ಮಂಗಳವಾರ, ಜೂನ್ 7, 2011

ಭಾರತದಲ್ಲಿ ನೆಲೆಸಲು ಬಂದಿರುವ ‘ಹೋಮ್ ಸ್ಟೇ’




ಪ್ರವಾಸೋದ್ಯಮ ಗರಿಗೆದರುತ್ತಿರುವ ದಿನಗಳಿವು. ಖುದ್ದು ಭಾರತೀಯರು ನೆಮ್ಮದಿ, ವಿಶ್ರಾಂತಿ, ಮೋಜು ಅರಸಿ ಪ್ರವಾಸಿ ತಾಣಗಳಿಗೆ ಅಲೆಯುತ್ತಿದ್ದಾರೆ. ವಿದೇಶಿ ಪ್ರವಾಸಿಗರಿಂದಲೇ ಪ್ರವಾಸೋದ್ಯಮದ ವಹಿವಾಟು ಸುಧಾರಿಸಬೇಕು ಎಂಬ ದಿನಗಳಂತೂ ಈಗಿಲ್ಲ. ಪ್ರಕೃತಿ ಮಡಿಲಿನಲ್ಲಿ ನೆಲೆಸಿರುವ ಮೂಲನಿವಾಸಿಗಳಿಗೆಲ್ಲ ಹೊಸ ಅವಕಾಶ ತೆರೆದಿರುವುದಂತೂ ಸತ್ಯ. ಇದಕ್ಕೆ ನೂತನ ಪೋಷಾಕಿನೊಂದಿಗೆ ಬಂದಿರುವ ವ್ಯಾಪಾರವೇ  ಹೋಮ್ ಸ್ಟೇ!
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಜನರ ಮನೆಯಲ್ಲಿಯೇ ಪಾವತಿ ಅತಿಥಿಗಳನ್ನು ಆಹ್ವಾನಿಸುವ ಪ್ರವಾಸೋದ್ಯಮದ ಮಾದರಿಯನ್ನು ಹೋಮ್‌ಸ್ಟೇ ಎಂದು ಹೇಳಲಾಗುತ್ತದೆ. ಅಲ್ಲಿನ ಪರಿಸರದಲ್ಲಿ ಅಲ್ಲಿನದೇ ಅಹಾರವನ್ನು ಒದಗಿಸುವ ಈ ತಂತ್ರ ನಗರವಾಸಿಗಳಿಗೆ ಹೆಚ್ಚು ಇಷ್ಟವಾಗುತ್ತಿದೆ ಎನ್ನುವುದನ್ನು ಹಲವು ಅಧ್ಯಯನಗಳು ಸ್ಪಷ್ಟಪಡಿಸಿವೆ. ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ತರುಣ್ ತಮ್ಮಣ್ಣ ಈ ಕುರಿತು ಆಳವಾದ ಸಂಶೋಧನೆ ನಡೆಸಿದ್ದರು.

