ಮಂಗಳವಾರ, ಡಿಸೆಂಬರ್ 29, 2009

ಹೊಸಬರಲ್ಲೂ ಗೆಲುವಿನ ರಭಸ!


ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ಎರಡೇ ಪದಗಳ ವಾಕ್ಯದಲ್ಲಿ ವಿವರಿಸುವುದಾದರೆ, ‘ಅಧಿಕಾರಯುತ ಗೆಲುವು’ ಎನ್ನುವುದೇ ಸೂಕ್ತ. ಇನ್ನೂ ಒಂದು ಪಂದ್ಯ ಬಾಕಿಯಿದ್ದಾಗಲೇ ೩-೧ರ ಅಂತರದಲ್ಲಿ ಗೆದ್ದ ತಂಡ ಅಂತಹ ಪ್ರಶಂಸೆಗೆ ಅರ್ಹ. ಸ್ವಾರಸ್ಯವೆಂದರೆ, ಸರಣಿಯ ಪಂದ್ಯಗಳನ್ನು ಖುದ್ದು ನೋಡಿದವರಿಗೆ ಬೇರೆಯದೇ ಸತ್ಯ ಕಾಣುತ್ತದೆ. ಭಾರತಕ್ಕಿಂತ ಶ್ರೀಲಂಕಾ ಹೆಚ್ಚು ಕಳಪೆ ಆಟ ಆಡಿತು!
ಕ್ರಿಕೆಟ್‌ನಲ್ಲಿ ಥ್ರಿಲ್, ಖುಷಿ ಜೊತೆ ಕಾಮಿಡಿಯನ್ನು ಬೆರೆಸುವ ಪ್ರಯತ್ನ ಮಾಡಿದ್ದು ಭಾರತ. ಮೊತ್ತಮೊದಲ ರಾಜ್‌ಕೋಟ್ ಏಕದಿನ ಪಂದ್ಯದಲ್ಲಿ ೪೧೪ ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರೂ ಧುಸುಗುಡುತ್ತಲೇ ಗೆದ್ದದ್ದು ಬದಿಗಿರಿಸಿ. ಅವತ್ತು ಭಾರತೀಯರು ಮಾಡಿದ ಫೀಲ್ಡಿಂಗ್, ಬಿಟ್ಟ ಕ್ಯಾಚ್ ನಗೆ ತರಿಸಿತ್ತು. ಪಂದ್ಯ ಗೆದ್ದುದರಿಂದ ಟೀಕೆ ದಟ್ಟವಾಗಿರಲಿಲ್ಲ. ಮುಂದಿನ ಪಂದ್ಯದಲ್ಲಿ ಇದೇ ಹೀನಾಯ ಫೀಲ್ಡಿಂಗ್ ಕಾರಣದಿಂದಾಗಿ ಪಂದ್ಯ ಕೈಬಿಟ್ಟಿತು. ಆದರೆ ಅಷ್ಟರೊಳಗೆ ಭಾರತೀಯರು ಈ ರೋಗದ ಕೀಟಾಣುವನ್ನು ಲಂಕನ್‌ರಿಗೂ ದಾಟಿಸಿದ್ದರು. ನಾಲ್ಕನೇ ಕೊಲ್ಕತ್ತಾ ಪಂದ್ಯದ ವೇಳೆಗೆ ಸಿಂಹಳೀಯರು ನಮ್ಮವರನ್ನೇ ನಾಚಿಸುವಂತೆ ಕ್ಯಾಚ್ ಬಿಟ್ಟರು, ಮಿಸ್‌ಫೀಲ್ಡ್ ಮಾಡಿದರು. ಫಲಿತಾಂಶ - ನಮ್ಮೂರಿನ ವೀಕ್ಷಕರಿಗೆ ತಮಾಷೆಯ ಜೊತೆಗೆ ಗೆಲುವಿನ ಬೋನಸ್ ಸಿಕ್ಕಿತು.
