
ಐಪಿಎಲ್ ಹಿನ್ನೋಟ
ಒಂದು ಸಿನೆಮಾದಲ್ಲಿ ೧೬ ರೀಲ್ಗಳಿರುತ್ತವೆ ಎಂದರೆ ಒಂದೊಂದು ರೀಲ್ನಲ್ಲಿ ಹೀರೋ, ವಿಲನ್ ಪಾತ್ರಗಳನ್ನು ಒಬ್ಬನೇ ಅಭಿನಯಿಸಿದಂತ ವಿಚಿತ್ರ ಘಟನಾವಳಿಗಳಿಗೆ ಸಾಕ್ಷಿಯಾದದ್ದು ಸೌರವ್ ಗಂಗೂಲಿಯವರ ಕ್ರಿಕೆಟ್ ಕ್ಯಾರಿಯರ್. ಆಸ್ಟ್ರೇಲಿಯಾದಲ್ಲಿ ಏಕದಿನ ಪಾದಾರ್ಪಣೆಯ ವೈಫಲ್ಯದ ನಂತರ ೧೨ನೇ ಆಟಗಾರನಾಗಿ ನೀರು ಒಯ್ಯಲು ಒಲ್ಲೆ ಎಂದ ಮಹಾರಾಜರಿವರು. ಇಂಗ್ಲೆಂಡ್ನ ಲಾರ್ಡ್ಸ್ನಲ್ಲಿ ಚೊಚ್ಚಲ ಟೆಸ್ಟ್ನಲ್ಲಿಯೇ ಶತಕ, ಬೆನ್ನ ಹಿಂದೆ ಇನ್ನೊಂದು ಶತಕ ಬಾರಿಸಿ ಸೌರವ್ ಹೀರೋ ಆದರು. ಭಾರತದ ಯಶಸ್ವಿ ನಾಯಕರಾಗಿ, ಅತ್ಯುತ್ತಮ ಏಕದಿನ ಓಪನರ್ ಆಗಿ ಸೌರವ್ ತೆಂಡೂಲ್ಕರ್ರನ್ನು ಮೀರಿ ಮಿಂಚಿದ್ದು ಒಂದೆಡೆಯಾದರೆ, ಅಂಗಿ ಬಿಚ್ಚಿ ಲಾರ್ಡ್ಸ್ ಬಾಲ್ಕನಿಯಲ್ಲಿ ಮೆರೆದಿದ್ದು, ಸ್ಟೀವ್ ವಾರನ್ನು ಟಾಸ್ಗೆ ಬಾರದೆ ಸತಾಯಿಸಿದ್ದು, ಕೊನೆಗೆ ಕೋಚ್ ಗ್ರೇಗ್ ಚಾಪೆಲ್ ಜೊತೆ ರಾದ್ಧಾಂತ.... ಗಂಗೂಲಿ ಕ್ಯಾರಿಯರ್ನ ಅಂತ್ಯಕ್ಕೆ ಮತ್ತೆ ವಿಲನ್ ಗೆಟಪ್!
ಈ ವರ್ಷದ ಐಪಿಎಲ್ನ ಆರಂಭಕ್ಕೆ ಮುನ್ನವೇ ತಲೆಕೆಟ್ಟ ಕೋಚ್ ಜಾನ್ ಬುಚನನ್ ಪಂದ್ಯಕ್ಕೊಬ್ಬ ನಾಯಕನ ನೇಮಕದ ಯೋಜನೆ ತಂದರು. ಅಲ್ಲಿಗೆ ಸೌರವ್ ಗಂಗೂಲಿಯ ನೈಟ್ ರೈಡರ್ಸ್ ನಾಯಕತ್ವ ಹೋಯಿತು. ಮಾಲಿಕ ಶಾರುಖ್ ಖಾನ್ ಅದೇನೋ ರಾಜಿ ಮಾಡಿದರು. ಕೊನೆಪಕ್ಷ ಗಂಗೂಲಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಖಾಯಂ ಆಯಿತು. ನಾಯಕ ಪಟ್ಟ ಕರಗಿತು!
