ಮಂಗಳವಾರ, ಏಪ್ರಿಲ್ 28, 2009

ದಕ್ಷಿಣ ಆಫ್ರಿಕಾ ನೀರಸ!


                                             ಐಪಿಎಲ್ ಮೊದಲ ವಾರ

ಟ್ವೆಂಟಿ  ೨೦ ಎಂದರೆ ರನ್, ರನ್, ರನ್ ಎಂದುಕೊಂಡವರಿಗೆ ಮೊದಲ ವಾರ ಕಂಡಿದ್ದು ಬೇರೆಯದೇ ದೃಶ್ಯ. ಬೌಂಡರಿ, ಸಿಕ್ಸ್‌ಗಳ ಘೋರ ಅಬ್ಬರ ನಿರೀಕ್ಷಿಸಿದವರಿಗೆ ಮಳೆಯ ಕಿರಿಕಿರಿ! ಅನಿಲ್ ಕುಂಬ್ಳೆ ನಾಲ್ಕು ಓವರ್ ಬೌಲ್ ಮಾಡಿ ಲೆಕ್ಕ ಹಾಕಿ ೫ ರನ್ ಕೊಟ್ಟು ೫ ವಿಕೆಟ್ ಪಡೆದಿದ್ದು ಐಪಿಎಲ್‌ನಲ್ಲಿ, ಅದೂ ಕಳೆದ ವರ್ಷದ ಚಾಂಪಿಯನ್ ವಿರುದ್ಧ. ಇಂತದೊಂದು ಬೌಲಿಂಗ್‌ನ್ನು ಏಕದಿನ ಕ್ರಿಕೆಟ್‌ನಲ್ಲೂ ನಿರೀಕ್ಷಿಸುವುದು ಕಷ್ಟ. ಹಿಂದೆಲ್ಲ ನಿಯಂತ್ರಿತ ಬೌಲಿಂಗ್ ಎಂದರೆ ರನ್, ವಿಕೆಟ್ ಮಾತಾಗುತ್ತಿರಲಿಲ್ಲ. ಬೌಲರ್ ನೋಬಾಲ್ ಮಾಡಿದಾಗಲೆಲ್ಲ ನಿಯಂತ್ರಣ ತಪ್ಪಿದ ದೂಷಣೆ!
ಈಗ ನೋಡಿ, ಬೌಲರ್‌ಗಳು ನೋಬಾಲ್ ಮಾಡುವುದನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ಎಲ್ಲಾ ಫ್ರೀ ಹಿಟ್ ಬೆದರಿಕೆ! ಈ ವರ್ಷದ ಐಪಿಎಲ್‌ನ ಮೊದಲ ಆರು ದಿನಗಳಲ್ಲಿ ಬಂದಿದ್ದು ಕೇವಲ ಎರಡು ನೋಬಾಲ್. ಸ್ವಾರಸ್ಯವೆಂದರೆ, ಅದರಲ್ಲೊಂದು ನೋಬಾಲ್‌ಗೆ ಸೌರವ್ ಗಂಗೂಲಿ ಗಳಿಸಿದ್ದು ಬರೋಬ್ಬರಿ ೨ ಸಿಕ್ಸರ್. ಅಂದರೆ ಒಂದು ಎಸೆತಕ್ಕೆ ೧೩ ರನ್ ದುಡಿಮೆ. ಇದೇ ಗಂಗೂಲಿ ಪಂಜಾಬ್ ತಂಡದ ಎದುರು ೧೪ ಎಸೆತಕ್ಕೆ ಒಂದು ರನ್ ಗಳಿಸಲು ಪರದಾಡಿದ್ದರು. ಹೀಗೆಂದರೆ ಟ್ವೆಂಟಿ ೨೦ ಅಭಿಮಾನಿಗಳಿಗೆ ಅರ್ಥವಾಗುವುದಿಲ್ಲ. ಗಂಗೂಲಿ ಎರಡೂವರೆ ಓವರ್ ಆಡಿ ಒಂದು ರನ್ ಗಳಿಸಿದರು ಎಂದರೆ?
ಈ ವರ್ಷದ ಸಂಚಿಕೆಯಲ್ಲಿ ಒಂದು ಹೊಸ ಪ್ರಯೋಗ. ಇನ್ನಿಂಗ್ಸ್‌ನ ಅರ್ಧಾಂಶ ಓವರ್ ಕೊನೆಗೊಂಡಾಗ ಈ ಏಳೂವರೆ ನಿಮಿಷಗಳ  ‘ತಂತ್ರಗಾರಿಕೆ ವಿರಾಮ’ವನ್ನು ನೀಡಲಾಗುತ್ತಿದೆ. ಯಾವುದೇ ತಂಡ ಈ ನಿಯಮವನ್ನು ವಿರೋಧಿಸಿರದಿದ್ದರೂ ತಜ್ಞರ ವಲಯಕ್ಕೆ ಇದು ಇಷ್ಟವಾಗಿಲ್ಲ. ಲಲಿತ್ ಮೋದಿ ‘ಇಲ್ಲದ’ ಮೀಸೆಯಡಿ ಮುಗುಳ್ನಗುತ್ತಿರಬಹುದು. ಏಳೂವರೆ ನಿಮಿಷ ತಂಡಗಳು ಬೇಕಾದ್ದು ಮಾಡಿಕೊಳ್ಳಲಿ, ಟಿವಿ ಹಕ್ಕು ಕೊಂಡವರಿಗೆ ಬರೋಬ್ಬರಿ ಜಾಹೀರಾತು ಸ್ಲಾಟ್‌ಗಳನ್ನು ಒದಗಿಸಿಕೊಟ್ಟಂತೆಯೂ ಆಯಿತು!
ತಮಾಷೆಗಳನ್ನು ಬದಿಗಿಟ್ಟು ನೋಡಿದರೂ, ಈ ತಂತ್ರ ವಿರಾಮ ಅಸಂಬದ್ಧವೇ ಸರಿ. ನಡೆಗಳನ್ನು ಕ್ಷಣ ಕ್ಷಣಕ್ಕೆ ಬದಲಿಸಬೇಕಿರುವ ಟ್ವೆಂಟಿ ಮಾದರಿಯಲ್ಲಿ ಅರ್ಧ ಇನ್ನಿಂಗ್ಸ್ ಮುಗಿಸಿದಾಗ ತಂತ್ರಗಾರಿಕೆಯನ್ನು ಅಭ್ಯಸಿಸುವುದೋ, ಬದಲಿಸುವುದೋ ಮುಗಿದುಬಿಡುವುದಿಲ್ಲ. ಅಂತದೊಂದು ಇರಲಿ ಎಂದರೂ ಏಳೂವರೆ ನಿಮಿಷಗಳ ಕಾಲಾವಧಿ ದೀರ್ಘವಾಯಿತು ಎಂಬುದು ನಿಸ್ಸಂಶಯ.
ಕ್ರೀಸ್‌ನಲ್ಲಿ ಗಂಭೀರವಾಗಿ ನಿಲ್ಲದೆ ಲೆಗ್‌ಸೈಡ್‌ನತ್ತ ಚಲಿಸುವ ಬ್ಯಾಟ್ಸ್‌ಮನ್‌ಗಳನ್ನು ಬೌಲರ್‌ಗಳೂ ಹಿಂಬಾಲಿಸುತ್ತಿರುವುದರಿಂದ ವೈಡ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಐಪಿಎಲ್ ಮಹಿಮೆ. ಮತ್ತೆ ಈ ಲೆಕ್ಕವನ್ನು ಬೌಲರ್‌ಗಳ ತಲೆಗೇ ಕಟ್ಟಲಾಗುತ್ತಿರುವುದು ದುರಂತ. ಬಿಡುವ ಕ್ಯಾಚ್‌ಗಳ ಸಂಖ್ಯೆಯೂ ವೈಡ್‌ಗಳನ್ನು ಬೆನ್ನಟ್ಟಿದಂತಿದೆ!
ಫ್ಲಡ್‌ಲೈಟ್‌ನ ಸ್ತಂಬದ ಎತ್ತರ ಮೀರಲು ಆಕಾಶದೆಡೆಗೆ ಚಿಮ್ಮುವ ‘ಮಿಸ್ ಹಿಟ್’ಗಳನ್ನು ಹಿಡಿಯಲಾಗದೆ ನೆಲ ಚೆಲ್ಲುವ ದೃಶ್ಯ ಪದೇ ಪದೆ. ಬಹುಷಃ ಕೋಚ್‌ಗಳು ಇನ್ನು ಮುಂದೆ ಫ್ಲಡ್‌ಲೈಟ್ ರಾತ್ರಿ ಚೆಂಡನ್ನು ಮೇಲೆ ಎಸೆದು ಕ್ಯಾಚ್ ಪ್ರಾಕ್ಟೀಸ್ ಮಾಡಿಸಬಹುದು. ಹಿಂದೆಲ್ಲ ಕ್ಯಾಚ್ ಅಭ್ಯಾಸ ಎಂದರೆ ಬಾಬ್ ಸಿಂಪ್ಸನ್ ಬ್ಯಾಟ್ ಹಿಡಿದು ಸ್ಲಿಪ್ ಕ್ಯಾಚಿಂಗ್ ತರಬೇತಿ ಕೊಡುತ್ತಿದ್ದ ಮಾದರಿಯಲ್ಲಿರುತ್ತಿತ್ತು. ಇಷ್ಟಕ್ಕೂ ಗಗನಚುಂಬಿ ಕ್ಯಾಚ್‌ಗಳನ್ನು ಬಿಡಲು ಮಾಂಟಿ ಪಾನೇಸರ್ ಬೇಕಿಲ್ಲ, ಕಿಂಗ್ಸ್ ಇಲೆವೆನ್ ವಿರುದ್ಧ ಸುರಕ್ಷಿತ ರಾಹುಲ್ ದ್ರಾವಿಡ್ ಕೂಡ ಅವಮಾನ ಅನುಭವಿಸಬೇಕಾಯಿತು.
ಈವರೆಗಿನ ಚಟುವಟಿಕೆಯಲ್ಲಿ ಯಾವುದೇ ಹೊಸ ಹೊಡೆತವನ್ನು ಬ್ಯಾಟ್ಸ್‌ಮನ್‌ಗಳು ಪ್ರದರ್ಶಿಸಿಲ್ಲ. ಕೆವಿನ್ ಪೀಟರ್‌ಸನ್‌ರ ಸ್ವಿಚ್ ಶಾಟ್ ಈ ಬಾರಿ ಹೆಚ್ಚಿನ ಆಟಗಾರರಿಂದ ಪ್ರಯತ್ನಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಬೆನ್ನ ಹಿಂದೆ ಒಂದು ವಿವಾದವೂ ಏಳುತ್ತಿತ್ತೇನೋ. ಇಂಗ್ಲೆಂಡಿನ ಮಾಜಿ ವೇಗಿ ಆಂಗಸ್  ಫ್ರೇಸರ್ ಸ್ವಿಚ್ ಹಿಟ್ ನಿಷೇಧಿಸಬೇಕಾದ ಮಾತನ್ನಾಡುತ್ತಿದ್ದಾರೆ.
ಏನಿದು ಸ್ವಿಚ್ ಹಿಟ್? ಬಲಗೈ ಬ್ಯಾಟ್ಸ್‌ಮನ್ ಬೌಲರ್ ಚೆಂಡು ಎಸೆಯುವ ವೇಳೆಯಲ್ಲಿ ತಮ್ಮ ಬ್ಯಾಟ್‌ನ ಗ್ರಿಪ್‌ನ್ನೇ ಬದಲಿಸಿಕೊಂಡು ಎಡಗೈ ಬ್ಯಾಟ್ಸ್‌ಮನ್‌ನಂತೆ ಬ್ಯಾಟ್ ಬೀಸುತ್ತಾನೆ. ಇಂತಹ ಹೊಡೆತಕ್ಕೆ ಕ್ಷೇತ್ರ ರಕ್ಷಣೆ ಸಂಯೋಜಿಸುವುದು ಕಷ್ಟವಾಗುವುದರ ಜೊತೆಗೆ ಎಲ್‌ಬಿಡಬ್ಲ್ಯು ತೀರ್ಮಾನ ಗೊಂದಲಕರ. ಒಂದರ್ಥದಲ್ಲಿ ಬಲಗೈ ಬ್ಯಾಟ್ಸ್‌ಮನ್‌ಗೆ ಆಫ್ ಸ್ಟಂಪ್ ಆಚಿನ ಚೆಂಡು ಸ್ವಿಚ್ ಹಿಟ್ ಸಂದರ್ಭದಲ್ಲಿ ಲೆಗ್‌ಸ್ಟಂಪ್‌ನ ಹೊರಗೆ ಬಿದ್ದ ಚೆಂಡಾಗಿ ಪರಿವರ್ತನೆಯಾಗುತ್ತದೆ. ಎಲ್‌ಬಿಡಬ್ಲ್ಯು ತೀರ್ಮಾನ ಹೇಗೆ? ಇದು ಫ್ರೇಸರ್ ಪ್ರಶ್ನೆ. 
ಸ್ವಿಚ್ ಹಿಟ್‌ನಲ್ಲಿ ಬೌಂಡರಿ ಬಿಡಿ, ಸಿಕ್ಸರ್‌ನ್ನೇ ಬಾರಿಸುವ ಕೆವಿನ್ ಪೀಟರ್‌ಸನ್‌ರ ಜಾದೂ ಕೊನೆಪಕ್ಷ ಈ ಐಪಿಎಲ್‌ನಲ್ಲಿನ್ನೂ ಕಾಣಿಸಿಲ್ಲ. ಅಷ್ಟಕ್ಕೂ ಖುದ್ದು ಪೀಟರ್‌ಸನ್ ಈ ಹೊಡೆತ ಬಾರಿಸಲು ಯೋಚಿಸುವ ಮುನ್ನವೇ ಪೆವಿಲಿಯನ್‌ಗೆ ಧಾವಿಸುತ್ತಿದ್ದಾರೆ!
ಟ್ವೆಂಟಿ ೨೦ ನೇರಪ್ರಸಾರದ ವೀಕ್ಷಕ ವಿವರಣೆಕಾರರು ನೀರಸ ನೀರಸ. ಆಟದ ತಂತ್ರ, ಬೌಲಿಂಗ್ - ಬ್ಯಾಟಿಂಗ್ ತಾತ್ರಿಕತೆಯ ಬಗ್ಗೆ ತಜ್ಞ ಮಾಹಿತಿ ನೀಡಲು  ಸಮಯವಿಲ್ಲದಿರುವುದರಿಂದ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಹರ್ಷ ಬೋಗ್ಲೆಯವರಂತ ಘಟಾನುಘಟಿಗಳಿದ್ದೂ ವ್ಯಥ. ಬ್ಯಾಟ್ಸ್‌ಮನ್ ಸಿಡಿಸುವ ಬೌಂಡರಿ, ಸಿಕ್ಸರ್‌ಗಳಿಗೆ ಉದ್ಘಾರಗಳ ಹಿಮ್ಮೇಳ ಒದಗಿಸುವ ‘ಚಿಯರ್ ಬಾಯ್ಸ್’ಗಳ ಪಾತ್ರ ಇವರದು! ಹ್ವಾಕ್ ಐ, ಸ್ನಿಕೋ ಮೀಟರ್, ಸೂಪರ್ ಸ್ಲೋ ಮೋನಂತಹ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಳ್ಳಲೇ ಸಮಯ ಇಲ್ಲ ಎನ್ನುವುದು ಟ್ವೆಂಟಿ ೨೦ಯಲ್ಲಿ ಈ ವಾರ ಎದ್ದು ಕಂಡ ಕೊರತೆ.


