ಶುಕ್ರವಾರ, ಸೆಪ್ಟೆಂಬರ್ 4, 2009

ಗ್ರಾಹಕ ನ್ಯಾಯಾಲಯದ ಮಾಹಿತಿ ಬೇಕೆ?

ಕ್ಲಿಕ್ ಮಾಡಿದರೆ ಸಾಕು...........

ಯಾವುದೊ ಅಂಗಡಿ ಅಥವಾ ಕಂಪನಿ ಮೇಲೆ ಗ್ರಾಹಕ ನ್ಯಾಯಾಲಯದಲ್ಲಿ ಕೇಸು ಹಾಕಿದ್ದೀರಿ. ಅದರ ವಿಚಾರ ತಿಳಿಯಬೇಕು-ಹಿಯರಿಂಗ್ ಯಾವಾಗ ಇದೆ ಅಥವಾ ತೀರ್ಪು ಬಂದಿದೆಯೆ ಇತ್ಯಾದಿ ಅತ್ಯಗತ್ಯ ಮಾಹಿತಿ ಗೊತ್ತಾಗಬೇಕು. ಈಗ ಇದಕ್ಕಾಗಿ ಇರುವ ಒಂದೇ ದಾರಿ ನ್ಯಾಯಾಲಯಕ್ಕೇ ಹೋಗಿ ವಿಚಾರಿಸಬೇಕು. ಜಿಲ್ಲಾ ಕೇಂದ್ರದಲ್ಲಿದ್ದರೆ ಸರಿ, ದೂರದ ಊರಿನವರಾದರೆ? ದುಡ್ಡು-ಸಮಯ ವೆಚ್ಚ ಮಾಡಿ ತಿರುಗಬೇಕಾಗುತ್ತದೆ.
ಆದರೆ ಇನ್ನು ಮುಂದೆ ಅಂತಹ ತಾಪತ್ರಯದ ಅಗತ್ಯವಿಲ್ಲ. ನಿಮ್ಮಲ್ಲಿ ಇಂಟರ್‌ನೆಟ್ ಸಂಪರ್ಕ ಇರುವ ಕಂಪ್ಯೂಟರ್ ಇದ್ದರೆ ಸರಿ. ಇಲ್ಲವೆಂದರೆ ಹತ್ತಿಪ್ಪತ್ತು ರೂಪಾಯಿ ಖರ್ಚು ಮಾಡಿ ಒಂದು ಇಂಟರ್‌ನೆಟ್ ಕೆಫೆಗೆ ಹೊಕ್ಕಿದರೆ ಹತ್ತು ನಿಮಿಷದಲ್ಲೇ ಮೇಲಿನ ಮಾಹಿತಿಯೆಲ್ಲ ಸಿಗುತ್ತದೆ. ಅಂತಹದೊಂದು ಗ್ರಾಹಕ-ಸ್ನೇಹಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ರೂಪಿಸಿ ಜಾರಿಗೆ ತಂದಿದೆ.
CONFONET ಎಂದು ಕರೆಯುವ ಈ ವ್ಯವಸ್ಥೆಯಡಿ ರಾಜ್ಯದ ಎಲ್ಲಾ ೩೦ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗಳನ್ನು ಮತ್ತು ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವನ್ನು ಕಂಪ್ಯೂಟರೀಕರಣಗೊಳಿಸಿ ಅಂತರ್ ಜಾಲಕ್ಕೆ ಸೇರಿಸಲಾಗುತ್ತಿದೆ. ಈ ಯೋಜನೆಗೆ ಭಾರತ ಸರ್ಕಾರದ ಬಿಎಸ್‌ಎಸ್‌ಎಲ್ ಮತ್ತು ನ್ಯಾಶನಲ್ ಇನ್ವರ್ಫಾಟಿಕ್ ಸೆಂಟರ್ ಸಂಸ್ಥೆಗಳು ಸಹಕಾರ ನೀಡುತ್ತಿವೆ.
