬಹುದು. ನೆನಪಿರಲಿ, ಇಂತಹ ಅವಕಾಶ ಅಪರೂಪದಲ್ಲಿ ಅಪರೂಪ. ಅಷ್ಟಕ್ಕೂ ಇದು ಯಾವ ದೇಶಕ್ಕೂ ಗೌರವ ಕೊಡುವ ವಿಚಾರವೇನಲ್ಲ. ಇರಲಿ, ಪ್ರಸ್ತುತ ಹರಿಹರನ್ ಕೃಷ್ಣನ್, ಎ.ವಿ.ಜಯಪ್ರಕಾಶ್, ಐ.ಶಿವರಾಂ ಭಾರತದ ಇಂಟರ್‌ನ್ಯಾಷನಲ್ ಅಂಪೈರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿಜಕ್ಕಾದರೆ ಬಿಸಿಸಿಐನ ತಳಮಳ ಐಪಿಎಲ್ ಬಂದಮೇಲೆ ಹೆಚ್ಚಾಗಿದೆ!
ಪ್ರೀಮಿಯರ್ ಅಂಪೈರ್ ಪರಿಪಾಟಲು!
ಕಳೆದ ಎರಡು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ ೨೦ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಇದು ಐಸಿಸಿಗೆ ಸಂಬಂಧಪಡದ ಸ್ಪರ್ಧೆ. ಭಾರತದ ಪ್ರಥಮ ದರ್ಜೆ ಕ್ರಿಕೆಟ್ ಕೂಡ ಅಲ್ಲ. ಆದರೆ ಬಿಸಿಸಿಐ ಆಮಿಷಕ್ಕಿಟ್ಟ ಹಣದ ಕಾರಣ ಇಲ್ಲಿ ದೊಡ್ಡ ಸಂಖ್ಯೆಯ ವಿದೇಶಿ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಟಿವಿ ಪ್ರಸಾರ, ಕ್ರೀಡಾಂಗಣ, ಆಟಗಾರರುಗಳೆಲ್ಲ ವಿಶ್ವದರ್ಜೆಯಲ್ಲಿ ಇರುವುದರಿಂದ ಭಾರತದ ಹೊರಗೂ ಐಪಿಎಲ್ ಅದ್ಭುತವಾದ ಜನಪ್ರಿಯತೆಯನ್ನು ಪಡೆದಿದೆ. ಪಂದ್ಯಗಳ ವೇಳೆಯಲ್ಲಿ ಅಂಪೈರ್ ಕ್ಯಾಪ್ ಧರಿಸುವವರು ಮಾತ್ರ ಇದೇ ಭಾರತದ ಆಂತರಿಕ ಅಂಪೈರ್‌ಗಳು! ಬಿಸಿಸಿಐನ ತಲೆಬಿಸಿ ವೃದ್ಧಿಸಲು ಇವರು ಕೊಡುವ ತೀರ್ಪುಗಳು ಸಾಕಲ್ಲವೇ!?
ಕಳೆದ ಐಪಿಎಲ್ ವೇಳೆಯಲ್ಲಿಯೂ ಕಳಪೆ ಅಂಪೈರಿಂಗ್ ಪ್ರದರ್ಶನ ಬಟಾಬಯಲಾಗಿತ್ತು. ಒಂದು ಉದಾಹರಣೆ ಕೊಡುವುದಾದರೆ, ಪಂದ್ಯವೊಂದರಲ್ಲಿ ತಾವೇ ಇತ್ತ ಕ್ಯಾಚ್ ತೀರ್ಪಿನ ವಿರುದ್ಧ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅಸಮಾಧಾನ ತೋರಿದ್ದನ್ನು ನೋಡಿ ಜಿ.ಎ.ಪಾರ್ಥಕುಮಾರ್ ಎಂಬ ಅಂಪೈರ್ ದಡಕ್ಕನೆ ಟಿವಿ ರಿಪ್ಲೆಗೆ ಮೂರನೇ ಅಂಪೈರ್‌ಗೆ ಸಂಜ್ಞೆ ಮಾಡಿಬಿಡುವುದೇ? ಈಗಾಗಲೆ ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ ಅಂಪೈರ್‌ರ ಪರೀಕ್ಷಾ ವಿಧಾನವನ್ನು ಬದಲಿಸುವ ಸೂಚನೆ ನೀಡಿದ್ದಾರೆ. ಜಂಟಿ ಕಾರ್ಯದರ್ಶಿ ಎಂಡಿ ಪಾಂಡೋವೆ "ಸರಾಸರಿಗಿಂತ ಕೆಳಗಿನ ಅಂಪೈರ್‌ಗೆ ಇನ್ನುಮುಂದೆ ಸ್ಥಾನವಿಲ್ಲ. ಹೊಸದಾದ, ಯುವ ರಕ್ತವನ್ನು ಅಂಪೈರಿಂಗ್ ಕ್ಷೇತ್ರಕ್ಕೂ ತರುತ್ತೇವೆ. ಈಗಿರುವ ಅಂಪೈರ್‌ಗಳಿಗೆ ಮುಂಬೈನಲ್ಲಿ ಇನ್ನೊಂದು ಪರೀಕ್ಷೆ ನಡೆಸಲಾಗುತ್ತದೆ.ಅವರ ಸ್ಥಾನ ಇಲ್ಲಿನ ಫಲಿತಾಂಶವನ್ನು ಆಧರಿಸುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟರಿಂದಲೇ ಅಂಪೈರಿಂಗ್ ಗುಣಮಟ್ಟ ಏರುತ್ತದೆಂಬ ಭ್ರಮೆಯಲ್ಲಿ ಬಿಸಿಸಿಐ ಇದ್ದರೆ ಅದಕ್ಕಿಂತ ಹಾಸ್ಯಾಸ್ಪದ ವಿಚಾರ ಇನ್ನೊಂದಿಲ್ಲ.