ಕೊನೆ ಮಾತು - ಮಂದಿರಾ ಬೇಡಿಯ ಮುಖದಲ್ಲಿ ಪ್ರಾಯ ಕಳೆದುಹೋದ ರೇಖೆಗಳು ಎದ್ದು ಕಾಣುತ್ತದೆ. ಹಿಂದಿನ ‘ರೋಮಾಂಚನ’ ಇಲ್ಲ. ರಸಿಕರ ಒಕ್ಕೊರಲಿನ ಕೂಗು, ಇನ್ನೂ ಆಕೆಯ ಉಪಸ್ಥಿತಿ ಬೇಡಿ! ಯಾಕೋ ಗೊತ್ತಿಲ್ಲ, ಚಿಯರ್ ಗಲ್ಸ್ ಕೂಡ ಎದೆ ಝಲ್ಲೆನಿಸುತ್ತಿಲ್ಲ. ವಿಜಯ್ ಮಲ್ಯ ತಮ್ಮ ತಂಡದ ಸಾಲು ಸಾಲು ಸೋಲಿನ ಬೆನ್ನಲ್ಲಿ ಇತ್ತಲೂ ಗಂಭೀರವಾಗಿ ಚಿಂತಿಸಬೇಕಾಗಿದೆ!
-ಮಾವೆಂಸ

ಶುಕ್ರವಾರ, ಏಪ್ರಿಲ್ 17, 2009

ಕಣ್ಣಿಗೆ ಧೂಳು !

* ಡಿಟರ್ಜೆಂಟ್ - ೮೦೦ ಗ್ರಾಂ ಪ್ಯಾಕೆಟ್! 
* ಮೋಸ ಮಾಡುವ ಜನತಾ ಬ್ರಾಂಡ್.