ಈಗ ಹಿಂತಿರುಗಿ ನೋಡಿದರೆ, ಗಂಗೂಲಿಗೆ ಟ್ವೆಂಟಿ ೨೦ ಬೇಕಿತ್ತೇ ಎನ್ನಿಸುತ್ತದೆ. ಒಂದು ಕಾಲದಲ್ಲಿ ಮೆರೆದ ಬ್ಯಾಟ್ಸ್ಮನ್ ಮೊನ್ನೆ ದಕ್ಷಿಣ ಆಫ್ರಿಕಾದ ಪಿಚ್ನಲ್ಲಿ ತಡಕಾಡಿದ್ದು ನೋಡಿದಾಗ ಮತ್ತು ಎದುರಾಳಿ ಬೌಲರ್ಗಳು ಅದನ್ನು ಹುಸಿನಗೆಯಿಂದ ಅನುಭವಿಸುವುದನ್ನು ಕಂಡಾಗ ತಾನೇತಾನಾಗಿ ಉದ್ಗರಿಸಬೇಕಾಗುತ್ತದೆ, ಛೇ!
ಈ ಬಾರಿಯ ಪ್ರೀಮಿಯರ್ ಲೀಗ್ನಲ್ಲಿನ ಗಂಗೂಲಿ ಆಟವನ್ನು ಅಂಕಿಅಂಶಗಳಲ್ಲಿ ಪರಿಶೀಲಿಸಿ. ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ರನ್ ಗಳಿಸಲು ಆಡಿದ್ದು ೧೨ ಬಾಲ್. ಎರಡು ಓವರ್ಗೆ ಒಂದು ರನ್! ಅವರದೇ ಇನ್ನೊಂದು ಮುಖಾಮುಖಿಯಲ್ಲಿ ೪೪ ರನ್ ಗಳಿಸಿದರೂ ಆಡಿದ್ದು ಬರೋಬ್ಬರಿ ೪೫ ಎಸೆತ. ಬೆಂಗಳೂರು ಎದುರು ಒಂದು ರನ್ನಿಗೆ ಖರ್ಚು ಮಾಡಿದ್ದು ಎಂಟು ಚೆಂಡು. ಇನ್ನೊಮ್ಮೆ ೬ ಚೆಂಡಿಗೆ ೪ ರನ್. ಹೈದರಾಬಾದ್ ಎದುರು ೪೧ ಚೆಂಡಿಗೆ ಏದುಸಿರಿನ ೩೩ ರನ್. ಚೆನ್ನೈ ಎದುರು ೧೪ ಎಸೆತಕ್ಕೆ ನಾಲ್ಕು ರನ್ ಮಾತ್ರ. ರಾಜಾಸ್ತಾನ ಪಂದ್ಯದಲ್ಲಿ ಮೂರು ಚೆಂಡಿಗೆ ಶೂನ್ಯ ಸಂಪಾದನೆ. ವಾಸ್ತವವಾಗಿ, ೧೩ ಪಂದ್ಯ ೧೧ ಇನ್ನಿಂಗ್ಸ್, ೧೮೯ ರನ್, ಸರಾಸರಿ ೧೭.೧೮ ಎಂದು ಹೇಳಿಬಿಡಬಹುದಾದರೂ ಸೌರವ್ ಬ್ಯಾಟಿಂಗ್ನಲ್ಲಿ ಚೆಂಡನ್ನು ಬಾರಿಸಲು ತಡಕಾಡುತ್ತಿದ್ದುದು ಎದುರಾಳಿಗಳಿಗೆ ಮನರಂಜನೆ, ಅಭಿಮಾನಿಗಳಿಗೆ ಹಿಂಸೆ! ಎದುರಾಳಿ ಕೋಚ್ಗಳು ಸೌರವ್ನನ್ನು ಔಟ್ ಮಾಡಿಸದೆ ಇರಲು ಎಂತಹ ಎಸೆತ ಹಾಕಬೇಕು ಎಂಬ ಸೂಚನೆಯನ್ನು ಬೌಲರ್ಗೆ ನೀಡುತ್ತಿದ್ದರಂತೆ!