ಕುಲಕರ್ಣಿ ಅಧ್ಯಯನ
ಅಂಪೈರಿಂಗ್ ಕ್ಷೇತ್ರದ ಗೌರವಾನ್ವಿತ ವ್ಯಕ್ತಿ ವಿ.ಎಮ್.ಕುಲಕರ್ಣಿಯವರು ಪರಿಸ್ಥಿತಿಯನ್ನು ಸುಧಾರಿಸಲು ಒಂದು ಅಧ್ಯಯನ ವರದಿಯನ್ನೇ ನೀಡಿದ್ದಾರೆ. ಅದರ ಪ್ರಕಾರ, ಭಾರತೀಯ ಅಂಪೈರ್‌ಗಳನ್ನು ಎ ಪ್ಲಸ್, ಎ, ಬಿ ಮತ್ತು ಸಿ ಎಂದು ವರ್ಗೀಕರಿಸಬೇಕು. ಅಂಪೈರ್‌ಗಳ ಪ್ರದರ್ಶನದ ಮಟ್ಟವನ್ನು ಆಧರಿಸಿ ಇವರ ಸ್ಥಾನಮಾನದ ನಿರ್ಧಾರ, ಭಡ್ತಿ-ಹಿಂಭಡ್ತಿಗಳು ನಿಗದಿ ಪಡಿಸುವ ಅಂಶ ಆ ವರದಿಯಲ್ಲಿತ್ತು. ಎರಡು ವರ್ಷಗಳ ನಂತರ ಎ ವರ್ಗದಿಂದ ನಾಲ್ವರನ್ನು ಬಿಗೆ ಹಾಗೂ ಬಿನಿಂದ ಆರು ಜನರನ್ನು ಸಿಗೆ ಸ್ಥಾನಪಲ್ಲಟಗೊಳಿಸುವ ಸಲಹೆ ಅಲ್ಲಿತ್ತು. ಟೆಸ್ಟ, ಏಕದಿನಕ್ಕೆ ಎ ಅಂಪೈರ್, ಬಿ ವರ್ಗ ಪ್ರಥಮ ದರ್ಜೆಗೆ, ಎ ಪ್ಲಸ್ ಎಲೈಟ್ ಗುಂಪಿಗೆ. ಎ ಪ್ಲಸ್, ಎನಲ್ಲಿ ತಲಾ ೧೦, ಬಿನಲ್ಲಿ ೩೦ ಮತ್ತು ಸಿನಲ್ಲಿ ೮೦ ಅಂಪೈರ್‌ಗಳಿಗೆ ಅವಕಾಶ ನೀಡಬೇಕು ಮುಂತಾಗಿ ಕುಲಕರ್ಣಿ ಹಲವು ಗಮನೀಯ ಸಲಹೆಗಳನ್ನು ಪಟ್ಟಿ ಮಾಡಿದ್ದರು. ಕುಲಕರ್ಣಿ ವರದಿಯ ಪ್ರಸಂಗದಲ್ಲಿಯೂ ಬಿಸಿಸಿಐ ಗಂಭೀರವಾಗಿ ವರ್ತಿಸಲೇ ಇಲ್ಲ.
ಅದೃಷ್ಟಕ್ಕೆ, ಐಪಿಎಲ್ ಮುಖಭಂಗಗಳ ನಂತರ ಒಂದಿಷ್ಟು ಚುರುಕುತನ ಕಾಣಿಸಿದಂತಿದೆ. ಬಿಸಿಸಿಐನಲ್ಲಿಯೇ ಅಂಪೈರ್ ಕಮಿಟಿಯೊಂದಿದೆ. ಅದಕ್ಕೆ ಎಸ್.ವೆಂಕಟರಾಘವನ್ ಮುಖ್ಯಸ್ಥರು. ಅದರ ಸಭೆ ಇತ್ತೀಚೆಗೆ ನಡೆದಿದೆ. ಹಲವು ಸ್ವಾಗತಾರ್ಹ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇನ್ನು ಮುಂದೆ ೩೦ ಉತ್ತಮ ಅಂಪೈರ್‌ಗಳ ಬಿಸಿಸಿಐ ಎಲೈಟ್ ಪ್ಯಾನೆಲ್ ಜಾರಿಗೆ ಬರುತ್ತದೆ. ವಲಯ ಮಟ್ಟದಲ್ಲಿ ಅಂಪೈರ್‌ಗಳಿಗೆ ತರಬೇತಿ ಇರುತ್ತದೆ. ಈ ೩೦ ಅಂಪೈರ್‌ಗಳನ್ನು ಕಳೆದ ವಷದ ಅಂಪೈರ್‌ಗಳ ‘ಆಟ’ದ ವಿಡಿಯೋ ನೋಡಿ ಆರಿಸಲಾಗುತ್ತದೆ. ಅಂಪೈರ್‌ಗಳಲ್ಲಿ ಐಸಿಸಿ ಎಲೈಟ್ ಗುಂಪಿಗೆ ಶಿಫಾರಸು ಮಾಡುವ ಮಟ್ಟಕ್ಕೆ ಬೆಳೆಸುವುದು ಗುರಿ.