ಬಟ್ಟೆಯಲ್ಲಿರುವ ಎಂತಹ ಕೊಳೆಯನ್ನಾದರೂ ತೊಳೆದುಬಿಡಬಲ್ಲ ಡಿಟರ್ಜೆಂಟ್ ಪುಡಿ ಬಳಕೆದಾರರ ಕಣ್ಣಿಗೆ ಮಂಕುಬೂದಿ ಎರಚುತ್ತಿವೆಯೇ ? ಹೌದು ಎನ್ನುತ್ತದೆ ದೆಹಲಿಯ ಕನ್ಸ್ಯೂಮರ್ ವಾಯ್ಸ್.
ಡಿಟರ್ಜೆಂಟ್ ಪೌಡರ್‌ಗಳಲ್ಲಿ ನಾಲ್ಕು ಬೆಲೆ ಸ್ಥರದ ಪ್ಯಾಕೆಟ್‌ಗಳಿವೆ. ಪ್ರೀಮಿಯಂ ಬ್ರಾಂಡ್‌ಗಳಾದರೆ ಕೆ.ಜಿ.ಗೆ ೧೩೫ರಿಂದ ೧೫೫ರೂ. ಏರಿಯಲ್ ಆಲ್ಟ್ರಾಟೆಕ್, ಹೆನ್ಕೋ ಸ್ಟೈನ್ ಚಾಂಪಿಯನ್, ಸರ್ಫ್ ಎಕ್ಸೆಲ್ ಆಟೋಮ್ಯಾಟಿಕ್ ಈ ವರ್ಗದ್ದು. ಮಧ್ಯಮ ವರ್ಗದ ಹೆನ್ಕೋ ಸ್ಕಿನ್ ಚಾಂಪಿಯನ್ ಅರ್ಧ ಕೆ.ಜಿ.ಗೆ ೪೩ ರೂ. ಏರಿಯಲ್ ಸ್ಪ್ರಿಂಗ್ ಕ್ಲೀನ್‌ನ ಕೆ.ಜಿ.ಗೆ ೧೦೩ ರೂ., ಸರ್ಫ್ ಎಕ್ಸ್ ಕೆ.ಜಿ.ಗೆ ೧೧೬ ರೂ. ಸಾಮಾನ್ಯ ಬ್ರಾಂಡ್ ಹೆಸರಿನಲ್ಲಿ ಟೈಡ್, ರಿನ್ ಅಡ್ವಾನ್ಸ್‌ಡ್, ಸೂಪರ್ ನಿರ್ಮಾ ಬ್ಲೂ, ಸರ್ಫ್ ಎಕ್ಸೆಲ್ ಬ್ಲೂ, ಇಂಪ್ಯಾಕ್ಟ್ ಮಾರಾಟವಾಗುತ್ತಿವೆ. ಬೆಲೆ ಕೆಜಿಗೆ ೪೫ ರೂ.ನಿಂದ ೫೦ ರೂ. ಆಸುಪಾಸಲ್ಲಿ ಇವುಗಳು ಮಾರಾಟವಾಗುತ್ತಿವೆ.
ಉಳಿದದ್ದೆಂದರೆ ಜನತಾ ಬ್ರಾಂಡ್. ಜನರ ಕಣ್ಣಿಗೆ ಮೋಸದ ಧೂಳು ಚೆಲ್ಲುತ್ತಿರುವವೇ ಇವು. ನಿರ್ಮಾ ವಾಶಿಂಗ್ ಪೌಡರ್ ಕೆ.ಜಿ.ಗೆ ೧೯ ರೂ., ತಕರಾರಿಲ್ಲ. ಫೆನಾಗೆ ೧೮ ರೂ., ವೀಲ್‌ಗೆ ಗಾದಿಗೆ, ಸೂಪರ್ ಪವರ್ ೫೫೫ ಗಳಿಗೆ ಕೂಡ ೧೯ ರೂ. ಹಾಗೆಂದುಕೊಂಡ ಒಂದು 
ಪ್ಯಾಕೆಟ್ ಖರೀದಿಸಿದವ ಪಿಗ್ಗಿ ಬಿದ್ದಂತೆ!
ಏತಕ್ಕಪ್ಪಾಂದ್ರೆ, ಫೆನಾ, ವೀಲ್, ಗಾದಿ, ಸೂಪರ್‌ಪವರ್‌ಗಳ ಪ್ಯಾಕೆಟ್‌ನ ತೂಕ ಒಂದು ಕೆ.ಜಿ.ಯಲ್ಲ. ಅತ್ತ ಅವು ಅರ್ಧ ಕೆ.ಜಿ.ಯ ಪ್ಯಾಕೂ ಅಲ್ಲ. ಮುಕ್ಕಾಲು ಕೆ.ಜಿ.? ಊಹ್ಲೂ! ಫೆನಾದ್ದು ೮೮೦ ಗ್ರಾಂ ಪ್ಯಾಕ್, ವೀಲ್ ಹಾಗೂ ಸೂಪರ್ ಪವರ್‌ಗಳು ೮೦೦ ಗ್ರಾಂ, ಗಾದಿ ೮೬೦ ಗ್ರಾಂ.
ಈ ತೂಕಗಳ ಲೆಕ್ಕವೇ ವಿಚಿತ್ರ. ಸದ್ಯಕ್ಕಿರುವ ಕಾನೂನಿನ ಪ್ರಕಾರ ಇವು ಸಮ್ಮತವೇ. ಆದರೂ ಹಿನ್ನೆಲೆಯಲ್ಲಿ ಬಳಕೆದಾರರನ್ನು ಇವೆಲ್ಲ ಒಂದು ಕೆ.ಜಿ. ಪ್ಯಾಕ್ ಎಂಬಂತೆ ವಂಚಿಸುವ ಉದ್ದೇಶ ಇರಲಿಕ್ಕಿರಲೇಬೇಕು. ಮತ್ತೆ ತಾವೂ ೧೯ ರೂ.ಗೆ ಸಿಗುತ್ತೇವೆ ಎನಿಸಿಕೊಳ್ಳುವಲ್ಲಿಯೇ ಅವರ ‘ವಂಚನೆ’ ಅಡಗಿದೆ ಅಲ್ಲವೇ ?
ಕಳ್ಳರು ಈಗ ಇನ್ನೊಂದು ಕಾನೂನು ತರಬೇಕೆನ್ನುವ ಸ್ಥಿತಿ ತಂದಿದ್ದಾರೆ!

-ಮಾವೆಂಸ 

ಬುಧವಾರ, ಏಪ್ರಿಲ್ 15, 2009

ಸಿಎಫ್‌ಎಲ್ ಬೆನ್ನ ಹಿಂದೆ ಅಪಾಯ!


ವಿಶ್ವದೆಲ್ಲೆಡೆ ಹೊಸ ಹೋರಾಟ ಶುರುವಾಗಿದೆ.  ಟಂಗ್‌ಸ್ಟನ್ ತಂತಿಯ ಬಲ್ಬ್‌ಗಳನ್ನು ನಿಷೇಧಿಸಬೇಕು. ಕಾಂಪ್ಯಾಕ್ಟ್ ಫ್ಲೋರೋಸೆಂಟ್ ಲ್ಯಾಂಪ್ - ಸಿಎಫ್‌ಎಲ್ ಗಳನ್ನೆ ಬಳಸಬೇಕು. ಬಲ್ಬ್‌ಗಿಂತ ಹೆಚ್ಚು ಬೆಳಕು ನೀಡುವ ಸಿಎಫ್‌ಎಲ್ ಬಲ್ಬ್‌ಗಿಂತ ಮೂರನೇ ಎರಡರಷ್ಟು ವಿದ್ಯುತ್‌ನ್ನು ಉಳಿಸುತ್ತದೆ. ಶೇ. ೭೦ ರಷ್ಟು ಕಡಿಮೆ ಶಾಖವನ್ನು  ಬಿಡುಗಡೆಗೊಳಿಸುತ್ತದೆ. ಅಷ್ಟೇಕೆ, ಬಲ್ಬಿಗಿಂತ ೧೦ ಪಟ್ಟು ಬಾಳಿಕೆ ಬರುತ್ತದೆ. ಅಮೇರಿಕದ ಪರಿಸರ ಸಂರಕ್ಷಣಾ ಏಜೆನ್ಸಿ ಇಪಿಎ ಹೇಳುತ್ತದೆ. ೬೦ ವ್ಯಾಟ್ ಬಲ್ಬ್‌ನ ಬದಲು ೧೩ ವ್ಯಾಟ್ ಸಿಎಫ್‌ಎಲ್ ಬಳಸಿದರೆ ಬಲ್ಬ್‌ನ ಆಯುಷ್ಯದ ಲೆಕ್ಕದಲ್ಲಿ ಬಳಕೆದಾರನಿಗೆ ೩೦ ಡಾಲರ್ ಉಳಿಯುತ್ತದೆ !  ಆದರೆ ಇದೀಗ ಎಚ್ಚರಿಕೆ ನೀಡುತ್ತಿರುವ ಮಾತು ಬೇರೆ, ಸಿಎಫ್‌ಎಲ್‌ನಲ್ಲಿ ಅಪಾಯಕಾರಿ ಪಾದರಸವಿದೆ !!
ಸಿಎಫ್‌ಎಲ್‌ನಲ್ಲಿ ೫ ಮಿಲಿಗ್ರಾಂ ಪಾದರಸವಿದೆ. ಬಹುಷಃ ಸ್ಥಳೀಯ ತಯಾರಿಕೆಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚೇ ಇರಬಹುದು. ಥರ್ಮಾಮೀಟರಿನಲ್ಲಿ ಬಳಸುವ ೫೦೦ ಎಂಜಿ  ಲೆಕ್ಕದಲ್ಲಿ ಇವನ್ನು ನಗಣ್ಯ ಎನ್ನಬಹುದು.  ಆದರೆ ಒಡೆದು ಚೂರಾಗುವ ಸಿಎಫ್‌ಎಲ್‌ಗಳನ್ನು  ನಾವು ವ್ಯವಸ್ಥಿತವಾಗಿ ಶುಭ್ರಗೊಳಿಸುವ ಅಗತ್ಯವಿದೆ.
ಏನು ಮಾಡಬೇಕು? ಒಂದೊಮ್ಮೆ ಮನೆಯೊಳಗೆ ಸಿಎಫ್‌ಎಲ್ ಒಡೆದರೆ ಮೊತ್ತಮೊದಲು ಆ ಕೊಠಡಿಯ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು.  ಅಲ್ಲಿಂದ ೧೫ ನಿಮಿಷ ಹೊರಗೆ ನಡೆಯಬೇಕು. ಅದರ ಎಲ್ಲ ತುಂಡು, ಬಿಳಿಪುಡಿ ಇತ್ಯಾದಿಗಳನ್ನು ನೇರವಾಗಿ ಕೈ ಬಳಸದೆ ಸಂಗ್ರಹಿಸಬೇಕು. ಮುಖ್ಯವಾಗಿ, ಈ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸೀಲ್ ಮಾಡಿ ವಿಲೇವಾರಿ ಮಾಡಬೇಕು.
ಅಮೇರಿಕದಲ್ಲಿ  ಸಿಎಫ್‌ಎಲ್ ಬಲ್ಬ್ ನ ಬೆಲೆಯಲ್ಲಿ ತ್ಯಾಜ್ಯ ನಿರ್ವಹಣಾ ಶುಲ್ಕ - ವೇಸ್ಟ್ ಮ್ಯಾನೇಜ್ ಮೆಂಟ್ ಫೀ  ಸೇರಿಸುತ್ತಾರೆ. ಈ ಕೆಲಸವನ್ನು ಒಂದು ಏಜೆನ್ಸಿಗೆ ಗುತ್ತಿಗೆ ನೀಡಿರಲಾಗುತ್ತದೆ.  ಆದರೆ ಗ್ರಾಹಕ ‘ಬರ್ನ್’ ಆದ ಸಿಎಫ್‌ಎಲ್‌ನ್ನು ಮರಳಿಸಿದರೆ  ಆ ವಿಎಂಎಫ್‌ನ್ನು  ಮರಳಿಸಲಾಗುತ್ತದೆ. ಸದ್ಯ ಭಾರತದಲ್ಲಿ  ಇಂತದ್ದಿಲ್ಲ ಎನ್ನುವುದರ ಜೊತೆಗೆ ಇ- ವೇಸ್ಟ್ ಕಾನೂನು ಇನ್ನಷ್ಟೇ ಜಾರಿಗೆ ಬರಬೇಕಾಗಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು.
 ಸಮಸ್ಯೆ  ಇರುವುದು ಬೇರೆ ನಿಟ್ಟಿನಲ್ಲಿ, ಹಾಳಾದ ಸಿಎಫ್‌ಎಲ್‌ಗಳನ್ನು ನಾವು ಯಾವುದೋ  ಖಾಲಿ ಜಾಗದಲ್ಲಿ ಚೆಲ್ಲುತ್ತೇವೆ. ಇದರಿಂದ ಪಾದರಸ ಭೂಮಿ ಸೇರಿ ಅಂತರ್ಜಲ ಮಲಿನಗೊಳ್ಳುತ್ತದೆ. ನಾಳೆ   ಅದೇ ನೀರನ್ನು ನಾವು ಕುಡಿಯುತ್ತೇವೆ !
ಸಿಎಫ್‌ಎಲ್ ಬಗ್ಗೆ ಈ ತರದ ವಿಚಾರಕ್ಕೆ ಅಬ್ಬರದ ಪ್ರಚಾರ ನೀಡುತ್ತಿರುವುದರ ಹಿಂದೆ ಬಲ್ಬ್ ಲಾಬಿ ಇದ್ದರೂ ಇರಬಹುದು. ತ್ಯಾಜ್ಯ ನಿರ್ವಹಣೆ  ಹೊರತಾಗಿ ಸಿಎಫ್‌ಎಲ್ ಕ್ಷೇಮ. ಸಿಎಫ್‌ಎಲ್ ಒಟ್ಟಾರೆ ೨.೪ ಮಿಲಿಗ್ರಾಂ  ಪಾದರಸವನ್ನು ತನ್ನ ಜೀವಿತಾವಧಿಯಲ್ಲಿ  ವಾತಾವರಣಕ್ಕೆ ಬಿಡುಗಡೆ ಮಾಡಿದರೆ ಈ ಇನ್‌ಕ್ಯಾಡೆಸೆಂಟ್ ಬಲ್ಬ್ ತನ್ನ ಚುಟುಕು ಬದುಕಿನಲ್ಲಿ ಹೊರ ಚೆಲ್ಲುತ್ತದೆ.!
                                       ಸಧ್ಯಕ್ಕಂತೂ ಸಿಎಫ್‌ಎಲ್ ಎಲ್ಲ ದೃಷ್ಟಿಯಿಂದ  ಮೇಲುಗೈ ಪಡೆಯುತ್ತದೆ.  ನಾವು ಬಲ್ಬ್  ಬಿಟ್ಟಾಕಿ ಸಿಎಫ್‌ಎಲ್‌ಗೆ ಹೋಗಲೇಬೇಕಾದ ದಿನಗಳು ಇವು. ಸ್ವಾರಸ್ಯವೆಂದರೆ ಸಿಎಫ್‌ಎಲ್  ತಳವೂರುವ ಮುನ್ನವೇ ಸ್ಫರ್ಧಿಯಂತೆ ಎಲ್‌ಇಡಿ ಬಲ್ಬ್‌ಗಳು ಬಂದಿವೆ. ಎಲ್ ಇಡಿಗಳ ಬೆಲೆ  ಕಡಿಮೆಯಾದಲ್ಲಿ  ಸಿಎಫ್‌ಎಲ್  ಮಾರುಕಟ್ಟೆಯಲ್ಲಿ  ನಿಲ್ಲುವುದು        ಕಷ್ಟ, ಕಷ್ಟ !!
-ಮಾವೆಂಸ

