
ಗೆಳೆಯ ಜಿತು ಇತ್ತೀಚೆಗೆ ತಮ್ಮ ಬ್ಲಾಗ್ನಲ್ಲಿ ಬರೆದಿದ್ದರು, ರಾಮನವಮಿಯ ೯ ದಿನಗಳು ದೇವರ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಊರಿನವರೆಲ್ಲ ಸೇರಿ ದೇವರ ಭಜನೆ ಮಾಡುತ್ತ, ಊರಿನ ಪ್ರತಿ ಮನೆ, ಮನೆಗೆ ಹೋಗಿ ಅಲ್ಲಿ ಪ್ರತಿ ಮನೆಯಲ್ಲಿ ಪೂಜೆ, ಮಂಗಳಾರತಿ ಮಾಡಿ, ಭಜನೆ ಮಾಡಿ ಪ್ರಸಾದ ಸೇವಿಸಿ ಹಿಂತಿರುಗುವುದು ವಾಡಿಕೆ ಆಗಿದೆ.
ಆದರೆ ಇತ್ತಿಚಿನ ವರುಷಗಳಲ್ಲಿ ಮನೆ ಮಕ್ಕಳೆಲ್ಲ ಙದು ಹಾಗು ಕೆಲಸ ಅರಸಿ ಹೊರಗಡೆ ಇರುವದರಿಂದಾಗಿ ಊರಲ್ಲಿರುವ ಕೆಲವೇ ಜನರು ಉತ್ಸವ ನೆಡೆಸುವುದು ತುಂಬಾ ದುಸ್ತರವಾಗುತ್ತಿದೆ..(ವಿವರಗಳಿಗೆ ನೋಡಿ.. http://hindumane.blogspot.com/) ಓದಿದ ತಕ್ಷಣ ಆ ಕ್ಷಣಕ್ಕೆ ತೋಚಿದಂತೆ ಪ್ರತಿಕ್ರಿಯಿಸಿದ್ದೆ. "ಊರ ಬಿಟ್ಟರು ಕ್ರಿಯಾಶೀಲರು. ಇಲ್ಲಿ ಉಳಿದರು ಸತ್ತಂತೆ ಬದುಕಿರುವವರು! ಕಾಲ ಉತ್ತರಿಸದು. ಇಲ್ಲ್ಲಿರುವ ಕೆಲವೇ ಮಂದಿ ಮುನ್ನುಗ್ಗಬೇಕು. ರಜೆ ಹಾಕಿ ಆ ಜನರೂ ಬಂದರೆ ಜೈ! ಚೆಂಡು ನಮ್ಮ ಮನೆ ಅಂಗಳದಲ್ಲಿಯೇ ಇದೆ....." ಯಾಕೋ ಗೊತ್ತಿಲ್ಲ, ಎರಡು ಮೂರು ದಿನದಿಂದ ಅದೇ ವಿಚಾರ ತಲೆಯಲ್ಲಿ ತಾಕಲಾಡುತ್ತಿದೆ.
ವಿಚಾರ ಹಳತು ಮಾಡಿ ಹಾಗೆಯೇ ಮರೆತು ಬಿಡುತ್ತಿದ್ದೆನೇನೋ. ಆದರೆ ಆರ್ಕುಟ್ ಬಳಗದ ಸ್ನೇಹಿತರಾದ ಸಹನಾರ ಒಂದು ಅಭಿಪ್ರಾಯವೂ ಮನಸ್ಸಿನ ಮೂಲೆಯಲ್ಲಿ ತಿವಿಯುತ್ತಿತ್ತು. ಅದಕ್ಕೆ ಪುಟ್ಟ ಹಿನ್ನೆಲೆಯೂ ಇದೆ. ನಾನು ಆರ್ಕುಟ್ನಲ್ಲಿ ‘ಹಳ್ಳಿ ಹುಡುಗ್ರು’ ಎಂಬ ಕಮ್ಯುನಿಟಿಯನ್ನು ಆರಂಭಿಸಿದ್ದೆ. ಹಳ್ಳಿಯಲ್ಲಿರುವವರು ಹಾಗೂ ಹಳ್ಳಿಗಳನ್ನು ಪ್ರೀತಿಸುವವರನ್ನು ಒಗ್ಗೂಡಿಸುವ ಪ್ರಯತ್ನ ಅದಾಗಿದೆ. ಅದರಲ್ಲಿ ತಾವೂ ಪಾಲ್ಗೊಂಡ ಸಹನಾ ಒಂದು ಮಾತು ಹೇಳಿದ್ದರು, ಈ ಕಮ್ಯುನಿಟಿಯಲ್ಲಿ ಹಳ್ಳಿಗರ ವಿಚಾರಗಳ ಚರ್ಚೆಯಾಗಲಿ ಈಗ ಅದೂ ಆರಂಭವಾಗಿದೆ ಎಂದುಕೊಳ್ಳೋಣ.