ಭವಿಷ್ಯಕ್ಕೆ ಭಾಷ್ಯ
ಕಾಮನ್‌ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ದೆಹಲಿಯಲ್ಲಿ ಸಾಕಷ್ಟು ಕಟ್ಟಡಗಳ ನಿರ್ಮಾಣವಾದರೂ ಸರಿಸುಮಾರು ೩೦ ಸಾವಿರ ಕೊಠಡಿಗಳ ಕೊರತೆ ಬಿದ್ದಿತ್ತು. ಇಲ್ಲಿನ ಸುತ್ತಮುತ್ತಲಿನ ಹಾಗೂ ಜೈಪುರದ ೨೦೦ ಮನೆಯವರು ತಾವು ‘ಪಾವತಿ ಆತಿಥ್ಯ’ ನೀಡುವುದಾಗಿ ಮುಂದೆ ಬಂದರೂ ಮತ್ತು ಉಳಿದ ಪ್ರತಿ ಮನೆಯವರು ತಮ್ಮ ಒಂದು ಕೊಠಡಿಯನ್ನು ಬಿಟ್ಟು ಕೊಟ್ಟರೆ ಕೂಡ ಮತ್ತೆ ೪೦೦ ವಸತಿ ಲಭ್ಯವಾಯಿತೇ ವಿನಃ ಕೊರತೆಯ ಪ್ರಮಾಣ ಅಗಾಧವಾಗಿಯೇ ಉಳಿದಿತ್ತು. ಬಹುಷಃ ಇದು ಭಾರತದಲ್ಲಿ ಹೋಮ್ ಸ್ಟೇಗಳಿಗಿರುವ ಭವಿಷ್ಯಕ್ಕೂ ಭಾಷ್ಯ ಹೇಳಬಲ್ಲದು.
ಕರ್ನಾಟಕದ ಕೊಡಗು ಜಿಲ್ಲೆ, ಗೋವಾ ಪ್ರದೇಶದಲ್ಲಿ ಹೋಮ್ ಸ್ಟೇ ಉದ್ಯಮ ಬೇರೂರಿ ದಶಕ ಕಳೆದಿದೆ. ಆದರೆ ಕಳೆದ ಮೂರ‍್ನಾಲ್ಕು ವರ್ಷಗಳಲ್ಲಿ ತೀವ್ರ ಗತಿಯ ಬೆಳವಣಿಗೆಯನ್ನು ಈ ಕ್ಷೇತ್ರದಲ್ಲಿ ಕಾಣಲಾಗುತ್ತಿದೆಯಾದರೂ ಅಂಕಿಅಂಶಗಳ ಮೂಲಕ ಇದನ್ನು ಪ್ರಸ್ತುತಪಡಿಸುವುದು ಕಷ್ಟ. ಕಂಫರ್ಟ್ ಹೋಮ್‌ಸ್ಟೇ ನಿರ್ವಾಹಕರಾದ ಎಕ್ತಾ ಕಪೂರ್‌ರ ಪ್ರಕಾರ, ಶೇ. ೨೫ರಷ್ಟು ಹೋಮ್‌ಸ್ಟೇಗಳು ಮಾತ್ರ ನೊಂದಣಿಯಾಗಿ ಕೆಲಸಮಾಡುತ್ತಿವೆ.
ಕೇರಳ, ಹಿಮಾಚಲ ಪ್ರದೇಶ, ರಾಜಾಸ್ತಾನಗಳಲ್ಲಿ ಉದ್ಯಮ ಪ್ರಗತಿಯಲ್ಲಿದೆ. ಲಡಾಖ್‌ನಂತ ಪ್ರದೇಶದಲ್ಲಿ ಬದುಕು ಸಂಕಷ್ಟದಲ್ಲಿದೆ ಎನ್ನುವ ಮಾತು ಹಳೆಯದಾಗಿದೆ. ಈಗ ಅಲ್ಲಿ ಪ್ರತಿ ಮನೆಯೂ ಹೋಮ್ ಸ್ಟೇಗಳಾಗಿ ಬದಲಾಗುವ ಅದೃಷ್ಟ ಪಡೆದಿವೆ. ಅಂತೆಯೇ ರಾಜ್ಯದ ಮೈಸೂರು, ಕೊಡಗು, ಮಲೆನಾಡು ಭಾಗಗಳಲ್ಲಿ ಅಲ್ಲಿಯ ಸಂಸ್ಕೃತಿ, ಬಾಣಸಿಗತನವನ್ನು ಪ್ರದರ್ಶಿಸುವ ವಸತಿ ವ್ಯವಹಾರ ಚುರುಕುಗೊಳ್ಳುತ್ತಿದೆ. ಇಲ್ಲಿ ಬಹುಪಾಲು ಗ್ರಾಹಕರು ದೇಶದೊಳಗಿನವರೇ ವಿನಃ ವಿದೇಶಿಯರಲ್ಲ.