ಸೋಮವಾರ, ಏಪ್ರಿಲ್ 13, 2009

ಈ ಬಾರಿ ಸೆಹ್ವಾಗ್ ಡೆವಿಲ್ಸ್??



ಟ್ವೆಂಟಿ ೨೦ಯ ಮೂಲಭೂತ ಅಂಶವೇ ಅದರ ಅನಿಶ್ಚಿತತೆ. ೧೯ನೇ ಓವರ್‌ನಲ್ಲಿ ೨೬-೩೦ ರನ್ ಬಂದು ಪಂದ್ಯದ ಗತಿ ಬದಲಾದದ್ದಿದೆ. ೧೭ನೇ ಓವರ್ ವೇಳೆಗೆ ೨-೩ ವಿಕೆಟ್ ತಪತಪನೆ ಬಿದ್ದು ಚೇಸಿಂಗ್ ಹಳಿ ತಪ್ಪಿದ್ದಿದೆ. ಒಬ್ಬ ಬ್ಯಾಟ್ಸ್‌ಮನ್ ಆಟ, ಒಂದು ಅದ್ಭುತ ಓವರ್ ಪವಾಡವನ್ನು ಸೃಷ್ಟಿಸಬಲ್ಲದು. ಇಂತಹ ಸನ್ನಿವೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ೨೦೦೯ರ ಸಂಚಿಕೆಯ ಫಲಿತಾಂಶಗಳನ್ನು ಊಹಿಸುವುದು ಮೂರ್ಖತನವಾದೀತು. ಅಷ್ಟಕ್ಕೂ ಇದು ಮೂರ್ಖರ ತಿಂಗಳು ತಾನೇ?!
ಭವಿಷ್ಯ ಹೇಳಲು ಧೈರ್ಯ ತುಂಬುವುದು ಕಳೆದ ಬಾರಿಯ ಜೈಪುರದ ರಾಜಾಸ್ತಾನ ರಾಯಲ್ಸ್‌ನ ಯಶಸ್ಸು. ಸ್ಟಾರ್ ಆಟಗಾರರಿಲ್ಲದಿದ್ದರೂ ಕನ್ಸಿಸ್ಟೆನ್ಸಿಯ ಪ್ರದರ್ಶನದಿಂದ ಕಪ್ ಗೆಲ್ಲಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದು ಒಂದರ್ಥದಲ್ಲಿ ಟ್ವೆಂಟಿ ೨೦ಗೆ ಹೊಸ ಆಯಾಮ. ಒಬ್ಬ ಸಮರ್ಥ ಬೌಲರ್‌ನ ನಾಲ್ಕು ಓವರ್‌ಗಳ ಕೋಟಾ ಕೂಡ ನಿರ್ದಿಷ್ಟ ಪರಿಣಾಮ ಬೀರುತ್ತದೆ ಎಂಬುದಕ್ಕೆ ಶೇನ್ ವಾರ್ನ್ ಬೌಲಿಂಗ್ ಸಾಕ್ಷಿಯಾಗಿತ್ತು. ಹಾಗಿದ್ದೂ ನಾಯಕತ್ವ, ಕೋಚಿಂಗ್‌ಗಳ ದ್ವಿಪಾತ್ರದ ಶೇನ್ ಎಷ್ಟೋ ಬಾರಿ ತಮ್ಮ ಕೋಟಾವನ್ನು ಪೂರೈಸದೇ ಗೆಲುವು ಗಿಟ್ಟಿಸಿದ್ದರು! ಅಂದರೆ ತಂಡಕ್ಕೆ ಅವರು ಸ್ಫೂರ್ತಿಯೂ ಆಗಿದ್ದರು. ಕಳೆದ ಐಪಿಎಲ್ ಪ್ರತಿಭೆಗಳಲ್ಲಿ ರವೀಂದ್ರ ಜಡೇಜಾ ಮಾತ್ರ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿ ಸಫಲರಾದರು. ಈ ಬಾರಿ ಸಹ ಅಭಿಮಾನಿಗಳು ರಾಜಾಸ್ತಾನ ರಾಯಲ್ಸ್ ಮೇಲೆ ಬೆಟ್ ಕಟ್ಟಲು ಅಡ್ಡಿಯಿಲ್ಲ!
ಊಹೆಗಳಿಗೆ ಮುಂಚಿತವಾಗಿ ನಾವು ದಕ್ಷಿಣ ಆಫ್ರಿಕಾದ ಪಿಚ್‌ಗಳನ್ನು ತೂಗಿ ನೋಡಬೇಕಾಗುತ್ತದೆ. ಐಪಿಎಲ್ ಅಲ್ಲಿನ ಕ್ರೀಡಾಂಗಣಗಳನ್ನು ಬಾಡಿಗೆಗೆ ಪಡೆದಿದೆ. ಅಂದಮೇಲೆ ಪಿಚ್‌ಗಳೆಲ್ಲವೂ ಒಂದೇ ತರ, ಅರ್ಥಾತ್ ಬ್ಯಾಟಿಂಗ್ ಪಿಚ್‌ಗಳೇ ಆಗಿರುವ ಸಾಧ್ಯತೆಗಳಿವೆ. ಅಪ್ಪಿ ತಪ್ಪಿ ಕೂಡ ವೇಗಕ್ಕೆ, ಬೌಲಿಂಗ್‌ಗೆ ಸಹಕರಿಸುವ ಪಿಚ್‌ನ್ನು ಸೃಷ್ಟಿಸುವ ಸಾಹಸವನ್ನು ಅಲ್ಲಿನವರು ಮಾಡಲಾರರು. ಇದರ ಆಧಾರದಲ್ಲಿ ಭವಿಷ್ಯ ಹೇಳಲು ಪ್ರಯತ್ನಿಸಬಹುದು.
ಸುಮ್ಮನೆ ತಂಡಗಳ ಆಟಗಾರರತ್ತ ಅವಲೋಕಿಸಿದಾಗ ದೆಹಲಿಯ ವೀರೇಂದ್ರ ಸೆಹ್ವಾಗ್ ನೇತೃತ್ವದ ಡೇರ್ ಡೆವಿಲ್ಸ್ ತಂಡ ಫೇವರಿಟ್ ಸ್ಥಾನದಲ್ಲಿ ಮಿಂಚುತ್ತದೆ. ಚೊಚ್ಚಲ ಸಂಚಿಕೆಯಲ್ಲೂ ಮಳೆಯ ಅವಕೃಪೆಗೆ ತುತ್ತಾಗದಿದ್ದರೆ ಸೆಹ್ವಾಗ್ ಬಳಗ ಫೈನಲ್ ಪ್ರವೇಶಿಸಿರುತ್ತಿತ್ತೇನೋ. ಗೌತಮ್ ಗಂಭೀರ್ ತಮ್ಮ ಜೀವನದ ಅತ್ಯುತ್ತಮ ಫಾರಂನಲ್ಲಿದ್ದಾರೆ. ಈ ಮನುಷ್ಯ ಇದೇ ದ.ಆಫ್ರಿಕಾದಲ್ಲಿ ನಡೆದ ಟ್ವೆಂಟಿ ೨೦ ವಿಶ್ವಕಪ್‌ನಲ್ಲಿ ಭಾರತದ ಪರ ಪ್ರಭಾವೀ ಬ್ಯಾಟಿಂಗ್ ನಡೆಸಿದ್ದು ನೆನಪಿರಬಹುದು. ಡೇನಿಯಲ್ ವಿಟ್ಟೋರಿ ವಿಕೆಟ್ ಪಡೆಯಲು ಮರೆತಿರಬಹುದಾದರೂ ರನ್ ನಿಯಂತ್ರಣದಲ್ಲಿ ಹೊಸ ತಾಕತ್ತು ಪಡೆದಿದ್ದಾರೆ. ಜೊತೆಗೆ ಎವರ್‌ಗ್ರೀನ್ ಗ್ಲೆನ್ ಮೆಗ್ರಾತ್, ಟ್ವೆಂಟಿ ೨೦ ಹ್ಯಾಟ್ರಿಕ್ ವೀರ ಅಮಿತ್ ಮಿಶ್ರಾ ಇದ್ದಾರೆ. ಬ್ಯಾಟಿಂಗ್‌ನ ತುಸು ದೌರ್ಬಲ್ಯವನ್ನು ಸೆಹ್ವಾಗ್ - ಗಂಭೀರ್ ವಿಫಲವಾದರೆ ಮಾತ್ರ ಎದುರಾಳಿಗಳು ಉಪಯೋಗಿಸಿಕೊಳ್ಳಲು ಸಾಧ್ಯ. ಬಹುಷಃ ಇತ್ತ ಯೋಚಿಸಿಯೇ ಡೆಲ್ಲಿ ಓವಿಶ್ ಶಾ, ಪೌಲ್ ಕಾಲಿಂಗ್‌ವುಡ್‌ರನ್ನು ಬುಟ್ಟಿಗಿಳಿಸಿಕೊಂಡಿದೆ.
