ಸೋಮವಾರ, ಜನವರಿ 19, 2009

ಕಾಂಗರೂ ನಾಡಿನಲ್ಲಿ ಈಗ ಟೆನಿಸ್ ಕಲರವ!




ಇಂದಿನಿಂದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಚಾಂಪಿಯನ್‌ಶಿಪ್‌ನ ೨೦೦೯ರ ಆವೃತ್ತಿಯ ಆರಂಭ. ಒಂದರ್ಥದಲ್ಲಿ ಇದು ನಮ್ಮ ಓಪನ್! ವರ್ಷದ ನಾಲ್ಕು ಟೆನಿಸ್ ಗ್ರಾನ್‌ಸ್ಲಾಂಗಳಲ್ಲಿ ಚೊಚ್ಚಲು ಸ್ಪರ್ಧೆಯಾದ ಇದು ಏಷ್ಯಾ ಮತ್ತು ಫೆಸಿಫಿಕ್ ಖಂಡವನ್ನು ಪ್ರತಿನಿಧಿಸುತ್ತದೆ. ವ್ಯಾವಹಾರಿಕವಾಗಿ, ಏಷ್ಯಾದ ಬಲು ದೊಡ್ಡ ಜನಸಾಗರವನ್ನು ಆಕರ್ಷಿಸುವ ತಂತ್ರ ಇದಾದರೂ ನಾಲ್ಕು ವೈಲ್ಡ್‌ಕಾರ್ಡ್‌ಗಳು ಏಷ್ಯನ್‌ರಿಗೆ ಮೀಸಲಿಟ್ಟಿರುವ ಲಾಭವೂ ಇದೆ.
ಪುಟ್ಟ ದುರಂತವೆಂದರೆ, ಏಷ್ಯನ್ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಅಲ್ಲೆಲ್ಲೋ ಫುಟಬಾಲ್ ವಿಶ್ವಕಪ್ ನಡೆದರೆ ಹಾರಾಡುತ್ತವೆ. ಇಂಗ್ಲೆಂಡಿಗರ ವಿಂಬಲ್ಡನ್ ಸುದ್ದಿ ಬರೆಯುವಾಗ ನಮ್ಮೂರಿನ ಸಮಾಚಾರ ಎಂದು ಸಂಭ್ರಮಿಸುತ್ತವೆ. ಕೊನೆಗೆ ಬಾಕ್ಸಿಂಗ್, ಕೌಂಟಿ ಕ್ರಿಕೆಟ್‌ಗೂ ಆದ್ಯತೆ ಸಿಗುತ್ತದೆ. ನಮ್ಮದೆನ್ನಬೇಕಾದ ಆಸ್ಟ್ರೇಲಿಯನ್ ಓಪನ್‌ಗೆ ಸ್ಥಳಾವಕಾಶದ ಕೊರತೆ!!
ಆಸ್ಟ್ರೇಲಿಯನ್ ಗ್ರಾನ್‌ಸ್ಲಾಂ ಹಲವು ಅವತಾರಗಳ ನಂತರವೇ ಈಗಿನ ಸ್ವರೂಪ ತಾಳಿದ್ದು. ಸಂಕ್ಷಿಪ್ತವಾಗಿ ವಿವರಿಸುವುದಾದರೆ, ೧೯೦೫ರಲ್ಲಿ ಈ ಪ್ರತಿಷ್ಠಿತ ಟೂರ್ನಿ ಆರಂಭವಾಯಿತು. ೧೯೮೭ರವರೆಗೂ ಇದು ನಡೆದದ್ದು ಹುಲ್ಲಿನಂಕಣದಲ್ಲಿ. ೧೯೮೮ರಿಂದ ಕೃತಕ ಮಾದರಿಯ ಹಾರ್ಡ್‌ಕೋರ್ಟ್ ಬಳಸಲಾಗಿದೆ. ಈ ಹಾರ್ಡ್‌ಕೋರ್ಟ್ ಮೇಲ್ಮೆಗೆ ತರಾವರಿ ಟರ್ಫ್‌ನ ಪ್ರಯೋಗ ಮಾಡಲಾಗಿದೆ. ಈವರೆಗೆ ರಿಬೌಂಡ್ ಏಸ್ ಟರ್ಫ್ ಇದ್ದರೆ ಕಳೆದ ವರ್ಷದಿಂದ ಫ್ಲೆಕ್ಸಿಕುಷನ್. ದಾಖಲೆಯ ಮಟ್ಟಿಗೆ, ಮ್ಯಾಟ್ಸ್ ವಿಲಾಂಡರ್ ಮಾತ್ರ ಓಪನ್‌ನ ಹುಲ್ಲು ಹಾಗೂ ಹಾರ್ಡ್‌ಕೋರ್ಟ್‌ಗಳೆರಡರಲ್ಲೂ ಸಿಂಗಲ್ಸ್ ಪ್ರಶಸ್ತಿ ಪಡೆದ ಸಾಧಕ.