ಮೇಲಿನ ತೀರ್ಮಾನಗಳಿಂದಲೇ ಪವಾಡಗಳನ್ನು ನಿರೀಕ್ಷಿಸುವುದು ಮೂರ್ಖತನ. ಕೊನೆಪಕ್ಷ ಸರಿಯಾದ ದಾರಿಯಲ್ಲಿ ನಡೆಯುತ್ತಿರುವ ಸಮಾಧಾನ ತಾಳಬಹುದು. ಮುಖ್ಯವಾಗಿ, ಮಾಜಿ ಕ್ರಿಕೆಟ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಅಂಪೈರಿಂಗ್‌ಗೆ ಬರುವಂತಾಗಬೇಕು. ಇಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಧರ್ಮಸೇನರ ಆಗಮನದಿಂದ ಅನುಭವದ ಲಾಭ ಆಟಕ್ಕೆ ಸಿಕ್ಕಿದ್ದು ರುಜುವಾತಾಗಿದೆ. ಇಂತದ್ದು ಭಾರತದಲ್ಲೂ ಆಗಬೇಕಿತ್ತು. ಜಯಪ್ರಕಾಶ್, ವೆಂಕಟರಾಘವನ್ ಮಾಜಿ ಕ್ರಿಕೆಟಿಗರೇ. ಆದರೆ ಮಣೀಂದರ್ ಸಿಂಗ್‌ರಂತವರು ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಅಂತಿಮವಾಗಿ ಆರಿಸಿಕೊಂಡಿದ್ದು ಹೆಚ್ಚು ಗ್ಲಾಮರಸ್ ಆಗಿರುವ ಟಿವಿ ಕಾಮೆಂಟರೇಟರ್ ಕೆಲಸವನ್ನು. ಎಸಿ ರೂಮ್, ನಿರಾಯಾಸ ಕೆಲಸ, ಗರಿಷ್ಠ ಸಂಭಾವನೆಯ ಈ ಅವಕಾಶವಿರುವಾಗ ಶುಷ್ಕ ಅಂಪೈರಿಂಗ್ ಮಾಜಿ ಕ್ರಿಕೆಟಿಗರನ್ನು ಆಕರ್ಷಿಸುವ ಸಾಧ್ಯತೆ ಕಡಿಮೆ. ಹಾಗಾಗಿ ಪರಿಸ್ಥಿತಿ ಸುಧಾರಿಸುವುದು ಕಠಿಣ.
ಕೊನೆಮಾತು - ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿಡಿತದಲ್ಲಿರುವುದು ನಿಚ್ಚಳ. ಅಂತಹ ಸುಪ್ರೀಂ ಸಂಸ್ಥೆಯೇ ಕೈಯಲ್ಲಿರುವಾಗ ಯಕಶ್ಚಿತ್ ಅಂಪೈರ್ ಎಲೈಟ್ ಪ್ಯಾನೆಲ್ ಬಗ್ಗೆ ಈವರೆಗೆ ಬಿಸಿಸಿಐ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಐಪಿಎಲ್ ಈ ವಾತಾವರಣವನ್ನು ಬದಲಿಸಿದೆ. ಆ ಮಟ್ಟಿಗಾದರೂ ನಾವು ಪ್ರೀಮಿಯರ್ ಲೀಗ್ ಹೊಡಿಬಡಿ ಕ್ರಿಕೆಟ್‌ಗೆ ಥ್ಯಾಂಕ್ಸ್ ಹೇಳಬೇಕಲ್ಲವೇ?
-ಮಾವೆಂಸ
1 comments:
ಅಂಪೈರಿಂಗ್ ಕೇವಲ ತರಬೇತಿಯಿಂದ, ಪರೀಕ್ಷೆಯಿಂದ ಬರುವಂಥದ್ದಲ್ಲ. ತಾಳ್ಮೆ, ಅನುಭವವೂ ಬೇಕಾಗುತ್ತದೆ.
200812023996 ಕಾಮೆಂಟ್ ಪೋಸ್ಟ್ ಮಾಡಿ