ಧೋನಿ ನೇತೃತ್ವದ ಚೆನ್ನೈ ಪಡೆಗೆ ಆಂಡ್ರ್ಯೂ ಫ್ಲಿಂಟಾಫ್ ಸಿಕ್ಕಿರುವವರಾದರೂ ಬೌಲಿಂಗ್ ದುರ್ಬಲ. ನಿಟ್ನಿ ನಂಬುವಂತಿಲ್ಲ. ಬಾಲಾಜಿ ಏನೋ? ಜೇಕಬ್ ಓರಂ ಆಡಲು ಒದಗದಿರುವ ಸೂಚನೆಗಳಿವೆ. ಬ್ಯಾಟಿಂಗ್‌ನಲ್ಲಿ ಮಾತ್ರ ಮಿಂಚಿನ ಹೊಳೆ! ಧೋನಿ, ಮಾರ್ಕೆಲ್, ಹೇಡನ್, ರೈನಾ, ಮೈಕೆಲ್ ಹಸ್ಸಿ.... ಉಫ್! ಇಷ್ಟೆಲ್ಲ ವಿವರ ಕೊಟ್ಟವರು ಸೂಪರ್ ಕಿಂಗ್ಸ್ ಪರ ಮುತ್ತಯ್ಯ ಮುರುಳೀಧರನ್ ಆಡುವುದನ್ನು ಮರೆತರೇ? ಇಲ್ಲ, ಮುರುಳಿ ಬೌಲಿಂಗ್‌ನಲ್ಲೂ ‘ಇಕ್ಕುವ’ ಬ್ಯಾಟ್ಸ್‌ಮನ್ ಹೆದರಿಕೆ! ಧೋನಿ ಪಡೆ ಗೆಲುವಿನ ಅಂಚಿಂದ ಜಾರಿ ಕಪ್ ಕಳೆದುಕೊಂಡದ್ದು ಕಳೆದ ಇತಿಹಾಸ. ಈ ಬಾರಿ ಹಾಗಾಗದಿರಲಿ.
ಸ್ವಾರಸ್ಯವೆಂದರೆ, ಹೈದರಾಬಾದ್‌ನ ಡೆಕನ್ ಚಾರ್ಜರ್‍ಸ್ ಪ್ರಸ್ತುತ ಸ್ಪರ್ಧೆಯಲ್ಲೂ ವೀಕ್ ಲಿಂಕ್! ಡ್ವೇನೆ ಸ್ಮಿತ್, ಫಿಡೆಲ್ ಎಡ್ವರ್ಡ್‌ರ ಖರೀದಿಯ ಹಿಂದಿನ ತರ್ಕ ಅರ್ಥವಾಗುತ್ತಿಲ್ಲ. ಈ ವಿಂಡೀಸ್ ಆಟಗಾರರು ಸ್ಟಾರ್ ಸಾಧಕರಂತೂ ಅಲ್ಲ. ಗಿಲ್‌ಕ್ರಿಸ್ಟ್, ರೋಹಿತ್ ಶರ್ಮರೇ ಆಡಬೇಕು. ಅದೃಷ್ಟದ ಕಾರಣ ಆಸ್ಟ್ರೇಲಿಯಾ ತಂಡದಲ್ಲಿ ಮತ್ತೆ ಸ್ಥಾನ ಗಿಟ್ಟಿಸಿರುವ ಆಂಡ್ರ್ಯೂ ಸೈಮಂಡ್ಸ್ ಐಪಿಎಲ್‌ನಲ್ಲಿ ಆಡಲಾಗದಿದ್ದರೆ ಕತ್ತೆಬಾಲ ಎಂದಾರು. ಇದೂ ಡೆಕನ್‌ಗೆ ಸಂಭವನೀಯ ನಷ್ಟ.
ಯುವರಾಜ್ ನೇತೃತ್ವದ ಕಿಂಗ್ಸ್ ಇಲೆವೆನ್ಸ್ ಗಮನ ಸೆಳೆಯದೆ ಇರದು. ರಾಮ್‌ನರೇಶ್ ಸರ್ವಾನ್‌ರ ಅದ್ಭುತ ಫಾರಂ ತಂಡದ ಬೋನಸ್. ಇರ್ಫಾನ್, ವಿಆರ್‌ವಿ ಸಿಂಗ್.... ಬೌಲಿಂಗ್‌ನಲ್ಲಿ ಧಾರಾಳಿಗಳು! ವೆಸ್ಟ್‌ಇಂಡೀಸ್‌ನ ಜೆರೋಮಿ ಟೈಲರ್ ಇಂಗ್ಲೆಂಡ್ ವಿರುದ್ಧ ಯಶಸ್ಸು ಪಡೆದಿದ್ದು ಲೆಕ್ಕಕ್ಕೆ ಬರುತ್ತದೆ.
ಉಳಿದಂತೆ ಕೊಲ್ಕತ್ತಾದ ನೈಟ್ ರೈಡರ್‍ಸ್, ಮುಂಬೈ ಇಂಡಿಯನ್‌ಗಳದು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿ. ಮುಶ್ರಫೆ ಮುರ್ತಜಾರಿಗೆ ಗರಿಷ್ಠ ಆರು ಲಕ್ಷ ಡಾಲರ್ ಕೊಟ್ಟು ಖರೀದಿಸಿದ ಕೊಲ್ಕತ್ತಾದವರ ತಥ್ಯ ಅರ್ಥವಾಗಬೇಕಿದೆ. ಇಡೀ ಟೂರ್ನಿಯನ್ನು ಇನ್ನೊಂದು ರಿತಿಯಲ್ಲಿಯೂ ನೋಡಬಹುದು. ಟ್ವೆಂಟಿ ೨೦ಯ ಮಾದರಿ, ತಂತ್ರಗಾರಿಕೆಗಳ ಬಗ್ಗೆ ಕಳೆದ ಸಂಚಿಕೆಯ ಅನುಭವಗಳು ಆಧಾರಕ್ಕಿದೆ. ಈ ಹಿನ್ನೆಲೆಯಲ್ಲಿಯೆ ಪ್ರತಿ ತಂಡಗಳು ಹೊಸ ಆಟಗಾರರನ್ನು ಅಗತ್ಯಕ್ಕನುಗುಣವಾಗಿಯೇ ಖರೀದಿಸಿದ್ದಾರೆ. ಏಕಾಏಕಿ ಗುತ್ತಿಗೆ ಹಿಡಿದಿಲ್ಲ ಎಂಬುದಕ್ಕೆ ಆಸ್ಟ್ರೇಲಿಯಾದ ೧೨ ಮಂದಿ ಲಭ್ಯ ಆಟಗಾರರನ್ನು ಯಾರೂ ಖರೀದಿಸದಿರುವುದೇ ಸಾಕ್ಷಿ. ನ್ಯೂಜಿಲ್ಯಾಂಡ್‌ನ ಜೇಮ್ಸ್ ಫ್ರಾಂಕ್ಲಿನ್‌ರಂತ ಆಲ್‌ರೌಂಡರ್ ಮಾರಾಟವಾಗಿಲ್ಲ. ಡ್ರಾಯಿಂಗ್ ರೂಂನಲ್ಲಿ ಬಿಡಿಸಿದ ಚಿತ್ರಣದಂತೆಯೇ ಪ್ರತಿ ಆಟಗಾರರು ಪ್ರದರ್ಶನವಿತ್ತರೆ ಈ ಬಾರಿಯ ಟೂರ್ನಿಯಲ್ಲಿ ಬಲು ಸಂಖ್ಯೆಯ ಪಂದ್ಯಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಬಹುದು.
ಫಲಿತಾಂಶಗಳ ಮೇಲೆ ವಿದೇಶಿ ಆಟಗಾರರ ಉಪಸ್ಥಿತಿಯ ಪ್ರಭಾವ ಇರುತ್ತದೆ. ಕೆವಿನ್ ಪೀಟರ್‌ಸನ್, ಫ್ಲಿಂಟಾಫ್‌ರು ಕೇವಲ ಎರಡು ವಾರ ಮಾತ್ರ ಲಭ್ಯರಿರುತ್ತಾರೆ. ತಂಡದ ಒಟ್ಟು ಸಂಯೋಜನೆಯಲ್ಲಿ, ತಂತ್ರಗಾರಿಕೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾಗುತ್ತದೆ. ಇದು ಭಾರತೀಯ ಪ್ರೀಮಿಯರ್ ಲೀಗ್ ಆದರೂ ವಿದೇಶದಲ್ಲಿ ನಡೆಯುತ್ತಿರುವುದು ಮತ್ತು ವಿದೇಶಿ ಆಟಗಾರರ ರನ್, ವಿಕೆಟ್‌ಗಳೇ ನಿರ್ಣಾಯಕವಾಗುವುದು ಶುದ್ಧ ವಿಪರ್ಯಾಸ.
ಭಾರತೀಯ ಆಟಗಾರಿಗೊಂದು ವಿದೇಶಿ ಪ್ರವಾಸ. ಅಷ್ಟರಮಟ್ಟಿಗೆ ಇಲ್ಲಿನ ಪ್ರಥಮ ದರ್ಜೆ ಆಟಗಾರರು ಉಲ್ಲಸಿತರಾಗಬಹುದು. ಆದರೆ ಭಾರತದ ಪ್ರಸ್ತುತದ ರಾಷ್ಟ್ರೀಯ ತಂಡದಲ್ಲಿ ವಿಶೇಷ ಸ್ಥಳಾವಕಾಶ ಇಲ್ಲದೇ ಇರುವುದು ಸ್ಥಾನ ಆಕಾಂಕ್ಷಿಗಳನ್ನು ನಿರಾಶೆಗೆ ತಳ್ಳುತ್ತದೆಯೇನೋ. ಕೊನೆಗೆ ನಮ್ಮ ರಾಬಿನ್ ಉತ್ತಪ್ಪನೇ ಮರಳಿ ಬರಲು ಉಸ್ಸಪ್ಪ ಎನ್ನುತ್ತಿಲ್ಲವೇ?
ಭಾರತದಲ್ಲಿ ಈ ವರ್ಷ ಐಪಿಎಲ್ ಬಗ್ಗೆ ಹೆಚ್ಚಿನ ಆಸಕ್ತಿಯಿದೆ. ಬಹುಷಃ ಇಲ್ಲಿಯೇ ನಡೆದಿದ್ದರೆ ಕ್ರೀಡಾಂಗಣ ತುಂಬಿ ತುಳುಕುತ್ತಿತ್ತೇನೋ. ಇದರ ಮಧ್ಯೆ ಟ್ವೆಂಟಿ ೨೦ಯ ಫೇವರಿಟ್ ಗುರ್ತಿಸುವ ಮೂರ್ಖ ಕೆಲಸದಲ್ಲಿ ನೀವೂ ಪಾಲ್ಗೊಳ್ಳಿ!!
-ಮಾವೆಂಸ