೧೯೨೦ರ ದಶಕದಲ್ಲಿ ಈ ಟೂರ್ನಿಗೆ ವಿದೇಶಿಯರಾರೂ ಬರುತ್ತಿರಲಿಲ್ಲ. ಅಷ್ಟಕ್ಕೂ ಯುರೋಪ್‌ನಿಂದ ಇಲ್ಲಿಗೆ ಬಂದು ಹೋಗಲು ಬರೋಬ್ಬರಿ ಮೂರು ತಿಂಗಳು ಬೇಕಾಗುತ್ತಿತ್ತು! ಅದು ಹಡಗಿನಲ್ಲಿ ಪಯಣಿಸುತ್ತಿದ್ದ ದಿನಗಳು. ಅಂತೂ ೧೯೪೬ರಲ್ಲಿ ಪ್ರಥಮ ಬಾರಿಗೆ ವಿಮಾನದಲ್ಲಿ ಅಮೆರಿಕನ್  ಆಟಗಾರರು ಬಂದರು. ೧೯೦೬ರಲ್ಲೊಮ್ಮೆ ಕ್ರೈಸ್ಟ್‌ಚರ್ಚ್‌ನಲ್ಲಿ ಈ ಗ್ರಾನ್‌ಸ್ಲಾಂ ನಡೆದಾಗ ಕೇವಲ ೧೦ ಮಂದಿ ಆಟಗಾರರು ಪಾಲ್ಗೊಂಡಿದ್ದರು. ಅದರಲ್ಲಿ ಇಬ್ಬರು ಮಾತ್ರ ಕಾಂಗರೂಗಳು. ನ್ಯೂಜಿಲ್ಯಾಂಡಿಗನೊಬ್ಬ ಪ್ರಶಸ್ತಿ ಗೆದ್ದ. ಆ ಸ್ಪರ್ಧೆ ನಡೆದ ಕ್ರೈಸ್ಟ್‌ಚರ್ಚ್ ಇರುವುದು ನ್ಯೂಜಿಲ್ಯಾಂಡಿನಲ್ಲೇ!
ಹೋಗಲಿ, ಆ ಕಾಲದಲ್ಲಿ ಆಸ್ಟ್ರೇಲಿಯನ್‌ರಾದರೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದಿತ್ತಲ್ಲ ಎಂಬ ಪ್ರಶ್ನೆ ಹಾದು ಹೋಗದೇ ಇರದು. ಅದೂ ಕಷ್ಟ. ಪರ್ತ್‌ನಲ್ಲಿ ಈ ಕೂಟ ನಡೆದಾಗ ಖುದ್ದು ಆಸೀಸ್‌ಗಳು ಪಾಲ್ಗೊಳ್ಳುತ್ತಿರಲಿಲ್ಲ. ಕಾರಣವಿತ್ತು. ಪರ್ತ್‌ಗೆ ವಿಕ್ಟೋರಿಯಾ ಅಥವಾ ನ್ಯೂ ಸೌತ್ ವೇಲ್ಸ್‌ನ ಆಟಗಾರರು ತಲುಪಲು ಮೂರು ಸಾವಿರ ಕಿ.ಮೀ.ಗಳ ದಾರಿಯನ್ನು ಕ್ರಮಿಸಬೇಕಿತ್ತು!
ಬಿಡಿ ಬಿಡಿ, ಇವೆಲ್ಲ ಹಳೆಯ ಕತೆ. ಇಂದಿನ ದಿನಕ್ಕೆ ಬಂದರೆ ಆಸ್ಟ್ರೇಲಿಯನ್ ಓಪನ್ ಲಕಲಕ ಹೊಳೆಯುತ್ತದೆ. ಕಳೆದ ವರ್ಷದ ಒಂದು ದಿನ ಹಗಲು ರಾತ್ರಿಗಳ ಒಟ್ಟು ಹಾಜರಿ ೬೨,೮೮೫ ಪ್ರೇಕ್ಷಕರು. ಇದು ಯಾವುದೇ ಗ್ರಾನ್‌ಸ್ಲಾಂನಲ್ಲಿ ಕಾಣಿಸಿಕೊಂಡ ಒಂದು ದಿನದ ಅತ್ಯಧಿಕ ವೀಕ್ಷಕರು. ೨೦೦೮ರಲ್ಲಿ ಒಟ್ಟಾರೆ ೬,೦೫,೭೩೫ ಜನರು ಮೆಲ್ಬೋರ್ನ್‌ನ ಈ ರಾಡ್‌ಲೇವರ್ ಹಾಗೂ ಹೆಸ್ಸಿನ್ನಾ ಸ್ಟೇಡಿಯಂಗಳಿಗೆ ಭೇಟಿ ಕೊಟ್ಟಿದ್ದರು. ಆಸ್ಟ್ರೇಲಿಯಾದ ಆರ್ಥಿಕತೆಗೆ ಪ್ರತಿ ವರ್ಷ ೩೮ ಮಿಲಿಯನ್ ಪೌಂಡ್‌ಗಳನ್ನು ಈ ಓಪನ್ ಹರಿಸುತ್ತಿದೆ ಎಂದ ಮೇಲೆ ಅದರ ಯಶಸ್ಸು ಅರ್ಥವಾಗುವಂತದ್ದು.