ಮಹೇಂದ್ರ ಸಿಂಗ್ ಧೋನಿ ಅದೃಷ್ಟವಂತರೇ? ಈವರೆಗೆ ಇವರ ನಾಯಕತ್ವದಲ್ಲಿ ಆಡಿದ ಎಂಟು ದ್ವಿಪಕ್ಷೀಯ ಸರಣಿಗಳಲ್ಲಿ ಏಳು ಬಾರಿ ಭಾರತ ಸರಣಿ ಗೆದ್ದಿರುವ ಅಂಕಿಅಂಶವನ್ನು ಕಂಡಾಗ ಹೌದೆನ್ನಿಸುತ್ತದೆ. ಆದರೆ ಮೊನ್ನೆ ನಾಗ್ಪುರದಲ್ಲಿ ಭಾರತ ನಿಧಾನಗತಿಯ ಬೌಲಿಂಗ್ ಮಾಡಿತು ಎಂದು ಧೋನಿಯ ಮೇಲೆ ಎರಡು ಪಂದ್ಯದ ನಿಷೇಧದ ಶಿಕ್ಷೆ ಅದೃಷ್ಟ ಕೈಕೊಟ್ಟಿದ್ದನ್ನು ವಿವರಿಸುವಂತಿದೆ. ವಾಸ್ತವವಾಗಿ, ಐಸಿಸಿಯು ‘ನಿಧಾನಗತಿ ಬೌಲಿಂಗ್‌ಗೆ ವಿಧಿಸುವ ಶಿಕ್ಷೆಯನ್ನು ಮಾರ್ಪಡಿಸಿದೆ. ಒಂದು ತಂಡ ನಿಗದಿತ ಸಮಯದಲ್ಲಿ ಎರಡು ಓವರ್ ಕಡಿಮೆ ಬೌಲ್ ಮಾಡಿದರೆ ಅದನ್ನು ‘ಲಘು ಅಪರಾಧ’ವೆಂತಲೂ, ಇದನ್ನು ಮೀರಿದ್ದನ್ನು ‘ಗಂಭೀರ’ ಅಂತಲೂ ಪರಿಗಣಿಸಲಾರಂಭಿಸಿದೆ. ಅವತ್ತು ಧೋನಿ ಪಡೆ ನಿಗದಿತ ಸಮಯ ಮೀರಿ ಗಂಭೀರ ತಪ್ಪು ಮಾಡಿತ್ತು!
ಅದಲ್ಲ ವಿಷಯ, ಮೂರೂವರೆ ಘಂಟೆಗಳ ಸಮಯಾವಕಾಶದ ಎರಡು ಇನ್ನಿಂಗ್ಸ್ ಲೆಕ್ಕಾಚಾರ ಸರಿಹೋದೀತೆ? ಎರಡನೇ ಪಾಳಿಯಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಹಲವು ತಲೆಬಿಸಿ. ಉದಾಹರಣೆಗೆ ನಾಗ್ಪುರದಲ್ಲಿ ಭಾರತ ೪೨ನೇ ಓವರ್‌ವರೆಗೆ ಸಮಯ ನಿರ್ಬಂಧದ ಅನುಸೂಚಿ ಪ್ರಕಾರವೇ ನಡೆದಿತ್ತು. ಆದರೆ ಮುಂದಿನ ಎಂಟು ಓವರ್‌ಗೆ ಬರೋಬ್ಬರಿ ಒಂದು ಘಂಟೆಯನ್ನು ತೆಗೆದುಕೊಂಡಿತ್ತು. ಹಾಗಿದ್ದರೆ ತರಾತುರಿಯಲ್ಲಿ ಬೌಲಿಂಗ್ ಮಾಡಿ ಪಂದ್ಯದ ಸ್ಪರ್ಧಾತ್ಮಕತೆಯನ್ನು ಕಡಿಮೆ ಮಾಡಿದ್ದರೆ ಐಸಿಸಿ ರೆಫ್ರಿಯನ್ನು ಸಂತೃಪ್ತಗೊಳಿಸಬಹುದಿತ್ತು, ಆಟದ ಅಸಲಿ ಬಂಡವಾಳವಾದ ವೀಕ್ಷಕರಿಗೆ ನಷ್ಟ!