ಶನಿವಾರ, ಏಪ್ರಿಲ್ 11, 2009

ಮಾಹಿತಿ ತೀರ್ಪು; ಜಾರಿ ಜಿಜ್ಞಾಸೆ


 ಇದು ೨೦೦೭ರ ಕತೆ.  ಆ ವರ್ಷದ ಜುಲೈನಲ್ಲಿ ಮಂಕಳಲೆಯ ಸತ್ಯನಾರಾಯಣ ಭಟ್ ಎಡಜಿಗಳೇಮನೆಯ ಗ್ರಾಮ ಪಂಚಾಯ್ತಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುತ್ತಾರೆ. ಅವರಿಗೆ ಅವರ ಊರಿನ ಕೆರೆಯ ಹೂಳೆತ್ತಿ   ದಂಡೆ ಬಲಪಡಿಸುವ ಕೆಲಸದ ಅಂದಾಜು ಪಟ್ಟಿ, ಅಂತಿಮ ಅಳತೆ ಪುಸ್ತಕ, ಹಣ ಸಂದಾಯದ ವೆಚ್ಚ ವಿವರ ಮತ್ತು ಮಂಕಳಲೆ ಸಾಗರ ನಡುವಿನ ಹಾನಂಬಿ ಕೂಡು ರಸ್ತೆಗೆ ಜಲ್ಲಿ ಹಾಕಿದ ಅಂದಾಜು ಪಟ್ಟಿ, ಅಂತಿಮ ಅಳತೆ ಪುಸ್ತಕ ಲೆಕ್ಕ ವಿವರಗಳು ಬೇಕಾಗಿತ್ತು. ಭಟ್ ಈ ಮಾಹಿತಿ ಕೋರಿದ ಅರ್ಜಿಯನ್ನು ಸದರಿ ಗ್ರಾ.ಪಂ.ನ ಕಾರ್ಯದರ್ಶಿಗಳಿಗೆ ಸಲ್ಲಿಸಿದರು.
 ಮೂವತ್ತು ದಿನ ಉರುಳಿದ್ದೇ ಬಂತು. ಮಾಹಿತಿ ದಕ್ಕಲಿಲ್ಲ. ಭಟ್ ತಡಮಾಡಲಿಲ್ಲ. ಆಗಸ್ಟ್ ೧೮ಕ್ಕೆ ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದರು. ಅಲ್ಲಿಂದ ಎಡಜಿಗಳೆಮನೆ ಗ್ರಾ.ಪಂ. ಕಾರ್ಯದರ್ಶಿಗೆ ಸಮನ್ಸ್ ಜಾರಿಯಾಯಿತು.
 ಆಯೋಗದ ವಿಚಾರಣೆಗೆ ಅರ್ಜಿದಾರರು ಮತ್ತು ಆರೋಪಿಗಳಿಬ್ಬರು ಹಾಜರಾದರು. ಸ್ವಾರಸ್ಯವೆಂದರೆ ಸತ್ಯನಾರಾಯಣ ಭಟ್ ಮಾಹಿತಿ ಅರ್ಜಿ ಸಲ್ಲಿಸಿದ ವೇಳೆ ಕಾರ್ಯದರ್ಶಿಗಳಾಗಿದ್ದ  ಗಣಪತಿರಾವ್ ಈ ವಿಚಾರಣೆಗೆ ಮುನ್ನ  ನಿವೃತ್ತರಾಗಿದ್ದರು. ಅಕ್ಟೋಬರ್ ಒಂದರಿಂದ ಅಧಿಕಾರ ವಹಿಸಿಕೊಂಡಿದ್ದವರು ಕುಮಾರಪ್ಪ ಗೌಡರು. ಈ ಇಬ್ಬರೂ ವಿಚಾರಣೆಗೆ ಎದುರಿಸುವಂತಾಗಿತ್ತು. ವಿಚಾರಣೆ ವೇಳೆ ಪ್ರಸ್ತುತದ ಮಾಹಿತಿ ಅಧಿಕಾರಿ ಕುಮಾರಪ್ಪ  ಗೌಡ, ‘ತಾವು  ಅಕ್ಟೋಬರ್ ಏಳರಂದೇ ಮಾಹಿತಿ ಕಳಿಸಿಕೊಟ್ಟಿರುವುದಾಗಿ’ ವಾದಿಸಿದರು. ಅರ್ಜಿದಾರರು ಮಾಹಿತಿ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರೆ ಕೊರಿಯರ್ ದಾಖಲೆಗಳನ್ನು ಪ್ರದರ್ಶಿಸಲು ಗೌಡರು ವಿಫಲರಾದರು !
 ವಿಚಾರಣೆಯ ವೇಳೆ ನಿವೃತ್ತ ಕಾರ್ಯದರ್ಶಿ ಗಣಪತಿರಾವ್ ಉದ್ದೇಶಪೂರ್ವಕವಾಗಿ ಮಾಹಿತಿ  ಒದಗಿಸದಿರುವುದು ಆಯೋಗದ ಗಮನಕ್ಕೆ ಬಂದಿತು. ಕಾಯ್ದೆ ಸೆಕ್ಷನ್ ೨೦(೨)ರ ಅನ್ವಯ ಮಾಹಿತಿ ನೀಡಿದ್ದು ಪ್ರಮಾದಕಾರಿ ಕಾಮಗಾರಿಯಿಂದ ಕಂಟ್ರಾಕ್ಟರ್  ಕೃಷಿ ಭೂಮಿಗಳಿಗೆ ಅನಾಹುತಕಾರಿಯಾದುದನ್ನು ಅರ್ಜಿದಾರರು ಮನವರಿಕೆ ಮಾಡಿಕೊಟ್ಟಿದ್ದರಲ್ಲದೇ, ಮಾಹಿತಿ ದಕ್ಕಿದ್ದರೆ ನಷ್ಟವಾಗುತ್ತಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
 ಪ್ರಕರಣದ ವಿಚಾರಣೆಯ ನಂತರ ಮಾಹಿತಿ ಆಯೋಗ ಗಣಪತಿರಾವ್ ದೋಷಿ ಎಂದು ಗುರುತಿಸಿತು. ಅದಾಗಲೇ ಆರೋಪಿ  ನಿವೃತ್ತರಾದುದರಿಂದ ಆಯೋಗ ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆರೋಪಿಗೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಿತು. ಕುಮಾರಪ್ಪ ಗೌಡ ವಿಚಾರಣೆಯ ವೇಳೆಯೇ ಅರ್ಜಿದಾರರು ಕೋರಿದ ದಾಖಲೆಗಳನ್ನು ಒದಗಿಸಿದ ಕಾರಣ ಆಯೋಗದ ಎಚ್ಚರಿಕೆಯನ್ನಷ್ಟೇ ಪಡೆದು ಬಚಾವಾದರು.
 ಈ ಪ್ರಕರಣದ ಕಡೆ ಇಷ್ಟಕ್ಕೇ ಮುಗಿಯುವುದಿಲ್ಲ. ಆಯೋಗ ತೀರ್ಪು (ಆದೇಶ ಸಂ. ಕೆ.ಐಸಿ ೨೫೧೭೧ ಸಿ-೨  ಎಂ: ೦೭:೧೪;೧೧;೧೭) ಬಂದಿತ್ತಾದರೂ ಗಣಪತಿರಾವ್‌ರಿಗೆ ಯಾವ ಶಿಸ್ತು ಕ್ರಮ ಹೇರಲಾಯಿತು ಎಂಬ ಕುತೂಹಲ ಸತ್ಯನಾರಾಯಣ ಭಟ್‌ರಿಗಿತ್ತು. ಹಾಗಾಗಿ ೨೦೦೮ರ ಮೇ೨೬ರಂದು ಅವರು ಸಾಗರದ  ತಾಲ್ಲೂಕು ಪಂಚಾಯ್ತಿಗೆ ಸದರಿ ವಿಷಯದ ಮಾಹಿತಿಗೆ ಮಾಹಿತಿ ಅರ್ಜಿ ಸಲ್ಲಿಸುತ್ತಾರೆ. ತಾಲ್ಲೂಕು ಪಂಚಾಯತ್‌ನ ಉತ್ತರ ಆಘಾತಕಾರಿಯಾಗಿತ್ತು. ಅದರ ಪ್ರಕಾರ ಮಾಹಿತಿ ಆಯೋಗದ ತೀರ್ಪು ಅವರ ಕೈಗೆ ಸೇರಿರಲಿಲ್ಲ. ಇನ್ನು ಶಿಸ್ತು ಕ್ರಮದ ಮಾತೆಲ್ಲಿ ?
ಭಟ್ ನಿರಾಶರಾಗಲಿಲ್ಲ. ಶಿವಮೊಗ್ಗ ಜಿಲ್ಲಾ ಪಂಚಾಯತ್‌ಗೆ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಿ ತೀರ್ಪು ಕುರಿತ ತೆಗೆದುಕೊಂಡ  ಕ್ರಮ ಹಾಗೂ ಅನುಸರಣಾ ಕ್ರಮ ಒದಗಿಸಲು ಅರ್ಜಿ ಹಾಕಿದ್ದಾರೆ. ಅಲ್ಲದೇ  ಖುದ್ದು ಮಾಹಿತಿ ಆಯೋಗಕ್ಕೆ ಪತ್ರ ಬರೆದು ಸಾಗರ ತಾಲ್ಲೂಕು ಪಂಚಾಯ್ತಿ ಒದಗಿಸಿದ ಮಾಹಿತಿಯ ಸತ್ಯಾಸತ್ಯತೆಯನ್ನು ದೃಢಪಡಿಸಲು ವಿನಂತಿಸಿದ್ದಾರೆ.
ಅಧಿಕಾರ ಶಾಹಿ ಕಾಯ್ದೆಯನ್ವಯ ಮಾಹಿತಿ ಒದಗಿಸಲು ಹಿಂಜರಿಯುವುದಂತೂ ಖರೆ, ಕೊನೆಗೆ ತನ್ನ ಅಧಿಕಾರಿಗಳನ್ನು ನಿವೃತ್ತರನ್ನು ನಿರ್ಲಜ್ಜರಾಗಿ ರಕ್ಷಿಸುವ ಪರಿಯನ್ನು ಕಾಣುತ್ತಿದ್ದೇವೆ. ಕಳಪೆ- ಪ್ರಮಾದಕಾರಿಯಾಗಿ ಗುತ್ತಿಗೆ ನಿರ್ವಹಿಸಿದ ಕಂಟ್ರಾಕ್ಟರ್, ಅದನ್ನು ಸಮರ್ಥಿಸಿಕೊಳ್ಳುವಂತೆ ವರ್ತಿಸಿದ ಗ್ರಾ.ಪಂ. ಕಾರ್ಯದರ್ಶಿ ಆಯೋಗದ ತೀರ್ಪನ್ನು  ಮನ್ನಿಸದ ತಾಲ್ಲೂಕು- ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ವಿಷವರ್ತಲದಿಂದ ನ್ಯಾಯವನ್ನು ಎತ್ತಿಹಿಡಿಯಲು ಲೋಕಾಯುಕ್ದ ಮೊರೆ ಹೋಗಬೇಕಾಗುತ್ತದೆ. ಸ್ವತಃ ಕರ್ನಾಟಕ ಮಾಹಿತಿ ಆಯೋಗ ತನ್ನ ತೀರ್ಪಿಗೆ ಕವಡೆಕಾಸಿನ ಬೆಲೆ ನೀಡದ ಪಂಚಾಯತ್ ವ್ಯವಸ್ಥೆಯ ಅಧಿಕಾರಿಗಳನ್ನು ವಿಚಾರಿಸಿಕೊಳ್ಳಬಹುದಲ್ಲವೇ?
-ಮಾವೆಂಸ