೨೦೦೯ರ ಸ್ಪರ್ಧೆ ಬಾಗಿಲಲ್ಲಿರುವಾಗ ಕಾಡುವ ಪ್ರಶ್ನೆ ಒಂದೇ - ಯಾರು ಫೇವರಿಟ್? ಕಳೆದ ವರ್ಷದಿಂದ ಮೆಲ್ಬೋರ್ನ್ ಸ್ಕ್ರಿಪ್ಟ್ ಬದಲಾಗಿದೆ. ಸ್ವಿರ್ಜರ್‌ಲೆಂಡ್‌ನ ರೋಜರ್ ಫೆಡರರ್ ಹಾಟ್ ಫೇವರಿಟ್ ಅಲ್ಲ, ಅಗ್ರಕ್ರಮಾಂಕಿತರೂ ಈಗಲ್ಲ. ರಫೆಲ್ ನಡಾಲ್ ಫೆಡರರ್ ಕೋಟೆಯನ್ನು ಮುರಿದು ನಂ.೧ ಎನಿಸಿಕೊಂಡಿದ್ದಾರೆ. ಆದರೆ ನಡಾಲ್ ಜ್ಞಾಪಿಸಿಕೊಳ್ಳಲೇ ಬೇಕಾದ ಹಲವು ಅಂಶಗಳಿವೆ. ಇಲ್ಲಿನ ಫ್ಲೆಕ್ಸಿ ಟರ್ಫ್ ಬಹುಪಾಲು ಯು.ಎಸ್.ಓಪನ್‌ನ ಡೆಕೋವನ್ನು ಹೋಲುತ್ತದೆ. ಈ ವರ್ಷ ಅತ್ಯಧಿಕ ವೇಗ ಪಡೆದುಕೊಳ್ಳುತ್ತದೆ ಎಂಬುದು ತಜ್ಞರ ಊಹೆ. ಇದು ಫೆಡರರ್‌ರಿಗೆ ಅನುಕೂಲ. ಮುಖ್ಯವಾಗಿ, ಕಳೆದ ಗ್ರಾನ್‌ಸ್ಲಾಂನ್ನು ನ್ಯೂಯಾರ್ಕ್‌ನಲ್ಲಿ, ಡೆಕೋ ಟರ್ಫ್‌ನಲ್ಲಿ ಗೆದ್ದವರು ಇದೇ ಫೆಡರರ್!
ಕಳೆದ ಬಾರಿಯ ವಿಜೇತ ನೋವಾಕ್ ಜ್ವೋಕೋವಿಕ್‌ರಿಗೆ ಮೂರನೇ ಶ್ರೇಯಾಂಕ. ಪ್ರಶಸ್ತಿ ಉಳಿಸಿಕೊಳ್ಳುವ ಸಾಧ್ಯತೆ ಬಗ್ಗೆ ಅವರಿಗೇ ವಿಶ್ವಾಸವಿದ್ದಂತಿಲ್ಲ. ಹೋಗಲಿ, ಕಳೆದ ಸಂಚಿಕೆಯ ರನ್ನರ್ ಅಪ್ ತ್ಸೊಂಗಾ ಕಡೆ ನೋಡಿದರೆ, ಆತ ಗಾಯಗೊಂಡಿದ್ದು ಈ ಬಾರಿ ಆಡುವುದೇ ಅನುಮಾನ! ಕೊನೆಗೂ ಈ ಸ್ಲಾಂ ನಡಾಲ್ - ಫೆಡರರ್‌ರ ಪೈಪೋಟಿಯೇ ಆದೀತು.
ಜ್ವೋಕೋವಿಕ್, ಮಹಿಳಾ ವಿಭಾಗದ ಯಾನಾ ಜಾಂಕೋವಿಕ್, ಆನಾ ಇವಾನೋವಿಕ್, ಇರಾಕೋವಿಕ್ ಎಂಬ ಹೆಸರುಗಳು ಟೆನಿಸ್ ಪ್ರಿಯ ಭಾರತೀಯರನ್ನು ಗೊಂದಲಕ್ಕೀಡು ಮಾಡುತ್ತ ಇರುವುದಂತೂ ನಿಜ. ನಮ್ಮೂರಲ್ಲಿದ್ದಂತೆ ಶಿವ, ಪ್ರಿಯಾಂಕ, ಶಿಲ್ಪಾ, ರಮ್ಯ, ಸೋನಿಯಾ ತರ ಇದ್ದಿದ್ದರೇ?