ಏಕದಿನ ಕ್ರಿಕೆಟ್ನಲ್ಲಿ ಅಂದು ಸ್ಪಿನ್ನರ್ಗಳಿಗೆ ಕ್ರೀಸ್ನಿಂದ ಹೊರಬಂದರೆ ಸಿಕ್ಸ್ ಖಚಿತ ಎಂಬ ಖ್ಯಾತಿ ಪಡೆದಿದ್ದ ಸೌರವ್ ಇಡೀ ಐಪಿಎಲ್ನಲ್ಲಿ ಬಾರಿಸಿದ್ದು ಆರು ಸಿಕ್ಸರ್ ಮಾತ್ರ. ಬಾಲಂಗೋಚಿಗಳೂ ನೂರರ ಆಚೆಗೇ ಪ್ರತಿಶತ ಚೆಂಡಿಗೆ ರನ್ ಹೊಡೆಯುವಾಗ ಸೌರವ್ ೯೧.೩೦ಕ್ಕೇ ಸುಸ್ತಾಗಿದ್ದರು. ಒಂದೆರಡು ಪಂದ್ಯದಲ್ಲಿ ಅನುಕ್ರಮವಾಗಿ ಬ್ಯಾಟಿಂಗ್, ಬೌಲಿಂಗ್ನಲ್ಲಿ ಕ್ಲಿಕ್ ಆಗಿದ್ದು ಬಿಟ್ಟರೆ ಸೌರವ್ ಸ್ಥಿತಿ ಹೀನಾಯವೇ ಸರಿ. "ಸೌರವ್, ಐಕಾನ್ ಪ್ಲೇಯರ್ ಗೌರವದ ನೀವು ಇನ್ನೊಮ್ಮೆ ಐಪಿಎಲ್ನಲ್ಲಿ ಆಡದಿರಿ. ಅದರ ದುಡ್ಡಿನ ಆಮಿಷಕ್ಕೆ ಧಿಕ್ಕಾರ ಹೇಳಿ. ಪ್ಲೀಸ್.... ಪ್ಲೀಸ್......"
ದೃಢಕಾಯ ವ್ಯಕ್ತಿಯ ಒಡನಾಡಿದವರು ಆತ ಕಾಯಿಲೆಗೆ ತುತ್ತಾಗಿ ಚಕ್ಕಳ ಮಕ್ಕಳವಾಗಿ ಸಾವಿನಂಚಿಗೆ ಬಂದಾಗ ಆ ದೃಶ್ಯವನ್ನು ನೋಡದಿರಲು ಬಯಸುವುದುಂಟು. ಕಣ್ಣ ಮುಂದೆ ಆ ಒಳ್ಳೆಯ ಚಿತ್ರವೇ ಅಜರಾಮರವಾಗಿರಲಿ ಎಂದು. ವಿ.ವಿ.ಎಸ್.ಲಕ್ಷ್ಮಣ್ರ ಬಗ್ಗೆ ಬರೆಯಬೇಕೆಂದಾಗ ನೆನಪಾಗುವುದೇ ಇದು. ಲಕ್ಷ್ಮಣ್ ಅರ್ಥಮಾಡಿಕೊಳ್ಳಬೇಕಿತ್ತು. ಟ್ವೆಂಟಿ ೨೦, ಕೊನೆಗೆ ಏಕದಿನಗಳೆರಡೂ ಅವರ ಊಟದ ತಟ್ಟೆಯಲ್ಲ. ಹಿಂದಿನ ಬಾರಿಯೂ ತಂಡದ ಅಷ್ಟೂ ಪಂದ್ಯವಾಡದ ಲಕ್ಷ್ಮಣ್ ಈ ವರ್ಷ ಆಡಿದ್ದು ಬರೇ ಐದು ಪಂದ್ಯ. ಆ ಐದು ಇನ್ನಿಂಗ್ಸ್ನಲ್ಲಿ ಗಳಿಸಿದ್ದು ಕೇವಲ ೧೯ ರನ್! ೧೦ ಗರಿಷ್ಠ. ಸರಾಸರಿ ೩.೮೦ ೧೦೦ ಚೆಂಡಿಗೆ ೫೭ ರನ್ ರೀತಿಯ ವೇಗ. ಅವರೆದುರಿಸಿದ ಎರಡೇ ಎಸೆತ ಬೌಂಡರಿಗೆ, ಸಿಕ್ಸರ್ಗೆ ಹೋಗಿದ್ದು. ಇದೇ ಲಕ್ಷ್ಮಣ್ ಆಸ್ಟ್ರೇಲಿಯಾದ ಹೆಗ್ಗಳಿಕೆಗಳನ್ನು ಮುರಿಯುವಂತ ಇನ್ನಿಂಗ್ಸ್ ಆಡಿ ಭಾರತೀಯನ ಕ್ರಿಕೆಟ್ನ ಪುನರುತ್ಥಾನಕ್ಕೆ ಕಾರಣವಾದದ್ದನ್ನು ಮರೆಯುವುದುಂಟೇ?