ಮಂಗಳವಾರ, ಏಪ್ರಿಲ್ 7, 2009

ಅಪ್ಪ - ಅಪಾಯ!



ತಂಪು ಭೂಮಿ ಸ್ವಿಡ್ಜರ್‌ಲೆಂಡ್‌ನ ರೋಜರ್ ಫೆಡರರ್‌ರ ಜಾತಕವೇ ಸರಿಯಿದ್ದಂತಿಲ್ಲ. ಶಕುನ ಕೂಡಿಬರುತ್ತಿಲ್ಲ. ೨೦೦೮ರ ವಿಂಬಲ್ಡನ್‌ನಿಂದಲೇ ಇದು ಆರಂಭವಾಗಿರುವುದು ನಿಕ್ಕಿ. ಅದಕ್ಕೂ ಮುನ್ನ ಸತತ ಎರಡನೇ ಬಾರಿ ಫ್ರೆಂಚ್ ಓಪನ್‌ನಲ್ಲಿ ಸೋತಾಗಲೂ ಫೆಡ್‌ಗೆ ಶಾಕ್ ಏನೂ ಆಗಿರಲಿಲ್ಲ. ಅದು ಹೇಳಿ ಕೇಳಿ ನಡಾಲ್‌ರ ಸಾಮ್ರಾಜ್ಯ. ಆಲ್ ಇಂಗ್ಲೆಂಡ್ ಕ್ಲಬ್ ಹಾಗಲ್ಲ. ಕೊನೆಪಕ್ಷ ಹಾಗಿರಲಿಲ್ಲ. ಪೀಟ್ ಸಾಂಪ್ರಾಸ್‌ರ ನಂತರ ಅಕ್ಷರಶಃ ಅಲ್ಲಿನ ಅಧಿಪತಿಯಾಗಿದ್ದ ಫೆಡ್ ಒಂದೊಮ್ಮೆ ಎಡಗೈನಲ್ಲಿ ಆಡಿದರೂ ಗೆಲ್ಲಬಲ್ಲರು ಎಂಬ ಪ್ರತೀತಿಯಿತ್ತು. ಕಳೆದ ವರ್ಷ ಅದೇ ಎಡಗೈನ ನಡಾಲ್ ರೋಜರ್‌ರನ್ನು ಅಲ್ಲಿಯೇ ಸೋಲಿಸಿಬಿಟ್ಟರಲ್ಲ!
ಫೆಡರರ್ ಬಸವಳಿದಿದ್ದಾರೆ. ಹಾಗಾಗಿಯೇ ಮತ್ತೆ ತಮ್ಮ ಭೂಮಿ ಎಂದುಕೊಂಡಿದ್ದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ  ಸೋತಾಗ ಅತ್ತುಬಿಟ್ಟಿದ್ದು. ಪೀಟ್‌ರ ೧೪ ಗ್ರಾನ್‌ಸ್ಲಾಂ ದಾಖಲೆ ಎಟುಕಲು ಇನ್ನೊಂದೇ ಸ್ಲಾಂ ಬೇಕು. ಆದರೆ.... ಬಹುಷಃ ಸುದ್ದಿಯಲ್ಲಿರಬೇಕಾದ ಒತ್ತಡದಲ್ಲಿ ಫೆಡ್ ಬಾಯ್ಬಿಟ್ಟಿದ್ದಾರೆ,  ನಾನು ಅಪ್ಪ ಆಗುತ್ತಿದ್ದೇನೆ!
ಟೆನಿಸ್ ಪ್ರಪಂಚಕ್ಕೆ ಅದು ಅಪಾಯದ ಅಲಾರಾಂನಂತೆಯೇ ಕೇಳಿಸಿದೆ. ಅತ್ಯಂತ ಹೆಚ್ಚಿನ ಏಕಾಗ್ರತೆ ಬಯಸುವ ಕ್ಯಾರಿಯರ್‌ನ ಈ ಹೊತ್ತಿನಲ್ಲಿ ಸಂಸಾರದ ಅತೀವ ಮಹತ್ವದ ಘಟ್ಟಕ್ಕೆ ಅಡಿಯಿಡುವುದು ಕತ್ತಿಯ ಮೇಲಿನ ನಡುಗೆಯಂತೆ. ಹಾಗಂತ ಫೆಡ್‌ರ ಸಹ ಆಟಗಾರರೇ ಹೇಳುತ್ತಿದ್ದಾರೆ. ಇವಾನ್ ಲ್ಜುಬಿಸಿಕ್ ಸ್ಪಷ್ಟವಾಗಿ ಹೇಳುತ್ತಾರೆ, ಮಗು ಬಂತು ಎಂದಾದರೆ ನಿಮ್ಮ ಬದುಕು ಬದಲಾಗಿಯೇ ಹೋಗುತ್ತದೆ. ಆದ್ಯತೆಗಳು ಬೇರೆ ಬೇರೆ. ಸಂಸಾರದಲ್ಲಿ ತೊಡಗಿಸಿಕೊಳ್ಳಲೇಬೇಕಾಗುತ್ತದೆ. ಇದು ಟೆನಿಸ್ ಕ್ಯಾರಿಯರ್‌ನ ಪ್ರಗತಿಗೆ ಧಕ್ಕೆ ತರುವುದು ಖಚಿತ ಇವಾನ್‌ರ ಮಾತನ್ನು ನಾವೂ ನೀವೂ ನಂಬಲೇಬೇಕು. ಸದ್ಯ ಅವರೇ ತಮ್ಮ ಐದು ತಿಂಗಳ ಮಗನ ಆಗಮನದಿಂದ ಅನುಭವ ಪಡೆದಿದ್ದಾರೆ!
ಫೆಡ್ ಇವತ್ತಿಗೂ ಗೆಳತಿ ಮಿರ್ಕಾ ವಾವ್ರಿನೆಕ್‌ರನ್ನು ವಿವಾಹವಾಗಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ದಾಂಪತ್ಯಕ್ಕೆ ಅದು ತೊಡಕಲ್ಲ. ನಿಜಕ್ಕಾದರೆ ಸಂಸಾರದ ಎಲ್ಲ ಜವಾಬ್ದಾರಿಗಳೂ ಇರುತ್ತದೆ. ಭಾರತದಲ್ಲಿ ಹಾಗಲ್ಲ! ಮಗುವನ್ನು ಮುದ್ದು ಮಾಡಿ ಪ್ರಾಕ್ಟೀಸ್‌ಗೆಂದು ರ್‍ಯಾಕೆಟ್ ಹಿಡಿಯುವ ವೇಳೆಗೆ ನ್ಯಾಪ್‌ಕಿನ್ ಬದಲಿಸಲೇಬೇಕಾದ ಅವಸರ, ರಾಮ ರಾಮಾ....!!
ಇತಿಹಾಸವೂ ಇದನ್ನೇ ಹೇಳುತ್ತದೆ. ಕೊನೆಯ ೧೧೫ ಗ್ರಾನ್‌ಸ್ಲಾಂ ಪ್ರಶಸ್ತಿಗಳಲ್ಲಿ ಅಪ್ಪಯ್ಯರು ಗೆದ್ದದ್ದು ಬರೀ ೧೦! ಗೆಳತಿಯರನ್ನು ನಿರಂತರವಾಗಿ ಬದಲಿಸಿದರೂ ಕ್ಯಾರಿಯರ್‌ಗೆ ಧಕ್ಕೆ ತಂದುಕೊಳ್ಳದ ಜರ್ಮನಿಯ ಬೋರಿಸ್ ಬೆಕರ್ ಮೊದಲ ಮಗ ನೋಹ್ ಜನ್ಮಿಸಿದ ಮೇಲೆ ಗೆದ್ದದ್ದು ೧೯೯೬ರ ಆಸ್ಟ್ರೇಲಿಯನ್ ಓಪನ್ ಸೇರಿದಂತೆ ಎರಡು ಗ್ರಾನ್‌ಸ್ಲಾಂ ಮಾತ್ರ. ಫಾದರ್ ಪ್ರಮೋಷನ್ ನಂತರ ಟೆನಿಸ್‌ಗೆ ಎರಡನೇ ಆದ್ಯತೆಯಾಗಿಬಿಡುತ್ತದೆ ಎಂಬ ಸತ್ಯದ ಅರಿವು ಬೆಕರ್‌ಗಿದೆ.