ಮುಖ್ಯವಾಗಿ ನನಗಂತೂ ಸುತ್ತಮುತ್ತಲಿನ ಹಳ್ಳಿಹುಡುಗರನ್ನು ನೋಡಿದರೆ ರೇಜಿಗೆ ಹುಟ್ಟುತ್ತದೆ. ಅವರಲ್ಲಿ ನಕಾರಾತ್ಮಕ ಧೋರಣೆ ತುಂಬಿ ತುಳುಕುತ್ತಿದೆ. ಒಂದೆಡೆ ಹಳ್ಳಿಗಳಲ್ಲಿ ಅದೆಂತದೋ ಸೋಮಾರಿತನ. ಸ್ವಂತದ ಜಮೀನಿನತ್ತ ಕಾಲು ಹಾಕಲೂ ಹಿಂಜರಿಕೆ. ಕಟ್ಟೆ ಪಂಚಾಯ್ತಿ, ಊರ ರಾಜಕೀಯಗಳು ಅವರ ಸಮಯ ಕೊಲ್ಲುವ ಸಾಧನ. ನೆನಪಾಗುತ್ತದೆ ಒಂದು ಘಟನೆ. ಆಗ ಸಕ್ಕರೆ ಓಪನ್ ಮಾರ್ಕೆಟ್ನಲ್ಲಿ ಲಭ್ಯವಿರಲಿಲ್ಲ. ಒಂದು ರೇಷನ್ ಕಾರ್ಡ್ಗೆ ಬರೀ ೨ ಕೆ.ಜಿ. ಸಕ್ಕರೆ ಕೊಡುತ್ತಿದ್ದರು. ನಮ್ಮಲ್ಲಿಂದ ರೇಷನ್ ಕೊಡುವ ಸೊಸೈಟಿಗೆ ಮೂರು ಕಿ.ಮೀ. ಅಂತರ. ಅಲ್ಲಿಗೆ ಹೋಗಲು ನಿರಾಕರಿಸುವವರು ಹೇಳುತ್ತಿದ್ದರು, ‘ಎರಡು ಕೆ.ಜಿ.ಗೆಂದು ಅಷ್ಟು ದೂರ ಹೋಗುವುದೆಂದರೆ ಆಳುಲೆಕ್ಕ ವ್ಯರ್ಥ!’ ಆಗ ಆ ಸೊಸೈಟಿಯ ಮ್ಯಾನೇಜರ್ ಭೀಮಣ್ಣ ಕೇಳುತ್ತಿದ್ದರು, ಅದೆಲ್ಲಾ ಸರಿ. ಒಂದು ಮಧ್ಯಾಹ್ನದ ಆಳು ಲೆಕ್ಕ ನಷ್ಟ ಎನ್ನುವವರು ಆ ಮಧ್ಯಾಹ್ನ ಮಾಡುವುದೇನು? ಒಂದೋ ಹರಟೆ, ಕಟ್ಟೆ ಪಂಚಾಯ್ತಿ ಇಲ್ಲವೇ ನಿದ್ದೆ ಅಷ್ಟೇ ತಾನೇ?!
ನಿಜ ಅದೇ. ಏನೋ ಮಾಡುತ್ತೀವೆನ್ನುವ ಇವರು ಶೂನ್ಯದಿಂದ ಮೇಲೆದ್ದೇ ಇರುವುದಿಲ್ಲ. ಬಹುಷಃ ಅದ್ಭುತ ತಾಕತ್ತು ಇದ್ದೂ ಹೀಗೆ ವ್ಯರ್ಥವಾಗುತ್ತಿರುವ ಬ್ರಾಹ್ಮಣ-ಹವ್ಯಕ ಹುಡುಗರ ಬಗ್ಗೆ ಜಾಸ್ತಿ ಅನುಕಂಪ ತೋರಬೇಕು! ಇಂದು ಸಮಾಜದಲ್ಲಿ ಸರಿಯಾದ ಸಮಯಕ್ಕೆ ಮದುವೆಯಾಗಲು ಹುಡುಗಿಯರು ಲಭ್ಯರಾಗದೇ ಇರುವುದು ಅವರ ಈ ನಕಾರಾತ್ಮಕ ವರ್ತನೆಗಳಿಗೆ ಕಾರಣವಿರಬಹುದೇ?