ಬದಲಾಗಬೇಕು, ಎರಡನೇ ಅವಧಿಯ ಫೀಲ್ಡಿಂಗ್ ನಾಯಕನಿಗೆ ಅರ್ಧ ಘಂಟೆಯ ಹೆಚ್ಚಿನ ಕಾಲಾವಕಾಶ ಬೇಕು ಎಂಬ ತರ್ಕ ಇದೀಗ ಜನಜನಿತವಾಗಿದೆ. ಅದೊಂದು ಅರ್ಥಪೂರ್ಣ ಚರ್ಚೆಯಾಗಬೇಕು. ಈ ಮಧ್ಯೆ ತೂಗು ಕತ್ತಿ ಧೋನಿ ತಲೆ ಮೇಲೆ ಮುಂದಿನ ೧೨ ತಿಂಗಳ ಅವಧಿಯುದ್ದಕ್ಕೂ ತೂಗುತ್ತಿರುತ್ತದೆ. ಈ ವೇಳೆ ಧೋನಿಯ ಗಂಭೀರ ಅಪರಾಧ ಮರುಕಳಿಸಿದರೆ ಎರಡರಿಂದ ಎಂಟು ಏಕದಿನ ಅಥವಾ ಒಂದರಿಂದ ನಾಲ್ಕು ಟೆಸ್ಟ್ ನಿಷೇಧದ ಶಿಕ್ಷೆ ಕಾದಿದೆ. ಅತ್ಯುತ್ತಮ ಫಾರಂನಲ್ಲಿದ್ದ, ಸರಣಿಯಲ್ಲಿ ಅದಾಗಲೇ ಎರಡೆರಡು ಶತಕ ಬಾರಿಸಿದ್ದ ಧೋನಿ ಅನುಪಸ್ಥಿತಿ ಎದ್ದು ಕಾಣಲಿಲ್ಲ ಎಂಬುದು ಭಾರತದ ಪುಣ್ಯ.
ಶ್ರೀಲಂಕಾದ ಪಾಪ ವಿಮೋಚನೆ ಆದಂತಿಲ್ಲ. ಆ ದೇಶಕ್ಕೆ ಭಾರತದಲ್ಲಿ ಟೆಸ್ಟ್ ಸರಣಿಯಲ್ಲಾಗಲಿ, ದ್ವಿಪಕ್ಷೀಯ ಏಕದಿನ ಟೂರ್ನಿಯನ್ನಾಗಲಿ ಒಮ್ಮೆಯೂ ಗೆಲ್ಲಲಾಗಿಲ್ಲ. ನೆಪ ಹೇಳಬಹುದು, ಮುತ್ತಯ್ಯ ಮುರುಳೀಧರನ್, ಅಂಜೆಲೋ ಮ್ಯಾಥ್ಯೂಸ್, ತಿಲಾನ್ ತುಷಾರ, ಚನಕ ವೆಲ್ಲವೇಂದ್ರ ಮುಂತಾದ ಆಟಗಾರರ ಅಲಭ್ಯತೆ ಫಲಿತಾಂಶದಲ್ಲಿ ಪ್ರತಿಫಲಿಸಿದೆ ಎಂದು. ಆ ಲೆಕ್ಕದಲ್ಲಿ ಭಾರತದ್ದೂ ಅದೇ ಕತೆ. ಧೋನಿ ‘ಫಿಟ್’ ಆಗಿದ್ದೂ ಎರಡು ಪಂದ್ಯ ಕಳೆದುಕೊಂಡರೆ ಯುವರಾಜ್ ಸಿಂಗ್ ಇತ್ತೀಚೆಗೆ ಆಡಿದ್ದಕ್ಕಿಂತ ಪೆವಿಲಿಯನ್‌ನಲ್ಲಿ ಗಾಯಗೊಂಡ ಬೆರಳು ತೋರಿಸಿದ್ದೇ ಜಾಸ್ತಿ. ಈ ಪಟ್ಟಿಯಲ್ಲಿ ಶ್ರೀಶಾಂತ್‌ರನ್ನು ಸಹ ಸೇರಿಸಬಹುದು. ಪ್ರಬಲ ಬ್ಯಾಟಿಂಗ್ ಪಟುಗಳೊಂದಿಗೆ ಬಂದ ಶ್ರೀಲಂಕಾ ಬೌಲಿಂಗ್ ವಿಭಾಗದಲ್ಲಿ ಮುಗ್ಗರಿಸಿದ್ದು ನಿಜ.