ಇದರಿಂದ ಗ್ರಾಹಕ ನ್ಯಾಯಾಧಿಕರಣಗಳಲ್ಲಿ ಈ- ಆಡಳಿತ ಅನುಷ್ಠಾನಗೊಳ್ಳುತ್ತದೆ. ಅಲ್ಲದೆ ಅವುಗಳ ಕೆಲಸ-ಕಾರ‍್ಯದಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಇದರಂತೆ ಪ್ರತಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ೩ ಕಂಪ್ಯೂಟರ್‌ಗಳನ್ನು ಕೊಟ್ಟು ಅವಕ್ಕೆ ಬ್ರಾಡ್‌ಬ್ಯಾಂಡ್ ಸವಲತ್ತು ಒದಗಿಸಲಾಗುವುದು. ಇದಕ್ಕಾಗೇ ವಿನ್ಯಾಸಗೊಳಿಸಿದ ಸಾಫ್ಟ್‌ವೇರ್ ಒಂದನ್ನು ಅಳವಡಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯಗಳ ಎಲ್ಲಾ ಚಟುವಟಿಕೆಗಳನ್ನು ಅಂದರೆ ಕೊಟ್ಟಿರುವ ತೀರ್ಪು, ಹಿಯರಿಂಗ್ ದಿನಾಂಕ, ಆದೇಶ, ನ್ಯಾಯಾಲಯದಲ್ಲಿ ಇಟ್ಟಿರುವ ಠೇವಣಿ ಮುಂತಾದ ವಿವರಗಳನ್ನು ನಿರಂತರ ಅಂತರ್‌ಜಾಲಕ್ಕೆ ಹಾಕಲಾಗುವುದು. ಇದೇ ರೀತಿ ರಾಜ್ಯ ಮತ್ತು ರಾಷ್ಟ್ರ ಆಯೋಗಗಳ ಮೇಲಿನ ತರದ ಮಾಹಿತಿಗಳು ಕೂಡಾ ಇಲ್ಲಿ ಕಾಣಸಿಗುತ್ತದೆ.
ಕೇಸುಗಳ ವಿವರ, ಮುಂದಿನ ಹಿಯರಿಂಗ್ ದಿವಸ, ತೀರ್ಪುಗಳು ಮುಂತಾದವು ಈ ವೆಬ್‌ಸೈಟಿನಲ್ಲಿ ದೊರಕುವುದರಿಂದ ಇದು ಸಂತ್ರಸ್ಥ ಗ್ರಾಹಕರಿಗೆ ತುಂಬಾ ಉಪಯುಕ್ತವಾಗಬಲ್ಲದು. ಪತ್ರಕರ್ತರಿಗೆ ಹಾಗೂ ಗ್ರಾಹಕ ಸಂಘಟನೆಗಳಿಗೂ ಇದರ ಪ್ರಯೋಜನ ಸಿಗುತ್ತದೆ.
ವೆಬ್‌ಸೈಟ್ ವಿಳಾಸ :-