ಹಳ್ಳಿಯ ಹುಡುಗರು ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಕೊಂಡದ್ದೇ ಆದರೆ ಮನಸ್ಥಿತಿ ಬದಲಾಗಲೇಬೇಕು. ಕಿತಬಿ ರಾಜಕೀಯ ಮಾಡಲು ಸಮಯ ಸಿಕ್ಕುವುದಿಲ್ಲ. ಮುಖ್ಯವಾಗಿ, ಸಮಾಜಕ್ಕೆ ತೆರೆದುಕೊಳ್ಳುವುದರಿಂದ ಹೊಂದಾಣಿಕೆ ಮನೋಭಾವ ಬೆಳೆಯುತ್ತದೆ.
ಪುಟ್ಟ ಉದಾಹರಣೆ. ಜೋಗದ ಹತ್ತಿರದ ತಲವಾಟದಂತ ಊರುಗಳಲ್ಲಿ ಯುವ ಪಾಳ್ಯವೇ ಇದೆ. ಕ್ರಿಯಾಶೀಲರೇ ಇದ್ದಾರೆ. ಕೊನೆಪಕ್ಷ ಅವರ ಚಟುವಟಿಕೆಗಳ ಕುರಿತು ಅಸಮಾಧಾನ ಇರುವವರು ಸುಮ್ಮನಿದ್ದರೂ ಸಾಕಿತ್ತು. ಇವರ ಪಾಡಿಗೆ ಸಾಧನೆ ಮಾಡುತ್ತಿದ್ದರೇನೋ. ಈಗ ನೋಡಿದರೆ ಕಾಲೆಳೆಯುವುದನ್ನು ಬಿಟ್ಟಂತಿಲ್ಲ. ಹಾಗಾಗಿ ಅವರು ಹುಟ್ಟುಹಾಕಿದ್ದ ‘ಕಟ್ಟೆ’ ಎಂಬ ವಿನೂತನ ಪತ್ರಿಕಾ ಪ್ರಯತ್ನ ಕೊನೆ ಉಸಿರೆಳೆದಂತಿದೆ. ತಿಂಗಳಿಗೆ ಬರೀ ೧೦ ರೂ. ಕೊಟ್ಟು ಪ್ರೋತ್ಸಾಹಿಸಿದ್ದರೂ ಅದೊಂದು ಮೈಲುಗಲ್ಲಿನಂತ ಸಾಧನೆ ಆಗುತ್ತಿತ್ತೇನೋ. ಹಳ್ಳಿಗರು ತಾವು ಸೋತು ನೆರೆಹೊರೆಯವರ ಪ್ರಯತ್ನಗಳನ್ನು ಕೊಲ್ಲುವ ಸ್ಯಾಡಿಸ್ಟ್ಗಳಾಗುತ್ತಿರುವುದು ಏಕೆ? ಒಬ್ಬ ಸುಬ್ಬಣ್ಣ ನಿನಾಸಂನಂತ ವಿಶಿಷ್ಟ ಪ್ರಯೋಗ ಮಾಡಿ ಗೆದ್ದಿರುವುದು ಕಣ್ಣೆದುರಿಗಿದೆ. ಅಂತಹುದಕ್ಕೆ ಅವಕಾಶ ಕೊಡುವುದು ನಮ್ಮ ಹೆಮ್ಮೆ ಆಗಬೇಕಿತ್ತು.