ಹೆಸರು ಏನು ಮಾಡುತ್ತದೊ ಗೊತ್ತಿಲ್ಲ, ಮಹಿಳಾ ವಿಭಾಗದ ನಂ.೧ ಯಾನಾ ಜಾಂಕೋವಿಕ್ ಗ್ರಾನ್‌ಸ್ಲಾಂ ಗೆಲ್ಲದ ಅಗ್ರಕ್ರಮಾಂಕಿತೆ ಎಂಬ ಅಪವಾದದಿಂದ ಹೊರಬರಲು ಪ್ರಯತ್ನಿಸಬಹುದು. ಯಶಸ್ವಿಯಾದಾರೇ? ಕಷ್ಟ. ವಾಸ್ತವವಾಗಿ, ರಷ್ಯಾದ ಎಲೆನಾ ಡೆಮೆಂಟಿವಾ ಹಾಗೂ ದಿಲಾರಾ ಸಫೀನಾರ ವಿಜಯದ ಸಾಧ್ಯತೆ ಹೆಚ್ಚು ದಟ್ಟವಾಗಿದೆ.
ಮುಖ್ಯ ಡ್ರಾನಲ್ಲಿ ಭಾರತದಿಂದ ಪಾಲ್ಗೊಳ್ಳುತ್ತಿರುವುದು ೧೦೭ನೇ ಶ್ರೇಯಾಂಕಕ್ಕೆ ಕುಸಿದಿರುವ ಸಾನಿಯಾ ಮಿರ್ಜಾ ಮಾತ್ರ. ಅವರು ಮೊದಲ ಸುತ್ತಿನಲ್ಲಿ ಎದುರಿಸುತ್ತಿರುವ ೬೧ನೇ ಕ್ರಮಾಂಕದ ಡೊಮಾಚೋವಸ್ಕ. ಸಾನಿಯಾ ಕಳೆದ ವರ್ಷ ೨೭ನೇ ಕ್ರಮಾಂಕದಲ್ಲಿದ್ದರು ಎಂದುಕೊಂಡು ಧೈರ್ಯ ತಂದುಕೊಳ್ಳುತ್ತಿರುವಾಗಲೇ ನೆನಪಾಗುತ್ತದೆ. ಈ ಡೊಮಾಚೋವಸ್ಕ ಹಿಂದಿನ ಬಾರಿ ಇದೇ ಮೆಲ್ಬೋರ್ನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಿದವರು!
ಮುಗಿಸುವ ಮುನ್ನ - ಕ್ರಿಸ್‌ಮಸ್, ಹೊಸವರ್ಷ ಸಂಭ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ಆಸ್ಟ್ರೇಲಿಯನ್ ಓಪನ್‌ಗೆ, ಅದರ ಸಿದ್ಧತೆಗೆ ತೊಡಗಬೇಕಾದ್ದು ಕಾಡುತ್ತಲೇ ಇರುವ ಕಷ್ಟ. ರೋಜರ್ ಫೆಡರರ್ ‘ಪ್ರತಿಷ್ಠಿತವಾದುದರಿಂದಲೇ’ ಇದನ್ನು ಫೆಬ್ರವರಿಗೆ ಮುಂದೂಡುವ ವಿಚಾರವನ್ನು ಹರಿಯಬಿಟ್ಟಿದ್ದಾರೆ. ರಫೆಲ್ ನಡಾಲ್ ಬೆಂಬಲಿಸಿದ್ದಾರೆ. ಮುಂದಿನ ೧೪ ದಿನ ಇದು ಚರ್ಚೆಯಲ್ಲಿರುವುದಂತೂ ವಾಸ್ತವ. ನೀವೇನಂತೀರಿ? 

-ಮಾವೆಂಸ
ಇ ಮೇಲ್- mavemsa@gmail.com

ಸ್ನೇಹಿತರೇ ಗಮನಿಸಿ,
ಮೊಬೈಲ್ ಟಾಕ್‌ನ ಬಲುಮುಖ್ಯ ಕಾನೂನು ಮಾಹಿತಿಯನ್ನು ಸದ್ಯದಲ್ಲೇ ಅಪ್‌ಲೋಡ್ ಮಾಡಲಿದ್ದೇನೆ. ತುಸು ಕಾಯುವಿಕೆ ಅನಿವಾರ್ಯ!

 
200812023996