ಐಪಿಎಲ್ ಎರಡನೇ ವಾರ
ಮಾಂಗೂಸ್ ಬ್ಯಾಟ್, ಟೈಮ್ ಔಟ್,,,,ಇತ್ಯಾದಿ!

ವಾಸ್ತವವಾಗಿ, ಟ್ವೆಂಟಿ ೨೦ ಯುವಕರ ಆಟ ಎಂತಲೇ ಬಿಂಬಿಸಲಾಗಿತ್ತು. ಸತ್ಯ ಬೇರೆ, ತಾಂತ್ರಿಕವಾಗಿ ಶಸ್ತ್ರ ಸಜ್ಜಿತರಾದ ಟೆಸ್ಟ್ ಪರಿಣತರಿಗೆ ೨೦ ಸಲೀಸು ಪಂದ್ಯ. ಇಲ್ಲಿ ಪಿಚ್ನಲ್ಲಿ ಸವಾಲು ಎನಿಸುವಂತ ‘ಅಂಶ’ ಇರುವುದಿಲ್ಲ. ಮೈದಾನದಲ್ಲಿ ಚೆಂಡು ರಭಸದಿಂದ ಧಾವಿಸುವ ಬೋನಸ್ ಇರುವುದರಿಂದ ಶಕ್ತಿ ವಿಪರೀತ ಬೇಡ. ಬೌಂಡರಿ ಗೆರೆ ಇಲ್ಲಿ ಸಾಕಷ್ಟು ಹತ್ತಿರ. ಅಂದರೆ ಫೀಲ್ಡರ್ಗಳ ನಡುವೆ, ಅಪರೂಪಕ್ಕೊಮ್ಮೆ ಆತನ ತಲೆ ಮೇಲೆ ಚೆಂಡು ಬಾರಿಸುವ ತಾಕತ್ತು, ಧೈರ್ಯ ಇದ್ದರೆ ಆಯಿತು. ಇವತ್ತು ಸಚಿನ್ರ ಯಶಸ್ಸಿನ ಹಿಂದೆ ಇರುವುದೂ ಇದೇ ಸೂತ್ರ.

ಮೊನ್ನೆ ಮೊನ್ನೆ ಸಾಂಪ್ರದಾಯಿಕ ಬ್ಯಾಟ್ನ್ನು ಪೆವಿಲಿಯನ್ಗೆ ವಾಪಾಸು ಕಳುಹಿಸಿ ಮಾಂಗೂಸ್ ಹಿಡಿದ ಹೇಡನ್ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಪಟಪಟನೆ ಮೂರು ಬೌಂಡರಿ ಬಾರಿಸಿದ್ದನ್ನು ನೊಡಿಬಿಟ್ಟಿದ್ದೇವೆ. ಇದು ಐಪಿಎಲ್ನಲ್ಲಿ ಮಾಂಗೂಸ್ ಬಳಕೆಯಾದ ಪ್ರಪ್ರಥಮ ನಿದರ್ಶನ. ಇದು ನಮ್ಮ ಭ್ರಮೆಗಳನ್ನು ಹೆಚ್ಚಿಸಿಬಿಟ್ಟಿದೆ!