ನಮ್ಮೂರಿನಲ್ಲೂ ಅಂತದೊಂದು ಚಟುವಟಿಕೆಗೆ ನಾನೂ ಶ್ರೀಕಾರ ಹಾಕಿದ್ದುಂಟು. ರಾಜ್ಯದ ಬಹುಪಾಲು ಎಲ್ಲ ಅಂದರೆ ೬೦ ನಿಯತಕಾಲಿಕಗಳು ಓದಲು ಸಿಗುತ್ತಿರುವ ರಾಜ್ಯದ ಅಪರೂಪದ ಗ್ರಾಮೀಣ ವಾಚನಾಲಯವಿದು. ಊರಿನ ‘ಹಿತೈಷಿ’ಗಳು ತಟಸ್ಥರಾಗಿದ್ದರೂ ನನ್ನ ಕೆಲಸ ಅಷ್ಟರಮಟ್ಟಿಗೆ ಸಲೀಸಾಗಿ ಸಾಗುತ್ತಿತ್ತು. ಆದರೆ....? (ವಾಚನಾಲಯದ ಪರಿಚಯ ಇನ್ನೊಮ್ಮೆ)
ಸ್ವಾರಸ್ಯವೆಂದರೆ, ಹಳ್ಳಿಯಿಂದ ನಗರಕ್ಕೆ ವಲಸೆ ಹೋದವರಲ್ಲೂ ತೌರು ನೆಲದತ್ತ ದಿವ್ಯ ನಿರ್ಲಕ್ಷ್ಯ. ಇತ್ತೀಚೆಗೆ ನಮ್ಮೂರಿನಲ್ಲಿ ಬೆಂಗಳೂರಿನಲ್ಲಿರುವವನ ಮಗನ ಮದುವೆ ನಡೆಯಿತು. ಮದುವೆಗೆ ಮುಂಚಿನ ಕೆಲಸ, ಮದ್ವೆ ದಿನ ಊಟ ಹಾಕಿದ್ದು ಹೀಗೆ (ದೊನ್ನೆ ಬಾಳೆ, ನಾಂದಿ, ವಧೂಪ್ರವೇಶ....) ನಮ್ಮದು. ನಾವು ಗೇಯ್ದದ್ದೇ ಬಂತು. ಊರಿನ ಜನರ ಪರಿಚಯವನ್ನು ಮಾಡಿಕೊಳ್ಳುವ ಕನಿಷ್ಟ ತ್ರಾಸನ್ನು ಕೂಡ ಆ ಮಧುಮಗ ತೆಗೆದುಕೊಳ್ಳಲಿಲ್ಲ. ಎಜುಕೇಟೆಡ್!? ಆತನ ಮಟ್ಟಿಗೆ ಹಳ್ಳಿಯ ಹಿನ್ನೆಲೆ ಬಿಟ್ಟಿಯಾಗಿ ಅಥವಾ ಕಡಿಮೆ ಖರ್ಚಿನಲ್ಲಿ ಮದುವೆ ಕಾರ್ಯ ಮುಗಿಸಿಕೊಳ್ಳುವ ಅವಕಾಶವಾಗಿತ್ತಷ್ಟೇ. ಇಂತಹ ಮನೋಭಾವವೇ ಈ ಎಲ್ಲ ವಲಸಿಗರನ್ನು ತುಂಬುತ್ತಿದೆ. ಇಂದು ನಮ್ಮ ವಾಚನಾಲಯಕ್ಕೆ ಪರಸ್ಥಳದವರು, ಸ್ನೇಹಿತರು ಪ್ರಯೋಜಕರಾಗಿದ್ದಾರೆ. ಅದೇ ಊರಿನಿಂದ ಹೊರಗೆ ಹೋದ ಒಬ್ಬಾನೊಬ್ಬ ಸಾಫ್ಟ್ವೇರಿ ನಯಾ ಪೈಸೆ ಇತ್ತಿಲ್ಲ. ಅದೃಷ್ಟಕ್ಕೆ ಹಳ್ಳಿಯಿಂದ ನಗರಗಳಿಗೆ ಚಲಿಸಿದ ಹುಡುಗಿಯರಲ್ಲಿ ಈ ಸ್ವಭಾವ ಕಡಿಮೆಯೇನೋ.
ಊಹ್. ಹೇಳುವುದು ಇನ್ನಷ್ಟಿದೆ. ಅದನ್ನು ಮುಂದಿನ ಭಾಗವಾಗಿ ಬರೆಯುವೆ. ಅದಕ್ಕೂ ಮುನ್ನ ಒಂದಷ್ಟು ಚರ್ಚೆಯಾದರೆ ಚೆನ್ನ. ಪಾಲ್ಗೊಳ್ಳಿ. ನನ್ನ ಅಭಿಪ್ರಾಯವೇ ಅಂತಿಮವೇನಲ್ಲ. ಭಿನ್ನ ವಿಚಾರಧಾರೆ ಸ್ವಾಗತಾರ್ಹ.
ಆರ್ಕುಟ್ನ ‘ಹಳ್ಳಿ ಹುಡುಗ್ರು’ ಕಮ್ಯುನಿಟಿಯಲ್ಲಿ ಸೇರಲು ಆಶಿಸುವವರು ಇಲ್ಲಿ ಕ್ಲಿಕ್ಕಿಸಿ, http://www.orkut.co.in/Main#Community.aspx?cmm=50031568
-ಮಾವೆಂಸ