ಬಂಡವಾಳಶಾಹಿಗಳಿಗೆ ಆಕರ್ಷಣೆ 
ಈ ಉದ್ಯಮದೊಳಗಿನ ದುಡಿಯುವ ಶಕ್ತಿ ಈಗಾಗಲೇ ಬಂಡವಾಳಶಾಹಿಗಳನ್ನು ಸೆಳೆದಿದೆ. ಹಲವು ಆತಿಥೇಯರನ್ನು ಒಂದು ವ್ಯವಸ್ಥೆಯೊಳಗೆ ತಂದು ಅಂತರ್ಜಾಲ ತಂತ್ರಜ್ಞಾನದ ಮೂಲಕ ವಹಿವಾಟು ನಡೆಸುತ್ತಿವೆ. ವಿಲೇಜ್ ವೇಸ್, ಭಾರತ್ ಹೋಮ್ ಸ್ಟೇ ಪೋರ್ಟಲ್, ಕಂಫರ್ಟ್ ಮೊದಲಾದ ಸಂಸ್ಥೆಗಳು ದೇಶದ ಹಲವು ಭಾಗದ ಸಣ್ಣಪುಟ್ಟ ವಸತಿಗಳು, ಹೋಮ್‌ಸ್ಟೇ ವ್ಯವಸ್ಥೆಗಳನ್ನು ತಮ್ಮಲ್ಲಿ ನೊಂದಣಿ ಮಾಡಿಸಿಕೊಂಡು ವಹಿವಾಟು ನಡೆಸುತ್ತಿವೆ. 
ಇಂತಹ ಅಂಕಿಅಂಶಗಳನ್ನು ಸೈಬರ್ ಮೀಡಿಯಾ ಕ್ರೋಢೀಕರಣ ಮಾಡಿದೆ. ದೇಶದ ಒಂದು ಏಜೆನ್ಸಿಯಲ್ಲಿ ೧೫೦ ಕೊಠಡಿಗಳು ಲಭ್ಯವಿದ್ದು, ವಾರ್ಷಿಕ ಶೇ.೫೦ರಷ್ಟು ತುಂಬಿರುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ೭೫ ಕೊಠಡಿಗಳಲ್ಲಿ ವರ್ಷಪೂರ್ತಿ ವಸತಿಯಿರುತ್ತದೆ. ಇದರಿಂದ ಆತಿಥೇಯರಿಗೆ ೧೦.೧ ಕೋಟಿ ರೂ. ಆದಾಯ ಸಿಕ್ಕಿದ್ದರೆ ಏಜೆನ್ಸಿಗೆ ೨.೫ ಕೋಟಿ ರೂ. ಬಂದಿದೆ. ಇನ್ನೊಂದು ಸಂಸ್ಥೆಯ ಲಭ್ಯ ೪೫೦ ಕೊಠಡಿಗಳು ಕೂಡ ಶೇ.೫೦ರ ಬೇಡಿಕೆ ಪಡೆದಿದ್ದು ವಾರ್ಷಿಕ ೩೮ ಕೋಟಿ ವಹಿವಾಟು ನಡೆಸುತ್ತಿದೆ. ಪ್ರತಿ ವರ್ಷ ಶೇ.೫ರ ಬೆಳವಣಿಗೆ ಕಾಣುತ್ತಿರುವ ಈ ಉದ್ಯಮ ಅಗಾಧ ಸಾಧ್ಯತೆಗಳಿಗೆ ತೆರೆದುಕೊಂಡಿದೆ.
ರಾಜ್ಯದಲ್ಲಿ ೨೦೦೫ರ ವೇಳೆಯಲ್ಲಿ ೭೦೦ ಹೋಮ್‌ಸ್ಟೇಗಳಿದ್ದವು ಎಂಬುದು ಒಂದು ಅಂದಾಜು. ಗೋಕರ್ಣದಂತಲ್ಲಿ ಅಲ್ಲಿನ ಭಟ್ಟರ ಮನೆಯಲ್ಲಿ ಪಾವತಿ ಮಾಡಿ ತಂಗುತ್ತಿದ್ದ ಭಕ್ತಾದಿಗಳ ಪರಂಪರೆಯನ್ನು ಕೂಡ ಈ ಯಾದಿಗೆ ಸೇರಿಸಬಹುದು! ಭಾರತದಲ್ಲಿ ಆಂತರಿಕ ಪ್ರವಾಸಿಗರ ಸಂಖ್ಯೆ ಶೇ.೧೭ರಷ್ಟು ವೃದ್ಧಿಸಿರುವುದು ಹಿತಾಸಕ್ತರಿಗೆ ಖುಷಿ ಕೊಡುವ ವಿಚಾರ.