ಕಳೆದ ಆವೃತ್ತಿಯಲ್ಲಿಯೇ ಜಾರಿಗೆ ಬಂದಿದ್ದ ‘ಸ್ಟ್ರಾಟೆಜಿಕ್ ಟೈಂ ಔಟ್’ ಅತೀವ ಟೀಕೆಗೊಳಗಾದ ಐಪಿಎಲ್ ತಂತ್ರ. ಇದು ಐಪಿಎಲ್ನ ಸಂಚಾಲಕ ಲಲಿತ್ ಮೋದಿಯವರ ಮೆದುಳಿನ ಕೂಸು. ಕಳೆದ ಬಾರಿ ಹತ್ತನೇ ಓವರ್ ನಂತರ ತೆಗೆದುಕೊಳ್ಳುತ್ತಿದ್ದ ಕಡ್ಡಾಯ ಐದು ನಿಮಿಷಗಳ ಟೈಂ ಔಟ್ ನಿಯಮವನ್ನು ಈಗ ಬದಲಿಸಲಾಗಿದೆ.
ಆರನೇ ಓವರ್ನಿಂದ ಎಂಟನೇ ಓವರ್ನ ಕೊನೆವರೆಗೆ ಬ್ಯಾಟಿಂಗ್ ತಂಡ ಹಾಗೂ ೧೧ರಿಂದ ೧೬ನೇ ಓವರ್ ನಡುವೆ ಫೀಲ್ಡಿಂಗ್ ಪಡೆ ಟೈಂ ಔಟ್ ತೆಗೆದುಕೊಳ್ಳುವ ಅವಕಾಶ. ಬಾಕಿಯಾದಲ್ಲಿ ಎಂಟು ಮತ್ತು ಹದಿನಾರನೇ ಓವರ್ ಅಂತ್ಯಕ್ಕೆ ಕಡ್ಡಾಯವಾಗಿ ಅಂಪೈರ್ಗಳು ಎರಡೂವರೆ ನಿಮಿಷಗಳ ಟೈಂ ಔಟ್ ಘೋಷಿಸುತ್ತಾರೆ.
ಉಹ್ಞೂ, ಯಾವುದೇ ತಂಡ ಹಾರ್ದಿಕವಾಗಿ ಟೈಂ ಔಟ್ನ್ನು ಬಯಸುವುದನ್ನು ಕಾಣುತ್ತಿಲ್ಲ. ಇದು ಅಕ್ಷರಶಃ ಟಿವಿ ರೈಟ್ಸ್ ಕೊಂಡವರ ಹಿತಾಸಕ್ತಿ ಕಾಯುವ ಕಾಯಕ. ೧೦ ಸೆಕೆಂಡ್ಗಳ ಕಾಲಾವಧಿಗೆ ಸರಿಸುಮಾರು ಎರಡು ಲಕ್ಷದ ಸ್ಲಾಟ್ ಬೆಲೆ ಇರುವಾಗ ಬರೀ ಹತ್ತು ನಿಮಿಷದ ಟೈಂ ಔಟ್ನಿಂದಲೇ ಪಂದ್ಯವೊಂದರಲ್ಲಿ ಸೆಟ್ಮ್ಯಾಕ್ಸ್ಗೆ ಆದಾಯ ಕನಿಷ್ಟ ಒಂದೂಕಾಲು ಕೋಟಿ! ಈಗಂತೂ ಓವರ್ಗಳ ಮಧ್ಯೆಯೇ ಜಾಹೀರಾತು ತೂರಬಲ್ಲ ಚಾಣಾಕ್ಷತೆ ಮೆರೆಯುವ ಟಿವಿ ಮಾಧ್ಯಮದ ಗಳಿಕೆಯ ಸೂತ್ರಕ್ಕೆ ಲಲಿತ್ ಮೋದಿ ತಾಳ ಹಾಕಲೇಬೇಕಾದ ಒತ್ತಡವಿದೆ.
ಕೊನೆಮಾತು - ಐಪಿಎಲ್ ತಂಡಗಳ ಆಟಗಾರರು ಒಂದು ರೀತಿಯಲ್ಲಿ ಜಾಹೀರಾತು ಹೋರ್ಡಿಂಗ್ಗಳಂತೆ ಕಾಣುತ್ತಾರಲ್ಲವೇ? ನೀವೇ ನೋಡಿ, ಅವರ ಅಂಗಿಯ ತೋಳು, ಬೆನ್ನು, ಎದೆ ಭಾಗಗಳಲ್ಲಿ ವಿವಿಧ ಪ್ರಾಯೋಜಕರ ಸ್ಟಿಕ್ಕರ್ಗಳು. ಹೆಲ್ಮೆಟ್ ನೋಡಿದರೆ ಅಲ್ಲಿಯೂ ಅವೇ. ಪ್ಯಾಂಟ್ ನೋಡಿದರೆ ಅಲ್ಲೂ. ಬ್ಯಾಟ್ ಮುಖದಲ್ಲಂತೂ ಕೇಳುವುದೇ ಬೇಡ. ಅಂದರೆ ಆಟಗಾರರಿಗೆ ಅವರ ಒಳಚೆಡ್ಡಿ ಮಾತ್ರ ಸ್ವಂತ! ಈ ಮಾತನ್ನು ತುಸು ವಿಷಾಧದಿಂದಲೇ ಹೇಳಬೇಕಾಗಿದೆ.
ಹೇಳಲು ಮರೆತಿದ್ದು, ಐಪಿಎಲ್ ಮುಖ್ಯಸ್ಥ ಲಲಿತ್ ಇನ್ನಷ್ಟು ಜಾಹೀರಾತು ಪ್ರಚಾರ ಮಾರ್ಗಗಳನ್ನು ಹುಡುಕಲು ಖುದ್ದು ತಮ್ಮ ನೇತೃತ್ವದಲ್ಲಿ ಉಪಸಮಿತಿಯನ್ನು ರಚಿಸಿದ್ದಾರೆ ಎನ್ನುವುದು ಮಾತ್ರ ನಿಜಕ್ಕೂ ಸುಳ್ಳು ಸುದ್ದಿ!!
-ಮಾವೆಂಸ