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅನಿಲ್ ಕುಂಬ್ಳೆ, ಹೇಡನ್, ಜಾಕ್ ಕಾಲಿಸ್, ಆಡಂ ಗಿಲ್ಕ್ರಿಸ್ಟ್, ತೆಂಡೂಲ್ಕರ್ರಂತಹ ಹಿರಿಯರು ಮಿಂಚಿದರೇನೋ ಸತ್ಯ. ಆದರೆ ಹಿರಿಯರಿಗೆ ಅವಮಾನ ಆಗಿರುವುದೂ ಅಷ್ಟೇ ಖಚಿತ. ಕಳೆದ ವರ್ಷ ಆಡಿದ ೧೪ ಪಂದ್ಯಗಳಲ್ಲಿ ೧೨ ವಿಕೆಟ್ ಪಡೆದಿದ್ದ, ಓವರ್ಗೆ ಬರೀ ೬.೬೧ ರನ್ (ಅದು ಭಾರತದ ಪಿಚ್ನಲ್ಲಿ ಎಂಬ ನೆನಪಿರಲಿ) ನೀಡಿದ್ದ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್ರಿಗೆ ದೆಹಲಿಯ ಡೇರ್ ಡೆವಿಲ್ಸ್ ಒಂದೇ ಒಂದು ಪಂದ್ಯವಾಡಲು ಅವಕಾಶ ನೀಡಲಿಲ್ಲ. ನ್ಯೂಜಿಲ್ಯಾಂಡ್ನ ನಾಯಕ ಡೇನಿಯಲ್ ವೆಟ್ಟೋರಿಯವರ ನಿಯಂತ್ರಿತ ಬೌಲಿಂಗ್ ಟ್ವೆಂಟಿ ೨೦ಗೆ ಹೇಳಿಮಾಡಿಸಿದಂತಿತ್ತು. ಆದರೂ ಅವರು ಈ ಬಾರಿ ಆಡಿದ್ದು ಏಳು ಪಂದ್ಯದಲ್ಲಿ ಮಾತ್ರ. ಇನ್ನರ್ಧ ವೇಳೆ ಡಗ್ಔಟ್ನ ಬೆಂಚು ಕಾಯಿಸಿದ್ದೇ ಬಂತು!
ಗ್ಲೆನ್ ಮೆಗ್ರಾತ್ ಬೇಸರಗೊಂಡು ಬರುವ ವರ್ಷ ಐಪಿಎಲ್ಗೆ ಮರಳುವುದಿಲ್ಲ ಎಂದು ಧ್ವನಿಸಿದ್ದು ಸುದ್ದಿಯಾಗಿತ್ತು. ಒಂದೇ ದಿನದಲ್ಲಿ ಅವರ ಹೇಳಿಕೆ ಬದಲಾಗಿತ್ತು. ತಣ್ಣಗೆ ಕೂತರೂ ಒಪ್ಪಂದದ ಭಾರೀ ಹಣದ ಚೆಕ್ ಕೈಸೇರುತ್ತದಲ್ಲ! ಮೆಗ್ರಾತ್ ತಮ್ಮ ಹೇಳಿಕೆಯನ್ನೇ ಅಲ್ಲಗಳೆದರು. ಗೌರವ ಬೇಕು ಎಂದವರು ಯರು? ಎಲ್ಲಾ ಕುರುಡು ಕಾಂಚಾಣದ ಮಹಿಮೆ, ಅಬ್ಬಾ!
ಅಂದರೆ ಬರುವ ವರ್ಷವೂ ಸೌರವ್ ಗಂಗೂಲಿ, ಲಕ್ಷ್ಮಣ್, ವೆಟ್ಟೋರಿಗಳು ಆಡಿದರೆ ಅಚ್ಚರಿಯಿಲ್ಲ!!
-ಮಾವೆಂಸ