ಬಾಹ್ಯ ಬಂಡವಾಳ, ಸ್ಥಳೀಯ ಆತಿಥ್ಯ!
ವಿಲೇಜ್ ವೇಸ್ ಎಂಬ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಹಣ ತೊಡಗಿಸಿ ಹೋಮ್ ಸ್ಟೇ ಉದ್ಯಮಕ್ಕೆ ಚಾಲನೆ ಕೊಡುವ ಮಾದರಿಯೊಂದನ್ನು ಅನುಸರಿಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಸಂಸ್ಥೆಯನ್ನು ಭಾರತ ಹಾಗೂ ಇಂಗ್ಲೆಂಡ್‌ನ ಪ್ರವಾಸಿ ತಜ್ಞರು ಸೇರಿ ಹಳ್ಳಿಗರ ಸಂಘಟನೆಗಳ ಸಹಕಾರದಿಂದ ಪ್ರವಾಸೋದ್ಯಮ ಅಭಿವೃದ್ಧಿಗೋಸ್ಕರ  ಹುಟ್ಟು ಹಾಕಿದ್ದಾರೆ. ಶಿರಸಿಯ ಹೂಳಗೋಳದಲ್ಲಿ ಸೌಹಾರ್ದ ಸಹಕಾರಿ ಎಂಬ ಸ್ಥಳೀಯ ವ್ಯವಸ್ಥೆಯಡಿ ೧೨ ಲಕ್ಷ ರೂ. ವೆಚ್ಚದಲ್ಲಿ ಹೋಮ್ ಸ್ಟೇ ಗೃಹ ನಿರ್ಮಿಸಿದೆ. ವಿದೇಶಿ ಪ್ರವಾಸಿಗರಿಂದ ದಿನವೊಂದಕ್ಕೆ ಲಭಿಸುವ ೮೦ ಡಾಲರ್‌ನಲ್ಲಿ ಸ್ಥಳೀಯ ನಿರ್ವಾಹಕರಿಗೆ ಕೂಡ ಶೇ.೨೫ಕ್ಕಿಂತ ಹೆಚ್ಚಿನ ಹಣ ಲಭಿಸುತ್ತದೆ ಮತ್ತು ನಿರ್ದಿಷ್ಟ ವರ್ಷಗಳ ನಂತರ ಆ ನಿರ್ಮಾಣ ಸ್ಥಳೀಯರ ಸುಪರ್ದಿಗೆ ಬರುವ ಯೋಜನೆಯಂತಹ ದೃಷ್ಟಾಂತ ಪ್ರವಾಸೋದ್ಯಮಕ್ಕೆ ಹೊಸ ನೆಲೆಗಟ್ಟನ್ನು ಒದಗಿಸಬಹುದು.
ಭಾರತ ಹಳ್ಳಿಗಳ ದೇಶ, ಪ್ರಕೃತಿ ಸಂಪತ್ತಿನ ನೆಲೆ ಎನ್ನುವುದನ್ನು ಪ್ರವಾಸೋದ್ಯಮದ ಮೂಲ ಆಧಾರವಾಗಿ ಬಳಸಬಹುದು ಎಂಬುದನ್ನು ಹೋಮ್ ಸ್ಟೇ ಮತ್ತೆ ಮತ್ತೆ ಹೇಳುತ್ತಿದೆ. ಕೃಷಿ ಬದುಕಿನ ಡೋಲಾಯಮಾನ ಆರ್ಥಿಕ ಸ್ಥಿತಿಗತಿಗೆ ಇದು ಸ್ವಲ್ಪಮಟ್ಟಿಗಾದರೂ ಉತ್ತರವಾಗಬಲ್ಲದು. ಸರ್ಕಾರ ಕೂಡ ಇದಕ್ಕೆ ಪೂರಕವಾದ ಕಾನೂನುಗಳನ್ನು ರಚಿಸುವ ಅಗತ್ಯವಿದೆ.
ಚೈನಾ, ಥೈಲ್ಯಾಂಡ್, ವಿಯೆಟ್ನಾಂ ಮೊದಲಾದ ದೇಶಗಳಲ್ಲಿ ಹೋಮ್ ಸ್ಟೇ ವ್ಯಾಪಾರ ಶೇ. ೧೪ರ ವೇಗದಲ್ಲಿ ಚಿಮ್ಮುತ್ತಿದೆ. ೨೦೧೫ರ ವೇಳೆಗೆ ಪ್ರತಿ ವರ್ಷ ಭಾರತೀಯರು ಇಂತಹ ಪ್ರವಾಸಗಳಿಗೆ ಇನ್ನೂ ೧.೨ ಮಿಲಿಯನ್ ಡಾಲರ್ ಹಣ ತೊಡಗಿಸುವ ಅಂದಾಜು ಮಾಡಲಾಗುತ್ತಿದೆಯೇ ವಿನಃ ಭಾರತೀಯ ಪ್ರವಾಸೋದ್ಯಮದ ವಿಸ್ತರಣೆಯ ಬಗ್ಗೆ ಗಂಭೀರ ಚಿಂತನೆ ನಡೆದಿಲ್ಲ, ದುರಂತ!!


-ಮಾವೆಂಸ
 
200812023996