ಮಂಗಳವಾರ, ಸೆಪ್ಟೆಂಬರ್ 1, 2009

ಸಿಎಫ್‌ಎಲ್ ಬೆನ್ನ ಹಿಂದೆ ಅಪಾಯ!

ವಿಶ್ವದೆಲ್ಲೆಡೆ ಹೊಸ ಹೋರಾಟ ಶುರುವಾಗಿದೆ. ಟಂಗ್‌ಸ್ಟನ್ ತಂತಿಯ ಬಲ್ಬ್‌ಗಳನ್ನು ನಿಷೇಧಿಸಬೇಕು. ಕಾಂಪ್ಯಾಕ್ಟ್ ಫ್ಲೋರೋಸೆಂಟ್ ಲ್ಯಾಂಪ್ - ಸಿಎಫ್‌ಎಲ್ ಗಳನ್ನೆ ಬಳಸಬೇಕು. ಬಲ್ಬ್‌ಗಿಂತ ಹೆಚ್ಚು ಬೆಳಕು ನೀಡುವ ಸಿಎಫ್‌ಎಲ್ ಬಲ್ಬ್‌ಗಿಂತ ಮೂರನೇ ಎರಡರಷ್ಟು ವಿದ್ಯುತ್‌ನ್ನು ಉಳಿಸುತ್ತದೆ. ಶೇ. ೭೦ ರಷ್ಟು ಕಡಿಮೆ ಶಾಖವನ್ನು ಬಿಡುಗಡೆಗೊಳಿಸುತ್ತದೆ. ಅಷ್ಟೇಕೆ, ಬಲ್ಬಿಗಿಂತ ೧೦ ಪಟ್ಟು ಬಾಳಿಕೆ ಬರುತ್ತದೆ. ಅಮೇರಿಕದ ಪರಿಸರ ಸಂರಕ್ಷಣಾ ಏಜೆನ್ಸಿ ಇಪಿಎ ಹೇಳುತ್ತದೆ. ೬೦ ವ್ಯಾಟ್ ಬಲ್ಬ್‌ನ ಬದಲು ೧೩ ವ್ಯಾಟ್ ಸಿಎಫ್‌ಎಲ್ ಬಳಸಿದರೆ ಬಲ್ಬ್‌ನ ಆಯುಷ್ಯದ ಲೆಕ್ಕದಲ್ಲಿ ಬಳಕೆದಾರನಿಗೆ ೩೦ ಡಾಲರ್ ಉಳಿಯುತ್ತದೆ ! ಆದರೆ ಇದೀಗ ಎಚ್ಚರಿಕೆ ನೀಡುತ್ತಿರುವ ಮಾತು ಬೇರೆ, ಸಿಎಫ್‌ಎಲ್‌ನಲ್ಲಿ ಅಪಾಯಕಾರಿ ಪಾದರಸವಿದೆ !!
ಸಿಎಫ್‌ಎಲ್‌ನಲ್ಲಿ ೫ ಮಿಲಿಗ್ರಾಂ ಪಾದರಸವಿದೆ. ಬಹುಷಃ ಸ್ಥಳೀಯ ತಯಾರಿಕೆಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚೇ ಇರಬಹುದು. ಥರ್ಮಾಮೀಟರಿನಲ್ಲಿ ಬಳಸುವ ೫೦೦ ಎಂಜಿ ಲೆಕ್ಕದಲ್ಲಿ ಇವನ್ನು ನಗಣ್ಯ ಎನ್ನಬಹುದು. ಆದರೆ ಒಡೆದು ಚೂರಾಗುವ ಸಿಎಫ್‌ಎಲ್‌ಗಳನ್ನು ನಾವು ವ್ಯವಸ್ಥಿತವಾಗಿ ಶುಭ್ರಗೊಳಿಸುವ ಅಗತ್ಯವಿದೆ.
ಏನು ಮಾಡಬೇಕು? ಒಂದೊಮ್ಮೆ ಮನೆಯೊಳಗೆ ಸಿಎಫ್‌ಎಲ್ ಒಡೆದರೆ ಮೊತ್ತಮೊದಲು ಆ ಕೊಠಡಿಯ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು. ಅಲ್ಲಿಂದ ೧೫ ನಿಮಿಷ ಹೊರಗೆ ನಡೆಯಬೇಕು. ಅದರ ಎಲ್ಲ ತುಂಡು, ಬಿಳಿಪುಡಿ ಇತ್ಯಾದಿಗಳನ್ನು ನೇರವಾಗಿ ಕೈ ಬಳಸದೆ ಸಂಗ್ರಹಿಸಬೇಕು. ಮುಖ್ಯವಾಗಿ, ಈ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸೀಲ್ ಮಾಡಿ ವಿಲೇವಾರಿ ಮಾಡಬೇಕು.