ಸರಣಿಯುದ್ದಕ್ಕೂ ಬೌಲರ್‌ಗಳನ್ನು ಗೋಳು ಹೊಯ್ದುಕೊಳ್ಳುವ ಪಿಚ್‌ನಲ್ಲಿ ರವೀಂದ್ರ ಜಡೇಜಾ ಎಂಬ ಬೌಲರ್ ಮಿಂಚಿದ್ದು ಉಲ್ಲೇಖಾರ್ಹ. ಕಟಕ್ ಪಿಚ್ ಕೂಡ ಬ್ಯಾಟಿಂಗ್ ಪ್ರೇಮಿಯೇ. ಅಂತಲ್ಲಿ ಜಡೇಜಾ ೩೨ ರನ್‌ಗೆ ನಾಲ್ಕು ವಿಕೆಟ್ ಕಬಳಿಸಿದ್ದು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಲು ಸಾಕಾಯಿತು. ಇಡೀ ಸರಣಿಯಲ್ಲಿ ಜಡೆಜಾ ಬಿಗಿ ಬೌಲಿಂಗ್‌ಗೆ ಹೆಸರು ಪಡೆದರು. ನಾಲ್ಕನೇ ಪಂದ್ಯದ ಅಂತ್ಯಕ್ಕೆ ಜಡೇಜಾ ಓವರ್ ಒಂದಕ್ಕೆ ನೀಡಿದ್ದು ೫.೪೭ ರನ್ ಮಾತ್ರ. ನೆನಪಿರಲಿ, ಇನ್ನುಳಿದಂತೆ ಎರಡು ದೇಶಗಳ ಪ್ರಮುಖ ಬೌಲರ್‌ಗಳು ಆರಕ್ಕಿಂತ ಹೆಚ್ಚಿನ ರನ್ ನೀಡಿದ್ದರು!
ಭಾರತದ ಮಟ್ಟಿಗೆ ಸರಣಿ ಗೆಲುವಿನ ಹೊರತಾಗಿ ಹಲವು ಗಳಿಕೆಗಳಿವೆ. ವಿರಾಟ್ ಕೊಹ್ಲಿ ಧೋನಿ - ಯುವಿ ಕೊರತೆಯನ್ನು ಮರೆಯುವಂತೆ ಬ್ಯಾಟ್ ಮಾಡಿದ್ದು, ಹರ್‌ಭಜನ್ ಕುಂಬ್ಳೆಯವರನ್ನು ನೆನಪಿಸುವಂತೆ ಬಿಗ್ಗಬಿಗಿ ಬೌಲಿಂಗ್ ಮಾಡುವುದನ್ನು ಮತ್ತೆ ಕಂಡುಕೊಂಡಿದ್ದು, ಇರಿಸುಮುರಿಸಾದವರಂತೆ ಕಂಡರೂ ಗೌತಮ್ ಗಂಭೀರ್ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ನೆಲೆ ಕಂಡುಕೊಳ್ಳುತ್ತಿರುವುದು.... ಇವೆಲ್ಲವುದರ ಪರಿಣಾಮ ನಾಳೆ ಬಾಂಗ್ಲಾದಲ್ಲೂ ಕಂಡರೆ ಚೆನ್ನ. ಏತಕ್ಕಪ್ಪಾಂದ್ರೆ, ಈ ದಿನಗಳಲ್ಲಿ ತ್ರಿಕೋನ ಅಥವಾ ಬಹುತಂಡಗಳ ಟೂರ್ನಿಗಳಲ್ಲಿ ಭಾರತ ಎಡವುತ್ತಲೇ ಬಂದಿದೆ ಮತ್ತು ಬಾಂಗ್ಲಾದಲ್ಲಿ ನಡೆಯುವುದು ಶ್ರೀಲಂಕಾವನ್ನೂ ಒಳಗೊಂಡ ತ್ರಿಕೋನ ಸರಣಿ!
-ಮಾವೆಂಸ

 
200812023996