ಹೋಗಲಿ ಎಂದರೆ, ಪ್ಯಾಟ್‌ಕ್ಯಾಷ್, ಆಂಡ್ರ್ಯೂ ಗೋಮೇಜ್, ಪೀಟರ್ ಕೋರ್ಡಾ, ಅಲ್ಬೆರ್ಟೋ ಕೋಸ್ಟಾಗಳು ಅಪ್ಪನ ಪಟ್ಟದಲ್ಲಿ ಒಂದು ಗ್ರಾನ್‌ಸ್ಲಾಂಗೆ ಸುಸ್ತಾದರು. ಮಗುವಿನ ಚಾಕರಿ ಎಂದರೆ ಸುಲಭಾನ?! ಆಮಟ್ಟಿಗೆ ಬೆಕರ್ ಜೊತೆಗೆ ಆಂಡ್ರೆ ಅಗ್ಗಾಸ್ಸಿ, ಯೆವ್ಗೆನ್ನಿ ಕಫೆಲ್ನಿಕೋಫ್‌ರಿಗೆ ಒಂದರ ಹಿಂದೆ ಇನ್ನೊಂದು ಸ್ಲಾಂ ಸೇರಿಸಿಕೊಳ್ಳಲು ಮಾತ್ರ ಸಾಧ್ಯವಾಗಿದೆ.
ಹೀಗಾದರೂ ಒಂದು ತಿರುವು ಸಿಕ್ಕಲಿ ಎಂಬ ಆಶಯ ಫೆಡರರ್‌ರಿಗಿರಬಹುದು. ಜೊತೆಗೆ ಪುಟ್ಟ ಭಯವೂ ಇರುವಂತಿದೆ. ಸದ್ಯ ಅವರು ಈ ಬೇಸಿಗೆಯಲ್ಲಿ ಮಗುವಿನ ಆಗಮನ ಎನ್ನುವುದಕ್ಕಿಂತ ಹೆಚ್ಚಿನ ವಿವರ ಕೊಟ್ಟಿಲ್ಲ. ಬೇಸಿಗೆ ಎಂದರೆ ಮುಂಬರುವ ವಿಂಬಲ್ಡನ್ ಅಥವಾ ಯುಎಸ್ ಓಪನ್ ವೇಳೆಗೇ ಬೇಬಿ ಫೆಡರರ್ ಭೂಮಿಗೆ ಬಂದರೆ ೨೭ರ ಹರೆಯದ ಫೆಡರರ್‌ರ ಪ್ರಾಶಸ್ತ್ಯ ಮಗುವಿಗೋ, ಗ್ರಾನ್‌ಸ್ಲಾಂಗೋ ಎನ್ನುವ ಇಕ್ಕಟ್ಟಿನ ಪ್ರಶ್ನೆ ಸೃಷ್ಟಿಯಾಗಬಹುದು!
ಒಂದು ಸಮಾಧಾನ. ಫೆಡರರ್ ಜಿಮ್ಮಿ ಕಾನರ್‍ಸ್‌ರನ್ನು ಆದರ್ಶವಾಗಿ ಪರಿಗಣಿಸಲಿಕ್ಕೆ ಅವಕಾಶವಿದೆ. ಈ ಕಾನರ್‍ಸ್ ೧೯೭೯ರಲ್ಲಿ ಮಗನನ್ನು ಪಡೆದ ನಂತರವೇ ಮೂರು ಗ್ರಾನ್‌ಸ್ಲಾಂ ಗೆದ್ದಿದ್ದ. ಆ ಮುನ್ನ ಗಳಿಸಿದ್ದ ಐದನ್ನು ಲೆಕ್ಕಕ್ಕೆ ಸೇರಿಸಿದರೆ ಗಳಿಕೆ ಎಂಟು. ಫೆಡರರ್‌ರದೂ ಅದೇ ಸಾಧನೆಯಾಗಿಬಿಟ್ಟರೆ ಪೀಟ್ ದಾಖಲೆ ಮುರಿದ ಮೇಲೂ ಇನ್ನೊಂದು ಮಿಗುತ್ತದೆ!
ಪಾಪು, ಅಳು, ನ್ಯಾಪ್‌ಕಿನ್, ಬಾಣಂತನಗಳಲ್ಲಿ ಫೆಡ್ ನಿವೃತ್ತಿಯ ಸಬೂಬು ಹುಡುಕುತ್ತಿದ್ದಾರೆಯೇ? ಸೋಲಂತೂ ಬೆನ್ನ ಹಿಂದೆಯೇ ಇದೆ. ಇದೇ ವಾರ ಎಟಿಪಿ ಟೂರ್ನಿಯಲ್ಲಿ ಜಾಂಕೋವಿಕ್‌ರೆದುರು ರೋಜರ್ ಪರಾಭವಗೊಂಡಿದ್ದಾರೆ. ಹಾಗಾಗಲಿಕ್ಕಿಲ್ಲ. ೨೦೧೨ರ ಲಂಡನ್ ಒಲಂಪಿಕ್ಸ್‌ನವರೆಗೆ ಆಡಲು ಫೆಡರರ್‌ರ ಒಪ್ಪಂದಗಳಿವೆ. ಫೆಡ್‌ರಿಗೆ ಬೇರೆಯವರ ತರಹದ ನಕಾರಾತ್ಮಕ ಚಿಂತನೆಗಳಿಲ್ಲ. ‘ಆಡಲು ಇನ್ನಷ್ಟು ಸ್ಫೂರ್ತಿ ತಮ್ಮ ಮಗು ತರುತ್ತದೆ’ ಎಂದೇ ಹೇಳುತ್ತಾರೆ. ತಮ್ಮ ಮಗುವಿನ ಮುಂದೆ ತಾವು ಗ್ರಾನ್‌ಸ್ಲಾಂ ಆಡಬೇಕು ಎಂಬ ಕನಸಿದ್ದುದರಿಂದಲೇ ಇಷ್ಟು ಚುರುಕಾಗಿ ಮಗು ಪಡೆಯಲು ಯೋಚಿಸಬೇಕಾಯಿತು ಎಂಬ ಸಮಜಾಯಿಷಿ.
ಲ್ಜುಬಿಸಿಕ್ ಒಂದು ಮಾತು ಹೇಳುತ್ತಾರೆ, ರೋಜರ್ ಫೆಡರರ್‌ರಂತ ದೈತ್ಯ ಪ್ರತಿಭೆಗೆ ೨೪ ಘಂಟೆಗಳ ಅಭ್ಯಾಸ ಬೇಕಾಗುವುದೇ ಇಲ್ಲ. ಸ್ವಲ್ಪ ತರಬೇತಾದರೂ ಆತನ ಮೂಲ ಸಾಮರ್ಥ್ಯ ಪ್ರತಿಫಲಿಸುತ್ತದೆ.....  ಹಾಗೇ ಹೀಗೆ’ ಎಂದು. ಟೆನಿಸಿಗರು ನಾವೆಣಿಸಿದ್ದಿಕ್ಕಿಂತ ಭಿನ್ನರು. ಅವರು ತುಂಬಾ ಸನ್ನಡತೆಯವರಾಗಿರುತ್ತಾರೆ. ಎದುರಾಳಿಯ ಬಗ್ಗೆ ಒಳ್ಳೆಯ ಮಾತನ್ನೇ ಉಚ್ಚರಿಸುತ್ತಾರೆ. ಲ್ಜುಬಿಸಿಕ್ ಮಾಡಿದ್ದೂ ಬಹುಷಃ ಅದನ್ನೇ. ಅದೇ ನಮಗಂತೂ ನಡಾಲ್ ಯುಗ ಆರಂಭವಾದ ನಂತರ ರೋಜರ್‌ರ ಗ್ರಾನ್‌ಸ್ಲಾಂ ಪ್ರದರ್ಶನಗಳತ್ತ ಅನುಮಾನ ಕಾಡುತ್ತಿದೆ. 
ನೀವೇನಂತೀರೋ....?
-ಮಾವೆಂಸ

 
200812023996