ಅಮೇರಿಕದಲ್ಲಿ ಸಿಎಫ್‌ಎಲ್ ಬಲ್ಬ್ ನ ಬೆಲೆಯಲ್ಲಿ ತ್ಯಾಜ್ಯ ನಿರ್ವಹಣಾ ಶುಲ್ಕ - ವೇಸ್ಟ್ ಮ್ಯಾನೇಜ್ ಮೆಂಟ್ ಫೀ ಸೇರಿಸುತ್ತಾರೆ. ಈ ಕೆಲಸವನ್ನು ಒಂದು ಏಜೆನ್ಸಿಗೆ ಗುತ್ತಿಗೆ ನೀಡಿರಲಾಗುತ್ತದೆ. ಆದರೆ ಗ್ರಾಹಕ ‘ಬರ್ನ್’ ಆದ ಸಿಎಫ್‌ಎಲ್‌ನ್ನು ಮರಳಿಸಿದರೆ ಆ ವಿಎಂಎಫ್‌ನ್ನು ಮರಳಿಸಲಾಗುತ್ತದೆ. ಸದ್ಯ ಭಾರತದಲ್ಲಿ ಇಂತದ್ದಿಲ್ಲ ಎನ್ನುವುದರ ಜೊತೆಗೆ ಇ- ವೇಸ್ಟ್ ಕಾನೂನು ಇನ್ನಷ್ಟೇ ಜಾರಿಗೆ ಬರಬೇಕಾಗಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು.
ಸಮಸ್ಯೆ ಇರುವುದು ಬೇರೆ ನಿಟ್ಟಿನಲ್ಲಿ, ಹಾಳಾದ ಸಿಎಫ್‌ಎಲ್‌ಗಳನ್ನು ನಾವು ಯಾವುದೋ ಖಾಲಿ ಜಾಗದಲ್ಲಿ ಚೆಲ್ಲುತ್ತೇವೆ. ಇದರಿಂದ ಪಾದರಸ ಭೂಮಿ ಸೇರಿ ಅಂತರ್ಜಲ ಮಲಿನಗೊಳ್ಳುತ್ತದೆ. ನಾಳೆ ಅದೇ ನೀರನ್ನು ನಾವು ಕುಡಿಯುತ್ತೇವೆ !
ಸಿಎಫ್‌ಎಲ್ ಬಗ್ಗೆ ಈ ತರದ ವಿಚಾರಕ್ಕೆ ಅಬ್ಬರದ ಪ್ರಚಾರ ನೀಡುತ್ತಿರುವುದರ ಹಿಂದೆ ಬಲ್ಬ್ ಲಾಬಿ ಇದ್ದರೂ ಇರಬಹುದು. ತ್ಯಾಜ್ಯ ನಿರ್ವಹಣೆ ಹೊರತಾಗಿ ಸಿಎಫ್‌ಎಲ್ ಕ್ಷೇಮ. ಸಿಎಫ್‌ಎಲ್ ಒಟ್ಟಾರೆ ೨.೪ ಮಿಲಿಗ್ರಾಂ ಪಾದರಸವನ್ನು ತನ್ನ ಜೀವಿತಾವಧಿಯಲ್ಲಿ ವಾತಾವರಣಕ್ಕೆ ಬಿಡುಗಡೆ ಮಾಡಿದರೆ ಈ ಇನ್‌ಕ್ಯಾಡೆಸೆಂಟ್ ಬಲ್ಬ್ ತನ್ನ ಚುಟುಕು ಬದುಕಿನಲ್ಲಿ ಹೊರ ಚೆಲ್ಲುತ್ತದೆ.!
ಸಧ್ಯಕ್ಕಂತೂ ಸಿಎಫ್‌ಎಲ್ ಎಲ್ಲ ದೃಷ್ಟಿಯಿಂದ ಮೇಲುಗೈ ಪಡೆಯುತ್ತದೆ. ನಾವು ಬಲ್ಬ್ ಬಿಟ್ಟಾಕಿ ಸಿಎಫ್‌ಎಲ್‌ಗೆ ಹೋಗಲೇಬೇಕಾದ ದಿನಗಳು ಇವು.
ಸ್ವಾರಸ್ಯವೆಂದರೆ ಸಿಎಫ್‌ಎಲ್ ತಳವೂರುವ ಮುನ್ನವೇ ಸ್ಫರ್ಧಿಯಂತೆ ಎಲ್‌ಇಡಿ ಬಲ್ಬ್‌ಗಳು ಬಂದಿವೆ. ಎಲ್ ಇಡಿಗಳ ಬೆಲೆ ಕಡಿಮೆಯಾದಲ್ಲಿ ಸಿಎಫ್‌ಎಲ್ ಮಾರುಕಟ್ಟೆಯಲ್ಲಿ ನಿಲ್ಲುವುದು ಕಷ್ಟ, ಕಷ್ಟ !!

-ಮಾವೆಂಸ
 
200812023996